ರಾಜ್ಯದಲ್ಲಿ ಸರ್ಕಾರ ಆಡಳಿತದಲ್ಲಿದೆ ಎಂದು ಅನಿಸುವುದೇ ಇಲ್ಲ. ಎಲ್ಲವನ್ನು ಮುಚ್ಚಿಟ್ಟು ಆರೋಪಿಗಳನ್ನು ಹಿಂಬಾಗಿಲಿಂದ ರಕ್ಷಣೆ ಮಾಡುತ್ತಿದ್ದಾರೆ. ಎಲ್ಲರಿಗೂ ಒಂದೇ ಕಾನೂನು, ಅದನ್ನು ಎಲ್ಲರೂ ಪರಿಪಾಲನೆ ಮಾಡಲೆಬೇಕು.
ಕಾರ್ಕಳ (ಆ.28): ರಾಜ್ಯದಲ್ಲಿ ಸರ್ಕಾರ ಆಡಳಿತದಲ್ಲಿದೆ ಎಂದು ಅನಿಸುವುದೇ ಇಲ್ಲ. ಎಲ್ಲವನ್ನು ಮುಚ್ಚಿಟ್ಟು ಆರೋಪಿಗಳನ್ನು ಹಿಂಬಾಗಿಲಿಂದ ರಕ್ಷಣೆ ಮಾಡುತ್ತಿದ್ದಾರೆ. ಎಲ್ಲರಿಗೂ ಒಂದೇ ಕಾನೂನು, ಅದನ್ನು ಎಲ್ಲರೂ ಪರಿಪಾಲನೆ ಮಾಡಲೆಬೇಕು. ಜೈಲಿನ ಒಳಗೆ, ಹೊರಗೆ ಒಂದೇ ನಿಯಮ. ಸರ್ಕಾರವನ್ನು ಕೋಮಾದಿಂದ ಹೊರ ತರದಿದ್ದರೆ ಇಂತಹ ಘಟನೆ ಮರುಕಳಿಸುತ್ತದೆ ಎಂದು ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ. ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ವಿವಾದಕ್ಕೆ ಸಂಬಂಧಿಸಿದಂತೆ ಕಾರ್ಕಳದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿಗಳ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸುನಿಲ್ ಕುಮಾರ್, ಜನಾಂದೋಲನದಿಂದ ಸರ್ಕಾರ ಸುಧಾರಿಸಬಹುದು. ಈ ಕಾಂಗ್ರೆಸ್ ಸರ್ಕಾರ ಇನ್ನೂ ನಿದ್ದೆಯಲ್ಲಿದೆ. ಸರ್ಕಾರ ಕೋಮಾಗೆ ಹೋಗಿ ಆರು ತಿಂಗಳು ಕಳೆದಿದೆ. ರಾಜ್ಯದಲ್ಲಿನ ಮಳೆಗಾಲದ ಕಷ್ಟವನ್ನು ಸರ್ಕಾರ ಕೇಳಿಲ್ಲ, ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಸಂಪೂರ್ಣ ಹದಗೆಟ್ಟಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಪತನ ಬಗ್ಗೆ ಮಾತನಾಡಿದ ಶಾಸಕ, ಸರ್ಕಾರ ಉರುಳಿಸುವ ಕಾರ್ಯಕ್ಕೆ ಬಿಜೆಪಿ ಕೈ ಹಾಕಲ್ಲ. ದಲಿತರ ಹಣವನ್ನು ದುರುಪಯೋಗೊಳಿಸಿದ ವಿರುದ್ಧ ನಮ್ಮ ಹೋರಾಟ ಇದಾಗಿದೆ. ಈ ವಿಚಾರಕ್ಕೆ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲೇಬೇಕು. ಸಿದ್ದರಾಮಯ್ಯ ಅವರಿಂದಲೇ ಸರ್ಕಾರ ನಡೆಯುತ್ತೆ ಅಂದರೆ ಅದು ಅವರ ಅಸಹಾಯಕತೆಯಷ್ಟೆ. ಬೇರೆ ಯಾರನ್ನಾದರು ಮುಖ್ಯಮಂತ್ರಿ ಮಾಡಲಿ, ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇದೆಯಾ? ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವ ತನಕ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದರು.
ಜೈಲಲ್ಲಿ ದರ್ಶನ್ ಫೋಟೋ ಕ್ಲಿಕಿಸಿದ್ದು ರೌಡಿ ಶೀಟರ್ ವೇಲು: ಆತನ ಮೇಲೆ ಹಲ್ಲೆ
ಕೃಷ್ಣ ಜನ್ಮಾಷ್ಟಮಿ ಬದಲಾವಣೆಯ ಪರ್ವ: ಕೃಷ್ಣ ಜನ್ಮಾಷ್ಟಮಿಯ ನಂತರ ಕರ್ನಾಟಕದಲ್ಲಿ ಬದಲಾವಣೆಯ ಪರ್ವ ಆರಂಭವಾಗಲಿದೆ. ಕಾನೂನಿನ ಮುಖಾಂತರ ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವುದು ಅನಿವಾರ್ಯವಾಗುತ್ತದೆ. ಸಿದ್ದರಾಮಯ್ಯಗೆ ಸ್ವಾಮೀಜಿಗಳ ಬೆಂಬಲ ಸಿಗುತ್ತೆ ಎನ್ನುವ ಕಾರಣಕ್ಕೆ ಹೇಗೆ ಬೇಕಾದರೂ ನಡೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲರೂ ನನ್ನ ಹಿಂದೆ ಇದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ, ಬೆನ್ನ ಹಿಂದೆ ಇದ್ದವರೇ ಬೆನ್ನಿಗೆ ಚೂರಿ ಹಾಕುವುದು, ಮುಂದೆ ಇದ್ದವರು ಯಾರೂ ಚೂರಿ ಹಾಕಲ್ಲ ಎಂದು ಸುನಿಲ್ ಕುಮಾರ್ ಹೇಳಿದರು.