ರಾಜ್ಯ ಬಿಜೆಪಿಯ ನಾಯಕರು ಕೂಡ ಕಾಂಗ್ರೆಸ್ ಪಕ್ಷದಂತೆ ನಡೆದುಕೊಂಡರೆ ಹೇಗೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತೀಕ್ಷ್ಣವಾಗಿ ಪ್ರಶ್ನಿಸಿದೆ.
ಬೆಂಗಳೂರು (ಸೆ.13) : ರಾಜ್ಯ ಬಿಜೆಪಿಯ ನಾಯಕರು ಕೂಡ ಕಾಂಗ್ರೆಸ್ ಪಕ್ಷದಂತೆ ನಡೆದುಕೊಂಡರೆ ಹೇಗೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತೀಕ್ಷ್ಣವಾಗಿ ಪ್ರಶ್ನಿಸಿದೆ.ಬಹುದಿನಗಳ ನಂತರ ಬಿಜೆಪಿಯ ಆಯ್ದ ಸುಮಾರು 40 ಮಂದಿ ನಾಯಕರೊಂದಿಗೆ ಸುದೀರ್ಘ ಸಭೆ ನಡೆಸಿದ ಆರ್‌ಎಸ್‌ಎಸ್ ಮುಖಂಡರು ಕಿವಿಹಿಂಡುವ ಕೆಲಸ ಮಾಡಿದ್ದಾರೆ.ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸುಮಾರು ಐದು ಗಂಟೆಗಳ ಕಾಲ ಸದಾಶಿವನಗರದ ರಾಷ್ಟ್ರೋತ್ಥಾನ ಪರಿಷತ್ತಿನ ಕಚೇರಿಯಲ್ಲಿ ಸಭೆ ನಡೆಸಿದ ಆರ್‌ಎಸ್‌ಎಸ್ ಮುಖಂಡರು ಎಲ್ಲ ನಾಯಕರ ಮುಕ್ತ ಅಭಿಪ್ರಾಯ, ಅನಿಸಿಕೆಗಳನ್ನು ಆಲಿಸಿದ ನಂತರ ಸಾತ್ವಿಕವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿಯಲ್ಲಿನ ಬೆಳವಣಿಗೆಗಳು ನಮಗೆ ಸಮಾಧಾನ ತರುತ್ತಿಲ್ಲ. ಹೀಗಾಗಿಯೇ ತುಸು ದೂರ ಉಳಿದುಕೊಂಡಿದ್ದೆವು. ಆದರೆ, ಈಗ ಪರಿಸ್ಥಿತಿ ಬಿಗಡಾಯಿಸುತ್ತಿರುವುದರಿಂದ ಪಕ್ಷದ ಭವಿಷ್ಯದ ದೃಷ್ಟಿಯಿಂದ ಇವತ್ತು ಸಭೆ ಕರೆದಿದ್ದೇವೆ. ಸಂಘ ಯಾವತ್ತಿಗೂ ಪಕ್ಷದ ಮಾರ್ಗದರ್ಶನಕ್ಕೆ ಸಿದ್ಧವಿರುತ್ತದೆ ಎಂದು ಸಂಘದ ಮುಖಂಡರು ಹೇಳಿದ್ದಾರೆ ಎನ್ನಲಾಗಿದೆ.ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಸಂಘದ ಪ್ರಮುಖರಾದ ಮುಕುಂದ್, ಸುಧೀರ್, ಬಿಜೆಪಿ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರ್‌ವಾಲ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತತರು ಸೇರಿದಂತೆ ಬಿಜೆಪಿಯ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.ಕಾಂಗ್ರೆಸ್ ರೀತಿ ಅಲ್ಲ ಎಂಬ ಕಾರಣಕ್ಕಾಗಿ, ಹಿಂದುತ್ವದ ಸಿದ್ಧಾಂತಕ್ಕಾಗಿ ಸಂಘವು ಬಿಜೆಪಿಯನ್ನು ಬೆಂಬಲಿಸುತ್ತಿದೆ. ಸಂಘದ ಅಪೇಕ್ಷೆಯಂತೆ ನೀವು ಶೇ.50ರಷ್ಟೂ ಇಲ್ಲದಿದ್ದರೆ ಹೇಗೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
‘ಹಿಂದಿ ದಿವಸ್’ ಅಚರಣೆ ಖಂಡಿಸಿ ನಾಳೆ ಕರವೇಯಿಂದ ಪ್ರತಿಭಟನೆ!
ಪಕ್ಷದ ನಾಯಕರು ತತ್ವ-ಸಿದ್ಧಾಂತಗಳನ್ನು ಬದಿಗೊತ್ತಿ ತಮ್ಮ ಭಿನ್ನಾಭಿಪ್ರಾಯಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಪರಸ್ಪರ ಮುಕ್ತವಾಗಿ ಮಾತನಾಡುವುದನ್ನು ಬಿಟ್ಟು ಮಾಧ್ಯಮಗಳ ಮೂಲಕ ಮಾತನಾಡುವುದು ಸರಿಯಲ್ಲ. ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು ಎಂದು ಸಂಘದ ಪ್ರಮುಖರು ತಾಕೀತು ಮಾಡಿದರು ಎನ್ನಲಾಗಿದೆ.ನೀವೆಲ್ಲರೂ ಒಟ್ಟಿಗೆ ಕೆಲಸ ಮಾಡಬೇಕು. ಒಟ್ಟಿಗೆ ಪ್ರವಾಸ ಮಾಡಬೇಕು. ಆಗಾಗ ಅನೌಪಚಾರಿಕವಾಗಿ ಸೇರಬೇಕು. ಅಂದಾಗಲೇ ನಿಮ್ಮ ನಡುವೆ ಒಳ್ಳೆಯ ಬಾಂಧವ್ಯ ಬೆಸೆಯಲು ಸಾಧ್ಯವಾಗುತ್ತದೆ. ನೀವು ಇತರ ಪಕ್ಷಗಳ ನಾಯಕರಂತೆ ಆಗಬಾರದು. ನಿಮ್ಮ ನಡುವಿನ ಅಂತರ ಕಡಮೆಯಾಗಬೇಕು ಎಂಬುದು ನಮ್ಮ ಆಶಯ ಎಂದೂ ಹೇಳಿದ್ದಾರೆ.
ಪಕ್ಷದ ಸಂಘಟನೆ ಕುರಿತಂತೆ ರಾಜ್ಯ ನಾಯಕರು ಪ್ರತಿಯೊಂದಕ್ಕೂ ದೆಹಲಿಯತ್ತ ನೋಡುತ್ತಾ ಕೂರಬೇಕಿಲ್ಲ. ಎಲ್ಲವನ್ನೂ ಹೈಕಮಾಂಡ್ ನಡೆಸುವುದಾದರೆ ನೀವು ಯಾಕಿರಬೇಕು? ಕೆಲವೊಂದು ವಿಷಯಗಳನ್ನು ರಾಜ್ಯ ನಾಯಕರೇ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲವೇ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.