ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಅ.9) : 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಮಿಷನ್ ಗುರಿ ಹೊಂದಿದೆ. ಈ ಗುರಿ ಮುಟ್ಟಲು ಬಿಜೆಪಿ ಹೈಕಮಾಂಡ್ ಇದೇ ತಿಂಗಳು ಅಂದ್ರೆ ಅಕ್ಟೋಬರ್ 11ರಂದು ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗಿಲ್ಲೇಸೂಗೂರು ಗ್ರಾಮದಿಂದ ಜನ ಸಂಕಲ್ಪ ಯಾತ್ರೆ ಶುರು ಮಾಡಲು ಸಕಲ ಸಿದ್ಧತೆ ನಡೆಸಿದೆ. ಅದರ ಭಾಗವಾಗಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಜೊತೆಗೆ ಕ್ಷೇತ್ರದ ಮಾಜಿ ಶಾಸಕರು ಹಾಗೂ ಹಾಲಿ ಬಿಜೆಪಿ ಶಾಸಕರು ಮತ್ತು ಜಿಲ್ಲೆಯ ಬಿಜೆಪಿಯ ಹಿರಿಯರ ಮುಖಂಡರ ನೇತೃತ್ವದಲ್ಲಿ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಯಿತು.
undefined
Raichuru Politics: ಸಿಂಧನೂರು 'ಕೈ' ಟಿಕೆಟ್ ಗಾಗಿ ತೆರೆಮರೆಯಲ್ಲಿ ಭಾರೀ ಕಸರತ್ತು
ರಾಯಚೂರು(Raichur) ನಗರದ ಖಾಸಗಿ ಹೋಟೆಲ್ ನಲ್ಲಿ ರಾಜ್ಯ ಬಿಜೆಪಿ ಎಸ್ ಟಿ ಮೋರ್ಚಾ ಅಧ್ಯಕ್ಷ ತಿಪ್ಪರಾಜು ಹವಾಲ್ದಾರ್(tipparaju hawaldar) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹತ್ತಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯ್ತು. ಅದರ ಜೊತೆಗೆ ಬಿಜೆಪಿ(BJP) ಜನ ಸಂಕಲ್ಪ ಯಾತ್ರೆ(Janasankalpa Yatre)ಗೆ ಜನರನ್ನು ಕರೆದುಕೊಂಡು ಬರುವ ಟಾರ್ಗೆಟ್ ಸಹ ಕಾರ್ಯಕರ್ತರಿಗೆ ನೀಡಲಾಯ್ತು.
ಮೂರು ಪಕ್ಷಗಳಿಗೂ ಗಿಲ್ಲೇಸೂಗೂರು ಗ್ರಾಮ ಹಾಟ್ ಸ್ಪಾಟ್:
ರಾಯಚೂರು(Raichur) ತಾಲೂಕಿನ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಗಿಲ್ಲೇಸೂಗೂರು ಗ್ರಾಮವೂ ಕಾಂಗ್ರೆಸ್(Congress), ಬಿಜೆಪಿ(BJP) ಮತ್ತು ಜೆಡಿಎಸ್(JDS) ಪಕ್ಷಗಳಿಗೆ ಈ ಗ್ರಾಮ ಹಾಟ್ ಸ್ಪಾಟ್ ಆಗಿದೆ. ಮೊನ್ನೆಯಷ್ಟೇ ಜೆಡಿಎಸ್ ಸಮಾವೇಶ ನಡೆಯಿತು. ಅದೇ ಸ್ಥಳದಲ್ಲೇ ಈಗ ಬಿಜೆಪಿ ಜನ ಸಂಕಲ್ಪ ಯಾತ್ರೆಯ ಕಾರ್ಯಕ್ರಮ ಆಯೋಜನೆ ಮಾಡಲು ಪ್ಲಾನ್ ಮಾಡಲಾಗಿದೆ. ರಾಹುಲ್ ಗಾಂಧಿ(Rahul Gandhi) ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ(Bharat Jodo Yatra)ಯೂ ಇದೇ ಗ್ರಾಮದ ಮುಖಾಂತರ ರಾಯಚೂರು ಜಿಲ್ಲೆ ಪ್ರವೇಶ ಮಾಡಲಿದೆ.
