ಒರಿಜಿನಲ್‌ ಜೆಡಿಎಸ್‌ಗೆ ನಾನೇ ಅಧ್ಯಕ್ಷ, ಇಂಡಿಯಾಕ್ಕೆ ನಮ್ಮ ಬೆಂಬಲ: ಇಬ್ರಾಹಿಂ

By Kannadaprabha News  |  First Published Oct 18, 2023, 5:43 AM IST

ಬಿಜೆಪಿ - ಜೆಡಿಎಸ್‌ ಮೈತ್ರಿ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಇದೀಗ ನಮ್ಮದೇ ‘ಒರಿಜಿನಲ್ ಜೆಡಿಎಸ್‌’ ಎಂದು ಹೇಳುವ ಮೂಲಕ ಕುತೂಹಲ ಸೃಷ್ಟಿಸಿದ್ದಾರೆ. 


ಬೆಂಗಳೂರು (ಅ.18): ಬಿಜೆಪಿ - ಜೆಡಿಎಸ್‌ ಮೈತ್ರಿ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಇದೀಗ ನಮ್ಮದೇ ‘ಒರಿಜಿನಲ್ ಜೆಡಿಎಸ್‌’ ಎಂದು ಹೇಳುವ ಮೂಲಕ ಕುತೂಹಲ ಸೃಷ್ಟಿಸಿದ್ದಾರೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನ ಉಚ್ಚಾಟನೆ ಮಾಡುವ ಕಾಲ ಪಕ್ವವಾಗಿಲ್ಲ ಎಂಬ ಹೇಳಿಕೆಯಿಂದಾಗಿ ಇಬ್ರಾಹಿಂ ನಡೆಯ ಹಿಂದಿರುವ ತಂತ್ರಗಾರಿಕೆ ಏನು? ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಅಲ್ಲದೇ, ಪಕ್ಷವು ಇಬ್ಭಾಗವಾಗಲಿದೆಯೇ ಎಂಬ ಕುತೂಹಲವೂ ಕೆರಳಿಸಿದೆ. ಸೋಮವಾರ ನಗರದ ನಾಗವಾರ ಮುಖ್ಯರಸ್ತೆಯಲ್ಲಿನ ಸಿಎಂಎ ಕಲ್ಯಾಣ ಮಂಟಪದಲ್ಲಿ ಇಬ್ರಾಹಿಂ ಜೆಡಿಎಸ್‌ ಚಿಂತನ-ಮಂಥನ ಸಭೆ ನಡೆಸಿದರು. 

ಈ ವೇಳೆ ಬಿಜೆಪಿ ಜತೆಗಿನ ಮೈತ್ರಿಗೆ ಬೇಸರ ವ್ಯಕ್ತಪಡಿಸಿದರು. ‘ಎನ್‌ಡಿಎ ಸೋಲಿಸಬೇಕು ಎಂಬ ಕಾರಣಕ್ಕಾಗಿ ವಿಪಕ್ಷಗಳ ‘ಇಂಡಿಯಾ’ ಕೂಟಕ್ಕೆ ಬೆಂಬಲ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸದ್ಯ ಒರಿಜಿನಲ್‌ ಜೆಡಿಎಸ್‌ ಅಧ್ಯಕ್ಷ ನಾನಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ಯಾರಿಂದಲೂ ತೆಗೆಯಲು ಸಾಧ್ಯವಿಲ್ಲ. ಅದಕ್ಕೆ ಸಭೆ ನಡೆಸಿ ತೀರ್ಮಾನ ಮಾಡಬೇಕು. ಮೈತ್ರಿ ಬಗ್ಗೆ ನಿಲುವು ತಿಳಿಸಲು ಕೋರ್‌ ಕಮಿಟಿ ಮಾಡಲಾಗುವುದು. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿಯಾಗಿ ಸಭೆಯ ನಿರ್ಣಯ ತಿಳಿಸಲಾಗುವುದು’ ಎಂದು ಹೇಳಿದರು.

