ಜನತೆ ಎಚ್ಚೆತ್ತುಕೊಳ್ಳದಿದ್ದರೆ ಪ್ರಜಾಪ್ರಭುತ್ವ ಧ್ವಂಸ: ಸಿಎಂ ಸಿದ್ದರಾಮಯ್ಯ

By Kannadaprabha News  |  First Published Dec 28, 2023, 8:36 PM IST

ಆದಿಮ ಸಾಂಸ್ಕೃತಿಕ ಕೇಂದ್ರ ಸಮಾಜವನ್ನು ಬದಲಾವಣೆ ಮಾಡುವ ಕೇಂದ್ರವಾಗಲಿ, ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಸರ್ಕಾರವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ವಿಚಾರದಲ್ಲಿ ಯಾವುದೇ ರಾಜೀಯಿಲ್ಲ, ಅಧಿಕಾರಕ್ಕಾಗಿ ಅಂಟಿಕೊಳ್ಳುವುದಿಲ್ಲ, ಪಟ್ಟಭದ್ರ ಹಿತಾಸಕ್ತಿ ಶಕ್ತಿಗಳಿಂದ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 


ಕೋಲಾರ (ಡಿ.28): ಆದಿಮ ಸಾಂಸ್ಕೃತಿಕ ಕೇಂದ್ರ ಸಮಾಜವನ್ನು ಬದಲಾವಣೆ ಮಾಡುವ ಕೇಂದ್ರವಾಗಲಿ, ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಸರ್ಕಾರವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ವಿಚಾರದಲ್ಲಿ ಯಾವುದೇ ರಾಜೀಯಿಲ್ಲ, ಅಧಿಕಾರಕ್ಕಾಗಿ ಅಂಟಿಕೊಳ್ಳುವುದಿಲ್ಲ, ಪಟ್ಟಭದ್ರ ಹಿತಾಸಕ್ತಿ ಶಕ್ತಿಗಳಿಂದ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ತೇರಹಳ್ಳಿ ಗ್ರಾಮ ಸಮೀಪದ ಶಿವಗಂಗೆಯಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಬುಧವಾರ ಆಯೋಜಿಸಿದ್ದ ಹುಣ್ಣಿಮೆ ಹಾಡು-೨೦೦ರ ಸಾಂಸ್ಕೃತಿ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಜನಪದ ಹಾಡುಗಳನ್ನು ಕೇಳಿದಾಗ, ನೃತ್ಯಗಳನ್ನು ನೋಡಿದಾಗ ಮೈನವಿರೇಳುತ್ತದೆ. ಈ ಸಂದರ್ಭದಲ್ಲಿ ಸಮಯ ಹೋಗುವುದು ಗೊತ್ತಾಗುವುದಿಲ್ಲ. ಆದಿಮ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಇದೇ ಮೊದಲು ಆಗಮಿಸಿದ್ದು, ಕಾರ್ಯಕ್ರಮಗಳು ಬಹಳ ಸಂತೋಷವನ್ನು ಉಂಟು ಮಾಡಿವೆ. ಬದುಕಿನ ಬಗ್ಗೆ ಇನ್ನೊಮ್ಮೆ ನೋಡತಕ್ಕಂತಹ ಪರಿಸ್ಥಿತಿ ಬಂದಿದೆ ಎಂದರು. ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಆದಿಮ ಕೇಂದ್ರದವರು ಜನರಲ್ಲಿ ಮನುಷ್ಯತ್ವ ಸ್ಥಾಪಿಸುವ ಕೆಲಸ ಮಾಡುತ್ತಿದೆ. ಹುಟ್ಟುವಾಗ ನಾವೆಲ್ಲರೂ ವಿಶ್ವಮಾನವರಾಗಿ, ಸಾಯುವಾಗ ಅಲ್ಪ ಮಾನವರಾಗುತ್ತೇವೆ, ಸಾಯುವಾಗ ವಿಶ್ವಮಾನವರಾಗಲು ಸಾಧ್ಯವಾಗದಿದ್ದರೂ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

