‘ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ. ಪೊಲೀಸ್ ಮಹಾನಿರ್ದೇಶಕರೇ ಮಹಿಳೆಯೊಬ್ಬರಿಂದ ದೂರು ಬರೆಸಿಕೊಂಡಿದ್ದಾರೆ. ಇಂತಹ ನೀಚಗೆಟ್ಟ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ’ ಎಂದು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆ (ಜು.17): ‘ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ. ಪೊಲೀಸ್ ಮಹಾನಿರ್ದೇಶಕರೇ ಮಹಿಳೆಯೊಬ್ಬರಿಂದ ದೂರು ಬರೆಸಿಕೊಂಡಿದ್ದಾರೆ. ಇಂತಹ ನೀಚಗೆಟ್ಟ ಸರ್ಕಾರವನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ’ ಎಂದು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ಮಹರ್ಷಿ ವಾಲ್ಮೀಕಿ ನಿಗಮದ ಹಗರಣದ ಕುರಿತ ಚರ್ಚೆ ವೇಳೆ ವಿಪಕ್ಷ ನಾಯಕ ಆರ್. ಅಶೋಕ್, ಎಸ್‌ಐಟಿ ಕಾರ್ಯವೈಖರಿ ಬಗ್ಗೆ ಟೀಕಿಸುವ ವೇಳೆ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಪ್ರಕರಣವನ್ನು ಉಲ್ಲೇಖಿಸಿದರು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್‌ಐಟಿ ರೇವಣ್ಣ ಅವರನ್ನು 2 ದಿನಗಳಲ್ಲಿ ಬಂಧಿಸಿತು.
ಅಲ್ಲದೆ, ಭವಾನಿ ರೇವಣ್ಣ ಅವರ ಬಂಧನಕ್ಕೂ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ನಡೆದ 30 ದಿನಗಳಾದರೂ ಆರೋಪಿದ ಸಚಿವರನ್ನು ವಿಚಾರಣೆಯನ್ನೂ ನಡೆಸಲಿಲ್ಲ. ಇದು ಎಸ್‌ಐಟಿ ಕಾರ್ಯವೈಖರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್, ಹಾಗಾದರೆ ಮಹಿಳೆಯರ ಮಾನ ಹರಾಜು ಹಾಕಿರುವ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದಿತ್ತೇ? ಪ್ರಜ್ವಲ್ ರೇವಣ್ಣ ಪ್ರಕರಣ ಗಂಭೀರವಾಗಿರಲಿಲ್ಲವೇ ಎಂದು ಪ್ರಶ್ನಿಸಿದರು. ಅವರಿಗೆ ಕಾಂಗ್ರೆಸ್‌ನ ಇತರ ಶಾಸಕರೂ ಬೆಂಬಲಿಸಿದ್ದಲ್ಲದೆ ವಿಪಕ್ಷ ನಾಯಕರ ವಿರುದ್ಧ ಮುಗಿಬಿದ್ದರು.
ಕಾಂಗ್ರೆಸ್ ಶಾಸಕರ ಮಾತಿಗೆ ಸಿಟ್ಟಾದ ಎಚ್.ಡಿ. ರೇವಣ್ಣ ಎದ್ದು ನಿಂತು, ‘ನನ್ನ ಮಗ ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಿ. ಅದಕ್ಕೆ ನಾನು ಏನೂ ಹೇಳುವುದಿಲ್ಲ. ನಾನು 25 ವರ್ಷಗಳಿಂದ ಶಾಸಕನಾಗಿದ್ದೇನೆ. 45 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದೇನೆ. ಆದರೆ, ಇಂತಹ ನೀಚಗೆಟ್ಟ ಸರ್ಕಾರವನ್ನು ನಾನು ನೋಡಿಲ್ಲ. ಅಲ್ಲದೆ, ನನ್ನ ಮಗನ ವಿಚಾರದಲ್ಲಿ ಪೊಲೀಸ್ ಮಹಾನಿರ್ದೇಶಕರೇ ಮಹಿಳೆಯೊಬ್ಬರಿಂದ ದೂರು ಬರೆಸಿಕೊಂಡಿದ್ದಾರೆ. ಆತ ಪೊಲೀಸ್ ಮಹಾನಿರ್ದೇಶಕನಾಗಿರಲು ಅನ್‌ಫಿಟ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಸರ್ಕಾರ ಮತ್ತು ಅಧಿಕಾರಿಗಳ ಮೇಲೆ ಸುಮ್ಮನೆ ಆರೋಪ ಮಾಡಲಾಗುತ್ತಿದೆ. ಅವರಿಗೆ ಈ ವಿಚಾರವಾಗಿ ಚರ್ಚೆ ಮಾಡಬೇಕೆಂದಿದ್ದರೆ ಸಭಾಧ್ಯಕ್ಷರಿಗೆ ಅರ್ಜಿ ಸಲ್ಲಿಸಲಿ. ನಾವೂ ಪ್ರಕರಣದ ಬಗ್ಗೆ ವಿವರ ನೀಡುತ್ತೇವೆ ಎಂದರು.
ತಮಿಳುನಾಡಿಗೆ ನಿತ್ಯ 1.5 ಟಿಎಂಸಿ ಕಾವೇರಿ ನೀರು: ಡಿ.ಕೆ.ಶಿವಕುಮಾರ್
ರಾಜ್ಯದಲ್ಲಿರುವುದು ಎಸ್‌ಎಸ್ಐಟಿ: ಪ್ರಮುಖ ಪ್ರಕರಣಗಳಿಗೆ ಸಂಬಂಧಿಸಿದಂತೆ ರಚಿಸಲಾಗುವ ಎಸ್‌ಐಟಿ ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡುತ್ತಿವೆ ಎಂದು ಆರ್. ಅಶೋಕ್ ಆರೋಪಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಬಿಜೆಪಿಯ ಸುರೇಶ್ ಕುಮಾರ್, ರಾಜ್ಯದಲ್ಲಿ ರಚನೆಯಾಗುವುದು ಎಸ್‌ಐಟಿಯಲ್ಲ ಬದಲಿಗೆ ಎಸ್‌ಎಸ್‌ಐಟಿ ರಚನೆಯಾಗುತ್ತದೆ. ಸಿದ್ದರಾಮಯ್ಯ, ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಂ ರಚಿಸಲಾಗುತ್ತಿದೆ ಎಂದು ವ್ಯಂಗ್ಯವಾಡಿದರು. ಅದನ್ನು ಆಕ್ಷೇಪಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಸುಮ್ಮನೇ ಏನೋ ಹೇಳಬೇಕೆಂದು ಹೇಳುವುದಲ್ಲ. ಸುರೇಶ್ ಕುಮಾರ್ ಅವರು ಹೇಳಿರುವುದನ್ನು ಕಡತದಿಂದ ತೆಗೆಸುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿದರು.