ಜೆಡಿಎಸ್‌ ಎಲ್ಲಿ ಎಂದು ತೋರುವ ಶಕ್ತಿ ಮೈತ್ರಿಗಿದೆ: ಎಚ್.ಡಿ.ದೇವೇಗೌಡ

By Kannadaprabha NewsFirst Published Mar 29, 2024, 8:29 AM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಲೇವಡಿ ಮಾಡಿದ್ದಾರೆ. ಜೆಡಿಎಸ್ ಎಲ್ಲಿದೆ ಎಂಬುದನ್ನು ತೋರಿಸುವ ಶಕ್ತಿ ಜೆಡಿಎಸ್- ಬಿಜೆಪಿಗಿದೆ. 28 ಲೋಕಸಭಾ ಕ್ಷೇತ್ರಗಳಲ್ಲಿ ಶಕ್ತಿ ಪ್ರದರ್ಶಿಸಿ ಇವರ ಮಾತಿಗೆ ತಕ್ಕ ಉತ್ತರ ನೀಡುವುದಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು. 
 

ಅರಕಲಗೂಡು (ಮಾ.29): ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಎಂದು ಲೇವಡಿ ಮಾಡಿದ್ದಾರೆ. ಜೆಡಿಎಸ್ ಎಲ್ಲಿದೆ ಎಂಬುದನ್ನು ತೋರಿಸುವ ಶಕ್ತಿ ಜೆಡಿಎಸ್- ಬಿಜೆಪಿಗಿದೆ. 28 ಲೋಕಸಭಾ ಕ್ಷೇತ್ರಗಳಲ್ಲಿ ಶಕ್ತಿ ಪ್ರದರ್ಶಿಸಿ ಇವರ ಮಾತಿಗೆ ತಕ್ಕ ಉತ್ತರ ನೀಡುವುದಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು. ಪಟ್ಟಣದ ಶ್ರೀ ಚನ್ನಬಸವೇಶ್ವರ ಸಮುದಾಯ ಭವನದ ಸಮೀಪದ ಮೈದಾನದಲ್ಲಿ ಗುರುವಾರ ನಡೆದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ‘ನಾನು ನಿಮ್ಮ ಬಗ್ಗೆ ಶಬ್ದ ಪ್ರಯೋಗ ಮಾಡಬಲ್ಲೆ. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಬೇಡಿ, ಬಿಜೆಪಿ 18 ರಾಜ್ಯಗಳಲ್ಲಿ ಆಡಳಿತದಲ್ಲಿದೆ. 

ಆದರೆ, ನಾಲ್ಕು ರಾಜ್ಯಗಳನ್ನು ಹೊರತು ಪಡಿಸಿದರೆ ಕಾಂಗ್ರೆಸ್ ಎಲ್ಲಿದೆ ಎಂದು ಹೇಳುತ್ತೀರಾ? ಕಾಂಗ್ರೆಸ್ ಸುಭದ್ರವಾಗಿದ್ದರೆ ರಾಹುಲ್ ಗಾಂಧಿ ಕೇರಳಕ್ಕೆ ಏಕೆ ಹೋಗುತ್ತಿದ್ದರು. ಸೋನಿಯಾ ಗಾಂಧಿ ರಾಜ್ಯಸಭೆಗೆ ಏಕೆ ಹೋದರು?’ ಎಂದು ಕುಟುಕಿದರು. ‘ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ, ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ, ಈ ಕುರಿತು ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ಮಾತು ಬಾಲಿಶವಾಗಿದೆ, ರಾಜ್ಯದ ಪಾಲನ್ನು ವ್ಯವಸ್ಥಿತವಾಗಿ ತರಲಾರದೆ ಅಸಹಾಯಕತೆಯಿಂದ ಪ್ರಜ್ಞೆಯಿಲ್ಲದೆ ಆಡುವ ಮಾತಾಗಿದೆ. 

