2ನೇ ಅತ್ಯಧಿಕ ತೆರಿಗೆ ಕಟ್ಟುವ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ: ಸಿಎಂ ಸಿದ್ದರಾಮಯ್ಯ

By Kannadaprabha News  |  First Published Feb 8, 2024, 5:43 AM IST

ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.  ಮಹಾರಾಷ್ಟ್ರ ಬಿಟ್ಟರೆ ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಿಕೊಡುವ ರಾಜ್ಯ ಕರ್ನಾಟಕ. ಹೀಗಿದ್ದೂ, ನಮಗೆ ಯಾಕೆ ಈ ತಾರತಮ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. 


ನವದೆಹಲಿ (ಫೆ.08): ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1 ಲಕ್ಷ 87 ಸಾವಿರ ಕೋಟಿ ರು. ನಷ್ಟ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆರಿಗೆ ಪಾಲು, ಅನುದಾನ ಹಂಚಿಕೆ, ಬರ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಸೇರಿದಂತೆ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ನಿರಂತರ ಅನ್ಯಾಯ ಖಂಡಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಬುಧವಾರ ರಾಜ್ಯ ಸರ್ಕಾರದ ವತಿಯಿಂದ ನಡೆದ ಐತಿಹಾಸಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.  ಮಹಾರಾಷ್ಟ್ರ ಬಿಟ್ಟರೆ ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಿಕೊಡುವ ರಾಜ್ಯ ಕರ್ನಾಟಕ. ಹೀಗಿದ್ದೂ, ನಮಗೆ ಯಾಕೆ ಈ ತಾರತಮ್ಯ ಎಂದು ಪ್ರಶ್ನಿಸಿದರು. ವರ್ಷಕ್ಕೆ ನಾವು 4 ಲಕ್ಷ 30 ಸಾವಿರ ಕೋಟಿ ರು.ಗಳನ್ನು ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ಕೊಡುತ್ತಿದ್ದೇವೆ. ಆದರೆ, ನಮಗೆ ವಾಪಸ್‌ ಬರುವುದು 50 ಸಾವಿರ ಕೋಟಿ ಮಾತ್ರ. 

Tap to resize

Latest Videos

ಅಂದರೆ, ನಾವು ಕೇಂದ್ರಕ್ಕೆ ನೂರು ರು. ತೆರಿಗೆ ರೂಪದಲ್ಲಿ ಕೊಟ್ಟರೆ, ಕೇಂದ್ರ ನಮಗೆ ಕೇವಲ 12-13 ರು. ಮಾತ್ರ ಕೊಡುತ್ತಿದೆ. 15ನೇ ಹಣಕಾಸು ಆಯೋಗದಿಂದಾಗಿ ತೆರಿಗೆಯೊಂದರಲ್ಲೇ ನಮಗೆ 62,098 ಕೋಟಿ ಅನ್ಯಾಯವಾಗಿದೆ. ಈ ಅನ್ಯಾವನ್ನು ನಾವು ಪ್ರಶ್ನಿಸಬಾರದಾ? ಎಂದು ಕಿಡಿಕಾರಿದರು. ಪ್ರಧಾನಮಂತ್ರಿ ಆವಾಸ್ ಯೋಜನೆಗೆ ರಾಜ್ಯ ಸರ್ಕಾರವೂ ಹಣ ನೀಡುತ್ತದೆ. ಆದರೆ, ಅದರ ಹೆಸರನ್ನು ಮಾತ್ರ ಕೇಂದ್ರ ಪಡೆಯುತ್ತದೆ ಎಂದು ಆರೋಪಿಸಿದರು.

ತೆರಿಗೆ ನ್ಯಾಯಕ್ಕಾಗಿ ಚಲೋ ದಿಲ್ಲಿ: ಸಿದ್ದು ನೇತೃತ್ವದಲ್ಲಿ #ನನ್ನತೆರಿಗೆನನ್ನಹಕ್ಕು ಹ್ಯಾಶ್‌ಟ್ಯಾಗ್‌ ಅಡಿ ಹೋರಾಟ

ನಯಾಪೈಸೆ ಬರ ಪರಿಹಾರ ಬಂದಿಲ್ಲ: ಬರಗಾಲ ವಿಚಾರದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ. ರಾಜ್ಯ ತೀವ್ರ ಬರ ಎದುರಿಸುತ್ತಿದ್ದರೂ, ಎನ್‌ಡಿಆರ್‌ಎಫ್‌ನಿಂದ ಈವರೆಗೂ ನಮಗೆ ಒಂದೇ ಒಂದು ಪೈಸೆ ಪರಿಹಾರ ಧನ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎಂದು ದೂರಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ರಾಜ್ಯದ ಸಚಿವರು, ಸಂಸದರು, ಶಾಸಕರು, ಕಾಂಗ್ರೆಸ್‌ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

click me!