
ಕೋಲಾರ/ಶ್ರೀನಿವಾಸಪುರ(ನ.23): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ನೀಡುವ ಮುಕ್ತ ಅವಕಾಶಗಳೂ ನಮ್ಮ ಪಕ್ಷದಲ್ಲಿ ಇವೆ. ದಲಿತರು ಹಾಗೂ ಮಹಿಳೆಯರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲೂ ನಾನು ಸಿದ್ಧನಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ವೇಳೆ ಮಂಗಳವಾರ ಮಾತನಾಡಿ, ದಲಿತ ಉಪ ಮುಖ್ಯಮಂತ್ರಿ ಎಂಬುದು ದಲಿತರ ಮತ ಪಡೆಯಲು ಮಾಡಿದ ಘೋಷಣೆ ಅಲ್ಲ. ಇದು ಸ್ವಯಂಪ್ರೇರಣೆಯಿಂದ ಮಾಡಿದ ಘೋಷಣೆಯೂ ಅಲ್ಲ. ದಲಿತ ಸಮುದಾಯದ ಯುವಕನೊಬ್ಬ ಆತ ಎದುರಿಸಿರುವ ಸಮಸ್ಯೆ ಹೇಳಿಕೊಂಡ. ಎಲ್ಲಾ ರಾಜಕೀಯ ಪಕ್ಷಗಳೂ ದಲಿತರನ್ನು ಅಸಡ್ಡೆಯಿಂದ ನೋಡುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದ. ಹಾಗೆಯೇ ಮಹಿಳೆಯರ ಕಷ್ಟಗಳನ್ನು ಯಾವುದೇ ಸರ್ಕಾರ ಆಲಿಸುತ್ತಿಲ್ಲ. ಈ ಕಾರಣಕ್ಕೆ ಮಹಿಳೆಯರ ರಕ್ಷಣೆಗಾಗಿ ಅನಶ್ಯವಾದರೆ ಉಪಮುಖ್ಯಮಂತ್ರಿ ಹುದ್ದೆ ನೀಡಲೂ ಸಿದ್ಧ ಎಂದರು.
ವಿಧಾನಸಭಾ ಸಮರಕ್ಕೆ ಜೆಡಿಎಸ್ ಸಜ್ಜು: 'ಪಂಚರತ್ನ'ವೇ ಗೆಲುವಿಗೆ ಪಂಚಾಮೃತ
ಕುಮಾರಸ್ವಾಮಿ ದೆಹಲಿಗೆ ಹೋದರೆ ತಾವೇ ಮುಖ್ಯಮಂತ್ರಿ ಆಗಬಹುದೆಂದು ಸಿ.ಎಂ. ಇಬ್ರಾಹಿಂ ಕೂಡ ಹೇಳಿದ್ದಾರೆ. ಈ ರೀತಿಯ ಚರ್ಚೆಗೆ ಅವಕಾಶ ಇರುವುದು ನಮ್ಮ ಪಕ್ಷದಲ್ಲಿ ಮಾತ್ರ ಎಂದರು. ಸಿದ್ದು, ರಮೇಶ್ ಕುಮಾರ್ ಟೀಂ ಕಾರಣ: ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಂಡ ಕಾರಣ ಎಂದು ಕುಮಾರಸ್ವಾಮಿ ಆರೋಪಿಸಿದರು. ಕೋಲಾರದಲ್ಲೂ ಪಕ್ಷದ ವರಿಷ್ಠರ ಸೂಚನೆ ಧಿಕ್ಕರಿಸಿ ಕಾಂಗ್ರೆಸ್‌ನ ಹಿರಿಯ ದಲಿತ ಮುಖಂಡ ಮುನಿಯಪ್ಪರನ್ನು ಸೋಲಿಸಿದರು. ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಚಿತಾವಣೆಯಿಂದ ನಾನು ಅಧಿಕಾರ ಕಳೆದುಕೊಳ್ಳುವಂತಾಯಿತು ಎಂದು ಕಿಡಿಕಾರಿದರು.
ಇಂದು ಚಿಕ್ಕಬಳ್ಳಾಪುರಕ್ಕೆ ಪ್ರವೇಶ
ಚಿಕ್ಕಬಳ್ಳಾಪುರ: ಜೆಡಿಎಸ್ 123 ಸೀಟುಗಳ ಗುರಿಯೊಂದಿಗೆ ರಾಜ್ಯಾದ್ಯಂತ ನಡೆಸುತ್ತಿರುವ ಪಂಚರತ್ನ ರಥಯಾತ್ರೆ ಕೋಲಾರದ ಪ್ರವಾಸ ಮುಗಿಸಿ ಬುಧವಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರವೇಶಿಸಲಿದೆ. ನ.23 ರಿಂದ 27ರ ವರೆಗೂ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದ್ದು ಬುಧವಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಯೋಗಿ ನಾರೇಯಣ ಮಠದಲ್ಲಿ ವಿಶೇಷ ಪೂಜೆ ನೆರವೇರಿಸಿ ರಥಯಾತ್ರೆಗೆ ಚಾಲನೆ ಸಿಗಲಿದೆ. ಮಂಗಳವಾರ ಕೋಲಾರ ತಾಲೂಕಿನ ಗೌನಿಪಲ್ಲಿಯ ನಕ್ಕಲಘಟ್ಟದಲ್ಲಿ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.