Tap to resize

Latest Videos

ಜೆಡಿಎಸ್ ಸೇರಲು ಕುಮಾರಸ್ವಾಮಿ ಮನೆಗೆ ನಾ ಹೋಗಿಲ್ಲ, ಅವರೇ ನಮ್ಮ ಮನೆಗೆ ಬಂದಿದ್ದರು: ಸಿಎಂ ಇಬ್ರಾಹಿಂ

‘ಎಚ್‌.ಡಿ.ಕುಮಾರಸ್ವಾಮಿ ಯಾರ ಅಭಿಪ್ರಾಯವನ್ನೂ ಕೇಳದೆ ಏಕಾಏಕಿ ದೆಹಲಿಗೆ ಹೋಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜೊತೆಗೆ ಫೋಟೋ ತೆಗೆಸಿಕೊಂಡು ಮೈತ್ರಿ ಘೋಷಣೆ ಮಾಡಿದ್ದಾರೆ. ಜೆಡಿಎಸ್‌ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟ ಪಕ್ಷವಾಗಿದೆ. ನಾವು ಅಲ್ಲಿಗೆ ಹೋಗುವುದಲ್ಲ... ಅವರೇ ಇಲ್ಲಿ ಬರಲಿ ಎಂದು ತಿಳಿಸಿದ್ದೆ. ಬಿಜೆಪಿಯವರು ಎನ್‌ಆರ್‌ಸಿಗೆ ಕೈ ಹಾಕುವುದಿಲ್ಲ ಎಂಬ ಭರವಸೆ ನೀಡುತ್ತಾರೆಯೇ ಎಂಬ ಪ್ರಶ್ನೆ ಮುಂದಿಟ್ಟಿದ್ದೆ’ ಎಂದರು.

‘ಮೈತ್ರಿ ಒಪ್ಪಿಗೆ ಇಲ್ಲ ಎಂದು ಕುಮಾರಸ್ವಾಮಿಗೆ ತಿಳಿಸಿದ್ದೇನೆ. ಮೈತ್ರಿಯ ಬಗ್ಗೆ ಪಕ್ಷದಲ್ಲಿ ಸಭೆಯಾಗಿಲ್ಲ ಮತ್ತು ನಿರ್ಣಯವನ್ನೂ ಕೈಗೊಂಡಿಲ್ಲ. ಎಚ್‌.ಡಿ.ದೇವೇಗೌಡ ಅವರೊಂದಿಗೆ ಮಾತನಾಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ದೇವೇಗೌಡರಿಗೆ 92 ವರ್ಷವಾಗಿದ್ದು, ತಪ್ಪು ಹೆಜ್ಜೆ ಇಡುವುದಿಲ್ಲ ಎಂಬ ನಂಬಿಕೆ ಇದೆ. ದೇವೇಗೌಡ ಅವರನ್ನು ಪ್ರಧಾನಿ ಮಾಡಿದ್ದೇ ಜಾತ್ಯತೀತ ತತ್ವ. ಹೀಗಾಗಿ ಸಿದ್ಧಾಂತ ಕುರಿತು ಬಿಜೆಪಿ ಜತೆಗೆ ಭಿನ್ನಾಭಿಪ್ರಾಯ ಇದೆ’ ಎಂದು ತಿಳಿಸಿದರು.

‘ದೇವೇಗೌಡ ಅವರು ನಮ್ಮ ರಾಷ್ಟ್ರದ ನಾಯಕರಾಗಿದ್ದು, ತಂದೆ ಸಮಾನ. ಅವರ ಮನಸ್ಸಿನಲ್ಲಿ ನೋವಿದೆ. ಆದರೆ ಸ್ವಯಂ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ. ಈಗಲೂ ಅವಕಾಶ ಇದೆ. ಬಿಜೆಪಿ ಜೊತೆ ಹೋಗಲ್ಲ ಎಂದು ವಾಪಸ್ ಬಂದರೆ ಹೀರೋ ಆಗುತ್ತಾರೆ. ಜೆಡಿಎಸ್ ಯಾವ ಕಾರಣಕ್ಕೂ ಎನ್‌ಡಿಎ ಜತೆ ಹೋಗುವುದಿಲ್ಲ. 19 ಶಾಸಕರ ಜತೆ ನಾನೇ ಮಾತನಾಡುತ್ತೇನೆ. ಒಕ್ಕಲಿಗರು ಸಹ ಕೈ ಬಿಟ್ಟಿದ್ದಾರೆ. ಮುಸ್ಲಿಮರನ್ನು ನಂಬಿ ರಾಜಕೀಯ ಮಾಡಿಲ್ಲ ಎನ್ನುತ್ತಾರೆ. ಆದರೆ ಯಾರನ್ನು ನಂಬಿ ರಾಜಕೀಯ ಮಾಡಿದ್ದರೋ ಅವರೇ ಕೈ ಬಿಟ್ಟರು. 