ದೇಹದಲ್ಲಿ ಶಕ್ತಿ ಇರುವರೆಗೂ ನಂಬಿದ ಜನತೆಗಾಗಿ ಹೋರಾಟ: ಎಚ್.ಡಿ.ದೇವೇಗೌಡ

ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲದ ಮೇಲಿನ 980 ಕೋಟಿ ರು. ಹಣವನ್ನು ಮನ್ನಾ ಮಾಡುವ ವಿಚಾರಕ್ಕೆ ಅಂದಿನ ಅರ್ಥ ಸಚಿವ ಮನಮೋಹನ್ ಸಿಂಗ್ ಅವರು ಒಂದು ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಸಡಿಲ ಮಾಡಿದರೆ ಇಡೀ ರಾಜ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಒಪ್ಪಿಗೆ ಸೂಚಿಸದೆ ಆರ್ಥಿಕ ಶಿಸ್ತಿನ ನೆಪವೊಡ್ಡಿ ಅಡ್ಡಗಾಲು ಹಾಕಿದ್ದರು. ತಾವು ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೆ ಪತ್ರ ಬರೆದು ಹೋರಾಟಕ್ಕೆ ಮುಂದಾದಾಗ ತಮ್ಮನ್ನು ಕರೆಸಿ ಅರ್ಥ ಸಚಿವರಿಂದ ಒಪ್ಪಿಗೆ ಕೊಡಿಸಿದ್ದರು. ನಾನು ಕೋರ್ಟ್‌ಗೆ ದಾವೆ ಹಾಕಲಿಲ್ಲ. ಇಂತಹ ಇಚ್ಛಾಶಕ್ತಿ ಪ್ರದರ್ಶಿಸಲು ಮುಂದಾಗಿ’ ಎಂದು ಹೇಳಿದರು.

ರಾಜ್ಯದಲ್ಲಿ ಪ್ರಬಲ ಮುಖ್ಯಮಂತ್ರಿ ಇರಬೇಕು. ದೇಶದಲ್ಲಿ ದುರ್ಬಲ ಪ್ರಧಾನಿ ಇರಬೇಕು ಎಂಬುದು ಸಿದ್ದರಾಮಯ್ಯ ಅವರ ವಾದವಾಗಿದ್ದು, ಇದು ಇವರ ಅಹಮಿಕೆಯ ಪ್ರದರ್ಶನವಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲಮನ್ನಾಕ್ಕೆ ಮುಂದಾದಾಗ ತಾವು ನೀಡಿದ ಭಾಗ್ಯಗಳನ್ನು ನಿಲ್ಲಿಸಿದರೆ ಬೆಂಬಲ ವಾಪಸ್ ಪಡೆಯುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಈಗ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. ಮೈತ್ರಿ ಬಗ್ಗೆ ಜಿಲ್ಲಾ ಬಿಜೆಪಿಯಲ್ಲಿ ಸ್ವಲ್ಪಮಟ್ಟಿನ ಭಿನ್ನಾಭಿಪ್ರಾಯವಿದೆ.

ಕೆಲವರು ಮೈತ್ರಿ ಬೆಂಬಲಿಸಿದರೆ ಇನ್ನು ಕೆಲವರು ಸ್ವಲ್ಪ ಮಟ್ಟಿನ ವಿರೋಧ ತೋರುತ್ತಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿ ಮಾತುಕತೆ ನಡೆಸಲಾಗುವುದು. ಯಡಿಯೂರಪ್ಪ, ವಿಜಯೇಂದ್ರ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ, ಅದೇ ರೀತಿ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ನಡೆಸಲಾಗುವುದು ಎಂದರು. ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ‘ಕಾಂಗ್ರೆಸ್ ಪಕ್ಷ ಜಿಲ್ಲೆಗೆ ನೀಡಿದ ಕೊಡುಗೆ ಶೂನ್ಯ. ಕಾರಣ, ನಮ್ಮ ಸರ್ಕಾರದ ಅವಧಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 4 ಸಾವಿರ ಫಾಲಾನುಭವಿಗಳಿಗೆ ಬೋರೆವೆಲ್ ಕೊರೆಸಿ, ಮೋಟಾರ್‌ಗಳನ್ನು ನೀಡಿ ವರ್ಷ ಕಳೆದರೂ ಟಿಸಿ ನೀಡಿಲ್ಲ. 2-3 ಲಕ್ಷ ರು. ನೀಡಿ ಟಿಸಿ ಹಾಕಿಸಿಕೊಳ್ಳುವಂತೆ ಸೆಪ್ಟೆಂಬರ್‌ನಲ್ಲಿ ಆದೇಶ ಹೊರಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್‌ಗೆ ಅರ್ಜಿ ರಾಜಕೀಯ ಪ್ರೇರಿತ: ಎಚ್‌.ಡಿ.ದೇವೇಗೌಡ

ಕುರ್ಚಿಗಳು ಖಾಲಿ ಖಾಲಿ: ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಜನರಿಲ್ಲದೆ ಖುರ್ಚಿಗಳು ಖಾಲಿ ಖಾಲಿಯಾಗಿದ್ದವು. ಇದನ್ನು ಮನಗಂಡ ನಾಯಕರು ಕುರ್ಚಿಗಳನ್ನು ಒಂದೆಡೆ ಜೋಡಿಸಿ ಇರಿಸಿದರು. ಶಾಸಕ ಎ. ಮಂಜು, ಶಾಸಕ ಬಾಲಕೃಷ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಮುಖಂಡರಾದ ರಾಜೇಗೌಡ, ಮುತ್ತಿಗೆ ರಾಜೇಗೌಡ, ಪುಟ್ಟಸ್ವಾಮಪ್ಪ, ಕೀರ್ತಿರಾಜ್, ಅಲೀಮ್, ಬಿಜೆಪಿಯ ಹಿರಣ್ಣಯ್ಯ ಇದ್ದರು.

click me!