ಶಾಸಕರು ಮತ್ತು ಕಾರ್ಯಕರ್ತರ ಬೇಡಿಕೆಯಂತೆ ರಾಜ್ಯದ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರ ಆಯ್ಕೆಗೆ ಕಾಂಗ್ರೆಸ್ ಮುಂದಾಗಿದ್ದು, ಮೊದಲ ಹಂತದಲ್ಲಿ 30 ಶಾಸಕರನ್ನು ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ.
ಬೆಂಗಳೂರು (ಆ.16): ಶಾಸಕರು ಮತ್ತು ಕಾರ್ಯಕರ್ತರ ಬೇಡಿಕೆಯಂತೆ ರಾಜ್ಯದ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರ ಆಯ್ಕೆಗೆ ಕಾಂಗ್ರೆಸ್ ಮುಂದಾಗಿದ್ದು, ಮೊದಲ ಹಂತದಲ್ಲಿ 30 ಶಾಸಕರನ್ನು ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಸರ್ಕಾರ ರಚನೆಯಾಗಿ ಮೂರು ತಿಂಗಳಾಗಿದ್ದು, ಸಚಿವ ಸ್ಥಾನ ವಂಚಿತ ಶಾಸಕರು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ.
ಹೀಗಾಗಿ ನಿಗಮ-ಮಂಡಳಿ ಅಧ್ಯಕ್ಷರ ಆಯ್ಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಶೀಘ್ರದಲ್ಲಿ ಸಭೆ ನಡೆಸಿ ಪಟ್ಟಿ ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿನ 80ಕ್ಕೂ ಹೆಚ್ಚಿನ ನಿಗಮ-ಮಂಡಳಿಗಳ ಪೈಕಿ 30 ನಿಗಮ-ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ. ಅದರಲ್ಲಿ 22ರಿಂದ 25 ಮಂದಿ ವಿಧಾನಸಭೆ ಹಾಗೂ 5ರಿಂದ 7 ಮಂದಿ ವಿಧಾನಪರಿಷತ್ ಸದಸ್ಯರಾಗಿರಲಿದ್ದಾರೆ. ಇನ್ನು 15 ದಿನಗಳೊಳಗಾಗಿ ಅಧ್ಯಕ್ಷರ ಆಯ್ಕೆ ಅಂತಿಮಗೊಳಿಸಿ, ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲು ನಿರ್ಧರಿಸಲಾಗಿದೆ.
ಮುಂದಿನ ಶೈಕ್ಷಣಿಕ ವರ್ಷಕ್ಕೆ ಎನ್‌ಇಪಿ ರದ್ದು: ಸಿಎಂ ಸಿದ್ದರಾಮಯ್ಯ
ಕಾರ್ಯಕರ್ತರ ಆಯ್ಕೆಗೆ ಸಮಿತಿ: ಶಾಸಕರ ಆಯ್ಕೆ ನಂತರ ಉಳಿದ ನಿಗಮ-ಮಂಡಳಿಗಳಿಗೆ ಕಾಂಗ್ರೆಸ್‌ನ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿಂದೆಯೇ ಘೋಷಿಸಿದಂತೆ ಕಾರ್ಯಕರ್ತರ ಆಯ್ಕೆಗಾಗಿ ಪ್ರತ್ಯೇಕ ಸಮಿತಿ ರಚಿಸಲಾಗುತ್ತದೆ. ಸಮಿತಿಯು ಪಕ್ಷಕ್ಕಾಗಿ ಶ್ರಮಿಸಿದ ಹಾಗೂ ಲೋಕಸಭೆ ಚುನಾವಣೆ ದೃಷ್ಟಿಯನ್ನಿಟ್ಟುಕೊಂಡು ಪಕ್ಷಕ್ಕೆ ಲಾಭವಾಗುವಂತಹ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಆಯ್ಕೆ ಮಾಡುತ್ತದೆ ಎಂದು ಮೂಲಗಳು ಹೇಳಿವೆ.