ಒಂದು ವರ್ಷ ರಾತ್ರಿ-ಹಗಲು ತಿರುಗಾಡಿದ್ದು, ಸಮಾಜದವರ ಕಾಲು ಹಿಡಿದು ಮತ ಹಾಕಿಸಿದ್ದೇನೆ. ಇದಕ್ಕೆ ಕುಮಾರಸ್ವಾಮಿ ಅವರು ನೀಡುವ ಪ್ರತಿ ಉಪಕಾರನಾ? ನನಗೆ ವೈಯಕ್ತಿಕ ದ್ವೇಷ ಇಲ್ಲ, ಚನ್ನಪಟ್ಟಣದಲ್ಲಿ 20 ಸಾವಿರ ಮುಸ್ಲಿಮರು ಮತ ಹಾಕಿದ್ದರಿಂದ ಗೆದ್ದಿದ್ದಾರೆ. ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಿದಾಗಲೂ ಮುಸ್ಲಿಮರು ಮತ ಹಾಕಿದ್ದಾರೆ’ ಎಂದು ಕಿಡಿಕಾರಿದರು. ಸಭೆಯಲ್ಲಿ ಜೆಡಿಯು ನಾಯಕ ಮಹಿಮಾ ಪಟೇಲ್‌, ವಿಧಾನಪರಿಷತ್‌ನ ಮಾಜಿ ಸದಸ್ಯ ಎಂ.ಪಿ.ನಾಡಗೌಡ, ಪಕ್ಷದ ನಾಯಕ ಇಮ್ರಾನ್‌ ಪಾಷಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಲೋಕಸಭೆಗಿಂತ, ವಿಧಾನಸಭೆ ಮೇಲೆ ಬಿಜೆಪಿ-ಜೆಡಿಎಸ್ ಮೈತ್ರಿ ಪ್ರಭಾವ ಬೀರುತ್ತೆ: ಸಿ.ಎಂ.ಇಬ್ರಾಹಿಂ

ಕುಮಾರಸ್ವಾಮಿ ಫೋಟೋಗೆ ಕೊಕ್‌: ಬಿಜೆಪಿಯೊಂದಿಗಿನ ಮೈತ್ರಿಗೆ ಬೇಸರ ವ್ಯಕ್ತಪಡಿಸಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕರೆದಿದ್ದ ಚಿಂತನ-ಮಂಥನ ಸಭೆಯ ಬ್ಯಾನರ್‌ನಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಫೋಟೋಗೆ ಕೊಕ್‌ ನೀಡಲಾಗಿತ್ತು. ಸಭೆಯ ಬ್ಯಾನರ್‌ನಲ್ಲಿ ಇಬ್ರಾಹಿಂ ಜತೆಗೆ ಕೇವಲ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಫೋಟೋ ಮಾತ್ರ ಇತ್ತು. ಎಚ್‌.ಡಿ.ಕುಮಾರಸ್ವಾಮಿ ಫೋಟೋ ಇಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಭೆಯಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್‌, ಎಂ.ಪಿ.ನಾಡಗೌಡ, ಶಫೀವುಲ್ಲಾ ಸೇರಿದಂತೆ ಮುಸ್ಲಿಂ ನಾಯಕರು ಭಾಗವಹಿಸಿದ್ದರು. ಹೀಗಾಗಿ ಇಬ್ರಾಹಿಂ ನಡೆಯ ಕುರಿತು ಕುತೂಹಲ ಮೂಡಿಸಿದೆ.

click me!