
ತುಮಕೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಆಗ್ತಾರೆ ಎಂಬ ಕೂಗು ಪದೇ ಪದೇ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ತುಮಕೂರಿನಲ್ಲಿ ಮಾತನಾಡಿದರು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಪಾರ್ಟಿ ಸಿಸ್ಟಮ್ ಆಫ್ ಪಾಲಿಟಿಕ್ಸ್ ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಲ್ಲೋ ಅಡ್ಡಿಯಾಗುತ್ತಿದೆ. ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಬೇಕೋ, ಅಥವಾ ಹೊರಗಡೆ ಕುಳಿತು ಕೆಲವು ವ್ಯಕ್ತಿಗಳು ‘ಇವರು ಸಿಎಂ ಆಗಬೇಕು, ಇವರು ಡೆಪ್ಯುಟಿ ಸಿಎಂ ಆಗಬೇಕು’ ಅಂತ ನಿಶ್ಚಯಿಸಬೇಕೋ ಎನ್ನುವ ಗೊಂದಲ ಇದೆ.
legislators (ಎಂಎಲ್‌ಎಗಳು) ತಮ್ಮದೇ ಆದ ಅಭಿಪ್ರಾಯಗಳನ್ನು ಪ್ರತ್ಯೇಕವಾಗಿ ಪ್ರತಿ ದಿನ ಹೇಳುತ್ತಿದ್ದಾರೆ. ನಮಗೆ ಇಷ್ಟವೋ ಇಲ್ಲವೋ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ. ಹಲವು ವಿಷಯಗಳಲ್ಲಿ ಶರತ್ತುಗಳೊಂದಿಗೆ ಒಪ್ಪಿಗೆ ವ್ಯಕ್ತವಾಗುತ್ತಿದೆ.
ಹೈಕಮಾಂಡ್ ಯೋಚನೆ ಮಾಡಬೇಕಾದ ಸಂದರ್ಭ ಬಂದಿದೆ. ರಾಜ್ಯ ಸರ್ಕಾರಗಳಿಗೆ ತಮ್ಮದೇ ಆದ ಚುನಾಯಿತ ಶಾಸಕರು ಇದ್ದಾರೆ. ಅವರಿಗೇ ನಾಯಕತ್ವವನ್ನು ಆಯ್ಕೆ ಮಾಡುವ ಅವಕಾಶ ನೀಡಬೇಕು. ರಾಷ್ಟ್ರೀಯ ಮಟ್ಟಕ್ಕೆ ಯಾರಾದರೂ ಬೆಳೆದಂತೆಲ್ಲಾ ಹೈಕಮಾಂಡ್ ನೋಡಬೇಕು.
ಆದರೆ ಇಂದಿನ ಹೈಕಮಾಂಡ್‌ನ ಸ್ಥಿತಿ ನೋಡುವುದಕ್ಕೆ ದುಃಖವಾಗುತ್ತದೆ. ನಾನು ಯಾರನ್ನೂ ಟೀಕೆ ಮಾಡಲು ಬಯಸುತ್ತಿಲ್ಲ. ಆದರೆ ಈ ರಾಜ್ಯದಲ್ಲಿ, ‘ನಾನು ಹೈಕಮಾಂಡ್ ಮಟ್ಟಕ್ಕೆ ಸಮಾನರಾಗಿದ್ದೇನೆ’ ಎಂದು ಹೇಳುವ ನಾಯಕನನ್ನು ನಾವು ನೋಡಲಿಲ್ಲ. ಹೈಕೋರ್ಟ್‌ಗೆ ಕೆಳಗಿನ ಕೋರ್ಟ್ ಇರುವಂತೆ, ಆ ಹಂತಕ್ಕೆ ನಾವು ರಾಜಕೀಯದಲ್ಲಿ ತಲುಪಿದ್ದೇವೆ. ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ದುರಂತವಾಗಿದೆ. ಪಕ್ಷದವರು ಮಾರ್ಗದರ್ಶಕರಾಗಿಯೇ ಇರಬೇಕು. ಆದರೆ ಅವರು ನಿಯಂತ್ರಣಾಧಿಕಾರಿಗಳಾಗಿರುವ ಸ್ಥಿತಿ ಅಂದ್ರೆ ಅದು ದುರಂತವೇ. ಇದು ಯಾವೊಂದೇ ಪಕ್ಷಕ್ಕೆ ಸೀಮಿತವಲ್ಲ, ಎಲ್ಲಾ ಪಕ್ಷಗಳಲ್ಲಿ ಇದೆ ಎಂದರು.
