ಪಕ್ಷ ಹೇಳಿದರೆ ಡಿಸಿಎಂ ಪಟ್ಟಬಿಡಲು ನಾವು ರೆಡಿ| ಸ್ಥಾನ ಪಲ್ಲಟವಾದರೆ ಬೇಸರವಿಲ್ಲ: ಅಶ್ವತ್ಥ್| ಪಕ್ಷದ ನಿರ್ಧಾರಕ್ಕೆ ನಾನು ಬದ್ಧ: ಕಾರಜೋಳ
ಬೆಂಗಳೂರು[ಡಿ.13]: ಸಚಿವ ಸಂಪುಟ ವಿಸ್ತರಣೆ ವೇಳೆ ತಮ್ಮ ಉಪಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಹಾಗೂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ಈಗ ಇರುವ ಉಪಮುಖ್ಯಮಂತ್ರಿ ಹುದ್ದೆ ರದ್ದಾಗುವ ಸಾಧ್ಯತೆಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗೆ ಸಂಬಂಧಿಸಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಇಬ್ಬರೂ ಈ ರೀತಿಯಾಗಿ ಉತ್ತರಿಸಿದ್ದಾರೆ.
undefined
ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಅಶ್ವತ್ಥನಾರಾಯಣ, ಸಚಿವ ಸಂಪುಟ ವೇಳೆ ತಮಗೆ ನೀಡಿರುವ ಉಪಮುಖ್ಯಮಂತ್ರಿ ಸ್ಥಾನವನ್ನು ವಾಪಸ್ ಪಡೆದರೂ ತಾವು ಬೇಸರ ಮಾಡಿಕೊಳ್ಳುವುದಿಲ್ಲ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ತಿಳಿಸಿದರು. ಉಪಚುನಾವಣೆಯಲ್ಲಿ 12 ಮಂದಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವ ಸಲುವಾಗಿ ತಮ್ಮ ಸ್ಥಾನ ಪಲ್ಲಟವಾದರೂ ಬೇಸರವಿಲ್ಲ. ರಾಜಕಾರಣದಲ್ಲಿ ಸೇಫ್ ರಿಸ್ಕ್ ಏನೂ ಇಲ್ಲ. ಮುಖ್ಯಮಂತ್ರಿಗಳಿಗೆ ಎಲ್ಲಾ ಅಧಿಕಾರ ಇರುತ್ತದೆ. ಅವರು ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ ಎಂದರು.
ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ ಹುದ್ದೆ ರದ್ದಾಗುವುದರ ಕುರಿತು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಏನೇ ಇದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹೈಕಮಾಂಡ್ ಜೊತೆಗೂಡಿಯೇ ನಿರ್ಣಯ ತೆಗೆದುಕೊಳ್ಳುತ್ತಾರೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧರಾಗಿರುತ್ತೇನೆ ಎಂದು ಹೇಳಿದರು.
ಇನ್ನು ಸಚಿವ ಸ್ಥಾನ ಹಂಚಿಕೆ ವೇಳೆ ಎಲ್ಲಾ ಪ್ರದೇಶಕ್ಕೆ ಸಮಾನವಾದ ಪ್ರಾಧಾನ್ಯತೆ ನೀಡಲಾಗುವುದು. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿ ನಿರ್ಣಯ ಮಾಡುತ್ತಾರೆ. ಅಲ್ಲಿಯವರೆಗೆ ಕಾಯಬೇಕು ಎಂದರು.