ಸೋಲು-ಗೆಲುವು ಚಲ್ತಾ ಹೈ, ಆದರೆ ನೀವು ಇನ್ನಷ್ಟು ಫಾಸ್ಟ್‌ ಆಗ್ಬೇಕು: ಬೊಮ್ಮಾಯಿಗೆ ಶಾ ಸಲಹೆ

By Suvarna NewsFirst Published Nov 13, 2021, 11:07 AM IST
Highlights

ಬಿಟ್‌ ಕಾಯಿನ್‌ ಜೊತೆಗೆ ಅಮಿತ್‌ ಶಾ ಮತ್ತು ನಡ್ಡಾ ಜೊತೆಗಿನ ಸಭೆಯಲ್ಲಿ ಹಾನಗಲ್ ಸೋಲಿನ ವಿಷಯ ಕೂಡ ಇಬ್ಬರು ವರಿಷ್ಠ ನಾಯಕರೇ ಪ್ರಸ್ತಾಪ ಮಾಡಿದ್ದಾರೆ. 

ರಾಜ್ಯದ ರಾಜಕಾರಣದಲ್ಲಿ ಸಂಚಲನ ಹುಟ್ಟಿಸಿರುವ ಬಿಟ್‌ ಕಾಯಿನ್‌ ಹಗರಣದಲ್ಲಲ್ಲಿ ನಿಮ್ಮ ಪಾತ್ರ ಇಲ್ಲ, ಅಂಥ ಯಾವುದೇ ಸಾಕ್ಷ್ಯಗಳೂ ಇಲ್ಲ ಅಂದ ಮೇಲೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ, ನಿಮ್ಮ ಕೆಲಸ ನೀವು ಮಾಡಿಕೊಂಡು ಹೋಗಿ ಎಂದು ಮುಖ್ಯಮಂತ್ರಿ ಬೊಮ್ಮಾಯಿಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಭಯ ನೀಡಿ ಕಳುಹಿಸಿದ್ದಾರೆ.

ಬುಧವಾರ ರಾತ್ರಿ 9 ಗಂಟೆವರೆಗೂ ಪ್ರಧಾನಿ ಕರೆದಿದ್ದ ಮಂತ್ರಿಗಳ ಪರಿಷತ್‌ ಸಭೆ ಕಾರಣ ಅಮಿತ್‌ ಶಾ ಬೊಮ್ಮಾಯಿಗೆ ಸಮಯ ನೀಡಿರಲಿಲ್ಲ. ‘ನನಗೆ ಎಲ್ಲಾ ಗೊತ್ತಿದೆ, ಯಾವುದೇ ವಿವರಣೆ ಅಗತ್ಯ ಇಲ್ಲ. ಇವತ್ತು ಬ್ಯುಸಿ ಇದ್ದೇನೆ’ ಎಂದು ಅಮಿತ್‌ ಶಾ ಅವರು ಬೊಮ್ಮಾಯಿಗೆ ಹೇಳಿದರಂತೆ. ಆದರೆ ‘ಇಲ್ಲ ಭೇಟಿ ಆಗಲೇಬೇಕು’ ಎಂದು ಬೊಮ್ಮಾಯಿ ಕೇಳಿಕೊಂಡಾಗ ರಾತ್ರಿ 10 ಗಂಟೆಗೆ ಬನ್ನಿ ಎಂದಿದ್ದಾರೆ. ಅಲ್ಲಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಕೂಡ ಅಮಿತ್‌ ಶಾ ಕರೆಸಿಕೊಂಡಿದ್ದಾರೆ. ಅಮಿತ್‌ ಶಾ, ಜೆ.ಪಿ.ನಡ್ಡಾ, ಪ್ರಹ್ಲಾದ್‌ ಜೋಶಿ ಇದ್ದ ಸಭೆಯಲ್ಲಿ ಬೊಮ್ಮಾಯಿ ಶ್ರೀಕಿ ಬಂಧನದಿಂದ ಹಿಡಿದು ತನಿಖೆ ಬಗ್ಗೆ ಪೂರ್ಣ ಮಾಹಿತಿ ನೀಡಿದ್ದಾರೆ.

India Gate | ಹಾನಗಲ್ ಸೋಲು ಬೊಮ್ಮಾಯಿಗೇನು ಕಲಿಸಿತು?