ಈ ಗಿಲ್ಲೇಸೂಗೂರು ಗ್ರಾಮವೂ ಶ್ರೀ ರಾಘವೇಂದ್ರ ಸ್ವಾಮಿಗಳು ಓಡಾಟ ಮಾಡಿದ ಸ್ಥಳವಾಗಿದ್ದು, ಈ ಗ್ರಾಮದಿಂದ ಯಾವುದೇ ಕಾರ್ಯಕ್ರಮ ಶುರು ಮಾಡಿದ್ರೆ, ಶುಭವಾಗುತ್ತೆ ಎಂಬ ನಂಬಿಕೆ ಮೂರು ಪಕ್ಷಗಳ ಸ್ಥಳೀಯ ಮುಖಂಡರಲ್ಲಿ ಇದೆ. ಹೀಗಾಗಿ ಮೂರು ಪಕ್ಷಗಳಿಗೆ ಗಿಲ್ಲೇಸೂಗೂರು ಗ್ರಾಮ ಹಾಟ್ ಸ್ಪಾಟ್ ಆಗಿದೆ.
ಜನ ಸಂಕಲ್ಪ ಯಾತ್ರೆ; ಬಲ ಪ್ರದರ್ಶನಕ್ಕೆ ವೇದಿಕೆ :
ಅಕ್ಟೋಬರ್ 11ರಿಂದ ಡಿಸೆಂಬರ್ 25ರವರೆಗೆ ರಾಜ್ಯದ 52 ಕಡೆಯಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆ ಮಾಡಲು ಪ್ಲಾನ್ ಮಾಡಿಕೊಂಡಿದೆ. ಪ್ಲಾನ್ ಪ್ರಕಾರ 52 ವಿಧಾನಸಭಾ ಕ್ಷೇತ್ರದ ಲೆಕ್ಕಾಚಾರ ನೋಡುವುದಾದರೇ 30 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದಾರೆ. 18 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದು ಆ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಸೆಳೆಯಲು ಆ ಕ್ಷೇತ್ರದಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆ ನಡೆಯಲಿದ್ದು, 4 ಜೆಡಿಎಸ್ ಶಾಸಕರ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅಳಿಸಲು ಬಿಜೆಪಿ ಯೋಜನೆ ಸಿದ್ಧಪಡಿಸಿಕೊಂಡಿದೆ. ಇಂತಹ ಮಹತ್ವಾಕಾಂಕ್ಷಿ ಯಾತ್ರೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಶುರುವಾಗಿದ್ದು, ರಾಯಚೂರು ಬಿಜೆಪಿ ಮುಖಂಡರಿಗೆ ಹೊಸ ಉತ್ಸಾಹ ಬಂದಂತೆ ಆಗಿದೆ. ಹೀಗಾಗಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗಿಲ್ಲೇಸೂಗೂರು ಗ್ರಾಮದಲ್ಲಿ ನಡೆಯುವ ಜನ ಸಂಕಲ್ಪ ಯಾತ್ರೆಯ ಸಮಾವೇಶ ಯಶಸ್ವಿಗೊಳಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ಇಡೀ ಕರ್ನಾಟಕವೇ ನಮ್ಮತ್ತ ತಿರುಗಿ ನೋಡುವಂತೆ ಕಾರ್ಯಕ್ರಮ ಸಂಘಟಿಸಿ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ತನ್ನ ಬಲ ಪ್ರದರ್ಶನಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದೆ. ಇದಕ್ಕೆ ಎಲ್ಲಾ ಕಾರ್ಯಕರ್ತರು ಸಾಥ್ ನೀಡಬೇಕೆಂದು ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಕರೆ ನೀಡಿದ್ದರು.
ಯಾವ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿದೆ ಜನ ಸಂಕಲ್ಪ ಯಾತ್ರೆ:
ರಾಜ್ಯದ 52 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆ ಮಾಡಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಆರಂಭಗೊಂಡ ಜನ ಸಂಕಲ್ಪ ಯಾತ್ರೆ ವಿಜಯನಗರ, ಕುಷ್ಟಗಿ, ಹೂವಿನಹಡಗಲಿ,ಸಿರುಗುಪ್ಪ, ಹುಮನಾಬಾದ್, ಔರಾದ್, ಸುರುಪೂರ, ಸೇಡಂ, ಚಿತ್ತಾಪುರ, ಆಳಂದ, ನಿಪಾಣಿ, ರಾಯಭಾಗ್, ಶಿರಹಟ್ಟಿ, ಕುಂದಗೋಳ, ಹಾನಗಲ್, ಬ್ಯಾಡಗಿ, ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ, ತರಿಕೇರೆ, ಸೊರಬ, ಬಿದನೂರು ( Byndoor), ಕಪು, ಶ್ರೀಗೇರಿ, ಪುತ್ತೂರು, ಜಗಳೂರು, ಹರಿಹರ, ಸಿರಾ, ತುಮಕೂರು ಸಿಟಿ, ತುರುವೇಕೆರೆ, ಕೆಜಿಎಫ್, ಮಾಲೂರು, ಬೈಟರಾಯನಪೂರ, ಗೌರಿಬಿದನೂರು, ಗಾಂಧಿನಗರ, ಬೆಂಗಳೂರು ಸೌತ್, ಆನೇಕಲ್, ಮುದ್ದೇಬಿಹಾಳ, ದೇವರಹಿಪ್ಪರಗಿ, ಬಾದಾಮಿ, ತೆರದಾಳ, ಅರಸಿಕೇರೆ, ಶಿಕಾರಿಪುರ, ಹುಣಸೂರು, ಮೈಸೂರು ಸಿಟಿ, ಮದ್ದೂರು, ಮೇಲುಕೋಟೆ, ಕುಣಿಗಲ್, ಚಾಮರಾಜನಗರ, ಮಾಗಡಿ, ಹೀಗೆ ಜನ ಸಂಕಲ್ಪ ಯಾತ್ರೆ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಮಾಡಲಿದೆ.
ಕಾಂಗ್ರೆಸ್ ಮೂರು ಸೀಟ್ ಗೆದ್ದರೆ ನಾನು ಒಂದು ಕಡೆ ಮೀಸೆ ಬೋಳಿಸುವೆ:
ಬಿಜೆಪಿ ಜನ ಸಂಕಲ್ಪ ಯಾತ್ರೆಯ ಸಿದ್ಧರಾಗಿ ರಾಯಚೂರು ನಗರದ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆದಿತ್ತು. ಸಭೆ ಉದ್ದೇಶಿಸಿ ಮಾತನಾಡಿದ ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ(MLA Shivanagowda Nayak) ಕಾಂಗ್ರೆಸ್ ನಾಯಕರಿಗೆ ಮೀಸೆ ಸವಾಲ್ ಹಾಕಿದ್ರು. ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಹಗಲು ಕನಸು ಕಾಣುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಏಳು ಸೀಟ್ ನಲ್ಲಿ ಏಳಕ್ಕೆ ಏಳು ಗೆದ್ದು ಬಿಡ್ತೀವಿ ಅಂತಾರೇ ಕಾಂಗ್ರೆಸ್ ನಾಯಕರು. ಜಿಲ್ಲೆಯಲ್ಲಿ ಮೂರು ಸೀಟ್ ಗೆದ್ದರೆ, ನಾನು ಒಂದು ಕಡೆಯ ಮೀಸೆ ಬೋಳಿಸುವೆ ಎಂದು ಕಾಂಗ್ರೆಸ್ ಗೆ ಸವಾಲ್ ಹಾಕಿದ್ರು.
ಕಾಂಗ್ರೆಸ್ ಏಳಕ್ಕೆ ಏಳು ಸೀಟ್ ಗೆಲ್ಲುವುದು ಅದು ಅಸಾಧ್ಯವಾದ ಮಾತು. ನಮ್ಮ ಜಿಲ್ಲೆಯಲ್ಲಿ ಕನಿಷ್ಠ 5 ಸೀಟ್ ನಾವು ಗೆದ್ದೇ ಗೆಲ್ತೀವಿ, ಇದು ನಮ್ಮ ವಚನ. ಅಷ್ಟೇ ಅಲ್ಲದೆ ಪಾರ್ಟಿ ಶಿವನಗೌಡರೇ ನೀವು ಎಲೆಕ್ಷನ್ ನಿಲ್ಲೋದು ಬೇಡ ಅಂದ್ರು ಅದಕ್ಕೆ ನಾನ್ ರೆಡಿಯಾಗಿದ್ದೇನೆ. ಏಳು ಕ್ಷೇತ್ರದಲ್ಲಿ ಓಡಾಡಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸ್ಲಿಕೆ ರೆಡಿಯಾಗಿದ್ದಾನೆ. ಚುನಾವಣೆಯಲ್ಲಿ ನಮ್ಮ
ಪರ್ಯಾಯ ಅಭ್ಯರ್ಥಿ ಕೊಟ್ಟು ನೀವು ನಿಲ್ಲೋದು ಬೇಡ ಅಂದ್ರು ಓಕೆ, ನನಗೆ ಅಧಿಕಾರಿ ಬೇಡ, ಏಳು ಚುನಾವಣೆ ಮಾಡು ಅಂದ್ರೆ ನಾನು ಮಾಡ್ತೀನಿ, ನಮ್ಮ ಪಾರ್ಟಿ ನನಗೆ ಎಲ್ಲವನ್ನೂ ಕೊಟ್ಟಿದೆ ಎಂದ ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.
