ನನಗೆ ಡಿಕೆ ಬ್ರದರ್ಸ್ ಆಶೀರ್ವಾದ ಇದೆ, ಅನುದಾನ ಸಿಗುತ್ತೆ: ಶಾಸಕ ಎಚ್.ಸಿ.ಬಾಲಕೃಷ್ಣ

Kannadaprabha News   | Kannada Prabha
Published : Jun 25, 2025, 11:02 PM IST
HC Balakrishna

ಸಾರಾಂಶ

ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬೇಕಾದರೆ ಶಾಸಕರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ರವರ ಆಶೀರ್ವಾದ ಪಡೆದುಕೊಳ್ಳಲಿ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ರಾಮನಗರ (ಜೂ.25): ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬೇಕಾದರೆ ಶಾಸಕರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ರವರ ಆಶೀರ್ವಾದ ಪಡೆದುಕೊಳ್ಳಲಿ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು. ಮಾಗಡಿ ಕ್ಷೇತ್ರ ವ್ಯಾಪ್ತಿಯ ಬನ್ನಿಕುಪ್ಪೆ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಆಶೀರ್ವಾದದಿಂದಾಗಿ ಮಾಗಡಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಕೊರತೆ ಉಂಟಾಗಿಲ್ಲ. ಬರುತ್ತಿರುವ ಅನುದಾನದ ಬಗ್ಗೆ ತೃಪ್ತಿಯಿದೆ ಎಂದರು.

ಅನುದಾನ ಬೇಕೆಂದರೆ ಶಾಸಕರು ಡಿಕೆ ಸಹೋದರರ ಆಶೀರ್ವಾದ ಪಡೆದುಕೊಳ್ಳಬೇಕು. ಕಾಂಗ್ರೆಸ್ ಶಾಸಕರು ತಮ್ಮ ಸಮಸ್ಯೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಿಎಂ ಭೇಟಿಯಾಗಿ ಪರಿಹಾರ ಕಂಡುಕೊಳ್ಳಬಹುದು. ಅದನ್ನು ಬಿಟ್ಟು ಬೀದಿಯಲ್ಲಿ ನಿಂತು ಮಾತನಾಡುವುದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಹೇಳಿದರು. ಸಿದ್ದರಾಮಯ್ಯರವರು ಬಜೆಟ್‌ನಲ್ಲಿ ಪ್ರತಿಯೊಬ್ಬ ಶಾಸಕರಿಗೂ ಕ್ಷೇತ್ರದ ಅಭಿವೃದ್ಧಿಗೆ 50 ಕೋಟಿ ರುಪಾಯಿ ಅನುದಾನ ನೀಡುವ ಘೋಷಣೆ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಆ ಅನುದಾನ ಬರಲಿದೆ. ಸಚಿವರು ಗೌರವ ಕೊಡುತ್ತಿದ್ದಾರೊ ಇಲ್ಲವೊ ಎಂಬುದನ್ನು ಸೂಕ್ತ ವೇದಿಕೆಗಳಲ್ಲಿ ಶಾಸಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಎಂದು ತಿಳಿಸಿದರು.

ಕೇಂದ್ರ ನಮ್ಮ ಪಾಲಿನ ಅನುದಾನ ನೀಡಲಿ: ಕೇಂದ್ರ ಸರ್ಕಾರ ನೀಡಬೇಕಾದ ನಮ್ಮ ಪಾಲಿನ ಅನುದಾನ ಕೊಡುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಆ ಅನುದಾನವನ್ನೂ ನೀಡಿದರೆ ಮತ್ತಷ್ಟು ಅಭಿವೃದ್ಧಿ ಕಾರ್ಯಕೈಗೊಳ್ಳಲು ಸಾಧ್ಯವೆಂದು ಪರಮೇಶ್ವರ್ ಹೇಳಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಕೆಲವೊಂದು ಸಂದರ್ಭಗಳಲ್ಲಿ ಏರುಪೇರಾದಾಗ ಮನಸ್ಸಿಗೆ ಬೇಸರ ಉಂಟಾಗುತ್ತದೆ. ಆಗ ಸಮಸ್ಯೆ ಬಗೆಹರಿಯುವುದಿಲ್ಲ. ರಾಜು ಕಾಗೆ ಸಿಎಂ ಮತ್ತು ಡಿಸಿಎಂ ಬಳಿ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.

