ಮುಡಾ ಕೇಸ್‌ ಸಿಬಿಐಗೆ ವಹಿಸಿದ್ರೆ ಸಿಎಂ ಸಿದ್ದರಾಮಯ್ಯ ಜೈಲಿಗೆ: ಯಡಿಯೂರಪ್ಪ

By Kannadaprabha News  |  First Published Nov 9, 2024, 7:19 AM IST

ಮುಡಾ ಹಗರಣವನ್ನು ಲೋಕಾಯುಕ್ತದಿಂದ ಸಿಬಿಐ ತನಿಖೆಗೆ ವಹಿಸಬೇಕು, ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹೇಳಿದರು. 
 


ಸಂಡೂರು (ನ.09): ಮುಡಾ ಹಗರಣವನ್ನು ಲೋಕಾಯುಕ್ತದಿಂದ ಸಿಬಿಐ ತನಿಖೆಗೆ ವಹಿಸಬೇಕು, ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ಜೈಲಿಗೆ ಹೋಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹೇಳಿದರು. ಸಂಡೂರು ತಾಲೂಕಿನ ವಿವಿಧೆಡೆ ಶುಕ್ರವಾರ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಪರ ಪ್ರಚಾರ ನಡೆಸಿ, ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಹಗಲು ದರೋಡೆಯಲ್ಲಿ ಮುಳುಗಿದೆ. ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು. ಸರ್ಕಾರದ ಖಜಾನೆಯ ಲೂಟಿಯಲ್ಲಿ ತೊಡಗಿರುವ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ಯಾವ ನೈತಿಕತೆ ಉಳಿಸಿಕೊಂಡಿಲ್ಲ.

ಮುಡಾ ಹಗರಣ ಈಗಾಗಲೇ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಸಿಬಿಐ ತನಿಖೆ ಆಗುವುದರಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಲ್ಲ ನಾಳೆ ರಾಜೀನಾಮೆ ನೀಡಿ ಜೈಲಿಗೆ ಹೋಗುವುದು ನಿಶ್ಚಿತ ಎಂದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನ ನೀಡಿದ ತೆರಿಗೆ ಹಣವನ್ನು ಲೂಟಿ ಮಾಡುತ್ತಾ, ಜನ ಹಿತವನ್ನು ಮರೆಯುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ನೀರಾವರಿ ಯೋಜನೆಗಳು ನಿಂತಿವೆ. ವಿದ್ಯುತ್ ದರ ಜಾಸ್ತಿಯಾಗಿದೆ. ಕಿಸಾನ್ ಸಮ್ಮಾನ್ ಸಹಾಯಧನಕ್ಕೆ ನಮ್ಮ ಸರ್ಕಾರ ನೀಡುತ್ತಿದ್ದ 4000 ರು. ಹಣವನ್ನು ಈಗಿನ ರಾಜ್ಯ ಸರ್ಕಾರ ನಿಲ್ಲಿಸಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ ಎಂದು ಟೀಕಿಸಿದರು.

Tap to resize

Latest Videos

undefined

ಇನ್ನೂ ಮೂರೂವರೆ ವರ್ಷ ನಾನೇ ಸಿಎಂ: ಸಿಬಿಐ, ಇ.ಡಿ, ಐಟಿ ಬಳಸಿ ನನ್ನ ವಿರುದ್ಧ ಷಡ್ಯಂತ್ರ ಎಂದ ಸಿದ್ದರಾಮಯ್ಯ

