
ಬೆಂಗಳೂರು(ಮೇ.24): ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ನಾಳೆ(ಗುರುವಾರ) ಸಭೆ ಕರೆದಿದ್ದು, ಚುನಾವಣಾ ಫಲಿತಾಂಶದ ಕುರಿತು ಪರಾಮರ್ಶೆ ನಡೆಸಲಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸಭೆ ಜರುಗಲಿದ್ದು, ಗುರುವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಸಭೆಗೆ ಚುನಾವಣೆಯಲ್ಲಿ ಸೋಲನುಭವಿಸಿದ ಪಕ್ಷದ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು, ಶಾಸಕರು, ಮಾಜಿ ಸಚಿವರು ಸೇರಿದಂತೆ ಇತರೆ ಮುಖಂಡರನ್ನು ಕರೆಯಲಾಗಿದೆ.
ಅತ್ಯಂತ ಕಡಿಮೆ ಫಲಿತಾಂಶ ಬರಲು ಕಾರಣವೇನು? ಮುಂದಿನ ದಿನದಲ್ಲಿ ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸುವ ಬಗೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಮಾಲೋಚನೆ ನಡೆಸಲಾಗುವುದು. ಇತರೆ ಮುಖಂಡರು ಸಹ ಚುನಾವಣೆಯಲ್ಲಿ ಸೋಲಿಗೆ ಕಾರಣಗಳೇನು ಎಂಬುದರ ಕುರಿತು ವಿವರಣೆ ನೀಡಲಿದ್ದಾರೆ. ಕುಮಾರಸ್ವಾಮಿ ಅವರು ಚುನಾವಣೆ ಘೋಷಣೆಗೂ ಮೊದಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ, ಪಂಚರತ್ನ ಕಾರ್ಯಕ್ರಮಗಳ ಕುರಿತು ಜನತೆಗೆ ಮನದಟ್ಟು ಮಾಡಿಕೊಟ್ಟಿದ್ದರು. ಇದರ ಜತೆಗೆ ಜಲಧಾರೆ ಸೇರಿದಂತೆ ಇತರೆ ಯಾತ್ರೆಗಳನ್ನು ಕೈಗೊಂಡಿದ್ದರು. ನಿರಂತರ ಪ್ರವಾಸ ಕೈಗೊಂಡು ಪಕ್ಷವನ್ನು ಸಂಘಟಿಸುವಲ್ಲಿ ಸಾಕಷ್ಟುಶ್ರಮ ಹಾಕಿದ್ದರೂ ಸೋಲನುಭವಿಸಲಾಗಿದೆ. ಇದಕ್ಕೆ ಕಾರಣಗಳೇನು ಎಂಬುದರ ಬಗ್ಗೆ ಸಭೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲಾಗುತ್ತದೆ.
ವಿಧಾನಸೌಧಕ್ಜೆ ಬಂದರೂ ಪಕ್ಷದ ಕಚೇರಿಗೆ ಬರದ ಶಾಸಕರು, ಬಿಕೋ ಎನ್ನುತ್ತಿದೆ ಜೆಡಿಎಸ್ ಕಚೇರಿ
ಸಭೆಯಲ್ಲಿ ವ್ಯಕ್ತವಾಗುವ ಸಲಹೆಗಳನ್ನು ಪಡೆದುಕೊಳ್ಳುವ ಕುಮಾರಸ್ವಾಮಿ, ಮುಂಬರುವ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷವು ಉತ್ತಮ ಸಾಧನೆ ತೋರುವತ್ತ ಪಕ್ಷದ ಕಾರ್ಯಕರ್ತರು, ಮುಖಂಡರು ಕಾರ್ಯನಿರ್ವಹಿಸುವಂತೆ ಪ್ರೇರೇಪಿಸಲಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.