ಕಲಘಟಗಿಗೆ ಸಕ್ಕರೆ ಕಾರ್ಖಾನೆ ತರುವರೇ ಸಂತೋಷ ಲಾಡ್‌!

By Kannadaprabha NewsFirst Published May 21, 2023, 4:30 AM IST
Highlights

ಅಬ್ಬಾ! ಈ ಬಾರಿ ನಮ್ಮ ಕ್ಷೇತ್ರಕ್ಕ ಮತ್‌ ಲಾಡ್‌ ಸಾಹೇಬರನ್‌್ನ ಆರಿಸಿ ತಂದೇವಿ... ಈಗ ಸಿದ್ರಾಮಯ್ಯನ ಸರ್ಕಾರದಾಗ ಲಾಡ್‌ ಮಂತ್ರಿನೂ ಆಗತಾರ ಅನ್ನಾಕತ್ತಾರ. ಹಂಗಾದ್ರ ಇನ್‌ಮ್ಯಾಲ ನಮ್ಮ ಕಲಘಟಗಿ-ಅಳ್ನಾವರ ಭಾಗದಾಗ ಭಾಳ್‌ ಕೆಲಸ ಆಗತಾವ ನೋಡಪಾ...!

ಶಶಿಕುಮಾರ ಪತಂಗೆ

ಅಳ್ನಾವರ (ಮೇ.21) : ಅಬ್ಬಾ! ಈ ಬಾರಿ ನಮ್ಮ ಕ್ಷೇತ್ರಕ್ಕ ಮತ್‌ ಲಾಡ್‌ ಸಾಹೇಬರನ್‌್ನ ಆರಿಸಿ ತಂದೇವಿ... ಈಗ ಸಿದ್ರಾಮಯ್ಯನ ಸರ್ಕಾರದಾಗ ಲಾಡ್‌ ಮಂತ್ರಿನೂ ಆಗತಾರ ಅನ್ನಾಕತ್ತಾರ. ಹಂಗಾದ್ರ ಇನ್‌ಮ್ಯಾಲ ನಮ್ಮ ಕಲಘಟಗಿ-ಅಳ್ನಾವರ ಭಾಗದಾಗ ಭಾಳ್‌ ಕೆಲಸ ಆಗತಾವ ನೋಡಪಾ...!

ಹೊಸ ಸರ್ಕಾರ ರಚನೆ ಆಗುತ್ತಿದ್ದಂತೆ ಕಲಘಟಗಿ ಕ್ಷೇತ್ರದ (Kalaghatagi constituency)ಉದ್ದಗಲಕ್ಕೂ ಲಾಡ್‌ (Santosh lad)ಅವರ ಮೇಲಿನ ನಿರೀಕ್ಷೆಗಳು ಇಂತಹ ಮಾತುಗಳ ಮೂಲಕ ಹೊರ ಬರುತ್ತಿವೆ. ಕರ್ನಾಟಕದಲ್ಲಿಯೇ ಹಿಂದುಳಿದ ಕ್ಷೇತ್ರವೆನ್ನುವ ಹಣೆಪಟ್ಟಿಕಟ್ಟಿಕೊಂಡಿರುವ ಕ್ಷೇತ್ರ ಇದಾಗಿದ್ದು, ಮುಂದುವರಿಯಲು ಸಾಕಷ್ಟುಅಭಿವೃದ್ಧಿ ಕೆಲಸಗಳಾಗಬೇಕಿದೆ. ಕ್ಷೇತ್ರದಲ್ಲಿ 3ನೇ ಬಾರಿ ಶಾಸಕರಾಗಿರುವ ಲಾಡ್‌ ಅವರ ಮೇಲೆ ಸವಾಲಿನ ಹೊರೆ ಸಾಕಷ್ಟಿದೆ.

Govt formation in Karnataka: ಯಾರಾರಿಗೆ ಸಿಗಲಿದೆ ಸಚಿವಗಿರಿ? ಸೋತರೂ ಶೆಟ್ಟರ್‌ ಕೈ ಹಿಡಿಯಲಿದೆ ಲಕ್‌!

ಕಲಘಟಗಿ ಕ್ಷೇತ್ರವು ಕಲಘಟಗಿ ಸೇರಿದಂತೆ ಅಳ್ನಾವರ, ಧಾರವಾಡ ತಾಲೂಕಿನ ಕೆಲ ಹಳ್ಳಿಗಳನ್ನು ಒಳಗೊಂಡಿದೆ. ಕಲಘಟಗಿ ಮತ್ತು ಅಳ್ನಾವರ ಎರಡು ದೊಡ್ಡ ಪಟ್ಟಣಗಳಿವೆ. ಈ ಬಾರಿ ಚುನಾಯಿತಗೊಂಡ ಶಾಸಕರಿಗೆ ಕ್ಷೇತ್ರವನ್ನು ಸುಧಾರಣೆ ಮಾಡಲು ಹತ್ತಾರು ಸವಾಲುಗಳು ಸಾಲುಗಟ್ಟಿನಿಂತಿವೆ.