ಚನ್ನಪಟ್ಟಣ ಜನರು ಕಾಂಗ್ರೆಸ್ ಗೆ ತಕ್ಕ ಶಾಸ್ತಿ ಮಾಡಬೇಕು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ನಿರಂತರವಾಗಿ ಭ್ರಷ್ಟಾಚಾರದಲ್ಲಿ ಮುಳುಗಿ ಜನರ ಹಿತವನ್ನು ಮರೆತಿದೆ. ಹೀಗಾಗಿ ಚನ್ನಪಟ್ಟಣ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗುಡುಗಿದರು. ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯ ಅಂಬಾಡಹಳ್ಳಿ ಮತ್ತು ಸೋಗಾಲ ಗ್ರಾಮಗಳಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಅತ್ಯಧಿಕ ಬಹುಮತದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ಈ ಹಿಂದೆ ನಾನು ಮತ್ತು ಕುಮಾರಸ್ವಾಮಿ ಅವರು ಸೇರಿ ಸರ್ಕಾರ ಮಾಡಿ ಅತ್ಯುತ್ತಮ ಆಡಳಿತ ನೀಡಿದ್ದೆವು. ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದು ಹೆಣ್ಣುಮಕ್ಕಳ ಕಲ್ಯಾಣಕ್ಕೆ ಉತ್ತಮ ಕಾರ್ಯಕ್ರಮ ಜಾರಿಗೆ ತಂದಿದ್ದೆವು. ನಿಮ್ಮ ಮನೆಯಲ್ಲಿ ಹುಟ್ಟುವ ಹೆಣ್ಣು ಮಗಳು ಹದಿನೆಂಟು ವರ್ಷ ವಯಸ್ಸಿಗೆ ಬರುವ ಹೊತ್ತಿಗೆ ಹತ್ತಾರು ಲಕ್ಷ ರುಪಾಯಿ ಹಣ ಸಿಗುತ್ತಿತ್ತು. ಆ ಮಕ್ಕಳು ಗೌರವ, ಸ್ವಾಭಿಮಾನದಿಂದ ಬಾಳಿ ಬದುಕುವಂತಹ ಕಾರ್ಯಕ್ರಮ ಮಾಡಿದ್ದೆವು ಎಂದು ಹೇಳಿದರು.

ಶಾಲೆಗೆ 25 ಎಕರೆ ಕೊಟ್ಟಿದ್ದೇನೆ, ಎಚ್‌ಡಿಕೆ 1 ಗುಂಟೆ ಏನಾದರೂ ದಾನ ಮಾಡಿದ್ದಾರಾ?: ಡಿಕೆಶಿ

ಶಾಲೆಗೆ ತೆರಳುವ ಹೆಣ್ಣು ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾನು, ಕುಮಾರಸ್ವಾಮಿ ಸೇರಿ ಉಚಿತ ಬೈಸಿಕಲ್ ಯೋಜನೆ ಜಾರಿ ಮಾಡಿದ್ದೆವು. ಅಷ್ಟೇ ಅಲ್ಲ, ಸಂಧ್ಯಾ ಸುರಕ್ಷಾ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ನಾವಿಬ್ಬರೂ ಜಾರಿ ಮಾಡಿದ್ದೆವು. ಸಮಾಜಕ್ಕೆ ಅವೆಲ್ಲ ಉಪಯೋಗ ಆಗಿವೆ.  ಕೇಂದ್ರ ಸರ್ಕಾರ ರೈತ ಕುಟುಂಬಕ್ಕೆ ಹತ್ತು ಸಾವಿರ ರುಪಾಯಿ ಕೊಟ್ಟರೆ, ಅದಕ್ಕೆ ಆರು ಸಾವಿರ ರುಪಾಯಿ ಸೇರಿಸಿ ಹದಿನಾರು ಸಾವಿರ ರುಪಾಯಿ ಕೊಡುತ್ತಿದ್ದೆವು. ನಿಮ್ಮೆಲ್ಲರ ಅಭಿವೃದ್ಧಿಗಾಗಿ ನಾನು, ಕುಮಾರಸ್ವಾಮಿ ಶಕ್ತಿಮೀರಿ ಕೆಲಸ ಮಾಡಿದ್ದೇವೆ. ಇದನ್ನೆಲ್ಲ ಜನತೆ ಮರೆಯಬಾರದು ಎಂದು ಯಡಿಯೂರಪ್ಪ ಮನವಿ ಮಾಡಿದರು.

click me!