ಮುಡಾ ತೀರ್ಪು ರಾಜಕೀಯ ಪ್ರೇರಿತ ಹೇಳಿಕೆ: ಜಮೀರ್‌ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಗೌರ್ನರ್‌ ಸೂಚನೆ

By Kannadaprabha News  |  First Published Nov 11, 2024, 7:15 AM IST

ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ಹೈಕೋರ್ಟ್‌ ತೀರ್ಪಿನ ಕುರಿತು ವಸತಿ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್ ನೀಡಿದ್ದ ಹೇಳಿಕೆಯು ಅವರಿಗೆ ಕಂಟಕ ತಂದೊಡ್ಡಿದೆ. 


ಬೆಂಗಳೂರು (ನ.11): ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ಹೈಕೋರ್ಟ್‌ ತೀರ್ಪಿನ ಕುರಿತು ವಸತಿ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್ ನೀಡಿದ್ದ ಹೇಳಿಕೆಯು ಅವರಿಗೆ ಕಂಟಕ ತಂದೊಡ್ಡಿದೆ. ಜಮೀರ್‌ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ನೀಡಿದ್ದ ದೂರಿನ ಅನ್ವಯ ಸಚಿವರ ವಿರುದ್ಧ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಹೈಕೋರ್ಟ್‌ ಅಡ್ವೊಕೇಟ್‌ ಜನರಲ್‌ ಅವರಿಗೆ ಸೂಚನೆ ನೀಡಿದ್ದಾರೆ.

ಮುಡಾ ಪ್ರಕರಣದ ಸಂಬಂಧ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್‌ ಅನುಮತಿಯನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಆ ವೇಳೆ ಪ್ರತಿಕ್ರಿಯೆ ನೀಡಿದ್ದ ಸಚಿವ ಜಮೀರ್‌ ಅಹಮದ್‌ ಖಾನ್‌, ಇದೊಂದು ರಾಜಕೀಯಪ್ರೇರಿತ ತೀರ್ಪು ಎಂದು ಹೇಳಿದ್ದರು. ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ‘ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ’ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಅದನ್ನು ಹೊರತುಪಡಿಸಿ ನ್ಯಾಯಾಲಯದ ತೀರ್ಪಿನ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸಿಲ್ಲ ಎಂದು ಸ್ಪಷ್ಟನೆ ನೀಡಿ ಕ್ಷಮೆ ಕೋರಿದ್ದರು.

Latest Videos

ಅಘಾಡಿಯಿಂದ ಸ್ತ್ರೀಯರಿಗೆ ₹3000, ಫ್ರೀ ಬಸ್‌ ಪ್ರಯಾಣ: ಪ್ರಣಾಳಿಕೆ ಬಿಡುಗಡೆ

ಇದರ ಬೆನ್ನಲ್ಲೇ ಅಬ್ರಹಾಂ ಅವರು, ಜಮೀರ್‌ ಅಹಮದ್ ಖಾನ್‌ ಮುಡಾ ಪ್ರಕರಣ ಸಂಬಂಧ ಹೈಕೋರ್ಟ್ ತೀರ್ಪಿನ ವಿರುದ್ಧ ನ್ಯಾಯಾಂಗ ನಿಂದನೆಯ ಹೇಳಿಕೆ ನೀಡಿದ್ದಾರೆ. ಅವರ ಮೇಲೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸೆ.26ರಂದು ಅಡ್ವೊಕೇಟ್‌ ಜನರಲ್‌ಗೆ ದೂರು ಸಲ್ಲಿಸಿದ್ದರು. ಬಳಿಕ ಅ.21ರಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದ ಅವರು, ‘ನ್ಯಾಯಾಂಗ ನಿಂದನೆ ಮಾಡಿ ನ್ಯಾಯಾಂಗ ವ್ಯವಸ್ಥೆಯ ಸಮಗ್ರತೆಯನ್ನು ಪ್ರಶ್ನಿಸಿರುವ ಜಮೀರ್‌ ವಿರುದ್ಧ ಕ್ರಮಕ್ಕೆ ನೀಡಿರುವ ಅರ್ಜಿ ಬಗ್ಗೆ ಅಡ್ವೊಕೇಟ್ ಜನರಲ್‌ ಯಾವುದೇ ಕ್ರಮ ಕೈಗೊಂಡಿಲ್ಲ. ದೂರಿನ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಅಡ್ವೊಕೇಟ್‌ ಜನರಲ್‌ ಅವರಿಗೆ ನಿರ್ದೇಶನ ನೀಡುವಂತೆ ರಾಜ್ಯಪಾಲರನ್ನು ಕೋರಿದ್ದರು.

