ಕೇಂದ್ರದಲ್ಲಿ ಜನರ ಸುಖ, ಶಾಂತಿ, ನೆಮ್ಮದಿ, ಸಹಬಾಳ್ವೆಗಾಗಿ ಕಾಂಗ್ರೆಸ್ ಪಕ್ಷವು ಶ್ರಮಿಸುತ್ತಿದ್ದು, ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಸಚಿವ ಕೆ.ಎಚ್.ಮುನಿಯಪ್ಪ
ಕೋಲಾರ(ಮಾ.09): ದೇವರು ಆಶೀರ್ವದಿಸಿದರೆ ಕೋಲಾರಕ್ಕೆ ಬರುತ್ತೇನೆ, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಲೋಕಸಭಾ ಚುನಾವಣೆಯಲ್ಲಿ ಬದ್ದತೆಯಿಂದ ಕೆಲಸ ಮಾಡಬೇಕಾಗಿರುವುದು ರಾಜಕೀಯ ಧರ್ಮವಾಗಿದೆ, ಒಟ್ಟಾಗಿ ಪಕ್ಷಕ್ಕಾಗಿ ದುಡಿದು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿರುವುದು ಪ್ರತಿಯೊಬ್ಬ ಕಾಂಗ್ರೆಸ್ಸಿಗನ ಜವಾಬ್ದಾರಿ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ನಗರದ ಸಾಯಿಬಾಬಾ ಮಂದಿರದಲ್ಲಿ ತಮ್ಮ ಬೆಂಬಲಿಗರು ಆಯೋಜಿಸಿದ್ದ ೭೬ನೇ ವರ್ಷದ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಜನರ ಸುಖ, ಶಾಂತಿ, ನೆಮ್ಮದಿ, ಸಹಬಾಳ್ವೆಗಾಗಿ ಕಾಂಗ್ರೆಸ್ ಪಕ್ಷವು ಶ್ರಮಿಸುತ್ತಿದ್ದು, ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
undefined
ಕಾಂಗ್ರೆಸ್ ಪಕ್ಷವು ಮಹತ್ತರ ಪಾತ್ರ ವಹಿಸಲಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನ ಬದ್ದ ಸರ್ಕಾರ ಬರಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು, ಪ್ರಾಣ ತ್ಯಾಗ, ಬಲಿದಾನದ ಮೂಲಕ ಹೋರಾಡಿ ತಂದು ಕೊಟ್ಟಿರುವ ಈ ದೇಶದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷದ ಕೈಗೆ ಆಡಳಿತದ ಚುಕ್ಕಾಣಿ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ದಲಿತ ಸಮುದಾಯವು ಪ್ರಾರಂಭದಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬರುತ್ತಿದೆ, ಕಾಂಗ್ರೆಸ್ ಪಕ್ಷದ ಸಚಿವ ಸಂಪುಟದಲ್ಲಿ ಸಮುದಾಯದ ೭ ಮಂದಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮಾನತೆ, ಸಾಮಾಜಿಕ ನ್ಯಾಯ ನೀಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಸ್ತುತ ದಲಿತ ಮುಖ್ಯಮಂತ್ರಿಯಾಗಬೇಕೆಂಬ ಪ್ರಶ್ನೆ ಉದ್ಬವಿಸಿಲ್ಲ, ಇವೆಲ್ಲವೂ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿವೆ ಅಷ್ಟೇ, ಹೊರತಾಗಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಸ್ವಷ್ಟಪಡಿಸಿದರು.
ಕೋಲಾರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ೭ ಬಾರಿ ಆಯ್ಕೆಯಾದ ನಂತರ ಕಾಂಗ್ರೆಸ್ ಪಕ್ಷವು ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಅವಕಾಶ ಕಲ್ಪಿಸಿ ಸಚಿವ ಸ್ಥಾನ ನೀಡಿದೆ, ಕೋಲಾರ ಲೋಕಸಭಾ ಸ್ಥಾನದ ಟಿಕೆಟ್‌ಗೆ ನಾನು ಅರ್ಜಿ ಸಲ್ಲಿಸಿಲ್ಲ, ಆದರೆ ನನ್ನ ಹೆಸರು ಚಾಲ್ತಿಯಲ್ಲಿದೆ, ಹೈಕಮಾಂಡ್ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ, ಇಲ್ಲದೆ ಹೋದರೂ ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣೆಯಲ್ಲಿ ಕೆಲಸ ನಿರ್ವಹಿಸುತ್ತೇನೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ವಿ.ಶ್ರೀನಿವಾಸ್ ಮಾತನಾಡಿ, ಕೆ.ಎಚ್.ಮುನಿಯಪ್ಪ ಕೋಲಾರ ಜಿಲ್ಲೆಯಲ್ಲಿ ೭ ಬಾರಿ ಸತತವಾಗಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎಂಬ ಬಿರುದಿಗೆ ಪಾತ್ರರಾಗಿದ್ದರು, ಸುಮಾರು ೩೦ ವರ್ಷಗಳ ಕಾಲ ಸಂಸದರಾಗಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ, ರಾಜಕೀಯವಾಗಿ ಅನೇಕ ಬೆಂಬಲಿಗರನ್ನು ಬೆಳೆಸಿದ್ದಾರೆ ಎಂದು ಹೇಳಿದರು.