Tap to resize

Latest Videos

ಕಾಂಗ್ರೆಸ್‌ 6ನೇ ಗ್ಯಾರಂಟಿಯಾಗಿ ತೆಂಗು ಬೆಳೆಗೆ ಪರಿಹಾರ ಘೋಷಿಸಿ: ಎಚ್.ಡಿ.ರೇವಣ್ಣ ಒತ್ತಾಯ

ಸಂವಿಧಾನದಲ್ಲಿ ಅಂಬೇಡ್ಕರ್ ಅವರು ಉದ್ದೇಶಗಳನ್ನು ಬಹಳ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರೂ ಮನುಷ್ಯನಾಗಿ ಬಾಳಬೇಕು. ಸಮಾಜದಲ್ಲಿ ಅಸಮಾನತೆಯು ಮನುಷ್ಯನ ಸ್ವಾರ್ಥದಿಂದ ನಿರ್ಮಾಣವಾಗಿದೆ. ಅವಕಾಶ ಸಿಕ್ಕಂತ ಜನ ಸಾರ್ಥಕ್ಕಾಗಿ ಸಮಾಜದ ಬಹುಸಂಖ್ಯಾತ ಜನರನ್ನು ಅವಕಾಶಗಳಿಂದ ವಂಚಿತರನ್ನಾಗಿ ಮಾಡಿದರು. ಸಮಾಜದಲ್ಲಿ ದುರ್ಬಲ ವರ್ಗಕ್ಕೆ ಸೇರಿದವರು, ಶೋಷಿತರು ದೂಷಣೆಗೆ ಒಳಗಾದರು. ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು, ಇದರಿಂದ ಅಸಮಾಧಾನತೆ ಸ್ವಾಭಾವಿಕವಾಗಿ ನಿರ್ಮಾಣವಾಯಿತು ಎಂದು ಕಳವಳ ವ್ಯಕ್ತಪಡಿಸಿದರು.

ಜನತೆ ಎಚ್ಚೆತ್ತುಕೊಳ್ಳದಿದ್ದರೆ ಪ್ರಜಾಪ್ರಭುತ್ವವನ್ನು ಧ್ವಂಸ ಮಾಡುವ ಪ್ರಯತ್ನವಾಗುತ್ತದೆ ಎಂದು ಎಚ್ಚರಿಸಿದ್ದರು. ನ್ಯೂನತೆಗಳನ್ನು ಈಡೇರಿಸಿದಾಗ ಜಾತಿ ರಹಿತ ಸಮಾಜ ನಿರ್ಮಾಣ ಸಾಧ್ಯ ಎಂದರು. ಆರ್ಥಿಕ, ಸಾಮಾಜಿಕ ಶಕ್ತಿ ದೊರೆಯದೇ ಇರುವುದರಿಂದ ಜಾತಿ ವ್ಯವಸ್ಥೆ ಬೇರೂರಿದೆ. ಪಟ್ಟಭದ್ರ ಹಿತಾಸಕ್ತಿಗಳು ಸೃಷ್ಟಿ ಮಾಡಿರುವ ವ್ಯವಸ್ಥೆಯೇ ಜಾತಿ. ಸಮಾಜ ಸುಧಾರಕರು, ಹೋರಾಟಗಾರರು ಬದಲಾವಣೆಗೆ ಪ್ರಯತ್ನ ಮಾಡಬೇಕು. ಇವನ್ಯಾರವ ಎಂಬುದು ಶಾಶ್ವತವಾಗಿಯೇ ಉಳಿದಿದೆ. ಆದಿಮ ಕೇಂದ್ರ ಈ ಪ್ರಯತ್ನಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.

