ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರದ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತೆರವುಗೊಳಿಸಿದ ಕಾರಣ ಚನ್ನಪಟ್ಟಣ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ.
ಪ್ರಭುಸ್ವಾಮಿ ನಟೇಕರ್
ಬೆಂಗಳೂರು (ನ.11): ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರದ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತೆರವುಗೊಳಿಸಿದ ಕಾರಣ ಚನ್ನಪಟ್ಟಣ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಎರಡು ಬಾರಿ ಚುನಾವಣೆಯಲ್ಲಿ ಸೋಲನುಭವಿಸಿದ ನಿಖಿಲ್ ಕುಮಾರಸ್ವಾಮಿ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಮ್ಮ ಬಿರುಸಿನ ಪ್ರಚಾರದ ನಡುವೆಯೂ ನಿಖಿಲ್ ಕುಮಾರಸ್ವಾಮಿ ‘ಕನ್ನಡಪ್ರಭ’ಕ್ಕೆ ಮುಖಾಮುಖಿಯಾದರು.
undefined
* ಚನ್ನಪಟ್ಟಣ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಚಾರ ಹೇಗೆ ನಡೆಯುತ್ತಿದೆ?
-ಪ್ರಚಾರ ಕಾರ್ಯ ಚೆನ್ನಾಗಿ ನಡೆಯುತ್ತಿದ್ದು, ಎಲ್ಲಾ ಕಡೆಯೂ ಜನರಿಂದ ಉತ್ತಮವಾದ ಸ್ಪಂದನೆ ಸಿಗುತ್ತಿದೆ. ಪ್ರಚಾರ ಕೊನೆಯ ಹಂತಕ್ಕೆ ಬಂದಿದ್ದು, ಅಂತಿಮಘಟ್ಟದ ಪ್ರಚಾರದಲ್ಲಿ ನಾನು ಸೇರಿದಂತೆ ಎನ್‌ಡಿಎ ಮುಖಂಡರು, ಸ್ಥಳೀಯ ನಾಯಕರು ಕಾರ್ಯಕರ್ತರು ತೊಡಗಿದ್ದಾರೆ. ನನ್ನ ಪರವಾಗಿ ಜೆಡಿಎಸ್-ಬಿಜೆಪಿಯ ಹಿರಿಯ ಮುಖಂಡರೆಲ್ಲ ಪ್ರಚಾರ ನಡೆಸಿ ಮತಯಾಚಿಸಿದ್ದಾರೆ.
5 ಗ್ಯಾರಂಟಿ ಕೊಡಿ ಎಂದು ಜನ ಕೇಳಿದ್ರಾ: ನಿಖಿಲ್ ಕುಮಾರಸ್ವಾಮಿ ಪ್ರಶ್ನೆ
* ಕಳೆದ 20 ದಿನಗಳಿಂದ ನಡೆಸಿದ ಪ್ರಚಾರ ಕಾರ್ಯದಲ್ಲಿ ಜನರ ನಾಡಿಮಿಡಿತವನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೀರಿ?
-ಚುನಾವಣೆಗೆ ಸ್ಪರ್ಧಿಸಿರುವುದು ಅನಿರೀಕ್ಷಿತ ಬೆಳವಣಿಗೆ. ಬಹುಶಃ ಇದು ಭಗವಂತನ ಇಚ್ಛೆ ಎಂದು ಭಾವಿಸುತ್ತೇನೆ. ಚುನಾವಣೆ ಪ್ರಚಾರದ ಅಂತಿಮ ಹಂತಕ್ಕೆ ಬಂದಿದ್ದೇವೆ. ಕ್ಷೇತ್ರದ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಮತ ಯಾಚಿಸಲಾಗುತ್ತಿದೆ. ಎಲ್ಲಾ ಹಳ್ಳಿಗಳಲ್ಲಿಯೂ ಯುವಕರು, ಮಹಿಳೆಯರು, ಹಿರಿಯ ನಾಗರಿಕರು ಆತ್ಮಸ್ಥೈರ್ಯ ತುಂಬಿಸಿದ್ದಾರೆ. ಈ ಮೂರು ವರ್ಗದ ಜನತೆ ಪ್ರತಿನಿತ್ಯ ಆತ್ಮವಿಶ್ವಾಸವನ್ನು ಮೂಡಿಸಿದ್ದಾರೆ.
