ಚನ್ನಪಟ್ಟಣ ಉಪಚುನಾವಣೆ: ಬೊಂಬೆನಾಡಲ್ಲಿ ನೀರಾವರಿ ವಿಷಯವೇ ಚುನಾವಣಾ ಅಸ್ತ್ರ!

By Kannadaprabha News  |  First Published Oct 30, 2024, 9:47 PM IST

ಚನ್ನಪಟ್ಟಣ ಕ್ಷೇತ್ರದಲ್ಲಿರುವ ಇಗ್ಗಲೂರು ಬ್ಯಾರೇಜ್ ಮಾತ್ರವಲ್ಲದೆ ಕಣ್ವ, ಸತ್ತೇಗಾಲ ನೀರಾವರಿ ಯೋಜನೆಗಳ ಮೂಲಕ ಕೆರೆ ತುಂಬಿಸುವ ಹಾಗೂ ಪ್ರತಿ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗಳೆಲ್ಲವನ್ನೂ ರಾಜಕೀಯ ಪಕ್ಷಗಳು ಉಪಚುನಾವಣೆಯಲ್ಲಿ ಪ್ರಮುಖ ವಿಷಯವನ್ನಾಗಿ ಪ್ರಸ್ತಾಪಿಸುವ ಸಾಧ್ಯತೆ ಇದೆ. 


ಎಂ.ಅಫ್ರೋಜ್ ಖಾನ್

ರಾಮನಗರ(ಅ.30):  ಬಯಲು ಸೀಮೆಯಲ್ಲಿ ಪ್ರತಿ ಚುನಾವಣೆ ಸಂದರ್ಭದಲ್ಲಿ ಶಾಶ್ವತ ನೀರಾವರಿಯ ಕೂಗು ಜೋರಾಗಿ, ನಂತರ ತಣ್ಣಗಾಗುತ್ತದೆ. ಎಲ್ಲ ರಾಜಕೀಯ ಪಕ್ಷಗಳೂ ಪೈಪೋಟಿಗೆ ಬಿದ್ದವರಂತೆ ಶಾಶ್ವತ ನೀರಾವರಿ ಯೋಜನೆ ವಿಷಯಗಳನ್ನೇ ಪ್ರಮುಖ ಚುನಾವಣಾ ದಾಳವನ್ನಾಗಿ ಬಳಸಿಕೊಳ್ಳುತ್ತವೆ. ಇದೀಗ ಬೊಂಬೆನಾಡು ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿಯೂ ನೀರಾವರಿ ಅಸ್ತ್ರ ಪ್ರಯೋಗವಾಗುತ್ತಿದೆ.

Tap to resize

Latest Videos

undefined

ಚನ್ನಪಟ್ಟಣ ಕ್ಷೇತ್ರದಲ್ಲಿರುವ ಇಗ್ಗಲೂರು ಬ್ಯಾರೇಜ್ ಮಾತ್ರವಲ್ಲದೆ ಕಣ್ವ, ಸತ್ತೇಗಾಲ ನೀರಾವರಿ ಯೋಜನೆಗಳ ಮೂಲಕ ಕೆರೆ ತುಂಬಿಸುವ ಹಾಗೂ ಪ್ರತಿ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗಳೆಲ್ಲವನ್ನೂ ರಾಜಕೀಯ ಪಕ್ಷಗಳು ಉಪಚುನಾವಣೆಯಲ್ಲಿ ಪ್ರಮುಖ ವಿಷಯವನ್ನಾಗಿ ಪ್ರಸ್ತಾಪಿಸುವ ಸಾಧ್ಯತೆ ಇದೆ. ಈ ನೀರಾವರಿ ಯೋಜನೆಗಳೆಲ್ಲವೂ ಜನರ ತೆರಿಗೆ ಹಣದಲ್ಲಿ ಸಾಕಾರಗೊಂಡಿದ್ದರೂ ಸಹ ರಾಜಕಾರಣಿಗಳು ಮಾತ್ರ ಭಗೀರಥ ಕ್ರೆಡಿಟ್ ಪಡೆಯಲು ವಾಗ್ಯುದ್ಧದಲ್ಲಿ ಮುಳುಗಿದ್ದಾರೆ.