ಅಧಿಕಾರಕ್ಕಾಗಿ ಅಂಟಿಕೊಂಡಿರುವ ಜನ ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ರಾಜೀಯಾಗುತ್ತಾರೆ. ಇದರಿಂದ ಬದಲಾವಣೆ ಕಾಣಲು ಸಾಧ್ಯವಿಲ್ಲ. ಸಾಮಾಜಿಕ ಪ್ರಜಾಪ್ರಭುತ್ವ ವ್ಯವಸ್ಥೆಯಿರಬೇಕು, ಸಮಾಜದಲ್ಲಿ ಪ್ರತಿಯೊಬ್ಬರಿಗೂ ರಾಜಕೀಯ, ಆರ್ಥಿಕ, ಸಾಮಾಜಿಕ ನ್ಯಾಯ ಸಿಗಬೇಕು. ಕಾಯಕ ಮಾಡುವವರು ಅವಕಾಶಗಳಿಂದ ವಂಚಿತರಾಗಿದ್ದಾರೆ. ಉತ್ಪಾದನೆಯಲ್ಲಿ ಇಲ್ಲದೆ ಇರುವವರು ಸಂಪತ್ತನ್ನು ಅನುಭವಿಸುತ್ತಿದ್ದಾರೆ.ಸಮ ಸಮಾಜ ನಿರ್ಮಾಣವಾಗದೆ ಇದ್ದರೆ ಶೋಷಿಸುವವರು ಶಾಶ್ವತವಾಗಿ ಇರುತ್ತಾರೆ. ಅಸಮಾನತೆಯನ್ನು ಹೋಗಲಾಡಿಸಲು ಸರ್ಕಾರವು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. 

ಈ ವಿಚಾರದಲ್ಲಿ ಯಾವುದೇ ರಾಜೀಯಿಲ್ಲ, ಅಧಿಕಾರಕ್ಕಾಗಿ ಅಂಟಿಕೊಳ್ಳುವುದಿಲ್ಲ, ಈ ದೇಶವು ಬಹುತ್ವದ ದೇಶ, ಬಹು ಭಾಷೆ, ಧರ್ಮ, ಸಂಸ್ಕೃತಿ, ಜಾತಿಗಳಿರುವ ದೇಶ, ಇವೆಲ್ಲವನ್ನು ಉಳಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಸಂವಿಧಾನ, ಬಹು ಸಂಸ್ಕೃತಿಯು ಅಪಾಯದಲ್ಲಿದೆ, ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿದೆ. ಸಂವಿಧಾನ ಉಳಿಯದಿದ್ದರೆ ಶೋಷಿತರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಇತಿಹಾಸ ಗೊತ್ತಿಲ್ಲದವರು ಭವಿಷ್ಯ ರೂಪಿಸಲಾಗುವುದಿಲ್ಲ, ಇತಿಹಾಸದ ಪಾಠ ಕಲಿತು ಸಮಾಜದಲ್ಲಿ ಸರಿಯಾದ ದಾರಿಯಲ್ಲಿ ಸಾಗಬೇಕು, ಆದಿಮ ಪ್ರಯತ್ನಕ್ಕೆ ಸರ್ಕಾರ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.

ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಆದಿಮ ಸಾಂಸ್ಕೃತಿಕ ಕೇಂದ್ರವು ನೆಲದ ಸಂಸ್ಕೃತಿಯನ್ನು ಬೆಳೆಸಿಕೊಂಡು ಬರುವಲ್ಲಿ ತನ್ನದೆಯಾದ ಛಾಪು ಮೂಡಿಸಿದೆ. ಬೆಟ್ಟದ ಮೇಲಿರುವ ಈ ಕೇಂದ್ರವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಪ್ರಜಾಪ್ರಭುತ್ವ, ಸಂವಿಧಾನ ಅಪಾಯದಂಚಿನಲ್ಲಿದೆ. ರಾಜಕೀಯ ಚಿಂತನೆಗಳು ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಯಾರೊಂದಿಗೂ ರಾಜೀಯಾಗದೆ ಪ್ರಭುತ್ವದ ರಕ್ಷಣೆಗೆ ಒತ್ತು ನೀಡಿದ್ದಾರೆ. ಜನರ ಜೀವವನ್ನು ಉತ್ಕೃಷ್ಟಗೊಳಿಸುವ ಪ್ರಯತ್ನ ಸಾಂಸ್ಕ್ರತಿಕತೆಯ ಮೂಲಕ ಆಗಲಿ ಎಂದು ಆಶಿಸಿದರು.

