ತಮ್ಮ ತಂದೆ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಬಳಿಕ ಹನಿಟ್ರ್ಯಾಪ್ ಪ್ರಕರಣ ಸಂಬಂಧ ಅವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಕೂಡ ಉಲ್ಟಾ ಹೊಡೆದಿದ್ದಾರೆ. ತಮ್ಮ ಮೇಲೆ ಹನಿಟ್ರ್ಯಾಪ್ ಆಗಿಲ್ಲ.
ಬೆಂಗಳೂರು (ಮಾ.28): ತಮ್ಮ ತಂದೆ ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಬಳಿಕ ಹನಿಟ್ರ್ಯಾಪ್ ಪ್ರಕರಣ ಸಂಬಂಧ ಅವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಕೂಡ ಉಲ್ಟಾ ಹೊಡೆದಿದ್ದಾರೆ. ತಮ್ಮ ಮೇಲೆ ಹನಿಟ್ರ್ಯಾಪ್ ಆಗಿಲ್ಲ. ನಾಲ್ಕು ತಿಂಗಳ ಹಿಂದೆ 5 ಲಕ್ಷ ರು.ಗೆ ಸುಪಾರಿ ಪಡೆದು ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದಾರೆ ಎಂದು ಆರೋಪಿಸಿ ತನಿಖೆ ನಡೆಸುವಂತೆ ಗುರುವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ರಾಜೇಂದ್ರ ದೂರು ನೀಡಿದ್ದಾರೆ.
ಕೆಲ ದಿನಗಳ ಹಿಂದೆ ವಿಧಾನಸಭಾ ಅಧಿವೇಶನದ ಹೊತ್ತಿನಲ್ಲಿ ರಾಜಕೀಯ ವಲಯದಲ್ಲಿ ಹೊತ್ತಿಕೊಂಡ ಹನಿಟ್ರ್ಯಾಪ್ ಬೆಂಕಿಗೆ ಸಚಿವರ ಪುತ್ರ ಸಹ ತುಪ್ಪ ಸುರಿದಿದ್ದರು. ತಮ್ಮ ತಂದೆ ಸಚಿವ ರಾಜಣ್ಣ ಮಾತ್ರವಲ್ಲ ತಮ್ಮ ಮೇಲೂ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎಂದು ವಿಧಾನಸೌಧ ಆವರಣದಲ್ಲಿ ಸುದ್ದಿಗಾರರಿಗೆ ಹೇಳಿಕೆ ಕೊಟ್ಟಿದ್ದ ರಾಜೇಂದ್ರ, ಅಂದು ಈ ಹನಿಟ್ರ್ಯಾಪ್ ಜಾಲದ ವಿರುದ್ಧ ಸಮಗ್ರ ತನಿಖೆಗೆ ಲಿಖಿತ ದೂರು ಕೊಡುವುದಾಗಿ ಕೂಡ ಗುಡುಗಿದ್ದರು. ಆದರೆ ಈಗ ತಮ್ಮ ಮೇಲೆ ಹನಿಟ್ರ್ಯಾಪ್ ನಡೆದೇ ಇಲ್ಲ. ನಡೆದಿರೋದು ಸುಪಾರಿ ಕೊಲೆ ಯತ್ನ ಎಂದು ರಾಜೇಂದ್ರ ವರಸೆ ಬದಲಾಯಿಸಿದ್ದಾರೆ.
ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್
ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಡಿಜಿ-ಐಜಿಪಿ ಅಲೋಕ್ ಮೋಹನ್ ಅವರನ್ನು ಭೇಟಿಯಾದ ರಾಜೇಂದ್ರ ಅವರು, ತಮ್ಮ ಮೇಲೆ ನಡೆದಿರುವ ಕೊಲೆ ಯತ್ನದ ಬಗ್ಗೆ ತನಿಖೆಗೆ ಆಗ್ರಹಿಸಿ ದೂರು ಸಲ್ಲಿಸಿದರು. ಆಗ ತುಮಕೂರಿನಲ್ಲಿ ಕೃತ್ಯ ನಡೆದಿರುವ ಕಾರಣ ಸ್ಥಳೀಯ ಪೊಲೀಸರಿಗೆ ದೂರು ನೀಡುವಂತೆ ಹೇಳಿ ರಾಜೇಂದ್ರ ಅವರನ್ನು ಡಿಜಿಪಿ ಕಳುಹಿಸಿದ್ದಾರೆ.