ರಾಜೀನಾಮೆ ಕೊಡುವುದರಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ನಾನು ರಾಜೀನಾಮೆ ನೀಡಿದರೆ ಉಪಚುನಾವಣೆ ನಡೆಯುತ್ತದೆ. ಮತ್ತೊಬ್ಬರು ಶಾಸಕರಾಗಿ ಆಯ್ಕೆಯಾಗುತ್ತಾರೆ. ಆಗ ಸಮಸ್ಯೆ ಬಗೆಹರಿಯುತ್ತದೆಯೇ. ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಹೋರಾಟ ಮಾಡಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಬೇಕು ಎಂದು ಹೇಳಿದರು.ಇಡಿಯವರು ಬಿಜೆಪಿಯವರನ್ನು ಎಂದೂ ಟಾರ್ಗೆಟ್ ಮಾಡುವುದಿಲ್ಲ. ಕಾಂಗ್ರೆಸ್ ನವರನ್ನು ಟಾರ್ಗೆಟ್ ಮಾಡುವುದೇ ಅವರ ಉದ್ದೇಶ. ಡಿ.ಕೆ.ಸುರೇಶ್ ಅವರನ್ನು ಇಡಿರವರು ವಿಚಾರಣೆ ಮಾಡುತ್ತಿಲ್ಲ. ಬಿಜೆಪಿಯವರು ವಿಚಾರಣೆ ಮಾಡುತ್ತಿದ್ದಾರೆ. ಆದ್ದರಿಂದ ಇನ್ನು ಮುಂದೆ ಬಿಜೆಪಿಯವರ ಇಡಿ ವಿಚಾರಣೆ ಎಂದು ಹೇಳಬಹುದು ಎಂದು ಬಾಲಕೃಷ್ಣ ಕಿಡಿಕಾರಿದರು.

ಕಾಂಗ್ರೆಸ್ ಪಕ್ಷದ ಶಾಸಕರೇ ವಸತಿ ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ ನೀಡಬೇಕೆಂದು ಕೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಇದು ಆ ಶಾಸಕರ ವೈಯಕ್ತಿಕ ಅಭಿಪ್ರಾಯ. ರಾಜೀನಾಮೆ ಬಗ್ಗೆ ಅವರನ್ನೇ ಕೇಳಬೇಕು. ನನಗೆ ತಿಳಿದಿರುವ ಮಟ್ಟಕ್ಕೆ ಜಮೀರ್ ರವರ ಇಲಾಖೆಯಲ್ಲಿ ಅಂತಹ ಭ್ರಷ್ಟಾಚಾರ ನಡೆದಿಲ್ಲ ಎಂದರು.ಕೇಂದ್ರ ಸಚಿವ ಕುಮಾರಸ್ವಾಮಿರವರು ನನಗೇನಾದರು ಸಿಎಂ ಹುದ್ದೆ ಸಿಗುತ್ತದೆಯೇನೊ ಎಂದು ಕನಸು ಕಾಣುತ್ತಿದ್ದಾರೆ. ಚುನಾವಣೆ ಬಂದಾಗ ಜನರು ಯಾರು ಮುಖ್ಯಮಂತ್ರಿ ಆಗಬೇಕೆಂದು ತೀರ್ಮಾನ ಮಾಡುತ್ತಾರೆ. ಈಗಿರುವ ಮುಖ್ಯಮಂತ್ರಿ - ಉಪಮುಖ್ಯಮಂತ್ರಿ ಸರಿ ಇಲ್ಲ ಎಂದರೆ ಬೇರೆಯವರಿಗೆ ಅವಕಾಶ ನೀಡುತ್ತಾರೆ. ಆಗ ಕುಮಾರಸ್ವಾಮಿ ಅಥವಾ ಬಿಜೆಪಿಯವರು ಸಿಎಂ ಆಗುತ್ತಾರೊ ಗೊತ್ತಿಲ್ಲ. ಈಗ ಕಾಂಗ್ರೆಸ್ ಪಕ್ಷಕ್ಕೆ 5 ವರ್ಷ ಅವಕಾಶ ನೀಡಿದ್ದಾರೆ ಎಂದು ಹೇಳಿದರು.

