Karnataka Politics: 'ನಾನು ಸಿದ್ದು, ನನ್ನನ್ನು ಯಾರ ಜತೆಗೂ ಹೋಲಿಸಬೇಡಿ'

Published : Mar 09, 2022, 07:59 AM ISTUpdated : Mar 09, 2022, 08:01 AM IST
Karnataka Politics: 'ನಾನು ಸಿದ್ದು, ನನ್ನನ್ನು ಯಾರ ಜತೆಗೂ ಹೋಲಿಸಬೇಡಿ'

ಸಾರಾಂಶ

*   ಸಚಿವ ಸೋಮಣ್ಣ ವಿರುದ್ಧ ವಿಪಕ್ಷ ನಾಯಕ ಗರಂ *  ಸೋಮಣ್ಣ ಸರ್ಟಿಫಿಕೇಟ್‌ ಕೊಡುವ ಅಗತ್ಯ ಇಲ್ಲ *  ಪತ್ರಕರ್ತರತ್ತ ತಿರುಗಿ ರಾಜ್ಯ ಸರ್ಕಾರಕ್ಕೆ ಸಿದ್ದು ಟಾಂಗ್‌

ಬೆಂಗಳೂರು(ಮಾ.09): ‘ನಾನು ಯಾರ ಪಂಕ್ತಿಗೂ ಸೇರಲ್ಲ. ಸಿದ್ದರಾಮಯ್ಯ, ಸಿದ್ದರಾಮಯ್ಯನೇ.. ನಾನು ನಾನೇ.. ನಾನು ಯಾರಿಗೂ ಹೋಲಿಕೆ ಮಾಡಿಕೊಳ್ಳುವುದಿಲ್ಲ’ ಎಂದು ವಸತಿ ಸಚಿವ ವಿ.ಸೋಮಣ್ಣ(V Somanna) ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಗರಂ ಆದ ಪ್ರಸಂಗ ನಡೆಯಿತು.

ಮಂಗಳವಾರ ಭೋಜನ ವಿರಾಮದ ಬಳಿಕ ಕಲಾಪ ಆರಂಭವಾದ ವೇಳೆ ಬಜೆಟ್‌(Budget) ಮೇಲಿನ ಚರ್ಚೆಗೂ ಮುನ್ನ ಸಚಿವ ವಿ.ಸೋಮಣ್ಣ ಅವರು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ, ‘ನಾವು ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ದೇವೇಗೌಡರು, ಶಾಂತವೇರಿ ಗೋಪಾಲಗೌಡ, ಜೆ.ಎಚ್‌.ಪಟೇಲ್‌ ಅವರನ್ನು ಕೋಟ್‌ ಮಾಡುತ್ತೇವೆ. ನಾನು ಸಹ ಕೆಲವರ ಚರ್ಚೆಯನ್ನು ನೋಡಿಕೊಂಡಿದ್ದೇನೆ. ಅಂಥವರ ಪಂಕ್ತಿಯಲ್ಲಿ ನೀವು ಬರಬೇಕು ಎಂಬುದು ನನ್ನ ಅಭಿಪ್ರಾಯ. ನಿಮ್ಮ ಚಿಂತನೆಗಳು ಇಂತಹವರ ಪಂಕ್ತಿ ಸೇರಬೇಕು’ ಎಂದು ಸಲಹೆ ನೀಡಿದರು.

Karnataka Politics; ವಿಧಾನಸಭೆಯಲ್ಲಿ ಸಿದ್ದು, ಸಿಎಂ ಭಾರೀ ಜಟಾಪಟಿ..!