ಶಾಮಿಯಾನ ಹಾಕಲು ಬಂದು ಕೊಲೆ ಯತ್ನ: ಪೊಲೀಸ್ ಮಹಾನಿರ್ದೇಶಕರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಂದ್ರ, ನನ್ನ ಮೇಲೆ ಹನಿಟ್ರ್ಯಾಪ್ ನಡೆದಿಲ್ಲ. ಆದರೆ ಕೊಲೆಗೆ ವಿಫಲ ಯತ್ನ ನಡೆದಿದೆ ಎಂದು ಸ್ಪಷ್ಟಪಡಿಸಿದರು. ಕಳೆದ ನವೆಂಬರ್ 16ನೇ ತಾರೀಖು ನನ್ನ ಮಗಳ ಹುಟ್ಟುಹಬ್ಬ ಇತ್ತು. ಆ ಕಾರ್ಯಕ್ರಮದ ಹಿಂದಿನ ಅಂದರೆ ನ.15 ರಂದು ನಮ್ಮ ಮನೆಗೆ ಶಾಮಿಯಾನ ಹಾಕುವ ನೆಪದಲ್ಲಿ ಬಂದು ನನ್ನ ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದರು. ಈ ಕೊಲೆ ಯತ್ನದ ಸಂಗತಿ ನನಗೆ ಜನವರಿಯಲ್ಲಿ ಗೊತ್ತಾಯಿತು. ಆಗ ನನಗೆ ಬಾತ್ಮಿದಾರರ ಮೂಲಕ ಒಂದು ವಾಯ್ಸ್ ರೆಕಾರ್ಡ್ (ಧ್ವನಿ ಮುದ್ರಿಕೆ) ಸಿಕ್ಕಿತು. ಆ ಆಡಿಯೋದಲ್ಲಿ ತುಮಕೂರಿನ ಮೂವರ ಹೆಸರುಗಳು ಉಲ್ಲೇಖವಾಗಿವೆ ಎಂದು ಹೇಳಿದರು.
ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡಬೇಕಿಲ್ಲ, ಸರ್ಟಿಫಿಕೇಟ್ ಕೊಟ್ಟರೆ ಸಾಕು: ಸಂಸದ ಯದುವೀರ್
ಅಲ್ಲದೆ ಆ ವ್ಯಕ್ತಿಗಳ ಪೈಕಿ ಒಬ್ಬಾತನ ಖಾತೆಗೆ 5 ಲಕ್ಷ ರು. ಹಣ ವರ್ಗಾವಣೆಯಾಗಿದೆ. ನನ್ನ ಹತ್ಯೆಗೆ ನೀಡಿದ ಹಣ ಇದಾಗಿದೆ. ಈ ಕೊಲೆ ಯತ್ನದ ಬಗ್ಗೆ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ತಿಳಿಸಿದೆ. ಮುಖ್ಯಮಂತ್ರಿಗಳು ಸೂಕ್ತ ದಾಖಲೆಗಳೊಂದಿಗೆ ಡಿಜಿಪಿಗೆ ದೂರು ಸಲ್ಲಿಸುವಂತೆ ಸೂಚಿಸಿದ್ದರು. ಅಂತೆಯೇ ಡಿಜಿಪಿ ಅವರನ್ನು ಭೇಟಿಯಾಗಿ ದೂರು ನೀಡಿದೆ. ಆದರೆ ತುಮಕೂರಿನಲ್ಲಿ ಕೃತ್ಯ ನಡೆದಿರುವುದರಿಂದ ಆ ಜಿಲ್ಲೆಯ ಎಸ್ಪಿಯವರಿಗೆ ದೂರು ಕೊಡುವಂತೆ ಡಿಜಿಪಿರವರು ಸೂಚಿಸಿ ಕಳುಹಿಸಿದ್ದಾರೆ. ಹಾಗಾಗಿ ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶುಕ್ರವಾರ ದೂರು ಸಲ್ಲಿಸುತ್ತೇನೆ ಎಂದು ಹೇಳಿದರು.