* ಚುನಾವಣೆ ಎಂಬ ಯುದ್ಧಭೂಮಿಯಲ್ಲಿ ಈ ಬಾರಿ ಅರ್ಜುನನಾಗಿ ಹೊರಹೊಮ್ಮುವ ವಿಶ್ವಾಸ ಇದೆಯೇ?
-ಇದೆಲ್ಲಾ ಚರ್ಚೆಗೆ ಸೀಮಿತವಾದ ವಿಷಯ. ಇಲ್ಲಿ ಅರ್ಜುನ ಸೇರಿ ಯಾವುದೇ ಪಾತ್ರ ಏನು ಇಲ್ಲ. ಇದೆಲ್ಲಾ ಮಾಧ್ಯಮದವರು ತಂದ ವಿಷಯ. ನನಗೆ ಜನರ ಮೇಲೆ ವಿಶ್ವಾಸ ಇದೆ. ಈ ಬಾರಿ ಎನ್‌ಡಿಎ ಕೂಟದ ಯುವಕನಿಗೆ ಒಂದು ಅವಕಾಶ ನೀಡಿ ಜನರು ಆಶೀರ್ವದಿಸಲಿದ್ದಾರೆ ಎಂದು ನಂಬಿದ್ದೇನೆ.
* ಕ್ಷೇತ್ರದಲ್ಲಿ ನಿಮ್ಮ ಕುಟುಂಬದ ನಾಯಕರ ಕಣ್ಣೀರಿನ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ?
-ಈ ಕಣ್ಣೀರು ಹೇಳಿ ಕೇಳಿ ಬರುವುದಿಲ್ಲ. ಸಾರ್ವಜನಿಕವಾಗಿ ದುರುದ್ದೇಶ ಇಟ್ಟುಕೊಂಡು ಕಣ್ಣೀರು ಹಾಕುವುದಿಲ್ಲ. ನಮಗೆ ಭಾವನೆಗಳಿವೆ. ಜನತೆಯ ಪ್ರೀತಿ, ಅವರ ನೋವುಗಳನ್ನು ಕಂಡಾಗ ಗೊತ್ತಿಲ್ಲದೆ ಕಣ್ಣೀರು ಹೊರಗೆ ಬರುತ್ತದೆ. ಇದನ್ನು ಕೆಲವರು ರಾಜಕೀಯವಾಗಿ ಬಳಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಅನುಕಂಪದ ಚುನಾವಣೆಗಿಂತ ಹೆಚ್ಚಾಗಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಮತ ನೀಡಿ ಎಂದು ಕೇಳಿದ್ದೇನೆ. ಮಾದರಿ ಕ್ಷೇತ್ರವನ್ನಾಗಿ ಮಾಡುವ ಆಲೋಚನೆಯನ್ನಿಟ್ಟು ಕೊಂಡಿದ್ದೇನೆ. ಅದಕ್ಕೆ ಸ್ಪಂದನೆ ನೀಡಲು ಮನವಿ ಮಾಡುತ್ತಿದ್ದೇನೆ.
* ಕ್ಷೇತ್ರದ ಅಭಿವೃದ್ಧಿ ಎಂದರೆ ಯಾವ ರೀತಿಯಲ್ಲಿ? ಕ್ಷೇತ್ರದ ಮುನ್ನೋಟದ ಚಿಂತನೆ ಏನು?
ನಾನು ಯುವಕನಿದ್ದು, ನನ್ನ ಆಲೋಚನೆಗಳೇನು? ಪರಿಕಲ್ಪನೆಗಳೇನು? ನನ್ನ ಕನಸುಗಳೇನು? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಚನ್ನಪಟ್ಟಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ಯೋಜನೆ ಇದೆ. ಕ್ಷೇತ್ರದಲ್ಲಿ ಹಲವು ಸಮುದಾಯಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿವೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವವರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಅಂತಹ ಮಕ್ಕಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಯುವ ಜನಾಂಗಕ್ಕೆ ಉದ್ಯೋಗ ಕಲ್ಪಿಸುವುದು ಮೂಲ ಗುರಿಯಾಗಿದೆ.
* ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಯೋಗೇಶ್ವರ್ ಮೊದಲು ಎನ್‌ಡಿಎ ಅಭ್ಯರ್ಥಿ ಎಂಬ ಮಾತುಗಳು ಬಲವಾಗಿ ಕೇಳಿಬಂದಿದ್ದವು. ಆದರೆ, ಅವರಿಗೆ ಟಿಕೆಟ್ ನೀಡಲು ಕುಮಾರಸ್ವಾಮಿ ಒಪ್ಪಲಿಲ್ಲವಂತೆ?
-ಚನ್ನಪಟ್ಟಣ ಕ್ಷೇತ್ರ ತೆರವಾಗಿ ತಂದೆಯವರು ಸಚಿವರಾದ ಮೇಲೆ ಯೋಗೇಶ್ವರ್ ದೆಹಲಿಯಲ್ಲಿ ಮಾತನಾಡಿದ್ದು ಸತ್ಯ. ನಾನು ಆಕಾಂಕ್ಷಿ ಇದ್ದೇನೆ. ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ ಎಂಬುದರ ಬಗ್ಗೆ ಸಮಾಲೋಚನೆ ನಡೆಸಿದ್ದರು. ಆಗ ತಂದೆಯವರು ಕ್ಷೇತ್ರದಲ್ಲಿನ ನಮ್ಮ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ ಎಂದಿದ್ದರು. ಯಾಕೆಂದರೆ ಇಲ್ಲಿ ಬಹಳ ವರ್ಷಗಳಿಂದ ಸಾಂಪ್ರದಾಯಿಕವಾಗಿ ‘ಯೋಗೇಶ್ವರ್ ವರ್ಸಸ್ ಜೆಡಿಎಸ್’ ಇದೆ. ಆದರೆ, ನಾವು ಗ್ರಾಮಗಳಿಗೆ ಭೇಟಿ ನೀಡಿದಾಗ ನಾಯಕರು, ಕಾರ್ಯಕರ್ತರಿಂದ ಬೇರೆ ಮಾತುಗಳು ಕೇಳಿಬಂದವು. ಕುಮಾರಣ್ಣ ಹೇಳಿದ ಮೇಲೂ ಸ್ಪಂದಿಸಲಿಲ್ಲ ಮತ್ತು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಜತೆಗೆ ನಿಮ್ಮದೇ ‘ಕನ್ನಡಪ್ರಭ’ದಲ್ಲಿ ಕುಮಾರಸ್ವಾಮಿ ಅವರ ಬಗ್ಗೆ ಮತ್ತು ಸುವರ್ಣ ನ್ಯೂಸ್‌ನಲ್ಲಿ ದೇವೇಗೌಡರ ಕುರಿತು ನೀಡಿದ ಹೇಳಿಕೆ ಕಾರ್ಯಕರ್ತರನ್ನು ಕೆರಳಿಸಿತು. ಇದು ಬಹಳ ನೋವುಂಟು ಮಾಡಿತು. ಇದು ತೆರೆಮರೆಯ ಸಂಘರ್ಷ ಶುರುವಾಯಿತು.
* ನಿಖಿಲ್ ಕುಮಾರಸ್ವಾಮಿ ಕ್ಷೇತ್ರದವರಲ್ಲ. ಮೊದಲು ಮಂಡ್ಯ, ನಂತರ ರಾಮನಗರ, ಈಗ ಚನ್ನಪಟ್ಟಣ. ಯಾಕೆ ಈ ಕ್ಷೇತ್ರ ಬದಲಾವಣೆ?