ಇದಕ್ಕೆ ಸಿಟ್ಟಾದ ಸಿದ್ದರಾಮಯ್ಯ, ‘ನನ್ನನ್ನು ಯಾರಿಗೂ ಹೋಲಿಕೆ ಮಾಡಲು ಹೋಗಲ್ಲ. ಸಿದ್ದರಾಮಯ್ಯ ಸಿದ್ದರಾಮಯ್ಯನೇ. ದೇವರಾಜ ಅರಸುಗೆ, ಎಸ್‌.ಎಂ.ಕೃಷ್ಣ ಅವರಿಗೂ, ನಿನಗೂ ಹೋಲಿಕೆ ಮಾಡಿಕೊಳ್ಳುವುದಿಲ್ಲ. ಸಿದ್ದರಾಮಯ್ಯ, ಸಿದ್ದರಾಮಯ್ಯನೇ. ಮಹಾತ್ಮಗಾಂಧಿ, ಅಂಬೇಡ್ಕರ್‌ಗೆ ನಾವು ಹೋಲಿಕೆ ಮಾಡಿಕೊಳ್ಳಲಾಗುತ್ತಾ? ಜಯಪ್ರಕಾಶ್‌, ಲೋಹಿಯಾ ಅವರಿಗೆ ಹೋಲಿಕೆ ಮಾಡಿಕೊಳ್ಳಲಾಗುತ್ತಾ? ನೀವು ಹೇಳುವುದು ಗೊತ್ತಾಗುತ್ತದೆ. ಅಂತಹವರ ಮಟ್ಟಕ್ಕೆ ಹೋಗಿಲ್ಲ ಎಂಬರ್ಥದಲ್ಲಿ ಹೇಳಿದ್ದೀರಿ. ಇವೆಲ್ಲವೂ ನನಗೆ ಅರ್ಥ ಆಗಲ್ವಾ? ನನಗೆ ಸೋಮಣ್ಣ ಸರ್ಟಿಫಿಕೇಟ್‌ ಕೊಡುವ ಅಗತ್ಯ ಇಲ್ಲ’ ಎಂದು ಗರಂ ಆದರು.

ಈ ವೇಳೆ ಉಪಸಭಾಧ್ಯಕ್ಷ ಆನಂದ ಮಾಮನಿ, ಕಂದಾಯ ಸಚಿವ ಆರ್‌.ಅಶೋಕ್‌ ಅವರು ಸಿದ್ದರಾಮಯ್ಯ ಅವರ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದರು.

‘ನಾನು ಗೋಪಾಲಗೌಡ, ಅರಸು ಅಲ್ಲ. ಆ ಕಾಲ ಬೇರೆ, ಈ ಕಾಲ ಬೇರೆ. ಇವತ್ತಿನ ಚುನಾವಣಾ ವ್ಯವಸ್ಥೆಗೂ, ಅವತ್ತಿನ ವ್ಯವಸ್ಥೆಗೂ ಸಾಕಷ್ಟು ವ್ಯತ್ಯಾಸ ಇದೆ. ಆತ್ಮವಂಚನೆ ಮಾಡಿ ರಾಜಕೀಯ ಮಾಡಬಾರದು. ಸದನಲ್ಲಿ ಹೇಗೆ ಮಾತನಾಡಬೇಕು, ವರ್ತಿಸಬೇಕು ಎಂಬುದು ಗೊತ್ತಿದೆ. ಪ್ರಸ್ತುತ ಕಾಲದಲ್ಲಿ ಚುನಾವಣೆಯನ್ನು(Election) ಪ್ರಾಮಾಣಿಕವಾಗಿ ಎದುರಿಸೋಕೆ ಆಗುತ್ತಾ? ಆತ್ಮವಂಚನೆ ಮಾಡಿಕೊಳ್ಳಬಾರದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಉಪಸಭಾಧ್ಯಕ್ಷ ಆನಂದ ಮಾಮನಿ, ಕಂದಾಯ ಸಚಿವ ಆರ್‌.ಅಶೋಕ್‌(R Ashok) ಅವರು ಸಿದ್ದರಾಮಯ್ಯ ಅವರ ಮನವೊಲಿಕೆ ಮಾಡುವ ಪ್ರಯತ್ನ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮಧ್ಯಪ್ರವೇಶಿಸಿ, ‘ನೀವು ಹೇಳುವುದರಲ್ಲಿ ಸತ್ಯ ಇದೆ. ಚುನಾವಣೆ ಯಾವ ಮಟ್ಟಕ್ಕೆ ಹೋಗಿದೆ ಎಂಬುದು ಶೋಭೆ ತರುವಂತಹ ಮಟ್ಟದಲ್ಲಿಲ್ಲ. ಹಿಂದಿನ ನೆನಪುಗಳ ಮಾತ್ರ ಇದೆ. ಅವುಗಳನ್ನು ನೆನಪಿಸಿಕೊಳ್ಳದೆ ಇದ್ದರೆ ಏನಾಗಬಹುದು. ವ್ಯವಸ್ಥೆ ಪಾತಾಳಕ್ಕೆ ತಲುಪುವ ಮೊದಲು ಎಲ್ಲರೂ ಚಿಂತನೆ ಮಾಡಬೇಕಾಗುತ್ತದೆ. ಜಗತ್ತಿನ ಬದಲಾವಣೆ ಭ್ರಮೆ ಬೇಡ. ಸ್ವಲ್ಪಮಟ್ಟಕ್ಕೆ ಬದಲಾವಣೆ ಮಾಡುವ ಪ್ರಯತ್ನ ಮಾಡಬೇಕು’ ಎಂದರು.

