
ದಾವಣಗೆರೆ (ಫೆ.11): ಕೇಂದ್ರದ ತೆರಿಗೆ ಹಣದ ವಿಚಾರವಾಗಿ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ಸತ್ಯಾ ಸತ್ಯ. ಒಂದು ವೇಳೆ ನಾನು ಹೇಳಿದ ಹೇಳಿಕೆಗಳೆಲ್ಲಾ ಸುಳ್ಳೆಂದು ನಿರೂಪಿಸಿದರೆ ರಾಜಕೀಯವನ್ನೇ ಬಿಟ್ಟು ಬಿಡ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ. ಹರಿಹರ ತಾಲೂಕು ರಾಜನಹಳ್ಳಿ ವಾಲ್ಮೀಕಿ ಗುರುಪೀಠಕ್ಕೆ ಶುಕ್ರವಾರ ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ತೆರಿಗೆ ವಿಚಾರದಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯವಾಗಿರುವ ಬಗ್ಗೆ ನಾನು ಹೇಳಿರುವುದು ಸತ್ಯವಾದ ಸಂಗತಿ. ಒಂದು ವೇಳೆ ನನ್ನ ಮಾತು ಸುಳ್ಳಾದರೆ ರಾಜಕೀಯವನ್ನೇ ಬಿಟ್ಟು ಬಿಡ್ತೀನಿ ಎಂದರು.
ಹೇಳಿದ್ದಕ್ಕೆಲ್ಲಾ ಯಡಿಯೂರಪ್ಪ ತಲೆ ಅಲ್ಲಾಡಿಸಿದಂತೆ ನಾನೂ ಹೀಗೆ ತಲೆ ಅಲ್ಲಾಡಿಸಿಕೊಂಡಿರಬೇಕಾ ಎಂದು ತಲೆ ಅಲ್ಲಾಡಿಸುವ ಮೂಲಕ ಯಡಿಯೂರಪ್ಪ ಕಾಲೆಳೆದ ಅವರು, ತೆರಿಗೆಯಲ್ಲಿ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿರುವುದು ಸತ್ಯ. ಇದುವರೆಗೆ ಕೇಂದ್ರದಿಂದ ಒಂದು ರುಪಾಯಿ ಸಹ ಬಿಡುಗಡೆಯಾಗಿಲ್ಲ. ರಾಜ್ಯದ ಬಿಜೆಪಿ ನಾಯಕರು ಅಮಿತ್ ಶಾ ಜೊತೆಗೆ ಮಾತನಾಡಿ, ಅನುದಾನ ಬಿಡುಗಡೆ ಮಾಡಿಸಿಲ್ಲ ಎಂದು ಕುಟುಕಿದರು. ಯಡಿಯೂರಪ್ಪ, ಅಶೋಕ್, ಬೊಮ್ಮಾಯಿ, ವಿಜಯೇಂದ್ರ ಹೋಗಿ ಕೇಂದ್ರ ಸರ್ಕಾರ, ಅಮಿತ್ ಶಾ ಬಳಿ ಕೇಳಲಿ. ನಮಗೆ ಅನ್ಯಾಯವಾದರೆ ಪ್ರತಿಭಟಿಸಬಾರದಾ ಹೇಳಿ? ಯಡಿಯೂರಪ್ಪ ಬಾಯಿ ಮುಚ್ಚಿಕೊಂಡಿದ್ದಾರೆಂದರೆ, ನಾವು ಸಹ ಅದೇ ರೀತಿ ಇರಬೇಕಾ? ಎಂದು ಪ್ರಶ್ನಿಸಿದರು.
ಯುಪಿಎ ಸರ್ಕಾರ 10 ವರ್ಷದ ದುರಾಡಳಿತ ನಡೆಸಿತ್ತು: ಡಾ.ಸಿ.ಎನ್.ಅಶ್ವತ್ಥನಾರಾಯಣ
ಡ್ರಗ್ಸ್ ಹಾವಳಿ ನಿಯಂತ್ರಿಸಿ: ರಾಜ್ಯಾದ್ಯಂತ ಶಾಲಾ, ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಂಜಾ ಮತ್ತು ಮಾದಕ ಪದಾರ್ಥಗಳ ಹಾವಳಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ವಿಧಾನ ಪರಿಷತ್ತು ಕಾಂಗ್ರೆಸ್ ಸದಸ್ಯ ದಿನೇಶ್‌ಗೂಳಿಗೌಡ ಅವರು, ವಿದ್ಯಾರ್ಥಿಗಳು ಮಾದಕ ವ್ಯಸನಗಳ ದಾಸರಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಪತ್ರ ಬರೆದಿದ್ದರು. ಈ ಬೆನ್ನಲ್ಲೇ ಶಾಲಾ, ಕಾಲೇಜುಗಳ ವ್ಯಾಪ್ತಿಯಲ್ಲಿ ಗಾಂಜಾ ಮತ್ತು ಮಾದಕ ಪದಾರ್ಥಗಳ ಹಾವಳಿ ನಿಯಂತ್ರಿಸಿ ಕಠಿಣ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಯವರು ಆದೇಶಿಸಿದ್ದಾರೆ.
ಸಚಿವ ಎಚ್.ಕೆ.ಪಾಟೀಲ್‌ಗೆ ತಾಕತ್ತಿದ್ದರೆ ಬಂಧಿಸಲಿ: ಕೆ.ಎಸ್.ಈಶ್ವರಪ್ಪ
ಗಾಂಜಾ ಮತ್ತು ಮಾದಕವಸ್ತುಗಳ ಹಾವಳಿ ನಿಯಂತ್ರಣಕ್ಕೆ ಜಿಲ್ಲಾ ಮಟ್ಟದಲ್ಲಿ ವಿಶೇಷ ದಳ ರಚಿಸಬೇಕು. ಸಾರ್ವಜನಿಕರ ಸಹಕಾರ ಪಡೆಯಲು ಸಹಾಯವಾಣಿಯನ್ನು ಆರಂಭಿಸಬೇಕು. ಜನರು ಮುಕ್ತವಾಗಿ ಮಾಹಿತಿ ನೀಡುವಂತಾಗಲು ಹೆಸರು ಮತ್ತು ವಿಳಾಸವನ್ನು ಗೌಪ್ಯವಾಗಿ ಇಡುವುದಾಗಿ ಮನವರಿಕೆ ಮಾಡಬೇಕು. ಶಾಲಾ, ಕಾಲೇಜು, ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ವ್ಯವಸ್ಥೆ ಮಾಡಬೇಕು. ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ದಿನೇಶ್‌ಗೂಳಿಗೌಡ ಅವರು ಬರೆದ ಪತ್ರದಲ್ಲಿ ಮನವಿ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.