ಮುಂದಿನ 5 ವರ್ಷದಲ್ಲಿ ಪ್ರಣಾಳಿಕೆ ಪೂರ್ಣ ಜಾರಿ ಮಾಡಿ ನುಡಿದಂತೆ ನಡೆಯುತ್ತೇವೆ: ಸಿದ್ದರಾಮಯ್ಯ

By Kannadaprabha NewsFirst Published May 21, 2023, 4:40 AM IST
Highlights

ರಾಜ್ಯದ ಜನರು ಬದಲಾವಣೆ ಬಯಸಿ ಈ ಬಾರಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ. ಅವರ ನಿರೀಕ್ಷೆಯಂತೆ ನಾವು ನಡೆಯುತ್ತೇವೆ. ಎಷ್ಟೇ ಕಷ್ಟಆದರೂ ಇವತ್ತೇ ಸಚಿವ ಸಂಪುಟ ಸಭೆ ನಡೆಸಿ ಐದೂ ಗ್ಯಾರಂಟಿ ಯೋಜನೆಗಳ ಜಾರಿಗೆ ನಿರ್ಧಾರ ಮಾಡುತ್ತೇವೆ. 

ಬೆಂಗಳೂರು (ಮೇ.21): ರಾಜ್ಯದ ಜನರು ಬದಲಾವಣೆ ಬಯಸಿ ಈ ಬಾರಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ. ಅವರ ನಿರೀಕ್ಷೆಯಂತೆ ನಾವು ನಡೆಯುತ್ತೇವೆ. ಎಷ್ಟೇ ಕಷ್ಟಆದರೂ ಇವತ್ತೇ ಸಚಿವ ಸಂಪುಟ ಸಭೆ ನಡೆಸಿ ಐದೂ ಗ್ಯಾರಂಟಿ ಯೋಜನೆಗಳ ಜಾರಿಗೆ ನಿರ್ಧಾರ ಮಾಡುತ್ತೇವೆ. ಪ್ರಣಾಳಿಕೆಯಲ್ಲಿನ ಇತರೆ ಎಲ್ಲ ಅಂಶಗಳನ್ನು ಮುಂದಿನ ಐದು ವರ್ಷದಲ್ಲಿ ಈಡೇರಿಸಿ ನುಡಿದಂತೆ ನಡೆಯುತ್ತೇವೆ ಎಂದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದರು.

2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸಿಕ್ಕ ಜಯ ರಾಜ್ಯದ 6 ಕೋಟಿ ಕನ್ನಡಿಗರ ಜಯ. ಜನರ ಆಶೀರ್ವಾದದಿಂದ ಇಂದು ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ನಮ್ಮ ಪಕ್ಷದ ಎಲ್ಲಾ ನಾಯಕರು, ಮುಖಂಡರು, ಕಾರ್ಯಕರ್ತರು ಅವಿರತವಾಗಿ ಶ್ರಮಿಸಿದ್ದಾರೆ. ನಾಡಿನ ಅನೇಕ ಸಾಹಿತಿಗಳು, ಚಿಂತಕರು, ಮಹಿಳೆಯರು, ಯುವಜನರು, ರೈತರು, ಕಾರ್ಮಿಕರು ನಮ್ಮ ಪಕ್ಷಕ್ಕೆ ಆಶೀರ್ವದಿಸಿದ್ದಾರೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಪೊಲೀಸ್‌ ದೌರ್ಜನ್ಯ ಹಿಂದಿನ ಶಕ್ತಿ ಪತ್ತೆಯಾಗುವ ತನಕ ಶ್ರೀರಾಮಸೇನೆ ಪ್ರತಿಭಟನೆ: ಮುತಾಲಿಕ್‌