ಮೈಸೂರು ರಾಜಮನೆತನಕ್ಕೆ ರಾಜ್ಯ ಸರ್ಕಾರದಿಂದ ಕಿರುಕುಳ : ಹೆಚ್‌ಡಿಕೆ ಗಂಭೀರ ಆರೋಪ

ಶಾಶ್ವತ ನೀರಾವರಿ ಯೋಜನೆ ಚರ್ಚೆಗಳು ಆರಂಭಗೊಂಡ ದಿನದಿಂದ ಈವರೆಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ನಡೆದ ಚುನಾವಣೆಗಳಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದೇ ಶಾಶ್ವತ ನೀರಾವರಿ ಯೋಜನೆ. ಈ ಹಿಂದೆ ನಡೆದ ಲೋಕಸಭಾ, ವಿಧಾನಸಭಾ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಿದ ಬಹುತೇಕ ಅಭ್ಯರ್ಥಿಗಳ ಭಾಷಣ ಶಾಶ್ವತ ನೀರಾವರಿ ಯೋಜನೆ ಎಂಬ ವಿಷಯದಿಂದಲೇ ಆರಂಭವಾಗುತ್ತಿತ್ತು. ಗೆದ್ದರೆ ನೀರು-ಸೋತರೆ ಹೋರಾಟ ಎಂಬ ಭರವಸೆ ಮಾತುಗಳನ್ನೇ ಕ್ಷೇತ್ರದ ಜನರು ನಂಬಿ ಮತಗಳನ್ನು ಚಲಾಯಿಸುತ್ತಿದ್ದರು. ಈ ಬಾರಿ ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುತ್ತೇವೆಂದು ಹೇಳಿ ಅಭ್ಯರ್ಥಿಗಳು ಆಶೀರ್ವಾದ ಬೇಡುತ್ತಿದ್ದಾರೆ.

ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ಇಗ್ಗಲೂರಿನ ದೇವೇಗೌಡ ಬ್ಯಾರೇಜ್ ಅಸಲಿಗೆ ಎಚ್.ಡಿ.ದೇವೇಗೌಡರದ್ದೇ ಅಲ್ಲ ಎನ್ನುವುದನ್ನು ಕಾಂಗ್ರೆಸ್ ನಾಯಕರು ಬಿಂಬಿಸುತ್ತಿದ್ದಾರೆ. ಇನ್ನೊಂದೆಡೆ ಕಣ್ವ ಏತ ನೀರಾವರಿ ಯೋಜನೆಯನ್ನು ಯೋಗೇಶ್ವರ್ ಸಾಕಾರಗೊಳಿಸಿದ್ದೆ ಅಲ್ಲ. ಅದರ ಕಾರಣಕರ್ತರೇ ಬೇರೆ ಎನ್ನುವಂತೆ ಜೆಡಿಎಸ್-ಬಿಜೆಪಿ ಪಾಳೆಯ ಉಯಿಲೆಬ್ಬಿಸುತ್ತಿದೆ. ಈ ಮಧ್ಯೆ ಚನ್ನಪಟ್ಟಣ ಕ್ಷೇತ್ರದ ಜತೆಗೆ ಇಡೀ ರಾಮನಗರ ಜಿಲ್ಲೆಗೆ ಕಾವೇರಿ ನೀರು ಹರಿಸುವ ಸತ್ತೇಗಾಲ ನೀರಾವರಿ ಯೋಜನೆ ಹಿಂದೆ ಕೈ ನಾಯಕರ ಪಾತ್ರವಿಲ್ಲ ಎಂದು ದಳ-ಕಮಲ ನಾಯಕರು ಟೀಕೆಯಲ್ಲಿ ತೊಡಗಿದ್ದಾರೆ.

ಬೊಂಬೆನಾಡಿಗೆ ಇಗ್ಗಲೂರು ಬ್ಯಾರೇಜ್ ಕೊಡುಗೆ ಜನತಾ ಪರಿವಾರದ್ದು, ಅರ್ಥಾತ್ ಎಚ್.ಡಿ.ದೇವೇಗೌಡರ ಒತ್ತಾಸೆಯ ಫಲ ಎನ್ನುವುದನ್ನು ಯಾರೂ ಅಲ್ಲಗೆಳೆಯುವಂತಿಲ್ಲ. ಅದೇ ರೀತಿ ಕಣ್ವ ಏತ ನೀರಾವರಿ ಯೋಜನೆ ಹಿಂದೆ ಮಾಜಿ ಸಚಿವ ಯೋಗೇಶ್ವರ್ ಪರಿಶ್ರಮವಿದೆ. ಇದೆಲ್ಲದರ ನಡುವೆ ಇಡೀ ರಾಮನಗರ ಜಿಲ್ಲೆಗೆ ಜೀವಸೆಲೆ ಆಗಲಿರುವ ಮಹತ್ವಾಕಾಂಕ್ಷಿ ಸತ್ತೇಗಾಲ ನೀರಾವರಿ ಯೋಜನೆ ಜಾರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಪಾತ್ರ ಮಹತ್ವದ್ದಾಗಿದೆ.