ಸ್ವತಃ ಅಮಿತ್‌ ಶಾ ಅವರೇ ಬೊಮ್ಮಾಯಿಗೆ ನೀಡಿರುವ ಮಾಹಿತಿ ಪ್ರಕಾರ, ಕೇಂದ್ರೀಯ ತನಿಖಾ ಏಜೆನ್ಸಿಗಳಿಗೂ ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ ಶ್ರೀಕಿಯಿಂದ ಹಣ ಪಡೆದಿರುವ ಬಗ್ಗೆ ಯಾವುದೇ ಮಾಹಿತಿ ಮತ್ತು ಪುರಾವೆ ಸದ್ಯಕ್ಕೆ ಸಿಕ್ಕಿಲ್ಲ. ಹೀಗಾಗಿ ಬೊಮ್ಮಾಯಿ ಅವರಿಗೆ ಕೆಲಸ ಮಾಡಿಕೊಂಡು ಹೋಗಿ, 2023ರ ತಯಾರಿ ಮಾಡಿ ಎಂದು ಅಮಿತ್‌ ಶಾ ಹೇಳಿ ಕಳುಹಿಸಿದ್ದಾರೆ. ಸದ್ಯಕ್ಕಂತೂ ಸ್ಥಾನ ಪಲ್ಲಟದ ಕ್ಷಣಗಣನೆಯಿಂದ ಬೊಮ್ಮಾಯಿ ಮತ್ತು ನಳಿನ್‌ ಕಟೀಲ್‌ ನಿರಾಳರಾಗಿದ್ದಾರೆ.

ದಗಾಖೋರತನಕ್ಕೆ ಜಾಗ ಇಲ್ಲ

ಪ್ರಧಾನಿ ಜೊತೆಗಿನ ಸಭೆಯಲ್ಲಿ ಬೊಮ್ಮಾಯಿ ಬಿಟ್‌ ಕಾಯಿನ್‌ ಬಗ್ಗೆ ಜಾಸ್ತಿ ಪ್ರಸ್ತಾಪಿಸಿಲ್ಲ. ಆದರೆ ಅಮಿತ್‌ ಶಾ ಮತ್ತು ಜೆ.ಪಿ.ನಡ್ಡಾ ಜೊತೆಗೆ ನಡೆದ ಸಭೆಯಲ್ಲಿ ಬೊಮ್ಮಾಯಿ, ‘ನನ್ನನ್ನು ಇವತ್ತು ಬದಲಿಸುತ್ತಾರೆ, ನಾಳೆ ಬದಲಾವಣೆ ಮಾಡುತ್ತಾರೆ ಎಂದು ಒಬ್ಬರು ಹಿರಿಯ ಸಚಿವರೇ ಗುಸುಗುಸು ಶುರುಮಾಡಿಸಿದ್ದಾರೆ. ಹೈಕಮಾಂಡ್‌ ಅವರನ್ನು ಕರೆದು ಬುದ್ಧಿ ಹೇಳಬೇಕು’ ಎಂದು ಹೇಳಿದಾಗ ಅಮಿತ್‌ ಶಾ, ‘ಬಿಜೆಪಿಯಲ್ಲಿ ದಗಾಖೋರತನಕ್ಕೆ ಜಾಗ ಇಲ್ಲ. ನಾವು ನೋಡಿಕೊಳ್ಳುತ್ತೇವೆ ಬಿಡಿ’ ಎಂದು ಹೇಳಿ ಕಳುಹಿಸಿದ್ದಾರೆ. ಯಾರು ಆ ಮಂತ್ರಿ ಎಂದು ಬೊಮ್ಮಾಯಿ ಆಪ್ತ ಮೂಲಗಳು ಖಚಿತಪಡಿಸಿಲ್ಲ. ಹಾನಗಲ್ ಚುನಾವಣೆ ನಂತರ ಬೊಮ್ಮಾಯಿ ಮತ್ತು ಮುರುಗೇಶ್‌ ನಿರಾಣಿ ನಡುವಿನ ಸಂಬಂಧಗಳು ಮೊದಲಿನಂತಿಲ್ಲ ಎಂಬುದು ಮಾತ್ರ ಖಚಿತ. ಮೂಲಗಳ ಪ್ರಕಾರ, ಹಾನಗಲ್‌ನಲ್ಲಿ ಅಂದುಕೊಂಡ ರೀತಿಯಲ್ಲಿ ಪಂಚಮಸಾಲಿಗಳು ಬಿಜೆಪಿ ಕೈಹಿಡಿದಿಲ್ಲ ಅನ್ನುವುದು ಬೊಮ್ಮಾಯಿ ಮತ್ತು ನಿರಾಣಿ ನಡುವಿನ ಸಂಬಂಧದ ಸ್ಥಿತ್ಯಂತರಕ್ಕೆ ಮುಖ್ಯ ಕಾರಣ.