ನವೆಂಬರ್ ವೇಳೆಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರಾ ಎಂಬ ಪ್ರಶ್ನೆಗೆ ಯಾರ ಯೋಗ ಹೇಗಿದಿಯೋ ಗೊತ್ತಿಲ್ಲ. ಒಂದು ಬಾರಿ ಗೆದ್ದಿದ್ದ ಕುಮಾರಸ್ವಾಮಿರವರೇ ಮುಖ್ಯಮಂತ್ರಿಯಾದರು. ಯಾರಿಗೆ ಯಾವ ಸ್ಥಾನ ಒಲಿಯುತ್ತದೆಯೋ ಗೊತ್ತಿಲ್ಲ. ಎಲ್ಲದಕ್ಕೂ ಯೋಗ ಬೇಕು. ಆ ಯೋಗ ಬರುವಾಗ ಕಾಯಬೇಕು ಎಂದು ಬಾಲಕೃಷ್ಣ ಉತ್ತರಿಸಿದರು. ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ , ಬನ್ನಿಕುಪ್ಪೆ (ಬಿ) ಗ್ರಾಪಂ ಅಧ್ಯಕ್ಷ ವಿ.ಆರ್.ಹೊಂಬೇಗೌಡ, ಮಂಚನಾಯಕನಹಳ್ಳಿ ಗ್ರಾಪಂ ಅಧ್ಯಕ್ಷೆ ರಮ್ಯಾ ಧನಂಜಯ್ಯ, ಮುಖಂಡರಾದ ನರಸಿಂಹಯ್ಯ ಮತ್ತಿತರರು ಹಾಜರಿದ್ದರು.

ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ: ಬನ್ನಿಕುಪ್ಪೆ (ಬಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣರವರು ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.ಬೆಂಗಳೂರು - ಮೈಸೂರು ಮುಖ್ಯ ರಸ್ತೆಯಿಂದ ಹೆಜ್ಜಾಲ ಕ್ಷಿಪ್ರ ಗಣಪತಿ ದೇವಸ್ಥಾನ - ದೊಡ್ಡರಿ ಮುಖಾಂತರ ಕೆಂಪದ್ಯಾಪನಹಳ್ಳಿ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕರು, ಬಸವನಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಹೈಮಾಸ್ಟ್ ದೀಪ ಅಳವಡಿಕೆ ಕಾಮಗಾರಿ, ಬೆತ್ತಂಗೆರೆ ಗ್ರಾಮದಲ್ಲಿ ಹೈ ಮಾಸ್ಟ್ ದೀಪ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯತ್ನಾಳ್ ಭಾಷಣಕ್ಕೆ ಟಾಂಗ್ ಕೊಡಲು ಹೋಗಿ ಯಡವಟ್ಟು ಮಾಡಿಕೊಂಡ ಸಚಿವ ಸಂತೋಷ್ ಲಾಡ್!
ಸವಣೂರು ಘಟನೆ ಕಾಂಗ್ರೆಸ್ ಓಲೈಕೆ ರಾಜಕಾರಣದ ಪ್ರತಿಬಿಂಬ, ರಾಜ್ಯದಲ್ಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆಯೂ ಸಂಸದ ಬೊಮ್ಮಾಯಿ ಕಿಡಿ