* ಬೆಂಗಳೂರಿನ ಬಸವನಗುಡಿ ಕ್ಷೇತ್ರದಿಂದ ಸ್ಪರ್ಧಿಸಲು ಒಲವು
* ಬಿಜೆಪಿ, ಕಾಂಗ್ರೆಸ್‌ನಿಂದ ಬಸವನಗುಡಿ ಟಿಕೆಟ್‌ಗೆ ನಿರಾಕರಣೆ
* ಜೆಡಿಎಸ್ ಬಗ್ಗೆ ಒಲವು ತೋರದ ಭಾಸ್ಕರ್ ರಾವ್
ಬೆಂಗಳೂರು(ಡಿ.30): ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿರುವ ರೈಲ್ವೆ ಪೊಲೀಸ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್(Bhaskar Rao) ರಾಜಕೀಯ(Politics) ಪ್ರವೇಶಿಸುವುದು ನಿಶ್ಚಿತವಾಗಿದ್ದು, ಬಹುತೇಕ ಆಮ್ ಆದ್ಮಿ ಪಕ್ಷಕ್ಕೆ(AAP) ಸೇರ್ಪಡೆಯಾಗಿ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆಯಿದೆ. ಅವರ ಸ್ವಯಂ ನಿವೃತ್ತಿ ಅರ್ಜಿ ಇನ್ನೂ ಸರ್ಕಾರದ ಪರಿಶೀಲನೆಯಲ್ಲೇ ಉಳಿದಿದ್ದು, ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಸೆಪ್ಟೆಂಬರ್‌ನಲ್ಲೇ ಭಾಸ್ಕರ್ ರಾವ್ ಐಪಿಎಸ್(IPS) ಹುದ್ದೆಯಿಂದ ಬಿಡುಗಡೆ ಕೋರಿ ಸರ್ಕಾರಕ್ಕೆ(Government of Karnataka) ಅರ್ಜಿ ಸಲ್ಲಿಸಿದ್ದಾರೆ. ಅದು ಇತ್ಯರ್ಥಗೊಳ್ಳುವುದನ್ನೇ ಕಾಯುತ್ತಿದ್ದಾರೆ. ಎರಡು ದಿನಗಳ ಹುಬ್ಬಳ್ಳಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿಗಳು ಗುರುವಾರ ಅಥವಾ ಶುಕ್ರವಾರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ನಂತರ ಭಾಸ್ಕರ್ ರಾವ್ ಅವರ ರಾಜಕೀಯ ಪ್ರವೇಶದ ರೂಪರೇಷೆ ಸ್ಪಷ್ಟತೆ ಪಡೆದುಕೊಳ್ಳಲಿದೆ.
ಇಬ್ಬರು ಐಪಿಎಸ್ ಅಧಿಕಾರಿಗಳ ಬಿಗ್ ಫೈಟ್: ಭಾಸ್ಕರ್ ರಾವ್ ಫೋನ್ ಟ್ಯಾಪ್‌ಗೆ ಟ್ವಿಸ್ಟ್
ಬಿ.ಎಸ್.ಯಡಿಯೂರಪ್ಪ(BS Yediyurappa) ನೇತೃತ್ವದ ಸರ್ಕಾರದ ಸಮಯದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರು ಬಿಜೆಪಿಯ ಮಾತೃಸಂಸ್ಥೆಯಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಜತೆ ಮೊದಲಿನಿಂದಲೂ ನಿಕಟ ಸಂಪರ್ಕ ಹೊಂದಿದ್ದಾರೆ. ಹೀಗಾಗಿ, ಅವರು ಬಿಜೆಪಿ(BJP) ಸೇರ್ಪಡೆಯಾಗಬಹುದು ಎಂಬ ವದಂತಿ ಹಬ್ಬಿತ್ತು. ಆದರೆ, ಯಾವ ರಾಜಕೀಯ ಪಕ್ಷ ಸೇರ್ಪಡೆಯಾಗಬೇಕು ಎಂಬುದಕ್ಕಿಂತ ಮೊದಲೇ ಭಾಸ್ಕರ್ ರಾವ್ ಅವರು ಮುಂಬರುವ 2023ರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಬಸವನಗುಡಿ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ನಿರ್ಧಾರ ಕೈಗೊಂಡಿದ್ದರು. ಆದರೆ, ಬಸವಗುಡಿಯಿಂದ ಹಾಲಿ ಬಿಜೆಪಿ ಶಾಸಕ ರವಿಸುಬ್ರಮಣ್ಯ ಇರುವುದರಿಂದ ಅವರನ್ನು ಬಿಟ್ಟು ಬೇರೊಬ್ಬರಿಗೆ ಅವಕಾಶ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬುದು ಮನವರಿಕೆಯಾದ ನಂತರ ಭಾಸ್ಕರ್ ರಾವ್ ಕಾಂಗ್ರೆಸ್(Congress) ಬಾಗಿಲನ್ನೂ ತಟ್ಟಿದ್ದಾರೆ ಎನ್ನಲಾಗಿದೆ.
