ಫೆ.27ರಂದು ನಡೆಯಲಿರುವ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಬಿಜೆಪಿ ಕಾರ್ಯಕ್ರಮವಾಗದೇ ಸಾರ್ವಜನಿಕ ಕಾರ್ಯಕ್ರಮ ಆಗಬೇಕು ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್ ಆಗ್ರಹಿಸಿದರು.
ಶಿವಮೊಗ್ಗ (ಫೆ.23) : ಫೆ.27ರಂದು ನಡೆಯಲಿರುವ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಬಿಜೆಪಿ ಕಾರ್ಯಕ್ರಮವಾಗದೇ ಸಾರ್ವಜನಿಕ ಕಾರ್ಯಕ್ರಮ ಆಗಬೇಕು ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್(N Ramesh) ಆಗ್ರಹಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ(Shivamogga airport) ಆಗಿರುವುದು ಸಂತೋಷದ ವಿಚಾರ. ಆದರೆ, ಉದ್ಘಾಟನೆ(Inauguration) ಕಾರ್ಯಕ್ರಮವನ್ನು ಬಿಜೆಪಿಯ ನಾಯಕರು(BJP Leaders) ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಲು ಹೊರಟಿದ್ದಾರೆ. ಇದಕ್ಕಾಗಿ ಈಗಾಗಲೇ ಬೂತ್‌ಮಟ್ಟದಿಂದ ಜನರನ್ನು ಮತದಾನಕ್ಕೆ ಕರೆತರುವಂತೆ ಕರೆತರುತ್ತಿದ್ದಾರೆ. ಇದಕ್ಕೆ 3 ಸಾವಿರ ಬಸ್‌ಗಳನ್ನು ಬಿಟ್ಟಿದ್ದಾರೆ. ಜಿಲ್ಲಾಡಳಿತದಿಂದ ಆಗಬೇಕಾದ ಕಾರ್ಯಕ್ರಮ ಬಿಜೆಪಿ ಕಾರ್ಯಕರ್ತರಿಂದ ಆಗುತ್ತಿರುವುದು ಖಂಡನೀಯ ಎಂದರು.
Kuvempu Airport: ಪ್ರಧಾನಿ ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವನ್ನು ಬಿಜೆಪಿಯವರು ಚುನಾವಣೆ(Asselmbly election) ಗಿಮಿಕ್ ಆಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಶಿವಮೊಗ್ಗದಲ್ಲಿ ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಬೇಕಾದಷ್ಟುಅಭಿವೃದ್ಧಿ ಕಾಮಗಾರಿಗಳಾಗಿವೆ. ತುಂಗಾ ಅಣೆಕಟ್ಟು, ಭದ್ರಾ ಅಣೆಕಟ್ಟು, ಮೆಗ್ಗಾನ್ ಆಸ್ಪತ್ರೆ ಉನ್ನತೀಕರಣ, ಕುವೆಂಪು ವಿವಿ, ಕುವೆಂಪು ರಂಗಮಂದಿರ, ಪಶು ಸಂಗೋಪನೆ, ನವೋದಯ ಶಿಕ್ಷಣ ಕೇಂದ್ರ ಹೀಗೆ ಹಲವು ಅಭಿವೃದ್ಧಿಗಳು ನಡೆದಿವೆ ಎಂದರು.