ಸಂಕ್ರಾಂತಿ ನಂತರ ಸಂಪುಟ ವಿಸ್ತರಣೆ?

ಅಮಿತ್‌ ಶಾ ಮತ್ತು ನಡ್ಡಾ ಜೊತೆಗಿನ ಭೇಟಿಯಲ್ಲಿ ಅನೇಕ ಶಾಸಕರು ಸಂಪುಟ ವಿಸ್ತರಣೆಗೆ ದಿಲ್ಲಿಗೂ ಎಡತಾಕುತ್ತಿರುವ ವಿಚಾರ ಪ್ರಸ್ತಾಪ ಆಗಿದೆ. ಆದರೆ ವರಿಷ್ಠರು ಈಗ ಅದೆಲ್ಲ ಬೇಡ ಎನ್ನುವ ತೀರ್ಮಾನಕ್ಕೆ ಬಂದಿದ್ದು, ಹೇಗೂ ಈಗ ವಿಧಾನಪರಿಷತ್‌ ಚುನಾವಣೆ ಕಾರಣದಿಂದ ನೀತಿಸಂಹಿತೆ ಇದೆ. ಮುಂದೆ ಡಿಸೆಂಬರ್‌ 2ನೇ ವಾರದಲ್ಲಿ ಬೆಳಗಾವಿ ಅಧಿವೇಶನ ಬರುತ್ತದೆ. ಹೀಗಾಗಿ ಹೊಸ ವರ್ಷದಲ್ಲಿ ನೋಡೋಣ ಎಂದು ತೀರ್ಮಾನಿಸಲಾಗಿದೆ. ಬೊಮ್ಮಾಯಿಗೆ ಇರುವ ಆತಂಕ ಎಂದರೆ ಸಂಪುಟ ವಿಸ್ತರಣೆ ಕೊನೆಯದಾಗಿ ನಡೆಯುವುದರಿಂದ ಅತೃಪ್ತ ಶಾಸಕರು ಜಾಸ್ತಿ ಸದ್ದು ಮಾಡಿ ಬೇಸರ ಹೊರಹಾಕುತ್ತಾರೆ. ಈಗ ಸರ್ಕಾರ ನಡೆಸಿಕೊಂಡು ಹೋಗುವುದೇ ಆದ್ಯತೆ ಹೊರತು ಹೊಸ ರಾಜಕೀಯ ಸಾಹಸಗಳು ಬೇಕಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಅನ್ನಿಸಿದೆ. ಹಾನಗಲ್ ಗೆದ್ದಿದ್ದರೆ ಮಾತು ಬೇರೆ ಇತ್ತು.

ನೀವು ಇನ್ನೂ ಫಾಸ್ಟ್‌ ಆಗಬೇಕು

ಬಿಟ್‌ ಕಾಯಿನ್‌ ಜೊತೆಗೆ ಅಮಿತ್‌ ಶಾ ಮತ್ತು ನಡ್ಡಾ ಜೊತೆಗಿನ ಸಭೆಯಲ್ಲಿ ಹಾನಗಲ… ಸೋಲಿನ ವಿಷಯ ಕೂಡ ಇಬ್ಬರು ವರಿಷ್ಠ ನಾಯಕರೇ ಪ್ರಸ್ತಾಪ ಮಾಡಿದ್ದಾರೆ. ಬೊಮ್ಮಾಯಿ ನೀಡಿರುವ ವಿವರಣೆ ಪ್ರಕಾರ, ಉದಾಸಿ ಕುಟುಂಬಕ್ಕೆ ಟಿಕೆಟ್‌ ನೀಡಿದ್ದರೆ ನಾವು ಗೆಲ್ಲುತ್ತಿದ್ದೆವು. ಸಜ್ಜನರ ಆಯ್ಕೆಯೇ ತಪ್ಪಾಯಿತು ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಆಗ ಬಿಜೆಪಿ ರಾಜ್ಯ ನಾಯಕರ ಅಭಿಪ್ರಾಯ ಹೇಳಿದ ಅಮಿತ್‌ ಶಾ, ‘ನೀವು ಆಡಳಿತದಲ್ಲಿ ಇನ್ನಷ್ಟುಚುರುಕು ತರಬೇಕು. ಇನ್ನೂ ಸ್ವಲ್ಪ ಫಾಸ್ಟ್‌ ಆಗುವ ಅವಶ್ಯಕತೆ ಇದೆ.