ಇಂದು ತಮ್ಮ ೭೬ನೇ ಹುಟ್ಟು ಹಬ್ಬದ ಸಲುವಾಗಿ ಅನೇಕ ಕೆಲಸಗಳ ಒತ್ತಡದ ನಡುವೆಯೂ ನಮ್ಮೆಲ್ಲರ ಮನವಿ ಮೇರೆಗೆ ಕೋಲಾರಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅಭಿನಂದನೀಯ ವಿಷಯವಾಗಿದೆ ಎಂದರು.
ಇಂದು ಬೆಂಗಳೂರಿಗೆ ಉಪರಾಷ್ಟ್ರಪತಿಗಳು ಆಗಮಿಸುತ್ತಿದ್ದು, ಅವರನ್ನು ಬರ ಮಾಡಿಕೊಳ್ಳಲು ಸಚಿವರು ತೆರಳಬೇಕಾಗಿತ್ತು. ಅದರೆ ನಾವೆಲ್ಲಾ ಬರಲೇಬೇಕೆಂದು ಒತ್ತಡ ಹಾಕಿದ್ದರಿಂದ ಅವೆಲ್ಲವನ್ನೂ ಬದಿಗೆ ಸರಿಸಿ ಆಗಮಿಸಿರುವುದು ಸಂತಸದ ಸಂಗತಿಯಾಗಿದೆ, ನಗರದ ಪ್ರಮುಖ ಮಂದಿರ, ಮಸೀದಿ, ಚರ್ಚ್‌ಗಳಿಗೆ ಭೇಟಿ ನಂತರ ಸಾಯಿಬಾಬಾ ಮಂದಿರದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಂಪಲು ಹಂಚಿದರು.
ಮುನಿಯಪ್ಪನವರೇ ನಿಮ್ಮ ಅಕ್ಕಿ ಎಲ್ಲಿ?, ಅನ್ನಭಾಗ್ಯದ ರೈಸ್ ಎಲ್ಲಿ ಕೊಟ್ಟಿದ್ದೀರಿ: ಸಿ.ಟಿ.ರವಿ ಪ್ರಶ್ನೆ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಮೀನಾರಾಯಣ, ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಮುಖಂಡರಾದ ಜಯದೇವ್, ಪ್ರಸಾದ್‌ಬಾಬು, ಶ್ರೀಕೃಷ್ಣ, ಮಾವು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ದಳಸನೂರು ಗೋಪಾಲ್, ನಗರ ಅಧ್ಯಕ್ಷ ಪ್ರಸಾದ್ ಬಾಬು, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಉದಯಶಂಕರ್, ಮುರಳಿಗೌಡ, ಮಂಜುನಾಥ್, ತ್ಯಾಗರಾಜ್, ರಾಮಯ್ಯ, ಅತಾವುಲ್ಲಾ, ನಾಗರಾಜ್ ಇದ್ದರು,
ಹುಟ್ಟುಹಬ್ಬ: ಸಚಿವರ ಟೆಂಪಲ್ ರನ್..!:
ಕೋಲಾರದ ಕಾಂಗ್ರೆಸ್ ಮುಖಂಡರು ಹುಟ್ಟುಹಬ್ಬಕ್ಕೆ ಕೋಲಾರಕ್ಕೆ ಬರಲೇಬೇಕೆಂದು ಹಠ ಹಿಡಿದಿದ್ದರಿಂದ ಇಂದು ಕೋಲಾರದಲ್ಲಿ ಪ್ರವಾಸ ಹಮ್ಮಿಕೊಂಡಿದ್ದೇನೆ, ಕೊಂಡರಾಜನಹಳ್ಳಿ ಆಂಜನೇಯ ಸ್ವಾಮಿ ದೇವಾಲಯ, ದರ್ಗಾ, ಮಸೀದಿ, ಚರ್ಚ್‌ಗಳು ಸೇರಿ ಮಂದಿರ - ಮಸೀದಿಗಳಿಗೆ ಭೇಟಿ ನೀಡಿ ಲೋಕ ಕಲ್ಯಾಣಕ್ಕಾಗಿ ಮಳೆ, ಬೆಳೆಯಾಗಿ ಎಲ್ಲರಿಗೂ ಸಂತೋಷ, ಸಮೃದ್ಧಿ ದಯಪಾಲಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದೆ ಎಂದರು. ದೇವರು ಒಬ್ಬನೇ, ನಾಮ ಹಲವು ಎಂದು ನಂಬಿರುವೇನು. ಎಲ್ಲರೂ ಸಹೋದರತ್ವದ ಬಾಳ್ವೆ ನಡೆಸುವಂತಾಗಬೇಕು, ಶಾಂತಿ, ನೆಮ್ಮದಿಯ ಬಾಳ್ವೆಯಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದರು.