ನನಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವುದಾಗಿ ನೂತನ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಅವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ಮಾತನಾಡಿದರು.
ತುಮಕೂರು (ಮೇ.23): ನನಗೆ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವುದಾಗಿ ನೂತನ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಅವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ಮಾತನಾಡಿದರು. ಮೊದಲ ಸಚಿವ ಸಂಪುಟದಲ್ಲಿ ಮಹಿಳಾ ಪ್ರತಿನಿಧಿ ಒಬ್ಬರಾದರೂ ಇರಬೇಕಾಗಿತ್ತು. ಈಗ ಎಲ್ಲಾ ಹಿರಿಯರನ್ನು ಮಾಡಿದ್ದಾರೆ. ಮುಂದಿನ ಲಿಸ್ಟ್‌ನಲ್ಲಿ ನಮ್ಮೆಲ್ಲರಿಗೆ ಸಚಿವ ಸ್ಥಾನ ಸಿಗುತ್ತದೆ. ಚುನಾವಣೆಯಲ್ಲಿ ಗೆದ್ದ ನಂತರ, ಸಿದ್ಧಗಂಗಾ ಮಠಕ್ಕೆ ಬಂದಿದ್ದು, ಪೂಜ್ಯರ ಆಶೀರ್ವಾದ ಪಡೆದರು.
ರಾಜ್ಯದ ಭವಿಷ್ಯ ಮತ್ತು ನನ್ನ ಭವಿಷ್ಯ ಉಜ್ವಲ ಆಗಲಿ ಜೊತೆಗೆ ನಮ್ಮ ಸರ್ಕಾರ ಒಳ್ಳೆಯ ಕೆಲಸ ಮಾಡಲಿ ಎಂದು ಆಶೀರ್ವಾದ ಕೇಳೋಕೆ ಬಂದಿದ್ದಾಗಿ ತಿಳಿಸಿದರು. ನನಗೆ ಮುಂಚೆಯಿಂದಲೂ ಲಾಬಿ ಅಂದ್ರೇನೆ ಗೊತ್ತಿಲ್ಲ, ಲಾಬಿ ಮಾಡುವುದಕ್ಕೆ ಹೋಗಲ್ಲ. ಅದರ ಅವಶ್ಯಕತೆ ನನಗಿಲ್ಲ. ಕಾರ್ಯಕರ್ತೆಯಾಗಿ, 22 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೀನಿ. ಯೂತ್ ಕಾಂಗ್ರೆಸ್‌ನಿಂದ ಸಂಘಟನೆ ಮಾಡಿದ್ದೀನಿ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಕೆಲಸ ಮಾಡಿದ್ದೀನಿ. ಯಶಸ್ವಿಯಾಗಿ ಸಚಿವೆ ಸ್ಥಾನ ನಿಭಾಯಿಸುತ್ತೇನೆ ಎಂದರು.
ಸರ್ಕಾರ ಪಿಎಸ್‌ಐ ಹಗರಣ ತನಿಖೆ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
ಸಚಿವ ಸ್ಥಾನಕ್ಕೆ ಹಲವು ಶಾಸಕರಿಂದ ಬೇಡಿಕೆ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ, ಡಿ.ಕೆ.ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವ ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿರುವ ಹಲವು ಶಾಸಕರು ಇದೀಗ ನೂತನ ಸಚಿವ ಸಂಪುಟ ಸೇರುವ ಆಶಯ ವ್ಯಕ್ತಪಡಿಸಿದ್ದಾರೆ. ಕೆಲವರು ತಮ್ಮ ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಡಾ.ಜಿ.ಪರಮೇಶ್ವರ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಿವರಾಜ್ ತಂಗಡಗಿ ಸೇರಿದಂತೆ ವಿವಿಧ ಶಾಸಕರು ಗುರುವಾರ ನಗರದಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂದಿಗೆ ಮಾತನಾಡಿ ಸಚಿವ ಸ್ಥಾನದ ಅವಕಾಶ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಗೆ ಕನಿಷ್ಠ 3 ಸಚಿವ ಸ್ಥಾನ ಬೇಕು: ಶಾಸಕ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ಬಿಜೆಪಿ ಭದ್ರಕೋಟೆಯಾಗಿದ್ದ ಬೆಳಗಾವಿ ಜಿಲ್ಲೆಯಲ್ಲಿ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹಾಗಾಗಿ ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದರು. ಸತೀಶ್ ಜಾರಕಿಹೊಳಿ ಮಾತನಾಡಿ, ಇಬ್ಬರಿಗೂ ಸಿಎಂ ಹುದ್ದೆ ನೀಡಲು ಸಾಧ್ಯವಿಲ್ಲದ ಕಾರಣ ಹಿರಿತನದ ಆಧಾರದಲ್ಲಿ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ನೀಡಿದೆ. ಡಿ.ಕೆ.ಶಿವಕುಮಾರ್ ಅವರಿಗೂ ಸೂಕ್ತ ಗೌರವ ಕೊಡಬೇಕೆಂದು ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.
ಆದರೆ, ಈ ಹುದ್ದೆಗೆ ಯಾವುದೇ ಮಹತ್ವ ಇಲ್ಲ. ನಾವು ಇಬ್ಬರ ಜೊತೆಗೂ ಇರುತ್ತೇವೆ. ನಮ್ಮ ಬೆಳಗಾವಿ ಜಿಲ್ಲೆಯಲ್ಲಿ 11 ಶಾಸಕರನ್ನು ಗೆಲ್ಲಿಸಿಕೊಂಡು ಬಂದಿದ್ದೇವೆ. ಜಿಲ್ಲೆಗೆ ಕನಿಷ್ಠ ಮೂರು ಸಚಿವ ಸ್ಥಾನ ನೀಡಬೇಕು. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು ಜನರಿಗೆ ಹತ್ತಿರವಾಗಿ ಕೆಲಸ ಮಾಡಲು ಪೂರಕವಾದ ಖಾತೆಯನ್ನು ಬಯಸುತ್ತೇನೆ ಎಂದು ಹೇಳಿದರು. ಕನಕಗಿರಿ ಶಾಸಕ ಶಿವರಾಜ್ ತಂಗಡಗಿ ಮಾತನಾಡಿ, ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ಬೋವಿ ಸಮುದಾಯ ಕೋಟಾದಲ್ಲಿ ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವೆ. ಮೊದಲು ಮಂತ್ರಿ ಮಾಡಲಿ, ಆಮೇಲೆ ಖಾತೆ ನೊಡೋಣ ಎಂದರು.
ಸಚಿವ ಸಂಪುಟ ವಿಸ್ತರಣೆ: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಜಟಾಪಟಿ!
ಇಂತಹದ್ದೇ ಖಾತೆ ಬೇಕೆಂದು ಕೇಳಲ್ಲ: ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ಹೈಕಮಾಂಡ್ ನಿರ್ಧಾರ ಉತ್ತಮವಾಗಿದೆ. ಮುಂಬರುವ ಬಿಬಿಎಂಪಿ, ಸಂಸತ್ ಚುನಾವಣೆ, ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸುವ ಸವಾಲು ನಮ್ಮ ಮುಂದಿದೆ. ಇದಕ್ಕಾಗಿ ಉತ್ತಮ ಆಡಳಿತ ನೀಡಬೇಕು. ಸದ್ಯಕ್ಕೆ ಮುಖ್ಯಮಂತ್ರಿಗಳ ಜೊತೆ 10 ರಿಂದ 15 ಜನ ಸಚಿವರು ಪ್ರಮಾಣವಚನ ಸ್ವೀಕರಿಸಬಹುದು. ಉಳಿದದ್ದನ್ನು ಜಾತಿ, ಸಮುದಾಯ, ಪ್ರದೇಶವಾರು ಗಮನದಲ್ಲಿಟ್ಟುಕೊಂಡು ನೀಡಲಾಗುತ್ತದೆ. ನಾನು ಎಂದು ಕೂಡ ನನಗೆ ಇಂತಹದ್ದೇ ಹುದ್ದೆ ನೀಡಿ ಎಂದು ಕೇಳಿದವನಲ್ಲ. ಹೈ ಕಮಾಂಡ್ ಏನು ನೀಡುತ್ತೋ ಆ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದರು.