ಕಾಂಗ್ರೆಸ್ ಸರ್ಕಾರ ತನ್ನ 70 ವರ್ಷಗಳ ಅಧಿಕಾರದ ಅವಧಿಯಲ್ಲಿ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡುತ್ತಾ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ಹುಬ್ಬಳ್ಳಿ (ಮಾ.17): ಕಾಂಗ್ರೆಸ್ ಸರ್ಕಾರ ತನ್ನ 70 ವರ್ಷಗಳ ಅಧಿಕಾರದ ಅವಧಿಯಲ್ಲಿ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡುತ್ತಾ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು. ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಗೋಕುಲ್ ಗಾರ್ಡನ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಸಾಮಾಜಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಶೇ. 50ಕ್ಕೂ ಅಧಿಕ ಹಿಂದುಳಿದ ವರ್ಗಗಳ ಸಮಾಜವಿದ್ದರೂ ಕಾಂಗ್ರೆಸ್ ಸರ್ಕಾರ ಈ ಸಮಾಜಕ್ಕೆ ಸಾಮಾಜಿಕವಾಗಿ ಪ್ರಾತಿನಿಧ್ಯ ನೀಡದೇ ಅವರನ್ನು ತುಳಿಯುತ್ತಾ ಬಂದಿದೆ. ತಮ್ಮ ಅಷ್ಟು ವರ್ಷದ ಅಧಿಕಾರದ ಅವಧಿಯಲ್ಲಿ ಒಮ್ಮೆಯೂ ಹಿಂದುಳಿದ ವರ್ಗದ ನಾಯಕನನ್ನು ಪ್ರಧಾನಿಯನ್ನಾಗಿಸಲಿಲ್ಲ.
ಆದರೆ, ಬಿಜೆಪಿ ಸರ್ಕಾರ ಹಿಂದುಳಿದ ವರ್ಗಕ್ಕೆ ಸೇರಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎರಡು ಅವಧಿಗಳ ಕಾಲ ಪ್ರಧಾನಿಯನ್ನಾಗಿಸುವ ಮೂಲಕ ಸಮಾಜಕ್ಕೆ ನ್ಯಾಯ ನೀಡುವ ಕಾರ್ಯ ಮಾಡಿದೆ. ಮೋದಿ ಪ್ರಧಾನಿಯಾದ ಮೇಲೆ ಹಿಂದುಳಿದ ವರ್ಗದವರಿಗಾಗಿಯೇ ಹಲವು ಯೋಜನೆ ಜಾರಿಗೊಳಿಸುವ ಮೂಲಕ ಸಮಾಜವನ್ನು ಮೇಲೆತ್ತುವ ಕಾರ್ಯ ಮಾಡಿದ್ದಾರೆ. ಅಲ್ಲದೇ ಮಂತ್ರಿ ಮಂಡಲದಲ್ಲಿಯೂ ಒಬಿಸಿ, ಎಸ್ಸಿ, ಎಸ್ಟಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದೆ ಎಂದರು. ಮೋದಿ ಪ್ರಧಾನಿಯಾಗುವ ಪೂರ್ವದಲ್ಲಿ ಮಕ್ಕಳ ಆಟಿಕೆಗಳೂ ಚೀನಾದಿಂದ ಬರುತ್ತಿದ್ದವು. ಆದರೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಶೇ. 90ರಷ್ಟು ಉತ್ಪನ್ನಗಳನ್ನು ದೇಶದಲ್ಲಿಯೇ ತಯಾರಿಸುವ ಮೂಲಕ ಸ್ವದೇಶಿ ವಸ್ತುಗಳ ತಯಾರಿಕೆ, ಬಳಕೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
undefined
ಚುನಾವಣಾ ಬಾಂಡ್ ಬಿಜೆಪಿ ಪಾಲಿಗೆ ಸುಲಿಗೆಯ ಬ್ರಹ್ಮಾಸ್ತ್ರ: ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ ಸುಳ್ಳಿನ ಸರ್ಕಾರ: 70ರ ದಶಕದಲ್ಲಿ ಕಾಂಗ್ರೆಸ್ ಸರ್ಕಾರ ಗರೀಬಿ ಹಠಾವೋ ಎಂದು ಘೋಷಣೆ ಮಾಡಿತು. ಆದರೆ, ದೇಶದಲ್ಲಿ ಬಡತನ ಕಡಿಮೆಯಾಗಲಿಲ್ಲ. ಹಾಗೆನಾದರೂ ಬಡತನ ಕಡಿಮೆಯಾಗಿದ್ದರೆ ಇಂದು ದೇಶ ಮತ್ತಷ್ಟು ಸದೃಢವಾಗಿರುತ್ತಿತ್ತು. ಈಗ ಉಚಿತ ಯೋಜನೆ ನೀಡುವ ಪ್ರಮೇಯ ಬರುತ್ತಿರಲಿಲ್ಲ. ಕಾಂಗ್ರೆಸ್ಸಿನರು ಬರಿ ಸುಳ್ಳು ಹೇಳುತ್ತಲೆ ಅಧಿಕಾರ ನಡೆಸಿದ್ದು, ಇವರದು ಸುಳ್ಳಿನ ಸರ್ಕಾರ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಬಡತನ ನಿರ್ಮೂಲನೆ: ಮೋದಿ ಅಧಿಕಾರಕ್ಕೆ ಬಂದ ಮೇಲೆ ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದ ಜನರನ್ನು ಬಡತನದಿಂದ ಮುಕ್ತರನ್ನಾಗಿಸಲು ಶ್ರಮಿಸಿದ್ದಾರೆ. 