ಚಾಮರಾಜನಗರ ಜಿಲ್ಲೆಯ ಸತ್ತೇಗಾಲ ಬಳಿಯ ಕಾವೇರಿ ನದಿಯಿಂದ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನಲ್ಲಿರುವ ಇಗ್ಗಲೂರಿನ ಎಚ್‌.ಡಿ.ದೇವೇಗೌಡ ಬ್ಯಾರೇಜ್‌, ಅಲ್ಲಿಂದ ಹಾಲಿ ಇರುವ ಏತ ನೀರಾವರಿ ಪೈಪ್‌ಲೈನ್ ಮೂಲಕ ಕಣ್ವಕ್ಕೆ ನೀರೆತ್ತುವ ಯೋಜನೆ ಇದಾಗಿದೆ. ಕಣ್ವದಿಂದ ವೈ.ಜಿ.ಗುಡ್ಡ ಮತ್ತು ಮಂಚನಬೆಲೆ ಜಲಾಶಯಗಳಿಗೂ ನೀರು ತುಂಬಿಸಲಾಗುತ್ತದೆ. ಇದರಿಂದ ಕಣ್ವ, ಅರ್ಕಾವತಿ ನದಿಗಳು ಮತ್ತೆ ಮೈದುಂಬಲಿವೆ. ಅಲ್ಲದೆ, ಸತ್ತೇಗಾಲ ನೀರಾವರಿ ಯೋಜನೆಯಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಳವಾಗಲಿದೆ. ಇದು ಕೂಡ ಚುನಾವಣೆಯಲ್ಲಿ ರಾಜಕೀಯ ಅಸ್ತ್ರವಾಗಿ ಪ್ರಯೋಗವಾಗುತ್ತಿದೆ.

ಯೋಗಿ ಮೇಲೆ ಕಮಲ ನಾಯಕರು ಕೆಂಡ:

ಚನ್ನಪಟ್ಟಣ ಕ್ಷೇತ್ರಕ್ಕೆ ನೀರಾವರಿ ತಂದವನು ನಾನು, 2018ರ ಚುನಾವಣೆಯಲ್ಲಿ ಏಕೆ ಸೋಲಿಸಿದ್ದೀರಿ ಎಂದು ಕೇಳಲು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಜನರ ಬಳಿ ಉತ್ತರ ಪಡೆಯಲು ಯೋಗೇಶ್ವರ್ ಸ್ವಾಭಿಮಾನಿ ಸಂಕಲ್ಪ ನಡಿಗೆ ನಡೆಸಿದರು. ಇದರ ಪರಿಣಾಮ ಆ ಚುನಾವಣೆಯಲ್ಲಿಯೂ ಜನರು ಯೋಗೇಶ್ವರ್ ಕೈ ಹಿಡಿಯಲಿಲ್ಲ. ಬಿಜೆಪಿಯಲ್ಲಿ ಇರುವವರೆಗೆ ಯೋಗೇಶ್ವರ್ ಅವರನ್ನು ಆ ಪಕ್ಷದ ನಾಯಕರೇ ಆಧುನಿಕ ಭಗೀರಥ ಎಂದು ಬಣ್ಣಿಸುತ್ತಿದ್ದರು. ಆದರೀಗ ಯೋಗೇಶ್ವರ್ ಕಾಂಗ್ರೆಸ್ ಸೇರಿ ಅಭ್ಯರ್ಥಿಯಾಗುತ್ತಿದ್ದಂತೆ ಕಮಲ ನಾಯಕರು ಅವರ ವಿರುದ್ಧ ಕೆಂಡ ಕಾರುತ್ತಿದ್ದಾರೆ.

ಯೋಗೇಶ್ವರ್ ಅಲ್ಲ, ನಾನು ಭಗೀರಥ:

ನಾನು ಮುಖ್ಯಮಂತ್ರಿ ಆಗಿದ್ದಾಗ ಏತ ನೀರಾವರಿ ಮೂಲಕ ಚನ್ನಪಟ್ಟಣದ ಕೆರೆಗಳಿಗೆ ನೀರು ತುಂಬಿಸಲು 150 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಅದರ ಫಲವಾಗಿ ಕೆರೆಗಳು ತುಂಬಿವೆ. ಇದಕ್ಕೆ ಕಾರಣವಾದ ನಾನು ಭಗೀರಥನೇ ಹೊರತು ಯೋಗೇಶ್ವರ್ ಅಲ್ಲ. ನಾನು ಮಾಡಿದ ಕೆಲಸದ ಕ್ರೆಡಿಟ್ ನನಗೇ ಬರಬೇಕು. ಆದರೆ, ಯೋಗೇಶ್ವರ್ ಅದರ ಕ್ರೆಡಿಟ್ ತೆಗೆದುಕೊಂಡು ಭಗೀರಥ ಎಂದು ಹೇಳಿಕೊಂಡು ಚುನಾವಣೆ ಮಾಡುತ್ತಾ ಬಂದಿದ್ದಾರೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಟಾಂಗ್ ನೀಡಿದ್ದಾರೆ.

