ಪ್ರಿಯಾಂಕಾ ರ‍್ಯಾಲಿಯಲ್ಲಿ ನನಗೆ ಅವಮಾನ: ಕಾಂಗ್ರೆಸ್‌ ನಾಯಕಿ ನಫೀಜಾ

By Kannadaprabha NewsFirst Published Jan 18, 2023, 2:30 AM IST
Highlights

ವೇದಿಕೆ ಹತ್ತಲು ಹೋದಾಗ ಪೊಲೀಸರು ಕೆಳಗೆ ಕಳಿಸಿದರು. ನನಗೆ ಮಾತ್ರ ವೇದಿಕೆ ಹತ್ತಲು ಅನುಮತಿ ನೀಡಿಲ್ಲ ಏಕೆ?: ಕಾಂಗ್ರೆಸ್‌ ನಾಯಕಿ ನಫೀಜಾ ಫಜಲ್‌ 

ಬೆಂಗಳೂರು(ಜ.18): ‘ನಾ ನಾಯಕಿ’ ಸಮಾವೇಶದಲ್ಲಿ ನನಗೆ ಅವಮಾನವಾಗಿದೆ. ವೇದಿಕೆ ಹತ್ತಲು ಹೋದಾಗ ನಿಮಗೆ ಅನುಮತಿ ಇಲ್ಲ ನಡೆಯಿರಿ ಎಂದು ಪೊಲೀಸರು ಕೈ ಹಿಡಿದು ಕೆಳಗೆ ಎಳೆದೊಯ್ದರು ಎಂದು ಮಾಜಿ ಸಚಿವೆ ಹಾಗೂ ಕಾಂಗ್ರೆಸ್‌ ನಾಯಕಿ ನಫೀಜಾ ಫಜಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವೆಯಾಗಿದ್ದ ಮತ್ತು ಹಿರಿಯ ನಾಗರಿಕಳಾದ ನನ್ನನ್ನು ಈ ರೀತಿ ನಡೆಸಿಕೊಂಡಿದ್ದು ಸರಿಯಲ್ಲ. ಪಕ್ಷದ ಎಲ್ಲಾ ಮಾಜಿ ಸಚಿವೆಯರಿಗೂ ಅವಕಾಶ ಕೊಟ್ಟು, ನನಗೆ ಮಾತ್ರ ವೇದಿಕೆಗೆ ಬಿಡಬಾರದು ಎಂದು ಪೊಲೀಸರಿಗೆ ಆದೇಶ ಕೊಟ್ಟವರು ಯಾರು? ಅಲ್ಲದೆ, ಪಕ್ಷದ ಕೆಲ ಕಾರ್ಯಕರ್ತರು ಕೂಡ ನೀವು ಕಾಂಗ್ರೆಸ್‌ನಲ್ಲಿಲ್ಲ ಬಿಜೆಪಿಗೆ ಹೋಗಿದ್ದೀರಿ ಎಂದು ಹೇಳಿ ನನ್ನನ್ನು ಕಳುಹಿಸಿಬಿಟ್ಟರು. ನಾನು ಅವಮಾನ ತಡೆಯಲಾಗದೆ ಕಣ್ಣೀರು ಹಾಕಿಕೊಂಡು ಹೊರಗೆ ಬಂದಿದ್ದೇನೆ ಎಂದು ಅವರು ನೋವು ತೋಡಿಕೊಂಡರು.

ಬೆಂಗಳೂರಿನಲ್ಲಿ ನಡೆದ ನಾ ನಾಯಕಿ ಕಾರ್ಯಕ್ರಮ: ಪ್ರಿಯಾಂಕಾ ಗಾಂಧಿ ಆಕರ್ಷಕ ಫೋಟೋ ವೈರಲ್‌

ಆ ರೀತಿ ನನಗೆ ಅವಮಾನ ಮಾಡಲು ನಾನೇನು ಕಳ್ಳತನ ಮಾಡಿದ್ದೆನಾ?ನನ್ನನ್ನು ವೇದಿಕೆಯಿಂದ ಕೆಳಗೆ ಹೋಗುವಂತೆ ಹೇಳಲು ಪಕ್ಷದ ಅಧ್ಯಕ್ಷರಿಗೆ ಮಾತ್ರ ಹಕ್ಕಿದೆ. ಆದರೆ, ಪೊಲೀಸರಿಗೆ ಏನು ಹಕ್ಕಿದೆ? ನನ್ನನ್ನು ವೇದಿಕೆಯಿಂದ ತಳ್ಳಿದ ಪೊಲೀಸರ ವಿರುದ್ಧ ಆಯುಕ್ತರಿಗೆ ದೂರು ನೀಡುತ್ತೇನೆ. ಅದೇ ರೀತಿ ನನ್ನ ವೇದಿಕೆಯಿಂದ ಕಳುಹಿಸಿದ ಕಾರ್ಯಕರ್ತರ ವಿರುದ್ಧವೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರು ನೀಡುತ್ತೇನೆ ಎಂದು ಫಸಲ್‌ ಹೇಳಿದರು.

ಉಮಾಶ್ರೀ ಅವರು ಈ ಮಹಿಳಾ ಕಾರ್ಯಕ್ರಮಕ್ಕೆ ಎಲ್ಲರಿಗೂ ಒಂದೇ ರೀತಿಯ ಪಾಸ್‌ ಕೊಟ್ಟಿದ್ದೇವೆ, ಬರಬಹುದು ಎಂದು ಹೇಳಿದ್ದರಿಂದಲೇ ವೇದಿಕೆ ಹತ್ತಲು ಹೋಗಿದ್ದೆ. ಆದರೆ, ವೇದಿಕೆ ಹತ್ತಲು ವಿಶೇಷ ಪಾಸ್‌ ಮಾಡಿದ್ದರು ಎಂಬ ಮಾಹಿತಿ ಗೊತ್ತಿರಲಿಲ್ಲ. ಆ ವಿಷಯ ಗೊತ್ತಿದ್ದರೆ ನಾನು ವೇದಿಕೆ ಹತ್ತಲು ಹೋಗುತ್ತಿರಲಿಲ್ಲ. ನಾನು ಬಿಜೆಪಿ ಸೇರಿದ್ದೇನೆ ಎಂದು ಪಕ್ಷದಲ್ಲೇ ಕೆಲವರು ಅಪ ಪ್ರಚಾರ ಮಾಡಿದ್ದಾರೆ. ನಾನು ಈಗಲೂ ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವ ಹೊಂದಿದ್ದೇನೆ ಎಂದು ಹೇಳಿದರು.

click me!