
ಬೆಂಗಳೂರು, (ಡಿ.13): ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಮಧ್ಯೆ ಮಾತಿನ ಕಾಳಗ ಮುಂದುವರಿದಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಕೋಲಾರ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದರು.ಈ ಸಂದರ್ಭದಲ್ಲಿ ಜೆಡಿಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಇದಕ್ಕೆ ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, 'ಸಿದ್ದಕಲೆ', 'ಸಿದ್ದಕಲಾನಿಪುಣಪ್ಪಾ' ಎಂದು ತಿರುಗೇಟು ನೀಡಿದ್ದರೆ.
ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ತೆಗೆಯಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಾಯಕರ ಸೋಲಿಗೂ ಸಿದ್ದರಾಮಯ್ಯ ಅವರೆ ಕಾರಣರಾಗಿದ್ದು, ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಡೈನಮೇಟ್ ಇಡುತ್ತಿದ್ದಾರೆ
ಅಹಿಂದದ ಹೆಸರಿನಲ್ಲಿ ದಲಿತ ನಾಯಕರಾದ ಖರ್ಗೆ ಅವರಿಗೂ ಖೆಡ್ಡಾ, ಡಾ.ಪರಮೇಶ್ವರ ಅವರಿಗೆ ಸೋಲಿನ ಸುಳಿ, ಈಗ ನೋಡಿದರೆ ʼಬಂಡೆʼಯ ಕೆಳಗೂ ಡೈನಾಮೈಟ್ ಇಡುತ್ತಿರುವ ಅನೈತಿಕ, ನೀಚ, ನಿಕೃಷ್ಟ, ಹೀನ ರಾಜಕಾರಣಕ್ಕೆ ನಾಂದಿ ಹಾಡಿರುವ ʼಪರಮಪಾತಕ' ಪರಾಕಾಷ್ಠೆ ಯಾರು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಜೆಡಿಎಸ್ ಬಿಜೆಪಿಯ 'ಬಿ' ಟೀಂ ಅನ್ನುತ್ತೀರಿ. ಹಾಗಾದರೆ ಆಡಳಿತ ಪಕ್ಷದಲ್ಲೇ ಕೂತು ವಿರೋಧಿಗಳೊಂದಿಗೆ ಕುಮ್ಮಕ್ಕಾಗಿ ಬೆನ್ನಿಗಿರಿದ ʼಬ್ರೂಟಸ್ʼ ಯಾರು? ಮೈತ್ರಿ ಸರಕಾರಕ್ಕೆ ಮೊದಲ ದಿನದಿಂದಲೇ ಮಹೂರ್ತ ಇಟ್ಟವರು ಯಾರು? ಸ್ವಯಂಘೋಷಿತ ಅಹಿಂದ ನಾಯಕರೇ ನಿಮ್ಮೊಳಗಿದೆ ಕಾರ್ಕೋಟಕ ʼವಿಷʼ. ಆ ವಿಷವೇ ನಿಮಗೆ ಮುಳುವು ಆಗುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಅಹಾ!! ʼಕೋಲಾರದಲ್ಲಿ ಕಲರ್‌ಫುಲ್ ಸುಳ್ಳುಗಳ ಸರಮಾಲೆʼಯನ್ನೇ ಸೃಷ್ಟಿಸಿ ಕೃತಾರ್ಥರಾಗಿದ್ದೀರಿ. ʼಅಡ್ಜಸ್ಟ್‌ಮೆಂಟ್ ರಾಜಕಾರಣʼದ ಹರಿಕಾರರು ನೀವಲ್ಲವೇ? ವಿನಾಶಕಾಲೇ ವಿಪರೀತ ಸುಳ್ಳು!! ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಮಿಸ್ಟರ್ ಸಿದ್ದಸೂತ್ರಧಾರ
ಕಟ್ಟುವುದು ಮನುಷ್ಯತ್ವ, ಕೆಡವೋದು ರಾಕ್ಷಸತ್ವ. ನಿಮಗೆ ಕೆಡವಿ ಗೊತ್ತೇ ವಿನಾ ಕಟ್ಟಿ ಗೊತ್ತಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ಹೇಳಿ ನಮ್ಮ ಮನೆ ಬಾಗಿಲಿಗೆ ಬಂದ ಕಾಂಗ್ರೆಸ್ ನಾಯಕರು ಸರಕಾರದ ನೇತೃತ್ವ ವಹಿಸಿ ಎಂದರು. ಹಾಗಾದರೆ, ಪಕ್ಷದ ನಿರ್ಧಾರಕ್ಕೂ ನಿಮಗೂ ಸಂಬಂಧ ಇಲ್ಲವಾ ಮಿಸ್ಟರ್ ಸಿದ್ದಸೂತ್ರಧಾರ?
