
ಮೈಸೂರು (ಫೆ.08): ಬಿಜೆಪಿ ಜತೆಗೆ ಜೆಡಿಎಸ್ ಹೊಂದಾಣಿಕೆ ಲೋಕಸಭಾ ಚುನಾವಣಾ ಹಿತದೃಷ್ಟಿಯಿಂದ ಮಾತ್ರವಷ್ಟೆ. ಅದನ್ನು ಹೊರತುಪಡಿಸಿ ನಮ್ಮ ತತ್ತ್ವ- ಸಿದ್ಧಾಂತವೇ ಬೇರೆ ಬಿಜೆಪಿ ತತ್ವ- ಸಿದ್ಧಾಂತವೇ ಬೇರೆ ಎಂದು ರಾಜ್ಯ ಕೋರ್ ಕಮಿಟಿ ಅಧ್ಯಕ್ಷರೂ ಆದ ಶಾಸಕ ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದರು. ಬುಧವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಜನತಾ ಪಕ್ಷ ಕಟ್ಟಿದ ಜಯ ಪ್ರಕಾಶ್ ನಾರಾಯಣ್, ಪಕ್ಷ ಉಳಿಸಿ ಬೆಳೆಸಿದ ಎಚ್.ಡಿ. ದೇವೇಗೌಡರ ಹಾದಿಯಲ್ಲಿ ನಾವು ಸಾಗುತ್ತೇವೆ. ಮೈತ್ರಿ ಮಾಡಿಕೊಂಡಿರುವ ಮಾತ್ರಕ್ಕೆ ನಮ್ಮ ತತ್ತ್ವ-ಸಿದ್ಧಾಂತ ಒಂದಿಂಚು ಕೂಡ ಬದಲಾಗಲ್ಲ. ಬಿಜೆಪಿಯವರದು ಅವರಿಗೆ ನಮ್ಮದು ನಮಗೆ. ಕೇವಲ ಚುನಾವಣಾ ದೃಷ್ಟಿಯಿಂದ ಮಾತ್ರ ನಾವು ಒಂದಾಗಿದ್ದೇವೆ ಎಂದರು.
ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಂ ಅವರು ನಾವು ಎಲ್ಲವನ್ನೂ ಕೊಟ್ಟಿದ್ದೇವೆ ಎನ್ನುತ್ತಾರೆ. ಇವರು ಕೊಟ್ಟಿಲ್ಲ ಎನ್ನುತ್ತಾರೆ. ಏನೇ ಇದ್ದರೂ ಕುಳಿತು ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಬಹುದಿತ್ತು. ಆದರೆ, ರಾಜ್ಯ ಸರ್ಕಾರ ಕೊಟ್ಟಿಲ್ಲ ಅಂತ ಹೇಳಿ ದೆಹಲಿಗೆ ಹೋಗಿ ಪ್ರತಿಭಟನೆ ಮಾಡುವ ಅಗತ್ಯ ಇರಲಿಲ್ಲ ಎಂದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹಾಕಿದ್ದ ಕೇಸರಿ ಬಣ್ಣದ ಟವೆಲ್ ಅಲ್ಲ. ಅದು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದಾಗ ಒಬ್ಬ ಹುಡುಗ ಹಾಕಿದ ಟವೆಲ್. ಕುಮಾರಸ್ವಾಮಿ ಧರಿಸಿದ್ದ ಶಾಲು ಬಿಜೆಪಿಯವರದ್ದಲ್ಲ, ಆಂಜನೇಯನ ಭಕ್ತ ನೀಡಿದ ಶಾಲು. ಆದರೆ, ಕಾಂಗ್ರೆಸ್ ನವರು ಅದನ್ನೇ ದೊಡ್ಡದು ಮಾಡಿದ್ದಾರೆ ಅಷ್ಟೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಆಕ್ಷೇಪಕ್ಕೆ ಪರೋಕ್ಷ ಅಸಮ್ಮತಿ ವ್ಯಕ್ತಪಡಿಸಿದರು.
ಬಾಲರಾಮ ಶಿಲೆ ಸಿಕ್ಕ ಜಾಗದಲ್ಲೇ ರಾಮಮಂದಿರ ನಿರ್ಮಾಣ: ಶಾಸಕ ಜಿ.ಟಿ.ದೇವೇಗೌಡ
ಹಳೆ ಕೆಸರೆ ಕಸ ವಿಲೇವಾರಿ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಲು ಸೂಚನೆ: ಹಳೆ ಕೆಸರೆ ಗ್ರಾಮದಲ್ಲಿ ಪ್ರಾರಂಭವಾಗಿರುವ ಕಸ ವಿಲೇವಾರಿ ಘಟಕವನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸುವಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಸೂಚಿಸಿದರು. ನಗರದ ಜಲದರ್ಶಿನಿಯಲ್ಲಿರುವ ಶುಕ್ರವಾರ ನಡೆದ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ನಗರ ಪಾಲಿಕೆ ಆಯುಕ್ತರು, ಹೂಟಗಳ್ಳಿ ನಗರಸಭೆಯ ಪೌರಾಯುಕ್ತರು, ರಮ್ಮನಹಳ್ಳಿ, ಶ್ರೀರಾಂಪುರ, ಬೋಗಾದಿ ಮತ್ತು ಕಡಕೊಳ ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳೊಡನೆ ಬಜೆಟ್ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದ ಅವರು, ಹಳೆ ಕೆಸರೆ, ಕಾಮನಕೆರೆಹುಂಡಿ ಗ್ರಾಮದ ನಿವಾಸಿಗಳು ಹಾಗೂ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು ಈಗಾಗಲೇ ಪ್ರತಿಭಟನೆ ಮಾಡಿದ್ದು, ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವವಿದೆ: ಜಿ.ಟಿ.ದೇವೇಗೌಡ ಸ್ಪಷ್ಟನೆ
ಬೇಸಿಗೆ ಪ್ರಾರಂಭವಾಗುತ್ತಿದ್ದು, ಎಲ್ಲಿಯು ನೀರಿನ ಸಮಸ್ಯೆ ಉದ್ಬವಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕಬಿನಿಯಿಂದ ತಳೂರು ಯೋಜನೆಗೆ ಹೆಚ್ಚುವರಿ ನೀರು ನೀಡಬೇಕು. ವಿಜಯನಗರ 3ನೇ ಹಂತದಲ್ಲಿ ಅಂಗಡಿ, ಹೋಟಲ್ ಗಳಿಗೆ ಪರವಾನಿಗೆ ಇಲ್ಲದೆ ಪ್ರಾರಂಭ ಮಾಡುತ್ತಿರುವುದಾಗಿ ದೂರುಗಳು ಬಂದಿದ್ದು, ಎಲ್ಲಾ ಅಂಗಡಿ, ಹೋಟಲ್ ಗಳಿಗೆ ಪರವಾನಿಗೆ ನೀಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು. ಒಳಚರಂಡಿ ನೀರು, ಮಳೆ ನೀರು ಚರಂಡಿಯಲ್ಲಿ ಹರಿಯುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಖಾಸಗಿ ಬಡಾವಣೆಗಳನ್ನು ಹಸ್ತಾಂತರ ಮಾಡಿಕೊಳ್ಳುವಾಗ ಬಡಾವಣೆಗಳಲ್ಲಿ ಜಂಟಿ ಸಮೀಕ್ಷೆ ನಡೆಸಿ, ಯಾವ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.