* ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ನಾಜೀಯಾ ಅಂಗಡಿ ವಿಶ್ವಾಸ
* ಸಿಂದಗಿ ಮತಕ್ಷೇತ್ರ ಅಭಿವೃದ್ಧಿ ಆಗಿದ್ದೇ ಜೆಡಿಎಸ್ ಸರ್ಕಾರದಲ್ಲಿ
* 2023ರಲ್ಲಿ ಮತ್ತೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ
ಸಿಂದಗಿ(ಅ.04): ಸಿಂದಗಿ ಮತಕ್ಷೇತ್ರ ಅಭಿವೃದ್ಧಿ ಆಗಿದ್ದೇ ಜೆಡಿಎಸ್(JDS) ಸರ್ಕಾರದಲ್ಲಿ ವಿನಃ ಬೇರಾವ ಸರ್ಕಾರದಲ್ಲಿ ಅಲ್ಲ. ಈ ಬಾರಿಯೂ ಸಿಂದಗಿ(Sindagi) ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲವು ನಿಶ್ಚಿತ ಎಂದು ಸಿಂದಗಿ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ನಾಜೀಯಾ ಶಕೀಲ ಅಂಗಡಿ ಹೇಳಿದ್ದಾರೆ.
ಅವರು ಪಟ್ಟಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(HD Devegowda) ಮತ್ತು ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ಅವರು ಮಹಿಳೆಯರು ರಾಜಕೀಯವಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಸಿಂದಗಿ ರಾಜಕೀಯ ಇತಿಹಾಸದಲ್ಲೇ ಮಹಿಳೆಯರಿಗೆ ಅವಕಾಶ ನೀಡಿದೆ. ಜೆಡಿಎಸ್ ಅಭಿಮಾನಿಗಳು ಮತ್ತು ಕಾರ್ಯಕರ್ತರು ಈ ಬಾರಿ ಸಿಂದಗಿ ಮತಕ್ಷೇತ್ರದಲ್ಲಿ ಮತ್ತೊಮ್ಮೆ ಜೆಡಿಎಸ್ ಧ್ವಜ ಹಾರಿಸಲು ಸಿದ್ಧರಾಗಬೇಕು. ನಿಮ್ಮ ಸೇವೆ ಮಾಡಲು ನನಗೆ ಅವಕಾಶ ನೀಡಿ ಎಂದರು.
undefined
ಸಿಂದಗಿ, ಹಾನಗಲ್ ಬೈ ಎಲೆಕ್ಷನ್‌ಗೆ ಜೆಡಿಎಸ್ನಿಂದ ಮುಸ್ಲಿಂ ಅಭ್ಯರ್ಥಿ: ಸಿದ್ದು, ಎಚ್‌ಡಿಕೆ ವಾಕ್ಸಮರ
ಮಾಜಿ ಶಾಸಕ ಬಿ.ಜಿ.ಪಾಟೀಲ ಹಲಸಂಗಿ ಮಾತನಾಡಿ, ಸಿಂದಗಿ ಉಪ ಚುನಾವಣೆಗೆ(Byelection) ಸಂಬಂಧಿಸಿದಂತೆ ಜೆಡಿಎಸ್ ಪಕ್ಷದಲ್ಲಿ ಟಿಕೆಟ್‌ಗಾಗಿ ಸುಮಾರು 8 ಜನ ಆಕಾಂಕ್ಷಿಗಳು ಇದ್ದರು. ಅವರ ಒಮ್ಮತದ ಮೇರೆಗೆ ಮಹಿಳಾ ಅಭ್ಯರ್ಥಿಯ ಹೆಸರನ್ನು ರಾಜ್ಯ ನಾಯಕರು ಅಂತಿಮಗೊಳಿಸಿದ್ದಾರೆ. ಜೆಡಿಎಸ್ ಸರ್ಕಾರದಲ್ಲಿ ಸಿಂದಗಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಸೇರಿದಂತೆ ಅನೇಕ ನೀರಾವರಿ ಯೋಜನೆಗಳು ರಚಿತವಾದ ಪರಿಣಾಮ ಈ ಭಾಗ ಹಸಿರಿನಿಂದ ಕಂಗೊಳಿಸುತ್ತಿದೆ. ಇದರಿಂದ ಅನೇಕ ಉದ್ಯೋಗವಕಾಶಗಳು ರೂಪಿತಗೊಂಡಿವೆ. ಸಿಂದಗಿ ಮತಕ್ಷೇತ್ರದಲ್ಲಿ ಜಾತ್ಯತೀತ ಜನತಾದಳ ಬೇರೂರಲು ದಿ.