ಉಪಚುನಾವಣೆ ಕಣದಿಂದ ಜೆಡಿಎಸ್ ಅಭ್ಯರ್ಥಿಯನ್ನು ಕೊನೆಗೂ ಮನವೊಲಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಬಿಜೆಪಿಗೆ ಆರಂಭಿಕ ಮುನ್ನಡೆ ಸಿಕ್ಕಂತಾಗಿದೆ. ಯಾರು ಆ ಜೆಡಿಎಸ್ ಅಭ್ಯರ್ಥಿ..? ಯಾವ ಕ್ಷೇತ್ರ..? ಈ ಕೆಳಗಿನಂತಿದೆ ನೋಡಿ.
ಹಾವೇರಿ, [ನ.19]: ಹಿರೇಕೆರೂರು ಉಪಚುನಾವಣೆ ಕಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದಂತೆಯೇ ಆಗಿದೆ. ಹಿರೇಕೆರೂರು ವಿಧಾನಸಭಾ ಉಪಚುನಾವಣೆ ಅಖಾಡದಿಂದ ಜೆಡಿಎಸ್ ಅಭ್ಯರ್ಥಿ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ನಾಳೆ [ಬುಧವಾರ] ನನ್ನ ನಾಮಪತ್ರ ವಾಪಸ್ ಪಡೆಯುತ್ತಿದ್ದೇನೆ ಎಂದು ಸ್ವತಃ JDS ಅಭ್ಯರ್ಥಿಯಾಗಿದ್ದ ಶಿವಲಿಂಗ ಶಿವಾಚಾರ್ಯ ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ. ಹಲವು ಮಠಾಧೀಶರ ಸಲಹೆ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಉಪಚುನಾವಣೆ: ಚಿಕ್ಕಬಳ್ಳಾಪುರ JDS ಅಭ್ಯರ್ಥಿ ನಾಮಪತ್ರ ರಿಜೆಕ್ಟ್
ಹಿರೇಕೆರೂರು ಬೈ ಎಲೆಕ್ಷನ್ ಗೆ ಜೆಡಿಎಸ್ ಅಭ್ಯರ್ಥಿಯಾಗಿ ಶಿವಾಚಾರ್ಯ ಸ್ವಾಮೀಜಿ ಅವರು ನಿನ್ನೆ [ಸೋಮವಾರ] ನಾಮಪತ್ರ ಸಲ್ಲಿಸಿದ್ದರು. ಇದರಿಂದ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ ಗೆ ಆತಂಕ ಶುರುವಾಗಿತ್ತು.
ನಾಮಪತ್ರ ವಾಪಸ್ ಪಡೆದುಕೊಳ್ಳುವಂತೆ ಬಿ.ಎಸ್.ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರರಿಂದ ಶಿವಾಚಾರ್ಯ ಸ್ವಾಮೀಜಿ ಮನವೊಲಿಕೆಗೆ ನಿರಂತರ ಪ್ರಯತ್ನ ನಡೆದಿತ್ತು. ಕೊನೆಗೂ ಸ್ವಾಮಿಜಿ ಮನವೊಲಿಸುವಲ್ಲಿ ರಾಘವೇಂದ್ರ ಯಶಸ್ವಿಯಾದರು.
ಕೇವಲ ರಾಘವೇಂದ್ರ ಮಾತ್ರವಲ್ಲದೇ ವಿವಿಧ ಮಠಾಧೀಶರ ಕಡೆಯಿಂದಲೂ ನಾಮಪತ್ರ ವಾಪಸ್ ಪಡೆಯುವಂತೆ ಶಿವಾಚಾರ್ಯ ಸ್ವಾಮೀಜಿ ಮೇಲೆ ಒತ್ತಡ ಹೇರಲಾಗಿದೆಯಂತೆ.
ಈ ಮೊದಲೇ ಎಚ್ ಡಿಕೆ ಹೇಳಿದ್ದೇನು..?
ಈ ಬಗ್ಗೆ ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಬಹಿರಂವಾಗಿಯೇ ಹೇಳಿದ್ದರು. ಹಿರೇಕೆರೂರಿನಲ್ಲಿ ನಾಮಪತ್ರ ಹಿಂಪಡೆಯುವಂತೆ ಜೆಡಿಎಸ್ ಅಭ್ಯರ್ಥಿ ಮೇಲೆ ಒತ್ತಡ ಹಾಕಲಾಗುತ್ತಿದೆ ಎಂದು ಎಚ್ ಡಿಕೆ ಇಂದು [ಮಂಗಳವಾರ] ಬೆಳಗ್ಗೆಯೇ ಹೇಳಿದ್ದರು.
ಅಷ್ಟೇ ಅಲ್ಲದೇ ಇವತ್ತು ಬೆಳಿಗ್ಗೆಯಿಂದ ನಾನು ಪಡೆದ ಮಾಹಿತಿ ಪ್ರಕಾರ ಸಾಕಷ್ಟು ದೊಡ್ಡ ಮಠಾಧೀಶರು ಒತ್ತಡ ಹೇರಿದ್ದಾರೆ ಅನ್ನೋದು ಗೊತ್ತಿದೆ. ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶಿವಾಚಾರ್ಯ ಶ್ರೀಗಳಿಗೆ ನಾನೇ ಕರೆ ಮಾಡಿ ಮನವಿ ಮಾಡಿದ್ದೇನೆ.
ಚುನಾವಣೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದೇನೆ. ನಿಮ್ಮ ಪೀಠಕ್ಕೆ ಅಗೌರವ ಉಂಟಾಗಬಾರದು ಅನ್ನೋ ಕಾರಣಕ್ಕೆ ಕಣದಿಂದ ಹಿಂದೆ ಸರಿಯೋದು ಸೂಕ್ತ ಅಂತಾ ನನ್ನ ಅಭಿಪ್ರಾಯ ಹೇಳಿದ್ದೇನೆ. ಮುಂದಿನ ತೀರ್ಮಾನ ಅವರಿಗೆ ಬಿಟ್ಟಿದ್ದು ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹದು.
ಸೋಮವಾರವೇ ನಾಮಪತ್ರ ಸಲ್ಲಿಕೆ ದಿನಾಂಕ ಮುಗಿದಿದ್ದು, ನವೆಂಬರ್ 21 ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಇನ್ನು ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ಕ್ಕೆ ಮತ ಎಣಿಕೆ ನಡೆಯಲಿದೆ.