
ಬೆಂಗಳೂರು : ಕಾಂಗ್ರೆಸ್ಸಿಗರು ಕುಮಾರಸ್ವಾಮಿ ಆರೋಗ್ಯ ಕೆಟ್ಟಿದೆ. ನಮ್ಮ ಪಕ್ಷಕ್ಕೆ ಬನ್ನಿ ಎಂದು ನಮ್ಮ ಶಾಸಕರನ್ನು ಕರೆಯುತ್ತಿದ್ದಾರೆ. ನಾನು ಆರೋಗ್ಯವಾಗಿ ಗಟ್ಟಿಮುಟ್ಟಾಗಿದ್ದೇನೆ. ಏನೂ ಚಿಂತೆ ಬೇಡ, ಇನ್ನೂ ನಿಮ್ಮ ಜೊತೆ ಹದಿನೈದು ಇಪ್ಪತ್ತು ವರ್ಷ ಇರುತ್ತೇನೆ. ಜನತಾದಳವೂ ಇರುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ.ಭವನದ ಆವರಣದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ನೇತೃತ್ವದ ‘ಜನರೊಂದಿಗೆ ಜೆಡಿಎಸ್’ ಪಕ್ಷ ಸಂಘಟನಾ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿ, ನನಗೆ ಮೂರು ಬಾರಿ ಹಾರ್ಟ್ ಆಪರೇಷನ್ ಆಗಿದೆ. ಎರಡು ಬಾರಿ ಸ್ಟ್ರೋಕ್ ಆಗಿದೆ. ಆದರೂ ನಾನು ಆರೋಗ್ಯವಾಗಿದ್ದೇನೆ. ನಮ್ಮ ಪಕ್ಷಕ್ಕೆ ಶಕ್ತಿ ಇದೆ. ಜೆಡಿಎಸ್ ಬಿಟ್ಟು ಬನ್ನಿ ಎನ್ನುವವರಿಗೆ ಈ ಸಭೆಯ ಮೂಲಕ ಉತ್ತರ ಕೊಟ್ಟಿದ್ದೀರಿ. ಧೈರ್ಯದಿಂದ ಪಕ್ಷ ಸಂಘಟನೆ ಮಾಡಿ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ಯಾವುದೇ ಅಪಪ್ರಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಕೈಲಾಗದವರು ಅಪಪ್ರಚಾರ ಮಾಡುತ್ತಾರೆ. ಅವರಿಗೆಲ್ಲ ದಿಟ್ಟ ಉತ್ತರ ಕೊಡೋಣ ಎಂದರು.
ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ
ಬೆಂಗಳೂರು : ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮೈತ್ರಿ ಕುರಿತ ಯಾವುದೇ ಅಪಪ್ರಚಾರಗಳಿಗೆ ವಿಚಲಿತರಾಗದೆ ಈಗಿನಿಂದಲೇ ಪಕ್ಷ ಸಂಘಟನೆಗೆ ಒತ್ತು ನೀಡಿ. ಕ್ಷೇತ್ರ ಗಟ್ಟಿಮಾಡಿಕೊಳ್ಳಿ. ದೆಹಲಿಯಿಂದ ಸೀಟು ತರುವುದು ನನ್ನ ಜವಾಬ್ದಾರಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ರಾಜ್ಯ ಕಚೇರಿ ಜೆ.ಪಿ.ಭವನದ ಆವರಣದಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ನೇತೃತ್ವದ ‘ಜನರೊಂದಿಗೆ ಜೆಡಿಎಸ್’ ಪಕ್ಷ ಸಂಘಟನಾ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೆಡಿಎಸ್ ಮುಗಿದೇ ಹೋಯಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರಲ್ವಾ? ಇಲ್ಲಿ ಜನ ಸೇರಿರುವುದು ನೋಡಿದರೆ ಅವರಿಗೆ ಇಂದೇ ಸಿಕ್ಕಿದಂತಿದೆ. ಸ್ಥಳೀಯವಾಗಿ ನಾಲ್ಕೈದು ಮಂದಿ ಆಡುವ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ ಎಂದರು.
ಶ್ವೇತಪತ್ರ ಪ್ರಕಟಿಸಿ:
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಯಾದಗಿರಿಯಲ್ಲಿ ಕಲ್ಯಾಣ ಕರ್ನಾಟಕದ ಉದ್ಧಾರ ಮಾಡುತ್ತೇವೆ ಎಂದು ಉದ್ದುದ್ದ ಭಾಷಣ ಮಾಡಿದ್ದಾರೆ. ಹಾಗಾದರೆ ನಿಮ್ಮ ಪಕ್ಷದ ಆಡಳಿತಾವಧಿಯಲ್ಲಿ, ಅದೂ ಎರಡು ವರ್ಷಗಳ ಅವಧಿಯಲ್ಲಿ ಏನೇನು ಕೆಲಸ ಮಾಡಿದ್ದೀರಿ? ನೀಡಿರುವ ಅನುದಾನ, ಮಾಡಿರುವ ವೆಚ್ಚ, ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.