ಪತ್ರಕರ್ತರತ್ತ ತಿರುಗಿ ರಾಜ್ಯ ಸರ್ಕಾರಕ್ಕೆ ಸಿದ್ದು ಟಾಂಗ್‌

ವಿಧಾನಸಭೆಯಲ್ಲಿನ ಬಜೆಟ್‌ ಕುರಿತ ಚರ್ಚೆ ವೇಳೆ ಪತ್ರಕರ್ತರನ್ನು ನೋಡುತ್ತಾ ಮಾತನಾಡಿದ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಶಾಸಕ ಕೆ.ಆರ್‌. ರಮೇಶ್‌ಕುಮಾರ್‌ ‘ಜಾಣರಿದ್ದೀರಿ’ ಎಂದು ಕಿಚಾಯಿಸಿದ್ದರ ಪರಿಣಾಮ ಸ್ವಾರಸ್ಯಕರ ಚರ್ಚೆ ನಡೆಯಿತು.

ಬಜೆಟ್‌ ಮೇಲಿನ ಚರ್ಚೆ ವೇಳೆ ಗಂಭೀರವಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ‘ಈ ಬಜೆಟ್‌ಗೆ ಪಾವಿತ್ರ್ಯತೆ ಇದೆಯೇ? ನೀವು ಮಾತಿನಲ್ಲಿ ಹೇಳಿರುವ ಅಭಿವೃದ್ಧಿ ಮಂತ್ರಗಳು ಬಜೆಟ್‌ನಲ್ಲಿ ಇವೆಯೇ’ ಎಂದು ತಮ್ಮ ಬಲ ಭಾಗಕ್ಕೆ ಕುಳಿತಿದ್ದ ಪತ್ರಕರ್ತರತ್ತ ತಿರುಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದರು.

ಬೊಮ್ಮಾಯಿ ಮಂಡಿಸಿದ್ದು ಸಾಲದ ಬಜೆಟ್‌: ಇದು ಡಬಲ್‌ ಎಂಜಿನ್‌ ಸರ್ಕಾರವಲ್ಲ, ಡಬ್ಬಾ ಸರ್ಕಾರ: ಸಿದ್ದು

