ರಾಜ್ಯ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿನ ಜವಾಬ್ದಾರಿಯನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನೇ ಹೊರುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರು (ನ.24): ರಾಜ್ಯ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿನ ಜವಾಬ್ದಾರಿಯನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನೇ ಹೊರುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಶಿಗ್ಗಾಂವಿ ಮತ್ತು ಸಂಡೂರಿನಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿತ್ತು. ಚನ್ನಪಟ್ಟಣ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ದೊಡ್ಡ ಅಂತರದಲ್ಲಿ ಗೆಲ್ಲುವ ಬಗ್ಗೆ ಎರಡೂ ಪಕ್ಷಗಳಿಗೂ ವಿಶ್ವಾಸವಿತ್ತು. ಆದರೆ, ಮೂರು ಕ್ಷೇತ್ರಗಳಲ್ಲೂ ನಮಗೆ ಹಿನ್ನಡೆಯಾಗಿದೆ ಎಂದರು.
ಉಪಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಕಾರಣ ಏನು ಎಂಬುದರ ಬಗ್ಗೆ ಬರುವ ದಿನಗಳಲ್ಲಿ ಕುಳಿತು ವಿಶ್ಲೇಷಣೆ ಮಾಡುತ್ತೇವೆ. ನಾವು ಕೂಡ ತಿದ್ದುಕೊಂಡು ಹೋಗಬೇಕು ಎಂಬುದಕ್ಕೆ ಮತದಾರರು ಸ್ಪಷ್ಟ ಸಂದೇಶ ನೀಡಿದ್ದಾರೆ. ಬರುವ ದಿನಗಳಲ್ಲಿ ಸರಿಪಡಿಸಿಕೊಂಡು ಕೆಲಸ ಮಾಡುತ್ತೇವೆ. ಸೋಲಿಗೆ ಖಂಡಿತ ಹಲವು ಕಾರಣಗಳು ಇರುತ್ತವೆ. ಗೆದ್ದಾಗಲೂ ಹಲವು ಕಾರಣಗಳು ಇರುತ್ತವೆ. ಸೋತಾಗ ಇನ್ನೂ ಹೆಚ್ಚಿನ ಕಾರಣಗಳು ಇರುತ್ತವೆ. ಎರಡೂ ಪಕ್ಷಗಳು ಒಂದೆಡೆ ಕುಳಿತು ವಿಮರ್ಶೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
undefined
ಸೋಲಿನಿಂದ ಹತಾಶರಾಗಿಲ್ಲ: ಈ ಸೋಲಿನಿಂದ ನಾವು ಹತಾಶರಾಗಿಲ್ಲ. ಮೂರೂ ಕ್ಷೇತ್ರಗಳಲ್ಲೂ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಸೋತಿದ್ದೇವೆ. ಹಾಗಂತ ನಾವು ಮತ್ತು ಕಾರ್ಯಕರ್ತರು ಹತಾಶರಾಗುವ ಅಗತ್ಯವಿಲ್ಲ. ಮುಂದೆ ಇನ್ನೂ ಧೈರ್ಯವಾಗಿ ಮುನ್ನುಗ್ಗುತ್ತೇವೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬಂಡವಾಳ ಬಯಲು ಮಾಡುತ್ತೇವೆ. ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಾಸಕ ಯತ್ನಾಳ್ ಏನು ಮಾತಾಡುತ್ತಾರೋ ಭಗವಂತನೇ ಬಲ್ಲ: ವಿಜಯೇಂದ್ರ
ಶಿಗ್ಗಾಂವಿ ಸೋಲು ಆಘಾತ ತಂದಿದೆ: ಶಿಗ್ಗಾಂವಿ ಕ್ಷೇತ್ರದ ಸೋಲು ನಮಗೆ ಆಘಾತ ಉಂಟು ಮಾಡಿದೆ ಎಂದು ಇದೇ ವೇಳೆ ವಿಜಯೇಂದ್ರ ಹೇಳಿದರು. ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿಗಳು. ಹಿರಿಯ ನಾಯಕರು. ಶಿಗ್ಗಾಂವಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇಲ್ಲಿನ ಫಲಿತಾಂಶ ನಮಗೂ ಆಘಾತ ತಂದಿದೆ. ಇಲ್ಲಿ ಸೋಲಿನ ನಿರೀಕ್ಷೆ ಇರಲಿಲ್ಲ. ಅನಾಯಾಸವಾಗಿ ಗೆಲ್ಲುವ ವಿಶ್ವಾಸವಿತ್ತು. ಆದರೆ, ಅತಿಯಾದ ಆತ್ಮವಿಶ್ವಾಸವೂ ಸೋಲಿಗೆ ಕಾರಣ ಇರಬಹುದು ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಸವರಾಜ ಬೊಮ್ಮಾಯಿ ಒಬ್ಬೊಂಟಿ ಆಗಿರಲಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಮುಖಂಡರು ಈ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು ಎಂದು ಹೇಳಿದರು.