ಬದಲಾವಣೆ ಬಯಸಿ ನಾಡಿನ ಜನ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ಜನರ ನಿರೀಕ್ಷೆಯಂತೆ ಆಡಳಿತ ನಡೆಸುತ್ತೇವೆ. ನಮ್ಮ ಪಕ್ಷದ ಐದು ಗ್ಯಾರಂಟಿಗಳಾದ ಗೃಹಜ್ಯೋತಿ, ಯುವನಿಧಿ, ಪ್ರತಿ ಮನೆಯ ಯಜಮಾನಿಗೆ ಮಾಸಿಕ 2000 ರು., ಅನ್ನಭಾಗ್ಯ, ಸ್ತ್ರೀಯರಿಗೆ ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಯೋಜನೆಗಳನ್ನು ಇವತ್ತೇ (ಶನಿವಾರ) ಸಚಿವರ ಸಂಪುಟ ಸಭೆ ನಡೆಸಿ ಜಾರಿಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಅವುಗಳ ಜತೆಗೆ ಪಕ್ಷದ ಪ್ರಣಾಳಿಕೆಯಲ್ಲಿ ನೀಡಲಾಗಿರುವ ಉಳಿದ ಎಲ್ಲಾ ಭರವಸೆಗಳನ್ನು ಮುಂದಿನ ಐದು ವರ್ಷಗಳಲ್ಲಿ ಪೂರೈಸಲು ಕ್ರಮ ಕೈಗೊಳ್ಳುತ್ತೇವೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಈ ಹಿಂದೆಯೇ ತೋರಿಸಿದ್ದೇವೆ. ಈಗಲೂ ಹಾಗೆಯೇ ನಡೆಯುತ್ತೇವೆ ಎಂದು ಆಶ್ವಾಸನೆ ನೀಡಿದರು.

ದೇವರ ಹೆಸರಿನಲ್ಲಿ ಸಿದ್ದು ಪ್ರಮಾಣ: ಕಳೆದ ಬಾರಿ ಮುಖ್ಯಮಂತ್ರಿಯಾಗಿ ಸತ್ಯದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಸಿದ್ದರಾಮಯ್ಯ ಈ ಬಾರಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಸಾಮಾನ್ಯವಾಗಿ ಸಿದ್ದರಾಮಯ್ಯ ಅವರು ಈ ಹಿಂದೆ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಸತ್ಯದ ಹೆಸರಿನಲ್ಲೇ ಪ್ರಮಾಣವಚನ ಸ್ವೀಕರಿಸುತ್ತಿದ್ದರು, ಆದರೆ ಈ ಬಾರಿ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದು ಗಮನ ಸೆಳೆಯಿತು.

5ನೇ ಬಾರಿಯೂ ಡಾ.ಜಿ.ಪರಮೇಶ್ವರ್‌ ಸಚಿವ: ಒಟ್ಟು 6 ಬಾರಿ ಶಾಸಕರಾಗಿ ಆಯ್ಕೆಯಾದ ಪರಂ

ಸಂಪ್ರದಾಯದ ಪ್ರಕಾರ ಮುಖ್ಯಮಂತ್ರಿ ಆದಿಯಾಗಿ ಸಚಿವರು ರಾಜ್ಯಪಾಲರ ಬಲ ಭಾಗದಲ್ಲಿ ನಿಂತು ಪ್ರಮಾಣ ವಚನ ಸ್ವೀಕರಿಸಬೇಕು. ಆದರೆ, ಸಿದ್ದರಾಮಯ್ಯ ಅವರು ರಾಜ್ಯಪಾಲರ ಎಡಭಾಗದಲ್ಲಿ ನಿಂತು ಪ್ರಮಾಣ ವಚನ ಸ್ವೀಕರಿಸಿದರು. ನಂತರ ರಾಜ್ಯಪಾಲರ ಬಲಭಾಗದಲ್ಲಿ ಹಾಕಲಾಗಿದ್ದ ಆಸನದಲ್ಲಿ ಕುಳಿತು ಉಳಿದವರ ಪ್ರಮಾಣ ವಚನ ಸ್ವೀಕಾರವನ್ನು ವೀಕ್ಷಿಸಿ, ಅವರಿಗೆ ಕೆಲ ನಿರ್ದೇಶನ ನೀಡಿದರು. ಸಚಿವ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಸತೀಶ್‌ ಜಾರಕಿಹೊಳಿ ಬುದ್ಧ, ಬಸವ ಮತ್ತು ಡಾ. ಬಿ.ಆರ್‌.ಅಂಬೇಡ್ಕರ್‌ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. 

click me!