ಇದಕ್ಕೆ ಚುನಾವಣೆ ಪ್ರಚಾರದಲ್ಲಿಯೇ ಪ್ರತ್ಯುತ್ತರ ನೀಡಿರುವ ಯೋಗೇಶ್ವರ್, ಬಿಜೆಪಿ ನಾಯಕರಿಗೆ ಚನ್ನಪಟ್ಟಣ ಕ್ಷೇತ್ರದ ನಾಡಿ ಮಿಡಿತವೇ ಗೊತ್ತಿಲ್ಲ. ಇನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣದಲ್ಲಿ ಎಷ್ಟು ಕೆರೆ ಇದೆ ಅನ್ನುವುದೇ ಗೊತ್ತಿಲ್ಲ. 150 ಕೆರೆ ತುಂಬಿಸಿದ್ದೇವೆ ಅಂತ ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ಈ ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ನೀರಾವರಿ ವಿಚಾರವೇ ಟಾನಿಕ್. ಹೀಗಾಗಿ ರಾಜಕೀಯ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಲೋಪದೋಷ ಎತ್ತಿ ತೋರಿಸುವ ಮೂಲಕ ಮತದಾರರ ಓಲೈಕೆಯಲ್ಲಿ ನಿರತರಾಗಿದ್ದಾರೆ. ಈ ಬಾರಿ ಕಾವೇರಿ ಯಾರಿಗೆ ಒಲಿಯಲಿದ್ದಾಳೆ ಎಂಬ ಕಾತರ ಇದೆ.

ಭಗೀರಥ ಅಂತ ಹೇಳಿಕೊಳ್ಳದೆ ಚುನಾವಣೆ ಎದುರಿಸಲಿ: ಯೋಗೇಶ್ವರ್‌ಗೆ ಡಿವಿಎಸ್ ಸವಾಲು

ನೀರಾವರಿ ಯೋಜನೆ ಹಾಗೂ ಕ್ಷೇತ್ರ ಅಭಿವೃದ್ಧಿಗಾಗಿ ಪಕ್ಷಾಂತರ ಮಾಡಿದ್ದೆ. ಅದರ ಫಲವಾಗಿ ತಾಲೂಕಿನ ಕೆರೆಗಳು ತುಂಬಿದ್ದು, ರೈತರಿಗೆ ಶಾಶ್ವತ ನೀರಾವರಿ ಭಾಗ್ಯ ಸಿಕ್ಕಿದೆ. ಈ ಚುನಾವಣೆಯಲ್ಲಿ ನಾನು ಗೆದ್ದ ಬಳಿಕ ನೀರಾವರಿ ಖಾತೆಯನ್ನು ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಸೇರಿ ತಾಲೂಕಿನಲ್ಲಿ ಮತ್ತಷ್ಟು ನೀರಾವರಿ ಯೋಜನೆಗಳನ್ನು ರೂಪಿಸುತ್ತೇವೆ. ಕೆಆರ್‌ಎಸ್‌ನಿಂದ ಮಾರ್ಕೋನಹಳ್ಳಿ ಡ್ಯಾಂಗೆ ನೀರು ತಂದು ಅದನ್ನು ಕಣ್ವ ಮತ್ತು ಇಗ್ಗಲೂರು ಡ್ಯಾಂಗೆ ತುಂಬಿಸುವ ಚಿಂತನೆ ಮಾಡಿದ್ದೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ. 

ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಶಾಸಕರು ಇಲ್ಲ. ಆದರೂ ಬೇರೆ ಪಕ್ಷಗಳ ಸರ್ಕಾರಗಳಿಗಿಂತಲೂ ಬಿಜೆಪಿ ಸರ್ಕಾರ ಜಿಲ್ಲೆಯನ್ನು ಸಾಕಷ್ಟು ಅಭಿವೃದ್ಧಿ ಮಾಡಿದೆ. ಜಲಜೀವನ್ ಮಿಷನ್, ಸತ್ತೇಗಾಲ ಯೋಜನೆ, ನೆಟ್ಕಲ್ ನೀರಾವರಿ ಯೋಜನೆ ಸೇರಿದಂತೆ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದೆಲ್ಲವನ್ನು ಅರಿತಿರುವ ಚನ್ನಪಟ್ಟಣ ಕ್ಷೇತ್ರದ ಮತದಾರರು ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಬಿಜೆಪಿ ನಾಯಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.  

click me!