10 ವರ್ಷಗಳಲ್ಲಿ ದೇಶದಲ್ಲಿ 25 ಕೋಟಿಗೂ ಅಧಿಕ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಅಂಕಿ-ಸಂಖ್ಯೆಗಳೇ ಹೇಳುತ್ತಿವೆ. ಇದು ನಮ್ಮ ಸರ್ಕಾರದ ಸಾಧನೆಯಾಗಿದೆ. ಬಡತನ ನಿರ್ಮೂಲನೆ ಹೊಂದಿದ ಭಾರತವನ್ನಾಗಿಸಬೇಕಿದ್ದರೆ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ನಾವೆಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್, ರಾಜ್ಯ ಉಪಾಧ್ಯಕ್ಷ ಸತೀಶ ಶೇಜವಾಡಕರ, ಆರ್.ಸಿ. ನಾರಾಯಣ, ಮಾ. ನಾಗರಾಜ, ಸಂಜಯ ಕಪಟಕರ ಸೇರಿದಂತೆ ಹಲವರು ಮಾತನಾಡಿದರು. ಈ ವೇಳೆ ಮಾಜಿ ಶಾಸಕ ಅಶೋಕ ಕಾಟವೆ, ಪಾಲಿಕೆ ಮೇಯರ್ ವೀಣಾ ಬರದ್ವಾಡ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ಶಂಕರ ಶೆಳಕೆ, ರಂಗಾ ಬದ್ದಿ, ಬಸವರಾಜ ಕುಂದಗೋಳಮಠ, ಕೃಷ್ಣ ಗಂಡಗಾಳೇಕರ, ಬಸವರಾಜ ಗರಗ, ಸಂತೋಷ ಚವ್ಹಾಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಎಡಬಿಡಂಗಿ ಸಿದ್ದರಾಮಯ್ಯ: ರಾಜ್ಯದಲ್ಲಿರುವುದು ಯಡಬಿಡಂಗಿ ಸರ್ಕಾರ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿರುವ ಯಡಬಿಡಂಗಿ ಸಿದ್ದರಾಮಯ್ಯ ಸರ್ಕಾರದ ನಿರ್ಲಕ್ಷ್ಯದಿಂದ ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಪ್ರಕರಣ ನಡೆದಿದೆ. ಇದನ್ನು ಹೊರತುಪಡಿಸಿದರೆ ದೇಶದಲ್ಲಿ ಎಲ್ಲಿಯೂ ಭಯೋತ್ಪಾದನಾ ಕೃತ್ಯ ನಡೆಯದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಮೋದಿ ಅಧಿಕಾರದ ಅವಧಿಯಲ್ಲಿ ಎಲ್ಲಿಯೂ ಧಂಗೆ, ದೇಶದ್ರೋಹಿ ಚಟುವಟಿಕೆಗಳು ನಡೆದಿಲ್ಲ ಎಂದು ಪ್ರಹ್ಲಾದ ಜೋಶಿ ಹೇಳಿದರು.
ಕಾಂಗ್ರೆಸ್‌ನಿಂದ ಮತ್ತೆರಡು ಗ್ಯಾರಂಟಿ ಘೋಷಣೆ: ಮಲ್ಲಿಕಾರ್ಜುನ ಖರ್ಗೆ
ನಾವು ಕಾಂಗ್ರೆಸ್ಸಿನಂತೆ ಸುಳ್ಳುಹೇಳಿ ರಾಜಕಾರಣ ಮಾಡಿಲ್ಲ. ಮೋದಿ ನೀಡಿದ ಅಕ್ಕಿಯನ್ನೇ ಸಿದ್ದರಾಮಯ್ಯ ತಮ್ಮ ಅಕ್ಕಿ ಎನ್ನುತ್ತಿದ್ದಾರೆ. ಈ ವರೆಗೂ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಕಾಳು ಅಕ್ಕಿಯನ್ನೂ ನೀಡಿಲ್ಲ. ಫ್ರೀ ಕರೆಂಟ್ ಎಂದವರು ಜನರನ್ನೇ ಕರೆಂಟ್‌ಫ್ರೀಯನ್ನಾಗಿಸಿದ್ದಾರೆ. ಹೀಗೆ ಕಾಂಗ್ರೆಸ್ಸಿನವರು ಮೊದಲಿನಿಂದಲೂ ಬರಿ ಸುಳ್ಳು ಹೇಳುತ್ತಲೆ ಕಾಲ ಕಳೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.