ಪಂಜಾಬ್, ಉತ್ತರ ಪ್ರದೇಶ, ಗುಜರಾತ್, ಉತ್ತರಾಖಂಡ ಚುನಾವಣೆಯಲ್ಲಿ ಸಿದ್ದರಾಮಯ್ಯ ಪಾತ್ರವೇನು?

ಉಪ ಚುನಾವಣೆ ಸೋಲು-ಗೆಲುವು ಚಲ್ತಾ ಹೈ. ನೀವು 2023ರ ಕಡೆ ಗಮನ ಹರಿಸಿ ಪಕ್ಷವನ್ನು ಪೂರ್ತಿ ಜೊತೆಗೆ ತೆಗೆದುಕೊಂಡು ಹೋಗಿ’ ಎಂದು ಹೇಳಿ ಕಳುಹಿಸಿದ್ದಾರೆ. ಮೂಲಗಳ ಪ್ರಕಾರ ಅನೇಕ ಶಾಸಕರು, ‘ಅಂದುಕೊಂಡ ರೀತಿಯಲ್ಲಿ ನಮ್ಮ ಕ್ಷೇತ್ರಕ್ಕೆ ಸಹಾಯ ಸಿಗುತ್ತಿಲ್ಲ. ಫೈಲ್‌ಗಳು ಚುರುಕಾಗಿ ಚಲಿಸುತ್ತಿಲ್ಲ’ ಎಂದು ದಿಲ್ಲಿ ನಾಯಕರಿಗೆ ಹೇಳಿದ್ದಾರೆ. ಅದನ್ನೂ ಅಮಿತ್‌ ಶಾ ಮತ್ತು ಜೆ.ಪಿ.ನಡ್ಡಾ ಬೊಮ್ಮಾಯಿ ಗಮನಕ್ಕೆ ತಂದಿದ್ದಾರೆ.

ಮಂತ್ರಿಗಳ ಪವರ್‌ ಪಾಯಿಂಟ್‌

ಇಲ್ಲಿಯವರೆಗೆ ಮಂತ್ರಿಗಳೆಂದರೆ ಅಧಿಕಾರಿಗಳ ವಿವರಣೆ ಕೇಳೋದು ಅಷ್ಟೇ ಆಗಿತ್ತು. ಅವರೇನು ಇಲಾಖೆಯ ನೀತಿಗಳ ಬಗ್ಗೆ ತಲೆಕೆಡಿಸಿಕೊಳ್ಳೋದು ಬೇಕಿರಲಿಲ್ಲ. ಆದರೆ ಪ್ರಧಾನಿ ಮೋದಿ ಒಂದು ಹೊಸ ಪದ್ಧತಿ ಶುರು ಮಾಡಿಸಿದ್ದಾರೆ. ಪ್ರತಿ ಇಲಾಖೆಯ ನೀತಿ-ನಿರ್ಧಾರಗಳ ಬಗ್ಗೆ ಎಲ್ಲಾ ಮಂತ್ರಿಗಳ ಎದುರು ಕ್ಯಾಬಿನೆಟ್‌ ಸಚಿವರು ಪವರ್‌ ಪಾಯಿಂಟ್‌ ವಿವರಣೆ ಕೊಡಬೇಕು. ಯಾರಿಗಾದರೂ ಏನಾದರೂ ಸಂದೇಹ ಇದ್ದರೆ ಮಂತ್ರಿಯೇ ವಿವರಣೆ ಕೊಡಬೇಕು. ಅಂದರೆ ಮಂತ್ರಿಗೆ ಒಂದು ವಾರದ ತಯಾರಿ ಆದರೂ ಬೇಕೇ ಬೇಕು. ನಿತಿನ್‌ ಗಡ್ಕರಿ, ಧರ್ಮೇಂದ್ರ ಪ್ರಧಾನ್‌, ಪ್ರಹ್ಲಾದ್‌ ಜೋಶಿ, ಅಶ್ವಿನಿ ವೈಷ್ಣವ, ಪಿಯೂಷ್‌ ಗೋಯಲ್, ನರೇಂದ್ರ ಸಿಂಗ್‌ ತೋಮರ್‌ ಈಗಾಗಲೇ ತಮ್ಮ ತಮ್ಮ ಇಲಾಖೆಗಳ ಬಗ್ಗೆ ಪ್ರಧಾನಿ ಮತ್ತು ಮಂತ್ರಿಗಳಿಗೆ ಪವರ್‌ ಪಾಯಿಂಟ್‌ ಪ್ರೆಸೆಂಟೇಶನ್‌ ಕೊಟ್ಟಿದ್ದಾರೆ.