ರಾಹುಲ್ ಗಾಂಧಿ(Rahul Gandhi) ಭಾರತ್ ಜೋಡೋ ಪಾದಯಾತ್ರೆ ಬಗ್ಗೆ ವ್ಯಂಗ್ಯ:
ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದರು. ಇಡೀ ಭಾರತವನ್ನು ತುಂಡು- ತುಂಡು ಮಾಡಿದ ಕುಡಿಗಳು ಈಗ ಭಾರತ ಜೋಡೋ ಅಂತ ಹೊರಟ್ಟಿವೆ.ನಾವು ಯಾರು ಪಾಕಿಸ್ತಾನಕ್ಕೆ ಏನು ಬಿಟ್ಟು ಕೊಟ್ಟಿಲ್ಲ. ಹಿಂದುತ್ವದ ಅಡಿಯಲ್ಲಿ ನಾವು ಯಾರಿಗೂ ದೇಶ ಒಡೆಯಲು ಅವಕಾಶ ಕೊಡಲಿಲ್ಲ. ದೇಶ ಒಡೆಯಲು ಅವಕಾಶ ಕೊಟ್ಟಿದ್ದು ರಾಹುಲ್ ಗಾಂಧಿ ತಾತಾ , ಮುತಾತಾ ಇರಬಹುದು. ತಾತಾ ತುಂಡು ಮಾಡಿದ್ದಾನೆ ಮೊಮ್ಮಗನ ಜೋಡಿಸಲು ಹೊರಟ್ಟಿದ್ದಾನೆ. ಜೋಡೋನೂ ರಾಜ್ಯದಲ್ಲಿ ನಡೆಯುವುದಿಲ್ಲ.ತೋಡೋನೂ ನಡೆಯುವುದಿಲ್ಲ ಎಂದ ಶಾಸಕ ಕೆ. ಶಿವನಗೌಡ ನಾಯಕ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಯಡಿಯೂರಪ್ಪ ನವರ ಸಾಧನೆಗಳ ಬಗ್ಗೆ ಹೇಳಿದ್ರು.
Raichur Politics: ಒಂದೇ ಟಿಕೆಟ್‌ಗೆ ತಾತ-ಮೊಮ್ಮಗನ ನಡುವೆ ತೀವ್ರ ಪೈಪೋಟಿ; ಯಾರಿಗೆ ಕೊಡುತ್ತೆ ಕೈ?
ಇನ್ನೂ ಬಿಜೆಪಿ ದಲಿತರ ಪರ ನಿಲುವು, ಮೀಸಲಾತಿ ನಿರ್ಧಾರದಿಂದ ಜಗಜ್ಜಾಹೀರಾಗಿದ್ದು, ನಮ್ಮ ಸಮುದಾಯ ಸದಾ ಬಿಜೆಪಿ ಜೊತೆಗೆ ನಿಲ್ಲಲಿದೆ, ಮತ್ತು ಅಕ್ಟೋಬರ್ 11ರಂದು ನಡೆಯುವ ಸಮಾವೇಶ ರಾಯಚೂರಿನ ಇತಿಹಾಸದಲ್ಲಿಯೇ ಅತಿದೊಡ್ಡ ಕಾರ್ಯಕ್ರಮವಾಗಲಿದೆ ಎಂದರು. ಕಾರ್ಯಕ್ರಮದ ಯಶಸ್ಸಿಗೆ, ನಗರ ಗ್ರಾಮೀಣ, ಎಂಬ ಬೇಧಬಾವವಿಲ್ಲದೇ ಎಲ್ಲರೂ ಶ್ರಮಿಸೋಣ, ಭಾರತೀಯ ಜನತಾ ಪಾರ್ಟಿಯ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳಲ್ಲವನ್ನು ಜನರ ಮುಂದೆ ಇಟ್ಟು ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು ಸನ್ನದ್ಧರಾಗೋಣ ಎಂದು ಬಿಜೆಪಿ ಶಾಸಕರಾದ ಕೆ.ಶಿವನಗೌಡ ನಾಯಕ ಮತ್ತು ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಕಾರ್ಯಕರ್ತರಿಗೆ ತಿಳಿಸಿದರು. ಈ ವೇಳೆ ಬಿಜೆಪಿ ಪಕ್ಷದ ಹಿರಿಯ ಮುಖಂಡರು ಹಾಗೂ ನೂರಾರು ಜನ ಕಾರ್ಯಕರ್ತರು ಭಾಗವಹಿಸಿದ್ರು.