ಪಂಚಮಸಾಲಿ ಮೀಸಲಾತಿ ಹೋರಾಟದ ವೇಳೆ ಲಾಠಿಚಾರ್ಜ್‌ಗೆ ಆದೇಶ ನೀಡಿದ ಐಪಿಎಸ್ ಅಧಿಕಾರಿ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವೆ. ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ದೂರು ನೀಡಿ ಅವರ ಮುಂಬಡ್ತಿ ತಡೆಯುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸುವರ್ಣ ವಿಧಾನಸಭೆ (ಡಿ.14): ಪಂಚಮಸಾಲಿ ಮೀಸಲಾತಿ ಹೋರಾಟದ ವೇಳೆ ಲಾಠಿಚಾರ್ಜ್‌ಗೆ ಆದೇಶ ನೀಡಿದ ಐಪಿಎಸ್ ಅಧಿಕಾರಿ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವೆ. ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ದೂರು ನೀಡಿ ಅವರ ಮುಂಬಡ್ತಿ ತಡೆಯುವುದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಶೂನ್ಯ ವೇಳೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ವೇಳೆ ನಡೆದ ಲಾಠಿಚಾರ್ಜ್ ವಿಚಾರವಾಗಿ ನಡೆದ ಚರ್ಚೆಯಲ್ಲಿ ಮಾತನಾಡಿ, ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆಸಲು ಅನುಮತಿಸಿದ ಐಪಿಎಸ್ ಅಧಿಕಾರಿ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಈ ಸರ್ಕಾರ ಅವರನ್ನು ರಕ್ಷಿಸಿದರೂ ಮುಂದೆ ನಮ್ಮ ಸರ್ಕಾರ ಬಂದಾಗ ಅವರು ಎಲ್ಲೇ ಇದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಅದಕ್ಕೂ ಮುನ್ನ ಆ ಅಧಿಕಾರಿ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುತ್ತೇನೆ. ಜತೆಗೆ ಅಮಿತ್ ಶಾ ಅವರಲ್ಲಿ ನಡೆದ ಘಟನೆಯ ವಿವರಣೆ ನೀಡಿ, ಐಪಿಎಸ್ ಅಧಿಕಾರಿ ಮುಂಬಡ್ತಿ ತಡೆ ಹಾಗೂ ಮತ್ತಿತರ ಕ್ರಮಕ್ಕೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.ಪಂಚಮಸಾಲಿ ಮೀಸಲಾತಿ ಹೋರಾಟ ಮಾಡುತ್ತಿರುವವರನ್ನು ತಾಲೂಕು ಮಟ್ಟದಲ್ಲೇ ತಡೆಯಲಾಗಿದೆ. ಹಾಗಾದರೆ, ನಾವೇನು ಭಯೋತ್ಪಾದಕರೇ ಎಂದು ಪ್ರಶ್ನಿಸಿದ ಯತ್ನಾಳ್, ಪಂಚಮಸಾಲಿ ಸಮುದಾಯ ರೈತರು, ಹಮಾಲಿ ಕೆಲಸ ಮಾಡುವವರಾಗಿದ್ದಾರೆ. ನಾವೇನು ಪೆಟ್ರೋಲ್ ಬಾಂಬ್ ಸಿಡಿಸುವವರಲ್ಲ, ಕಲ್ಲು ಹೊಡೆಯುವವರಲ್ಲ ಎಂದರು.
ಕೊಳವೆಬಾವಿ ಮುಚ್ಚದಿದ್ದರೆ ಶಿಕ್ಷೆ ಸೇರಿ 11 ವಿಧೇಯಕ: ಬೈಕ್, ಕಾರಿಗೆ ಹೆಚ್ಚುವರಿ ಕರ
ಅಧಿಕಾರಿಗಳಿಗೆ ಬೆದರಿಕೆ ಹಾಕಬೇಡಿ: ಐಪಿಎಸ್ ಅಧಿಕಾರಿ ವಿರುದ್ಧ ಮಾತನಾಡಿದ್ದಕ್ಕೆ ಯತ್ನಾಳ್ ವಿರುದ್ಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತೀವ್ರ ಕಿಡಿಕಾರಿದ ಪ್ರಸಂಗ ಸದನದಲ್ಲಿ ನಡೆಯಿತು. ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತೀರಾ? ನೀವು ಏನೂ ಮಾಡಲಾಗದು. ನಿಮ್ಮ ಸರ್ಕಾರದ ಅವಧಿಯಲ್ಲಿ ರೈತರ ಮೇಲೆ ಗೋಲಿಬಾರ್, ಮಾದಿಗ ದಂಡೋರ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿಸಲಾಯಿತು. ಈಗ ನಮ್ಮ ವಿರುದ್ಧ ಮಾತನಾಡುತ್ತಿದ್ದೀರಾ? ಇವೆಲ್ಲ ನಡೆಯುವುದಿಲ್ಲ ಎಂದರು.