-ಕಾಂಗ್ರೆಸ್‌ನವರು ಈಗ ಅಲ್ಲ, ಕಳೆದ ಚುನಾವಣೆಯಲ್ಲಿಯೂ ರಾಮನಗರ ಜಿಲ್ಲೆಯವರಲ್ಲ ಹಾಸನ ಜಿಲ್ಲೆಯವರು ಎಂದು ಪ್ರಚಾರ ಮಾಡಿದರು. ಹುಟ್ಟು-ಸಾವು ನಮ್ಮ ಕೈಯಲ್ಲಿ ಇಲ್ಲ. ಅದೆಲ್ಲ ಭಗವಂತನ ಆಟ. ನಾವು ಹಾಸನದಲ್ಲಿ ಹುಟ್ಟಿರಬಹುದು. ಆದರೆ ರಾಮನಗರ ಜಿಲ್ಲೆ ಜತೆ ಅವಿನಾಭಾವ ಬಾಂಧವ್ಯ ಇದೆ. 1985ರಲ್ಲಿ ಕೇತನಗಾನಹಳ್ಳಿಯಲ್ಲಿ ಜಮೀನು ಖರೀದಿ ಮಾಡಿದ್ದೇವೆ. ರಾಮನಗರ ಜಿಲ್ಲೆಯ ಮತದಾರ ನಾನು. ಮಾಗಡಿ ತಾಲೂಕಿನಲ್ಲಿ ಮತ ಹಾಕುತ್ತೇನೆ. ಕಾಂಗ್ರೆಸ್‌ನವರು ಅಭಿವೃದ್ಧಿ ಮಾಡದಿದ್ದಾಗ, ಯಾರಾದರೊಬ್ಬರು ಜಿಲ್ಲೆ ಅಭಿವೃದ್ಧಿ ಮಾಡಬೇಕಿತ್ತು. ಭಗವಂತ ದೇವೇಗೌಡ, ಕುಮಾರಸ್ವಾಮಿ ಅವರನ್ನು ಕಳುಹಿಸಿಕೊಟ್ಟ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಅಷ್ಟೇ.
* ನಿಮಗೆ ಕ್ಷೇತ್ರ ಪರಿಚಯವೇ ಇಲ್ಲ ಎಂದು ಎದುರಾಳಿ ಅಭ್ಯರ್ಥಿ ಯೋಗೇಶ್ವರ್ ಆರೋಪಿಸಿದ್ದಾರೆ?
-ಚುನಾವಣೆ ವೇಳೆ ಇವೆಲ್ಲಾ ಆರೋಪಗಳು ಅಷ್ಟೆ. ಅಭ್ಯರ್ಥಿಯಾದ ಕ್ಷಣದಿಂದ ಅವರ ವಿರುದ್ಧ ನಾನು ಏನೂ ಮಾತಾಡಿಲ್ಲ. ನಾವು ಸಾಧನೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ತಾತ ಮತ್ತು ತಂದೆಯ ಸಾಧನೆಯ ಮೇಲೆ ಮತಯಾಚಿಸುತ್ತಿದ್ದೇವೆ. ಅವರ ಸಾಧನೆ ಏನು ಇಲ್ಲ. ಅದಕ್ಕೆ ವಿಷಯಾಂತರ ಮಾಡಲು ಇಲ್ಲದ ಆರೋಪ ಮಾಡುತ್ತಿದ್ದಾರೆ.
ನಿಖಿಲ್‌ನ ಗೆಲ್ಲಿಸಿದ್ರೆ ಮೇಕೆದಾಟು ಯೋಜನೆ ಕೇಳ್ಬಹುದು: ಎಚ್.ಡಿ.ದೇವೇಗೌಡ
* ದೇವೇಗೌಡರು ತಾವು ಸಾಯುವುದರೊಳಗೆ ಮೇಕೆದಾಟು ಯೋಜನೆ ಜಾರಿಗೊಳಿಸುವೆ ಎಂಬ ಮಾತು ಹೇಳಿದ್ದಾರಲ್ಲ?
-ನಾಡಿನ ನೀರಾವರಿ ವಿಚಾರವಾಗಿ ಅತ್ಯಂತ ಬದ್ಧತೆ, ಕಾಳಜಿಯನ್ನಿಟ್ಟುಕೊಂಡು ಕೆಲಸ ಮಾಡಿರುವವರಲ್ಲಿ ಯಾರಾದರೂ ಇದ್ದರೆ ದೇವೇಗೌಡ ಅವರು ಮುಂಚೂಣಿಯಲ್ಲಿರುತ್ತಾರೆ. ಇದಕ್ಕೆ ಹಲವು ನಿದರ್ಶನಗಳಿವೆ. ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಮೇಕೆದಾಟು ವಿಚಾರದಲ್ಲಿ ಖಂಡಿತವಾಗಿಯೂ ಯಾವ ರೀತಿ ಪ್ರಮಾಣಿಕ ಹೋರಾಟ ಮಾಡಬೇಕೋ, ಎಲ್ಲ ರೀತಿಯ ಹೋರಾಟ ಮಾಡುತ್ತೇವೆ.