ಕಾಂಗ್ರೆಸ್‌ ಕೆ.ಆರ್‌. ರಮೇಶ್‌ಕುಮಾರ್‌, ‘ಅವರತ್ತ (ಪತ್ರಕರ್ತರು) ತಿರುಗಿ ಹೇಳಿದರೆ, ಅವರೇನು ಮಾಡುತ್ತಾರೆ?’ ಎಂದು ಕಾಲೆಳೆದರು. ಇದಕ್ಕೆ ಸಿದ್ದರಾಮಯ್ಯ, ‘ಅವರು ಪತ್ರಿಕೆಗಳಲ್ಲಿ ಬರೆಯುತ್ತಾರೆ. ಆಡಳಿತ ಪಕ್ಷದವರು ಹೇಗೂ ನಮ್ಮ ಮಾತು ಕೇಳಲ್ಲ. ಹೀಗಾಗಿ ಅವರಾದರೂ ಕೇಳಿ ಬರೆದುಕೊಳ್ಳುತ್ತಾರೆಂದು ಆ ಕಡೆ ತಿರುಗಿ ಹೇಳಿದೆ’ ಎಂದರು.

ತಟ್ಟನೆ ಪ್ರತಿಕ್ರಿಯಿಸಿ ‘ಜಾಣರಿದ್ದೀರಿ’ ಎಂದು ರಮೇಶ್‌ ಕುಮಾರ್‌ ಹೇಳಿದರು. ಆಗ ಸಿದ್ದರಾಮಯ್ಯ, ‘ನಿಮ್ಮಿಂದಲೇ ಅಲ್ಲವೇ ಕಲಿತದ್ದು? ನೀವು ಹೇಳಿದಂತೆ ಮಾಡುತ್ತಿದ್ದೇನೆ’ ಎಂದು ತಿರುಗೇಟು ನೀಡಿದರು. ಮಧ್ಯಪ್ರವೇಶಿಸಿದ ಜೆ.ಸಿ. ಮಾಧುಸ್ವಾಮಿ, ‘ನೀವು ಬೇರೊಬ್ಬರು ಹೇಳಿದ್ದನ್ನು ಕೇಳಿ ಮಾತನಾಡುವುದುಂಟೇ?’ ಎಂದು ಚಟಾಕಿ ಹಾರಿಸಿದರು.

ಈ ವೇಳೆ ಸದನದಲ್ಲಿ ಇಲ್ಲದ ಕೆ.ಎಸ್‌. ಈಶ್ವರಪ್ಪ (KS Eshwarappa) ಅವರ ಹೆಸರು ಪ್ರಸ್ತಾಪಿಸಿದ ಸಿದ್ದರಾಮಯ್ಯ, ‘ನಾನು ಎಲ್ಲರ ಮಾತನ್ನೂ ಕೇಳುತ್ತೇನೆ. ನನ್ನ ಮಾತಿನ ನಡುವೆಯೇ ನಿಮಗೆ, ಸಿಎಂಗೆ ಅವಕಾಶ ಕೊಟ್ಟಿದ್ದೇನೆ. ಅಷ್ಟೇಕೆ ಜಗಳ ಮಾಡಲೆಂದೇ ಮಾತನಾಡುವ ಈಶ್ವರಪ್ಪಗೂ ಮಾತನಾಡಲು ಅವಕಾಶ ನೀಡಿದ್ದೇನೆ. ಅವರು ದುರುದ್ದೇಶದಿಂದ ಗಲಾಟೆಗೆ ಪ್ರಚೋದನೆ ನೀಡಲೆಂದೇ ಮಾತನಾಡುತ್ತಾರೆ. ಅವರಿಗೂ ಅವಕಾಶ ಕೊಟ್ಟಿದ್ದೇನೆ’ ಎಂದಾಗ ಸದನದಲ್ಲಿ ನಗೆಗಡಲು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ನಮ್ಮನ್ನೇಕೆ ವೈರಿಗಳಂತೆ ನೋಡುತ್ತೀರಿ? ನಾವು ಸಹೋದ್ಯೋಗಿಗಳು: ಡಿಸಿಎಂ ಡಿಕೆ ಶಿವಕುಮಾರ್