ಸಿದ್ದರಾಮಯ್ಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಜೆ.ಸಿ. ಮಾಧುಸ್ವಾಮಿ, ಸಿದ್ದರಾಮಯ್ಯ ಸ್ವಲ್ಪ ಮೆತ್ತಗೆ ಆಗುತ್ತಿದ್ದಾರೆ ಎಂಬ ಮಾತು ಕೇಳಿಸುತ್ತಿದೆ. ನಾನು ಇತ್ತೀಚೆಗೆ ಅವರನ್ನು ಭೇಟಿಯಾಗಿದ್ದೆ. ಆದರೆ ಅವರಲ್ಲಿ ಆಷ್ಟು ಬದಲಾವಣೆ ನನಗೆ ಕಾಣಲಿಲ್ಲ. ಬೆಳಿತಾ ಬೆಳಿತಾ ಅವರು ಹಣ್ಣಾಗಿರಬಹುದು, ಇಲ್ಲ ಮಾಗಿರಬಹುದು. ಇಲ್ಲವೇ ಒತ್ತಡಕ್ಕೆ ಸಿಲುಕಿ ಅವರು ಮೆತ್ತಗೆ ಆಗಿರಲೂಬಹುದು. ಹಣ್ಣು ಬೆಳೆಯುವುದು ಸಹಜವಾಗಿ ಕೂಡ ಸಂಭವಿಸಬಹುದು, ಅಥವಾ ಕೆಲವೊಂದು ವೇಳೆ ಒತ್ತಡದ ಮೂಲಕ ಹಣ್ಣನ್ನು ಬೆಳೆಸುವಂತಾಗುತ್ತದೆ. ಅದೇ ರೀತಿಯಾಗಿ ಸಿದ್ದರಾಮಯ್ಯ ಹಣ್ಣಾಗುತ್ತಿದ್ದಾರೆ ಎನ್ನಬಹುದು.
ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಶ್ನೆ ಏನೇನು ಇಲ್ಲ. ನಮ್ಮ ಸಮಾಜದ ಹಾಸ್ಟೆಲ್ ಸಂಬಂಧಿ ಕೆಲಸಕ್ಕಾಗಿ ಮಾತ್ರ ಅವರನ್ನು ಭೇಟಿಯಾಗಿದ್ದೆ. ರಾಜಕೀಯದ ಕುರಿತು ಯಾವ ಚರ್ಚೆಯೂ ನಡೆದಿಲ್ಲ. ನಾನು ಈಗ ಒಬ್ಬ ರೈತ ಮಾತ್ರ. ಸದ್ಯಕ್ಕೆ ರಾಜಕೀಯದಲ್ಲಿ ಸಕ್ರಿಯವಾಗಿ ಇಲ್ಲ, ನಿವೃತ್ತಿಯಾಗಲೂ ಇಲ್ಲ. ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಆದರೆ ಈಗ ಇನ್ನೇನೂ ಹೇಳಲು ಬಯಸುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ. ಏನಾಗುತ್ತೋ ನೋಡೋಣ ಎಂದರು.
ರಾಜಕೀಯದಲ್ಲಿ ನಾನು ಸಂತೆಯಲ್ಲಿ ತಪ್ಪಿಸಿಕೊಂಡ ಮಗನಂತಿದ್ದೇನೆ. ಯಾರಾದರೂ ಹಿಡಿದು ಬಸ್ ಹತ್ತಿಸುತ್ತಾರೋ, ನೋಡೋಣ. ಬಸ್ ಹತ್ತಿ ಮನೆ ಸೇರುವುದೇ ಅಂತಿಮ ಗುರಿ. ನಾನು ದ್ವಂದ್ವದಲ್ಲಿ ಮಾತನಾಡುವ ವ್ಯಕ್ತಿ ಅಲ್ಲ. ಮಾಡಿದರೆ ನೇರವಾಗಿ ಮಾಡಿದದ್ದಾಗಿ ಹೇಳುವೆ. ಯಾರಿಗೂ ಹೆದರಿಕೊಂಡು ಮಾತನಾಡುವ ವ್ಯಕ್ತಿ ನಾನು ಅಲ್ಲ. ಹಾಸ್ಟೆಲ್ ವಿಚಾರವನ್ನಷ್ಟೇ ಚರ್ಚಿಸಿದ್ದೇವೆ. ರಾಜಕೀಯ ಕುರಿತು ಯಾವುದೇ ಚರ್ಚೆ ನಡೆಯಲೇ ಇಲ್ಲ. ಸಿದ್ದರಾಮಯ್ಯ ಅವರನ್ನು ಪಕ್ಷದ ಮುಖ್ಯಮಂತ್ರಿಯಾಗಿ ನೋಡಬೇಕಾ ಎಂಬ ಪ್ರಶ್ನೆ ಯಾರೂ ಕೇಳಲಿಲ್ಲ, ನಾನು ಕೇಳಲಿಲ್ಲ ಎಂದರು.
ಅಂತಿಮವಾಗಿ, ಮಾಧುಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷರ ಕುರಿತು ನನಗೆ ಯಾವುದೇ ಕಾಮೆಂಟ್ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗೆ, ತುಮಕೂರಿನಲ್ಲಿ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ನೀಡಿದ ಹೇಳಿಕೆಗಳು ರಾಜ್ಯದ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದರೂ ಅದಲ್ಲಿ ಆಶ್ಚರ್ಯ ಇಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.