ಯತ್ನಾಳ್ ಅಲ್ಲ ಕಿತ್ನಾಳ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀಸಲಾತಿ ಪ್ರವರ್ಗ 2ಎಗೆ ಸಂವಿಧಾನದಲ್ಲಿ ಮಾನ್ಯತೆಯಿಲ್ಲ ಎನ್ನುತ್ತಾರೆ. ಹಾಗಾದರೆ, ಅವರು ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗಗಳ ದ್ವೇಷಿ. ಅಲ್ಲದೆ, ಅವರು ಒಂದು ಸಮುದಾಯವನ್ನಷ್ಟೇ ಓಲೈಸುತ್ತಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು. ಇದರಿಂದ ಸಿಟ್ಟಾದ ಸಚಿವ ಸಂತೋಷ್ ಲಾಡ್, ಮುಖ್ಯಮಂತ್ರಿಯವರ ಬಗ್ಗೆ ಏನೇನೋ ಮಾತನಾಡಬೇಡಿ. ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಸಚಿವ ಬಿ.ಎಸ್.ಸುರೇಶ್, ಇವರು ಯತ್ನಾಳ್ ಅಲ್ಲ ಕಿತ್ನಾಳ್. ಎಲ್ಲದಕ್ಕೂ ಜಗಳ ತಂದಿಡುವ ಕೆಲಸ ಮಾಡುತ್ತಾರೆ ಎಂದರು.
ಸಭೆ ನಡೆಸಿ ಪರಿಹಾರ ಕಂಡುಕೊಳ್ಳೋಣ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎನ್ನುವುದು ಕಾಂಗ್ರೆಸ್ ಸರ್ಕಾರದ ಒಟ್ಟಾರೆ ಆಶಯ. ಅದಕ್ಕಾಗಿ ಅಧಿವೇಶನದ ನಂತರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ಜತೆಗೆ, ಕೇಂದ್ರ ಸರ್ಕಾರಕ್ಕೆ ಸರ್ವಪಕ್ಷ ನಿಯೋಗ ತೆರಳಿ ಮೀಸಲಾತಿಗೆ ಒತ್ತಾಯಿಸಬೇಕು ಎಂದು ಇದೇ ವೇಳೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಸಲಹೆ ನೀಡಿದರು.
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಕ್ಷಮೆ ಕೇಳಲಿ: ಕೆ.ಎಸ್.ಈಶ್ವರಪ್ಪ
ಚೆನ್ನಮ್ಮನ ನಾಡಿನಲ್ಲಿ ಚೆನ್ನಮ್ಮನ ಮಕ್ಕಳ ರಕ್ತ ಹರಿಸಿದ್ದೀರಿ: ಬೆಳಗಾವಿ ಜಿಲ್ಲೆ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ಚೆನ್ನಮ್ಮನ ಕರ್ಮಭೂಮಿ. ಅಂತಹ ಚೆನ್ನಮ್ಮನಿಗೆ ಸಂಗೊಳ್ಳಿ ರಾಯಣ್ಣ ಬಲಗೈ ಭಂಟನಾಗಿದ್ದ. ಚೆನ್ನಮ್ಮ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ಮಕ್ಕಳ ರಕ್ತವನ್ನು ಸರ್ಕಾರ ಬೆಳಗಾವಿಯಲ್ಲೇ ಹರಿಸಿದೆ. ಇದು ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ ಎಂದು ಬಿಜೆಪಿ ಶಾಸಕ ಸಿ.ಸಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.