ಕ್ರಮ ಕೈಗೊಳ್ಳಲು ರಾಜ್ಯಪಾಲರ ಸೂಚನೆ: ಈ ಸಂಬಂಧ ರಾಜ್ಯಪಾಲರ ಪರವಾಗಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪಿ. ಪ್ರಭುಶಂಕರ್‌ ಅವರು ಅಡ್ವೊಕೇಟ್‌ ಜನರಲ್‌ ಅವರಿಗೆ ಪತ್ರ ಬರೆದಿದ್ದು, ‘ಸಚಿವ ಜಮೀರ್ ಅಹ್ಮದ್ ಖಾನ್ ಹೈಕೋರ್ಟ್ ತೀರ್ಪಿನ ವಿರುದ್ಧ ಗಂಭೀರ ಆರೋಪ ಮಾಡಿ ನ್ಯಾಯಾಂಗ ವ್ಯವಸ್ಥೆಯನ್ನೇ ಪ್ರಶ್ನಿಸಿದ್ದಾರೆ ಎಂದು ದೂರಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ದೂರು ನೀಡಿದ್ದಾರೆ. ಈ ಸಂಬಂಧ ನಿಯಮದ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸುವಂತೆ ರಾಜ್ಯಪಾಲರಿಂದ ನಿರ್ದೇಶಿತನಾಗಿದ್ದೇನೆ’ ಎಂದು ತಿಳಿಸಿದ್ದಾರೆ.

ಅಬ್ರಹಾಂ ದೂರಿನಲ್ಲಿ ಏನಿತ್ತು?: ಮುಡಾ ಕುರಿತ ಹೈಕೋರ್ಟ್ ತೀರ್ಪನ್ನು ಸಚಿವ ಜಮೀರ್ ಅಹಮದ್​​ ಖಾನ್ ಅವರು ‘ಇದು ರಾಜಕೀಯ ತೀರ್ಪು’ ಎಂದಿದ್ದರು. ನ್ಯಾಯಾಲಯದ ಘನತೆಗೆ ಕುಂದು ಉಂಟು ಮಾಡುವ ರೀತಿಯಲ್ಲಿ ತೀರ್ಪನ್ನು ರಾಜಕೀಯ ಚಟುವಟಿಕೆಗೆ ಹೋಲಿಸಿರುವುದು ಅಕ್ಷಮ್ಯ. ಹೀಗಾಗಿ ಜಮೀರ್‌ ಅಹಮದ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕು ಎಂದು ಕೋರಿ ಟಿ.ಜೆ.ಅಬ್ರಹಾಂ ಅವರು ಅಡ್ವೊಕೇಟ್‌ ಜನರಲ್ ಅವರಿಗೆ ಸೆ.26ರಂದು ಅರ್ಜಿ ಸಲ್ಲಿಸಿದ್ದರು.

ಮಹಾರಾಷ್ಟ್ರ ಬಿಜೆಪಿ ಚುನಾವಣಾ ಪ್ರಣಾಳಿಕೆ: ಸಾಲಮನ್ನಾ, ಸ್ತ್ರೀಯರಿಗೆ ಮಾಸಿಕ ₹2100

ಬಳಿಕ ಅ.21ಕ್ಕೆ ರಾಜ್ಯಪಾಲರನ್ನು ಭೇಟಿಯಾಗಿ, ನಾನು ಸೆ.26ರಂದು ಅರ್ಜಿ ಸಲ್ಲಿಸಿದ್ದರೂ ಅಡ್ವೊಕೇಟ್‌ ಜನರಲ್‌ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ನ್ಯಾಯಾಂಗ ನಿಂದನೆ ಕೃತ್ಯದಲ್ಲಿ ಭಾಗಿಯಾಗಿರುವ ಜಮೀರ್ ಅಹಮದ್ ಅವರಿಗೆ ರಕ್ಷಣೆ ಒದಗಿಸುವ ದುರುದ್ದೇಶದಿಂದ ನನ್ನ ಅರ್ಜಿಯನ್ನು ಬಾಕಿ ಇರಿಸಿಕೊಂಡಿದ್ದಾರೆ. ತ್ವರಿತವಾಗಿ ಅರ್ಜಿಯನ್ನು ವಿಲೇವಾರಿ ಮಾಡಿ, ಸಚಿವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವಂತೆ ಅಡ್ವೊಕೇಟ್‌ ಜನರಲ್‌ ಅವರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು.

click me!