ಇಲಾಖೆ ಬಗ್ಗೆ ಮಂತ್ರಿ ಮಾತನಾಡುವಾಗ 3ರಿಂದ 4 ಗಂಟೆ ಸ್ವತಃ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಎದುರುಗಡೆ ಕುಳಿತುಕೊಳ್ಳುವುದರಿಂದ ಕೆಲ ಜೂನಿಯರ್‌ ಮಂತ್ರಿಗಳಿಗೆ ಟೆನ್ಷನ್‌ ಇದ್ದಿದ್ದೇ. ತಮ್ಮ ತಮ್ಮ ಇಲಾಖೆಯ ಬಗ್ಗೆ ಅರ್ಧ ಗಂಟೆ ಮಾತನಾಡಬೇಕು ಎಂಬ ಸೂಚನೆಯಿಂದಾದರೂ ಮಂತ್ರಿಗಳಿಗೆ ಸ್ವಲ್ಪ ಇಲಾಖೆಗಳ ಮೇಲೆ ಹಿಡಿತ ಬರುತ್ತದೆ ಅನ್ನೋದೇ ಪವರ್‌ ಪಾಯಿಂಟ್‌ನ ಮುಖ್ಯ ಪ್ರಯೋಜನ. ದಿವಂಗತ ಅನಂತ ಕುಮಾರ್‌ 1998ರಲ್ಲಿ ಏಕ್‌ದಂ ವಿಮಾನಯಾನ ಸಚಿವರಾದಾಗ ಮೊದಲ ಸಚಿವ ಸಂಪುಟ ಸಭೆಯಲ್ಲಿ ವಿಮಾನಯಾನದ ವಿಷಯ ಬಂದಾಗ 39 ವರ್ಷದ ಅನಂತ್‌ಗೆ ಏನೂ ಮಾತನಾಡಲು ಗೊತ್ತಾಗಲಿಲ್ಲವಂತೆ. ಆಗ ಅಟಲ… ಕರೆದು ‘ಇಬ್ಬರು ಮಾಜಿ ವಿಮಾನಯಾನ ಇಲಾಖೆಯ ನಿವೃತ್ತ ಅಧಿಕಾರಿಗಳನ್ನು ಜೊತೆಗಿಟ್ಟುಕೊಳ್ಳಿ’ ಎಂದು ಕಳುಹಿಸಿದರಂತೆ. ನಂತರ ಒಂದು ತಿಂಗಳಲ್ಲೇ ಅನಂತ್‌ ವಿಮಾನಯಾನ ಇಲಾಖೆಯ ಒಳಹೊರಗೆ ತಿಳಿದುಕೊಂಡು ಬಂದು ಅಟಲ್‌ ಎದುರು ವಿವರಣೆ ಕೊಟ್ಟು ಹೊಸ ಆಕಾಶ ನೀತಿ ಜಾರಿಗೆ ತಂದರಂತೆ. ಪಾಲಿಟಿಕ್ಸ್‌ ಇರಲಿ, ಆಡಳಿತ ಇರಲಿ ಕಲಿಯುವವರು ಬೇಕು; ಮುಖ್ಯವಾಗಿ ಕಲಿಸುವವರೂ ಬೇಕು ನೋಡಿ.

