ಹಾಲಿನ ದರ ಏರಿಕೆ ವಿರುದ್ಧ ಬಿಜೆಪಿ ರಾಜ್ಯದಾದ್ಯಂತ ಹೋರಾಟಮಾಡಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರು (ಮಾ.29): ಹಾಲಿನ ದರ ಏರಿಕೆ ವಿರುದ್ಧ ಬಿಜೆಪಿ ರಾಜ್ಯದಾದ್ಯಂತ ಹೋರಾಟಮಾಡಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಾಲಿನ ದರವನ್ನು ಮೂರು ಬಾರಿ ಒಟ್ಟು 9 ರು. ಏರಿಸಿ ಜನರನ್ನು ಲೂಟಿ ಮಾಡಲಾಗಿದೆ. ಬಜೆಟ್‌ನಲ್ಲಿ ಯಾವುದೇ ತೆರಿಗೆಗಳನ್ನು ಹಾಕದೆ, ಹಿಡನ್ ಅಜೆಂಡಾ ಮಾಡಿ ಬಳಿಕ ತೆರಿಗೆ ದರ ಏರಿಕೆ ಮಾಡಲಾಗಿದೆ. ಪಾಪರ್ ಆಗಿಲ್ಲವೆಂದರೆ ಯಾಕೆ ಇಷ್ಟು ದರ ಏರಿಸಲಾಗಿದೆ ಎಂದು ಪ್ರಶ್ನಿಸಿದರು. ಯುಗಾದಿ ಹೊಸ ವರ್ಷ ಬರುವ ಸಮಯದಲ್ಲೇ ತೆರಿಗೆ ಹಾಕಲಾಗಿದೆ. ಹಬ್ಬಕ್ಕೆ ಬಳಸುವ ಹಾಲಿಗೂ ದರ ಏರಿಕೆಯಾಗಿದೆ.
ಈ ಬಗ್ಗೆ ಪ್ರಶ್ನೆ ಮಾಡಿದರೆ ಸಚಿವ ರಾಜಣ್ಣ ಅವರು ಉಡಾಫೆ ಮಾತಾಡಿದ್ದಾರೆ. ಚುನಾವಣೆಗೆ ಮೊದಲು ಎಲ್ಲವೂ ಶ್ರೀ ಎಂದು ಹೇಳಿ, ನಂತರ ಎಲ್ಲ ದರ ಏರಿಕೆ ಮಾಡಿದ್ದಾರೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಸುಳ್ಳು, ಮುಂದೆ ಮಾರಿಹಬ್ಬ ಇದೆ ಎಂದು ಎಚ್ಚರಿಕೆ ನೀಡಿದ್ದೆ. ಬಜೆಟ್‌ನಲ್ಲೇ ತೆರಿಗೆಗಳನ್ನು ಹಾಕಬೇಕಿತ್ತು. ಆದರೆ ಬಜೆಟ್ ಮುಗಿದ ನಂತರ ತೆರಿಗೆ, ದರ ಏರಿಕೆ ಮಾಡಿದ್ದಾರೆ. ಬಜೆಟ್ ನಂತರ ಎಲ್ಲ ಮಾಧ್ಯಮಗಳಲ್ಲಿ ಶಹಭಾಸ್‌ಗಿರಿ ಬರಬೇಕೆಂದು ಈ ರೀತಿ ಮೋಸ ಮಾಡಿದ್ದಾರೆ. ಮೋಸ ಮಾಡುವುದರಲ್ಲಿ ಸಿದ್ದರಾಮಯ್ಯ ನಂ.1 ಆಗಿದ್ದಾರೆ. ಧೈರ್ಯ ಇದ್ದಿದ್ದರೆ ತೆರಿಗೆ ಹೆಚ್ಚಳ ಕುರಿತು ಬಜೆಟ್‌ನಲ್ಲೇ ಘೋಷಿಸಬೇಕಿತ್ತು ಎಂದು ಹೇಳಿದರು.
