Latest Videos

ಸರ್ಕಾರದಿಂದ ಅನುದಾನ ತಂದು ಕೊಟ್ಟ ಮಾತಿನಂತೆ ನಡೆದಿದ್ದೇನೆ: ಶಾಸಕ ಎಚ್.ವೈ.ಮೇಟಿ

By Kannadaprabha NewsFirst Published Dec 9, 2023, 10:23 PM IST
Highlights

ಇಲ್ಲಿನ ನವನಗರ ಯೂನಿಟ್-1 ಮತ್ತು 2ರ ನಿರ್ವಹಣೆ ವಿಷಯದಲ್ಲಿ ಯಾರು ಎಷ್ಟೇ ರಾಜಕೀಯ ದುರುದ್ದೇಶ ಮಾಡಿದರೂ, ನಾನು ನುಡಿದಂತೆ ನಡೆದುಕೊಂಡಿದ್ದೇನೆ. ಗುತ್ತಿಗೆದಾರರಿಗೆ ನೀಡಿದ ಭರವಸೆಯಂತೆ ಸರ್ಕಾರದಿಂದ ₹50 ಕೋಟಿ ಅನುದಾನ ತರಲಾಗಿದೆ ಎಂದು ಶಾಸಕ ಎಚ್.ವೈ.ಮೇಟಿ ತಿಳಿಸಿದ್ದಾರೆ.
 

ಬಾಗಲಕೋಟೆ (ಡಿ.09): ಇಲ್ಲಿನ ನವನಗರ ಯೂನಿಟ್-1 ಮತ್ತು 2ರ ನಿರ್ವಹಣೆ ವಿಷಯದಲ್ಲಿ ಯಾರು ಎಷ್ಟೇ ರಾಜಕೀಯ ದುರುದ್ದೇಶ ಮಾಡಿದರೂ, ನಾನು ನುಡಿದಂತೆ ನಡೆದುಕೊಂಡಿದ್ದೇನೆ. ಗುತ್ತಿಗೆದಾರರಿಗೆ ನೀಡಿದ ಭರವಸೆಯಂತೆ ಸರ್ಕಾರದಿಂದ ₹50 ಕೋಟಿ ಅನುದಾನ ತರಲಾಗಿದೆ ಎಂದು ಶಾಸಕ ಎಚ್.ವೈ.ಮೇಟಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ನವನಗರ ಯುನಿಟ್-1, ಯುನಿಟ್-2 ರಲ್ಲಿ ನಿರ್ವಹಣೆಗೆ ಹಣ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದ ಬಿಟಿಡಿಎಗೆ ಸರ್ಕಾರವು ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಕ ₹50 ಕೋಟಿ ನೀಡಲು ಜಲ ಸಂಪನ್ಮೂಲ ಇಲಾಖೆ ಅಧೀನ ಕಾರ್ಯದರ್ಶಿ ವಿಜಯಲಕ್ಷ್ಮೀ ಎಸ್. ಆದೇಶ ಹೊರಡಿಸಿದ್ದಾರೆ ಎಂದು ಹೇಳಿದ್ದಾರೆ.