ಆದಿಮ ಸಾಂಸ್ಕೃತಿ ಕೇಂದ್ರದ ಅಧ್ಯಕ್ಷ ಎನ್.ಮುನಿಸ್ವಾಮಿ ಮಾತನಾಡಿ, ಒಂದು ರುಪಾಯಿ ಶಕ್ತಿ ಏನು ಎಂಬುದನ್ನು ಕಂಡುಕೊಂಡಿದ್ದೇವೆ, ಸಾಂಸ್ಕೃತಿಕ ಕೇಂದ್ರದ ಅಭಿವೃದ್ಧಿಗಾಗಿ ಸಾಕಷ್ಟು ಜನರು ಶ್ರಮಿಸಿದ್ದಾರೆ, ಕಾಲಕ್ಷೇಪಕ್ಕೆ ಕಟ್ಟಿದ ಕೇಂದ್ರವಲ್ಲ ಎಂದು ಹೇಳಿದರು. ಕಲೆಗೆ ಮತ್ತೊಂದು ಪರ್ಯಯವಿಲ್ಲ, ಸಾಹಿತ್ಯ, ಸಂಗೀಕ, ಜನಪದಕ್ಕೆ ತನ್ನದೆಯಾದ ಶಕ್ತಿಯಿದೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಲ್ಲಿಂದಲೇ ಪ್ರಯತ್ನಗಳು ನಡೆಯುತ್ತಿದ್ದು, ಆಘೋಷಿತ ತುರ್ತು ಸಂದರ್ಭವನ್ನು ಎದುರಿಸುತ್ತಿದ್ದೇವೆ ಎಂದು ತಿಳಿಸಿದರು. ಪ್ರೊ.ಬೊ.ಗಂಗಾಧರ್ ರಚಿತ ‘ಅಕ್ಷರ ಲೋಕದಲ್ಲಿ ಹಂಗಿಲ್ಲದ ಅಲೆಮಾರಿ’ ಹಾಗೂ ‘ಆದಿಮ ನೆಲ ಸಂಸ್ಕೃತಿ ನಡೆಯ ಹೆಜ್ಜೆಗಳು’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. 

ಮೋದಿ ಗೆಲ್ಲಿಸಿ -ಭಾರತ ಉಳಿಸಿ ಅಭಿಯಾನಕ್ಕೆ ಮಾಜಿ ಸಿಎಂ ಎಚ್‌ಡಿಕೆಗೆ ಆಹ್ವಾನ

ಆಂದ್ರ ಪ್ರದೇಶದ ತಪ್ಪೆಟಗುಳ್ಳು, ಶ್ರೀಕಾಕುಳಂ ಹಾಗೂ ತಮಿಳುನಾಡಿ ಕಾವಡಿ, ನಯಾಂಡಿ ಮೇಳ, ನಾಗಪಟ್ನಂ ಸಾಂಸ್ಕೃತಿಕ ಪ್ರದರ್ಶನ ನಡೆಯಿತು. ಸಚಿವರಾದ ಡಾ.ಎಂ.ಸಿ.ಸುಧಾಕರ್, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೊತ್ತೂರು ಜಿ.ಮಂಜುನಾಥ್, ಕೆ.ವೈ.ನಂಜೇಗೌಡ, ಮಾಜಿ ಸಚಿವರಾದ ಕೆ.ಶ್ರೀನಿವಾಸಗೌಡ, ಎಚ್.ನಾಗೇಶ್, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಐಜಿಪಿ ರವಿಕಾಂತೇಗೌಡ, ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿ.ಪಂ ಸಿಇಒ ಪದ್ಮ ಬಸವಂತಪ್ಪ, ಎಸ್ಪಿ ಎಂ.ನಾರಾಯಣ, ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮುನಿಸ್ವಾಮಿ ಇದ್ದರು.

click me!