ಸಕ್ಕರೆ ಕಾರ್ಖಾನೆ:

ಕಲಘಟಗಿ ಕ್ಷೇತ್ರಾದ್ಯಂತ ಕಬ್ಬು ಬೆಳೆ ಪ್ರಧಾನ. ಸಾವಿರಾರು ಟನ್‌ ಕಬ್ಬು ಬೆಳೆಯುವ ಈ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ಕೊರತೆ ಇದೆ. ಸಂತೋಷ ಲಾಡ್‌ ಶಾಸಕರಾಗಿದ್ದಾಗಲೇ ಸಕ್ಕರೆ ಕಾರ್ಖಾನೆ ಮಾಡುವುದಾಗಿ ನೂರಾರು ಎಕರೆ ಜಮೀನು ಸಹ ಖರೀದಿಸಿದ್ದರು. ಆದರೆ, ಅನಿವಾರ‍್ಯ ಕಾರಣಗಳಿಂದ ಕಾಲ ಕೂಡಿ ಬರಲಿಲ್ಲ. ಬರೀ ಕಲಘಟಗಿ ಮಾತ್ರವಲ್ಲದೇ ಜಿಲ್ಲೆಯಲ್ಲಿ ಒಂದೂ ಸಕ್ಕರೆ ಕಾರ್ಖಾನೆ ಇಲ್ಲದಿರುವುದು ಬೇಸರದ ಸಂಗತಿ. ಕಳೆದ ಬಿಜೆಪಿ ಸರ್ಕಾರದಲ್ಲಿ ಸಕ್ಕರೆ ಸಚಿವರಾಗಿದ್ದ ಶಂಕರ ಪಾಟೀಲ ಮುನೇನಕೊಪ್ಪ ಜಿಲ್ಲೆಗೆ ಮೂರು ಸಕ್ಕರೆ ಕಾರ್ಖಾನೆ ಮಾಡುವುದಾಗಿ ಆದೇಶ ಹೊರಡಿಸಿದ್ದರು. ಈ ಪೈಕಿ ಒಂದನ್ನು ಕಲಘಟಗಿಯಲ್ಲಿ ಮಾಡುವುದಾಗಿ ಹೇಳಿದ್ದರು. ಇದೀಗ ಲಾಡ್‌ ತಮ್ಮ ಸರ್ಕಾರದ ಮನವೊಲಿಸಿ ಸಕ್ಕರೆ ಕಾರ್ಖಾನೆ ಆರಂಭಿಸುವರೇ ಎಂಬುದು ಕೂತುಹಲ ಮೂಡಿಸಿದೆ.

ಬೇಡತಿಹಳ್ಳದ ಕಾಮಗಾರಿ ಅಪೂರ್ಣಗೊಂಡಿದ್ದು, ಕಾಮಗಾರಿ ಶೀಘ್ರಗೊಳಿಸಬೇಕಿದೆ. ತಾಲೂಕಾದರೂ ಇಲ್ಲಿವರೆಗೂ ತಾಲೂಕು ಕ್ರೀಡಾಂಗಣವಿಲ್ಲ. ಕ್ರೀಡಾಪಟುಗಳು ಹುಬ್ಬಳ್ಳಿ ಹಾಗೂ ಧಾರವಾಡ ಕ್ರೀಡಾಂಗಣ ನೆಚ್ಚಿಕೊಳ್ಳಬೇಕಿದೆ. ಈ ಬಾರಿಯಾದರೂ ಲಾಡ್‌ ಕ್ರೀಡಾಂಗಣ ನಿರ್ಮಿಸುವರೇ? ಎಂದು ಇಲ್ಲಿನ ಕ್ರೀಡಾಸಕ್ತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ತಾಲೂಕಿನ ಜನರಿಗೆ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆ ತೆರೆಯಬೇಕಿದೆ. ವಿದ್ಯಾರ್ಥಿಗಳಿಗಾಗಿ ಮೆಟ್ರಿಕ್‌ ನಂತರದ ಪ್ರತ್ಯೇಕ ಹಾಸ್ಟೆಲ್‌ಗಳ ನಿರ್ಮಾಣ, ಸುಸಜ್ಜಿತ ತಾಲೂಕು ಆಸ್ಪತ್ರೆಯ ಜೊತೆಗೆ ತಾಲೂಕಿನಲ್ಲೊಂದು ಪಾಲಿಟೆಕ್ನಿಕ್‌ ಕಾಲೇಜು ಆರಂಭಿಸಬೇಕಿದೆ.