ಗೌರ್ನರ್‌, ರೈಲ್ವೆ ಮಂತ್ರಿ ಮಾತಾಡ್‌ ಕನ್ನಡ

ಸಚಿವ ಸುನೀಲ್‌ ಕುಮಾರ್‌ ‘ಮಾತಾಡ್‌ ಮಾತಾಡ್‌ ಕನ್ನಡ’ ಅಭಿಯಾನದ ಉದ್ಘಾಟನೆಗೆ ಕರೆದ ನಂತರ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಕನ್ನಡ ಶಿಕ್ಷಕರೊಬ್ಬರನ್ನು ನೇಮಿಸಿಕೊಂಡು ಕನ್ನಡ ಮಾತನಾಡಲು ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ. ಜೊತೆಗೆ ಕೇಂದ್ರದಲ್ಲಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಕೂಡ ಕರ್ನಾಟಕದಿಂದ ಯಾರೇ ಹೋದರೂ ‘ಹೇಗಿದ್ದೀರಿ. ನಮಸ್ಕಾರ ಬನ್ನಿ ಕುಳಿತುಕೊಳ್ಳಿ’ ಎಂದು ಸ್ವಾಗತಿಸುತ್ತಾರೆ. ಪ್ರಹ್ಲಾದ ಜೋಶಿಯವರ ಆಪ್ತ ಕಾರ್ಯದರ್ಶಿ ಆಗಿದ್ದ ಹೊನ್ನಾರೆಡ್ಡಿ ಎಂಬ ಅಧಿಕಾರಿ ಬಳಿ ರೈಲ್ವೆ ಸಚಿವರಾಗುವ ಮೊದಲು ಕಲ್ಲಿದ್ದಲು ಮತ್ತು ಗಣಿ ನೀತಿ ರೂಪಿಸುವ ಸಂಬಂಧ ಸಭೆಗಾಗಿ ವೈಷ್ಣವ ಬಂದು ಗಂಟೆಗಟ್ಟಲೆ ಕೂರುತ್ತಿದ್ದರಂತೆ. ಆಗ ಕಲಿತ ಅಲ್ಪಸ್ವಲ್ಪ ಕನ್ನಡ ಈಗ ಬಳಕೆ ಮಾಡುತ್ತಿದ್ದಾರೆ.

ಸಾಮಾನ್ಯ ಜನರು ಮೋದಿ ವಿರುದ್ಧ ರಾಹುಲ್‌ರನ್ನು ಒಪ್ಪುವುದಿಲ್ಲ ಯಾಕೆ..?

ಬಿಜೆಪಿ ರಾಜ್ಯಪಾಲರ ಬಂಡಾಯ!

ಶಾಸಕರ ಬಂಡಾಯವನ್ನು ಅನೇಕ ಬಾರಿ ಕೇಳಿದ್ದೇವೆ. ಆದರೆ ಮೊದಲ ಬಾರಿ ರಾಜ್ಯಪಾಲರು ಬಿಜೆಪಿ ವಿರುದ್ಧ ಬಂಡಾಯ ಹೂಡಿದ್ದಾರೆ. ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ… ಮಲಿಕ್‌ ಕೃಷಿ ಕಾನೂನು ವಿಷಯದಲ್ಲಿ ರೈತರನ್ನು ಮೋದಿ ಸರ್ಕಾರ ಸರಿಯಾಗಿ ನಡೆಸಿಕೊಂಡಿಲ್ಲ ಎಂದು ನೇರವಾಗಿ ಹೇಳಿದ್ದು, ಕಾಶ್ಮೀರದಲ್ಲಿ 370ರ ರದ್ದತಿ ನಂತರ ಸಜ್ಜಾದ್‌ ಲೋನ್‌ ಮೂಲಕ ಬಿಜೆಪಿ ಹಿಂದುಗಡೆ ಬಾಗಿಲಿನಿಂದ ಅಧಿಕಾರ ಹಿಡಿಯಲು ಪ್ರಯತ್ನ ನಡೆಸಿದ್ದನ್ನು ಕೂಡ ಕೂಡ ಬಹಿರಂಗಪಡಿಸಿಬಿಟ್ಟಿದ್ದಾರೆ. ಅಂದಹಾಗೆ ಸತ್ಯಪಾಲ್ ಮಲಿಕ್‌ ಮೂಲ ಬಿಜೆಪಿ ಅಲ್ಲ. ಲೋಹಿಯಾ ನಂತರ ಚೌಧರಿ ಚರಣ್‌ ಸಿಂಗ್‌ರ ಶಿಷ್ಯ ಆಗಿದ್ದವರು. ಯಾಕೋ ಏನೋ ಶ್ರೀನಗರದಿಂದ ಶಿಲ್ಲಾಂಗ್‌ಗೆ ಕಳುಹಿಸಿದ ಮೇಲೆ ಬಿಜೆಪಿ ಮೇಲೆ ಬಹಳ ಸಿಟ್ಟಾಗಿದ್ದಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!