ನವನಗರದಲ್ಲಿ ಕಸ ವಿಲೇವಾರಿ, ಕುಡಿಯುವ ನೀರು, ಚರಂಡಿ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ನಿರ್ವಹಣೆಗೆ ಹಣ ಇಲ್ಲದೇ ಕಳೆದ 3-4 ತಿಂಗಳಿಂದ ತೀವ್ರ ಸಮಸ್ಯೆ ಉಂಟಾಗಿತ್ತು. ಸಿಬ್ಬಂದಿ ವೇತನ ಇಲ್ಲದೇ ಕೆಲಸ ಕಾರ್ಯ ಸ್ಥಗಿತಗೊಳಿಸಿದ್ದರು. ಈ ಹಿಂದಿನ ಸರ್ಕಾರ ಕಾರ್ಫಸ್ ಫಂಡ್ ವಾಪಸ್ ಪಡೆದ ಪರಿಣಾಮ ನಿರ್ವಹಣೆ ಸಮಸ್ಯೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು. ಈ ಕುರಿತು ಸ್ವತಃ ಬಿಟಿಡಿಎ ಕಚೇರಿಗೆ ತೆರಳಿ, ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಸಭೆ ನಡೆಸಿ, ಕೆಲಸ ಮುಂದುವರೆಸಲು ಹಾಗೂ ತಿಂಗಳಲ್ಲಿ ಗುತ್ತಿಗೆದಾರರ ಬಿಲ್ ಕೊಡಿಸುವುದಾಗಿ ಭರವಸೆ ನೀಡಿದ್ದೆ. ಇದೀಗ ನಾನು ನುಡಿದಂತೆ ನಡೆದಿರುವೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ ಅವರ ಮೇಲೆ ಒತ್ತಡ ತಂದು ಜಲ ಸಂಪನ್ಮೂಲ ಇಲಾಖೆ ಮೂಲಕ ₹50 ಕೋಟಿ ಕಡ್ಡಾಯವಾಗಿ ನೀಡಲು ಕೆಬಿಜೆಎನ್ಎಲ್‌ಗೆ ಆದೇಶಿಸಲಾಗಿದೆ. ಇದು ಕೇವಲ ಸೆಪ್ಟೆಂಬರ್‌ವರೆಗಿನ ಬಿಲ್ ಪಾವತಿ ಮತ್ತು ನಿರ್ವಹಣೆಗೆ ಮಾತ್ರ ಸೂಚಿಸಲಾಗಿದೆ. ಅಲ್ಲದೇ ಬಿಟಿಡಿಎಗೆ 500 ಕೋಟಿ ವಿಶೇಷ ಅನುದಾನ ಹಾಗೂ ಕಾರ್ಪಸ್ ಫಂಡ್ ಮರಳಿ ನೀಡಲೂ ಸರ್ಕಾರದ ಮೇಲೆ ಒತ್ತಡ ತರಲಾಗಿದೆ ಎಂದು ಶಾಸಕ ಮೇಟಿ ತಿಳಿಸಿದ್ದಾರೆ.

ವಿರೋಧ ಪಕ್ಷಗಳು ಹತಾಶರಾಗಿ ಗೂಬೆ ಕೂರಿಸುವ ಕೆಲಸ ಮಾಡುತ್ತಿವೆ: ಯತೀಂದ್ರ ಸಿದ್ದರಾಮಯ್ಯ

ಹಿಂದಿನ ಬಿಜೆಪಿ ಅವಧಿಯಲ್ಲಿ ಕೈಗೊಂಡ ತಪ್ಪು ನಿರ್ಣಯದಿಂದ ಬಿಟಿಡಿಎ ಕಾರ್ಪಸ್ ಫಂಡ್, ಕೆಬಿಜೆಎನ್ಎಲ್ಗೆ ಹೋಗಿದೆ. ಇದರಿಂದ ನವನಗರ ನಿರ್ವಹಣೆಗೆ ಹಣದ ಕೊರತೆ ಎದುರಾಗಿತ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಪರಿಸ್ಥಿತಿ ವಿವರಿಸಿದ ಬಳಿಕ 50 ಕೋಟಿ ರೂ. ಕೆಬಿಜೆಎನ್ಎಲ್ ಮೂಲಕ ಮಂಜೂರು ಆಗಿದೆ. ಕಾರ್ಫಸ್ ಫಂಡ್ ಬಗ್ಗೆಯೂ ಕೂಡಾ ಸರ್ಕಾರಕ್ಕೆ ಒತ್ತಡ ತರಲಾಗಿದೆ.
- ಎಚ್.ವೈ. ಮೇಟಿ, ಶಾಸಕರು

click me!