ಅಳ್ನಾವರಕ್ಕೆ ಏನು ಬೇಕು?

ಕ್ಷೇತ್ರದ ಮತ್ತೊಂದು ದೊಡ್ಡ ಊರು ಅಳ್ನಾವರ. ಈ ಭಾಗದಲ್ಲಿ ಮುಖ್ಯವಾಗಿ ಓದುಗರಿಗೊಂದು ಗ್ರಂಥಾಲಯದ ಅವಶ್ಯಕತೆ ಇದೆ. ಬೆಳಗಾವಿ-ಅಳ್ನಾವರ-ಕಾರವಾರ (ನೌಕಾನೆಲೆ ಸೇರುವ)ರಸ್ತೆ ನಿರ್ಮಾಣವಾಗಬೇಕಿದೆ. ಇಲ್ಲಿನ ಕಟ್ಟಿಗೆ ಉದ್ಯಮಕ್ಕೆ ಉತ್ತೇಜನ ನೀಡುವುದು ಹಾಗೂ ಸಣ್ಣಪುಟ್ಟಕಟ್ಟಿಗೆ ಕಾರ್ಮಿಕರಿಗಾಗಿ ಕಾರ್ಖಾನೆಗಳನ್ನು ತೆರೆಯುವುದು.

ಅಳ್ನಾವರ ತಾಲೂಕಿಗೆ ಪ್ರತ್ಯೇಕ ಬಸ್‌ ಡಿಪೋ ಅಗತ್ಯವಿದೆ. ತಾಲೂಕು ಮಟ್ಟದ ಕ್ರೀಡಾಂಗಣವನ್ನು ಅಭಿವೃದ್ಧಿಗೊಳ್ಳಿಸುವುದು. ಪಟ್ಟಣದ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜಿಗೆ ಸ್ವಂತ ಕಟ್ಟಡಗಳ ನಿರ್ಮಣ ಮತ್ತು ಡಿಪೊ್ಲೕಮಾ, ಐಟಿಐ, ವಿಜ್ಞಾನ ಕಾಲೇಜುಗಳ ಪ್ರಾರಂಭ ಮಾಡುವುದು ಅಗತ್ಯವಿದೆ. ತಾಲೂಕಿನ ಕೆರೆಗಳ ಹೂಳೆತ್ತುವ ಕಾರ್ಯ ಮತ್ತು ಹುಲಿಕೇರಿ, ಡೋರಿ ಕೆರೆಗಳಿಗೆ ಕಾಲುವೆಳ ಮರು ನಿರ್ಮಾಣ ಮಾಡಬೇಕಿದೆ.

ಹು-ಧಾ.ದಲ್ಲಿರುವ ಕೈಗಾರಿಕಾ ಪ್ರದೇಶವನ್ನು ಅಳ್ನಾವರ ಭಾಗದ ಕಡೆಗೆ ವಿಸ್ತರಿಸುವುದು ಹಾಗೂ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೆ ವಸತಿನಿಲಯ ಸ್ಥಾಪನೆ ಅಗತ್ಯವಾಗಿದೆ.

ಸಚಿವರಾಗುವ ಆಕಾಂಕ್ಷೆ ಹೊತ್ತಿರುವ ಸಂತೋಷ ಲಾಡ್‌ ಮೇಲೆ ಕ್ಷೇತ್ರದ ಜನರಿಗೆ ತುಂಬ ನಿರೀಕ್ಷೆಗಳಿವೆ. ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಬಗ್ಗೆ ಲಾಡ್‌ ಏನೆಲ್ಲ ಕನಸು ಕಟ್ಟಿಕೊಂಡಿದ್ದಾರೆ. ಅವುಗಳನ್ನು ಹೇಗೆ ನನಸು ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಯುವತಿ ಶಿಕ್ಷಣದ ಜವಾಬ್ದಾರಿ ಹೊತ್ತುಕೊಂಡ ಸಂತೋಷ್ ಲಾಡ್ ಫೌಂಡೇಶನ್

ಕಲಘಟಗಿ ಅಳ್ನಾವರ ಕ್ಷೇತ್ರವು ಹಿಂದುಳಿದ ಮತಕ್ಷೇತ್ರ. ಮೂರನೇ ಬಾರಿಗೆ ಸಂತೋಷ ಲಾಡ್‌ಗೆ ಅವಕಾಶ ನೀಡಿದ್ದೇವೆ. ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಕರ್ನಾಟಕದಲ್ಲಿಯೇ ನಮ್ಮ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಬೇಕೆಂಬ ಹಂಬಲ ನಮ್ಮದು.

-ಪ್ರಶಾಂತ ಪವಾರ, ಅಳ್ನಾವರ ಸಾಮಾಜಿಕ ಹೋರಾಟಗಾರ

click me!