ಇಡೀ ದೇಶದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಎಲ್ಲರಿಗೂ ಗೊತ್ತಿದೆ. ಸ್ವಾತಂತ್ರ್ಯ ಬಂದಾಗ ದೇಶದ ಸ್ಥಿತಿ ಹೇಗಿತ್ತು ಎಂಬುದನ್ನು ಬಿಜೆಪಿಯವರು ಮರೆತಂತಿದೆ. ಕೈಗಾರಿಕಾ ಕ್ರಾಂತಿ, ಹಸಿರು ಕ್ರಾಂತಿ, ದೊಡ್ಡ ದೊಡ್ಡ ನೀರಾವರಿ ಯೋಜನೆಗಳು, ಸಂಪರ್ಕ ಕ್ರಾಂತಿ ಹೀಗೆ ಹಲವು ಕ್ರಾಂತಿಗಳೇ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿವೆ. ಕಾಂಗ್ರೆಸ್ ಹಾಕಿದ ಅಭಿವೃದ್ಧಿ ಎಂಬ ಭದ್ರ ತಳಪಾಯದಲ್ಲಿ ಇವರು ಕಳಪೆಮಟ್ಟದ ಕಟ್ಟಡ ಕಟ್ಟಲು ಹೊರಟಿದ್ದಾರೆ ಅಷ್ಟೆಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಆಡಳಿತದಲ್ಲಿ ಬ್ಯಾಂಕ್‌ಗಳು ರಾಷ್ಟ್ರೀಕರಣ ಆದವು, ಅದೇ ಬಿಜೆಪಿ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಖಾಸಗೀಕರಣವಾದವು. ಲಕ್ಷಾಂತರ ಜನರಿಗೆ ಅನ್ನ ನೀಡುತ್ತಿದ್ದ ಕಾರ್ಖಾನೆಗಳು ಮುಚ್ಚಿದವು. ಈಗ ಸರ್ಕಾರದ ಅಂಗ ಎಂದು ಹೇಳಿಕೊಳ್ಳುವ ಯಾವ ಸಂಸ್ಥೆಯೂ ಇಲ್ಲ. ಬಿಎಸ್‌ಎನ್‌ಎಲ್ ಸೇರಿದಂತೆ ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡಲು ಹೊರಟಿದೆ. ಇದಕ್ಕೆ ಭದ್ರಾವತಿಯ ವಿಐಎಸ್‌ಎಲ್ ಕೂಡ ಸೇರಿಕೊಂಡಿದೆ ಎಂದು ಕುಟುಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಿಧಾನ ಪರಿಷತ್ತು ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಪಿ. ದಿನೇಶ್, ಚಂದ್ರಭೂಪಾಲ್, ಇಕ್ಕೇರಿ ರಮೇಶ್, ಎ.ಬಿ. ಮಾರ್ಟಿಸ್, ಆನಂದರಾವ್ ಇದ್ದರು.
Shivamogga: ಏರ್‌ಪೋರ್ಟ್‌ನಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆದ ಭದ್ರತಾ ಪಡೆ ವಿಮಾನ: ಪ್ರಾಯೋಗಿಕ ವಿಮಾನ ಹಾರಾಟ ಸಕ್ಸಸ್
ಪಕ್ಷಾತೀತವಾಗಿ ಆಚರಣೆ ಅಗತ್ಯ
ಶಿವಮೊಗ್ಗದಲ್ಲಿ ಕೇವಲ ವಿಮಾನ ನಿಲ್ದಾಣ ಆದರೆ ಸಾಲದು. ಇದಕ್ಕೂ ಮೊದಲು ಶಿವಮೊಗ್ಗ ಶಾಂತಿಯ ನಿಲ್ದಾಣ ಆಗಬೇಕು. ಧರ್ಮದ ನಿಲ್ದಾಣ ಆಗಬೇಕು. ಉದ್ಯೋಗಗಳು ಸೃಷ್ಟಿಯಾಗಬೇಕು. ಉದ್ದಿಮೆದಾರರು ಬರಲು ಭಯದ ವಾತಾವರಣ ಇರಬಾರದು. ಆಗ ಮಾತ್ರ ವಿಮಾನ ನಿಲ್ದಾಣಕ್ಕೆ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಫೆ.27ರಂದು ಉದ್ಘಾಟನೆ ಆಗಲಿರುವ ವಿಮಾನ ನಿಲ್ದಾಣವನ್ನು ಪಕ್ಷಾತೀತವಾಗಿ ಹಬ್ಬದಂತೆ ಆಚರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಎನ್.ರಮೇಶ್ ಒತ್ತಾಯಿಸಿದರು.