ಐ.ಬಿ.ಅಂಗಡಿ ಅವರ ಶ್ರಮವೂ ಇದೆ. ಆ ಹಿನ್ನೆಲೆಯಲ್ಲಿ ಐ.ಬಿ.ಅಂಗಡಿ ಅವರ ಕುಟುಂಬ ರಾಜಕೀಯ ಮನೆತನದಿಂದಲೂ ಮತ್ತು ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದೆ. ಆ ಮನೆತನದ ಸೊಸೆ ನಾಜೀಯಾ ಅಂಗಡಿಗೆ ಟಿಕೆಟ್ ನೀಡಿದ್ದು ಸಂತಸ ತಂದಿದೆ. ಜೆಡಿಎಸ್‌ದಿಂದ ಅಧಿಕಾರ ಪಡೆದು ಪಕ್ಷಾಂತರವಾದವರಿಗೆ ಈ ಕ್ಷೇತ್ರದ ಜನ ತಕ್ಕ ಉತ್ತರ ನೀಡಲಿದ್ದಾರೆ. ಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.
ಜೆಡಿಎಸ್ ಮುಖಂಡರಾದ ಅರವಿಂದ ಹಂಗರಗಿ, ಗೋಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಪ್ರಕಾಶ ಹಿರೇಕುರುಬರ, ಸಿದ್ದನಗೌಡ ಪಾಟೀಲ ಮಾತನಾಡಿ, ಜೆಡಿಎಸ್ ಎಂದರೆ ಅಭಿವರದ್ಧಿ ಪರಪಕ್ಷವಾಗಿದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರದ ಸಮಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅನೇಕ ಸಮಸ್ಯೆಗಳ ಮಧ್ಯೆ ಸುಮಾರು 25 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದ್ದು ಇತಿಹಾಸ. ಮಹಿಳೆಯರಿಗೆ ಶೇ. 33ರಷ್ಟು ಚುನಾವಣೆಯಲ್ಲಿ ಸ್ಥಾನ ಮಾನ ನೀಡಲು ಸಮ್ಮತಿಸಿದ್ದಾರೆ. ಇದು ಬರುವ ಸಾರ್ವತ್ರಿಕ ಚುನಾವಣೆಗೂ ಅನ್ವಯವಾಗಲಿದೆ. ಸಿಂದಗಿ ಶಾಸಕ ದಿ.ಎಂ.ಸಿ.ಮನಗೂಳಿ ಅವರ ಸಾಧನೆ ಮತ್ತು ಅವರ ಅಭಿವೃದ್ದಿ ಪರವಾಗಿರುವ ಯೋಜನೆ ಮುಂದಿಟ್ಟುಕೊಂಡು ಚುನಾವಣೆ ಪ್ರಚಾರ ಕೈಗೊಳ್ಳಲಿದ್ದೇವೆ ಎಂದರು.
ಕಾಂಗ್ರೆಸ್ ಕೋಟೆಯಲ್ಲಿ ಬಿಜೆಪಿ, ಜೆಡಿಎಸ್ ದರ್ಬಾರ್
ಉಪಚುನಾಣೆಗೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷದಿಂದ ಅ. 7ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದು ಆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ಬಂಡೇಪ್ಪ ಕಾಂಶಪೂರೆ ಸೇರಿದಂತೆ ಅನೇಕ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಂ.ಎನ್.ಪಾಟೀಲ, ಶಿವಾನಂದ ಕೋಟರಗಸ್ತಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಸ್ನೇಹಲತಾ ಶೆಟ್ಟಿ, ರೇಣುಕಾ ಮಡಿವಾಳ, ಬಸವನಗೌಡ ಮೂಡಗಿ, ಕೌಸರ ಶೇಖ, ಜುಲ್ಪಿಕರ ಅಂಗಡಿ ಸೇರಿದಂತೆ ಅನೇಕರು ಇದ್ದರು.