ನಾನು ಜೆಡಿಎಸ್ ನವರ ಮನೆ ಬಾಗಿಲಿಗೆ ಹೋಗಿಲ್ಲ ಎನ್ನುತ್ತೀರಿ, ನಿಮ್ಮನ್ನು ಕರೆದವರು ಯಾರು? ನಾವೇನು ಎಲೆ-ಅಡಿಕೆ ಕೊಟ್ಟು ಆಹ್ವಾನ ಕೊಟ್ಟೆವಾ? ಬಂದು ಬೆಂಬಲದ ಭಿಕ್ಷೆ ಬೇಡಿದವರು ಯಾರು? ದೆಹಲಿ ನಾಯಕರು ನಮ್ಮ ಮನೆ ಬಾಗಿಲಲ್ಲಿ ನಿಂತಿದ್ದಾಗಲೇ ಮೈತ್ರಿಗೆ ಕುಣಿಕೆ ಬಿಗಿಯಲು ಯತ್ನಿಸಿದವರು ಯಾರು ಮಿಸ್ಟರ್ ಟರ್ಮಿನೇಟರ್? ಎಂದು ಪ್ರಶ್ನಿಸಿದ್ದಾರೆ.
ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆದಿದೆ, ನನ್ನ ಹಂತದಲ್ಲಿ ಅಲ್ಲ ಅನ್ನುತ್ತೀರಿ! ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮಾತಿಗೇ ನಿಮ್ಮಲ್ಲಿ ಕಿಮ್ಮತ್ತಿಲ್ಲಾ? ಹಾಗಾದರೆ, ಸಿಎಲ್‌ಪಿಯನ್ನೇ ಅಡ್ಡಡ್ಡ ʼಸೀಳಿʼ ಬೆಂಬಲಿಗ ಶಾಸಕರು ಬಿಜೆಪಿಗೆ ಹೋಗಲು ದುಷ್ಪ್ರೇರಣೆ ಕೊಟ್ಟವರು ಯಾರು? ವರಿಷ್ಠರು ತಂದ ಸರಕಾರವನ್ನೇ ತೆಗೆದಿರಿ, ಬಿಜೆಪಿ ಸರಕಾರ ಬರಲು ಕಾರಣರಾದಿರಿ. ಈಗ ಸುಳ್ಳಿಗೆ ಸುಳ್ಳು ಪೋಣಿಸುತ್ತಿದ್ದೀರಿ. ಬಿಜೆಪಿ ಸರಕಾರ ಬರಲು ಶಾಸಕರ ಟೀಂ ರೆಡಿ ಮಾಡಿದವರು ಯಾರು? ಇಷ್ಟೆಲ್ಲಾ ʼಸಿದ್ದಕಲೆʼ ಎಲ್ಲಿಂದ ಬಂತು ಮಿಸ್ಟರ್ ಸಿದ್ದಕಲಾನಿಪುಣಪ್ಪಾ!? ಎಂದು ಸಿದ್ದರಾಮಯ್ಯ ವಿರುದ್ಧ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.