ಆದರೆ, ಕಾಂಗ್ರೆಸ್‌ನಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಬೇರೆಯವರಿಗೆ ಟಿಕೆಟ್ ಕೊಡುವ ಆಶ್ವಾಸನೆಯನ್ನು ಈಗಾಗಲೇ ನೀಡಿದ್ದಾರೆ. ಪರಿಣಾಮ ಕಾಂಗ್ರೆಸ್ ಪ್ರವೇಶಿಸುವ ಆಸೆಯೂ ಈಡೇರುತ್ತಿಲ್ಲ.
ಡ್ರಗ್ಸ್, ಸ್ಫೋಟಕ ಪತ್ತೆಯೇ ಟಾರ್ಗೆಟ್: ದೇಶ ರಕ್ಷಣೆಗೆ ಸಜ್ಜಾಗುವ ಶ್ವಾನ ಮರಿಗಳೊಂದಿಗೆ ಎಡಿಜಿಪಿ ಫೋಸ್!
ರಾಜ್ಯದಲ್ಲಿನ ಮೂರನೆಯ ಪ್ರಮುಖ ರಾಜಕೀಯ ಪಕ್ಷವಾದ ಜೆಡಿಎಸ್(JDS) ಬಗ್ಗೆ ಅಷ್ಟೇನೂ ಒಲವು ತೋರದ ಭಾಸ್ಕರ್ ರಾವ್ ಅವರು ಅಂತಿಮವಾಗಿ ಆಮ್ ಆದ್ಮಿ ಪಕ್ಷದ (ಆಪ್) ಕಡೆ ಮುಖ ಮಾಡಿದರು. ಆ ಪಕ್ಷದ ಮುಖಂಡರ ಜತೆ ಈಗಾಗಲೇ ಹಲವು ಸುತ್ತಿನ ಮಾತುಕತೆಯೂ ಮುಗಿದಿದೆ. ಸ್ವಯಂ ನಿವೃತ್ತಿ ಅರ್ಜಿ ಇತ್ಯರ್ಥವಾದ ಬಳಿಕ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿ ಸಕ್ರಿಯವಾಗಿ ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಈ ಬಗ್ಗೆ ಭಾಸ್ಕರ್ ರಾವ್ ಅವರನ್ನು ‘ಕನ್ನಡಪ್ರಭ’ ಸಂಪರ್ಕಿಸಿದಾಗ, ‘ಮೊದಲು ಸರ್ಕಾರದ ಮುಂದಿರುವ ನನ್ನ ಸ್ವಯಂ ನಿವೃತ್ತಿ ಅರ್ಜಿ ಇತ್ಯರ್ಥಗೊಳ್ಳಲಿ. ಆಮೇಲೆ ಮುಂದಿನದನ್ನು ಹೇಳುತ್ತೇನೆ’ ಎಂದಷ್ಟೇ ನಗುನಗುತ್ತ ಪ್ರತಿಕ್ರಿಯಿಸಿದರು.
ಭಾಸ್ಕರ್ ರಾವ್ ಬಗ್ಗೆ ಒಂದಷ್ಟು ಮಾಹಿತಿ
ಭಾಸ್ಕರ್ ರಾವ್ 1954 ರಲ್ಲಿ ಜನಿಸಿದ್ದು, ಅವರು 1990ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಬೆಂಗಳೂರು ಮಹಾನಗರ ಕಮಿಷನರ್ ಆಗಿ 2019-2020ರವರೆಗೆ ಸೇವೆ ಸಲ್ಲಿಸಿದ್ದರು. ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ ಪಡೆಯಲ್ಲಿ ಎಡಿಜಿಪಿಯಾಗಿ ಸೇವೆ ಸಲ್ಲಿಸಿದ್ದು ಬಳಿಕ ಇಂಟರ್ನಲ್ ಸೆಕ್ಯೂರಿಟಿ ಡಿವಿಷನ್ನಲ್ಲೂ ಸೇವೆ ಸಲ್ಲಿಸಿದರು.