ಡಿಕೆಶಿಯನ್ನು ಉಚ್ಛಾಟಿಸಲಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಂಭಮೇಳದಲ್ಲಿ ಭಾಗಿಯಾಗಿದ್ದು, ಉತ್ತರ ಪ್ರದೇಶ ಸಿಎಂ ಅವರನ್ನು ಹೊಗಳಿದ್ದು ಹಾಗೂ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿದ್ದು ತಪ್ಪು ಎನ್ನುವುದಾದರೆ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಕಾಂಗ್ರೆಸ್‌ನವರು ಧಮ್ಮು, ತಾಕತ್ತು ಪ್ರದರ್ಶಿಸಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕೈ ನಾಯಕರಿಗೆ ಸವಾಲು ಹಾಕಿದರು. ಬೆಂಗಳೂರಿನ ಈಶಾ ಫೌಂಡೇಷನ್‌ನಲ್ಲಿ ಅಮಿತ್ ಶಾ- ಡಿ.ಕೆ.ಶಿವಕುಮಾರ್ ವೇದಿಕೆ ಹಂಚಿಕೊಂಡಿದ್ದಕ್ಕೆ ಕಾಂಗ್ರೆಸ್‌ನ ಕೆಲವು ನಾಯಕರು ಅಪಸ್ವರ ಎತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ನಾವ್ಯಾರೂ ಡಿಕೆಶಿಯನ್ನು ಪಕ್ಷಕ್ಕೆ ಬರುವಂತೆ ಕರೆದಿಲ್ಲ. ಡಿಕೆಶಿ ಬಿಜೆಪಿ ಪಕ್ಷಕ್ಕೆ ಬರುವ ವಿಚಾರವಾಗಿ ಪಕ್ಷದ ನಾಯಕರೂ ನಮ್ಮೊಂದಿಗೆ ಚರ್ಚೆ ನಡೆಸಿಲ್ಲ.
ಬೆಂಗಳೂರು ವಿವಿಯಲ್ಲಿ ಹತ್ತಾರು ವರ್ಷಗಳಿಂದ ದುಡಿಯುತ್ತಿರುವ 381 ಹೊರಗುತ್ತಿಗೆ ನೌಕರರು ಬೀದಿ ಪಾಲು?
ಮೊದಲು ಕಾಂಗ್ರೆಸ್‌ನವರು ಡಿಕೆಶಿಯನ್ನು ಪಕ್ಷದಿಂದ ಸಸ್ಪೆಂಡ್ ಮಾಡಲಿ, ಮುಂದೆ ಕೇಂದ್ರದ ನಾಯಕರೇ ಎಲ್ಲ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. ಡಿ.ಕೆ.ಶಿವಕುಮಾರ್ ಬೇರೆ ಕಾಂಗ್ರೆಸ್ ನಾಯಕರಂತಲ್ಲ. ಅವರದ್ದು ಒದ್ದು ಕಿತ್ತುಕೊಳ್ಳುವ ಜಾಯಾಮಾನ. ಖರ್ಗೆ ಕುಂಭಮೇಳಕ್ಕೆ ಹೋಗಬೇಡಿ ಎಂದಿದ್ದರು. ಆದರೂ ಶಿವಕುಮಾರ್ ಕುಂಭಮೇಳಕ್ಕೆ ಹೋದರು. ಪ್ರಧಾನ ಮಂತ್ರಿ ಮೋದಿ ಅವರನ್ನೂ ಭೇಟಿ ಮಾಡಿದರು. ಕುಂಭಮೇಳ ವಿಚಾರವಾಗಿ ಕಾಂಗ್ರೆಸ್ ನಾಯಕರು ಟೀಕೆ ಮಾಡಿದರು. ಆದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅವರನ್ನು ಡಿಕೆಶಿ ಹೊಗಳಿದರು. ಈಗ ಈಶಾ ಫೌಂಡೇಶನ್‌ಗೆ ಹೋಗಿ ಅಮಿತ್ ಶಾ ಜೊತೆ ಕುಳಿತಿದ್ದನ್ನೂ ಕಾಂಗ್ರೆಸ್ ನಾಯಕರು ಟೀಕಿಸುತ್ತಾರೆಂದರೆ ಅವರ ಮನಸ್ಥಿತಿ ಎಂತಹದ್ದು ಎನ್ನುವುದು ಅರ್ಥವಾಗುತ್ತೆ ಎಂದರು.