
ಉಡುಪಿ (ಜ.23): ಉಡುಪಿ ಶಾಸಕ ಯಶ್ಪಾಲ್ ಸುವರ್ಣ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ತಾವು ಶಾಸಕರಾಗಿದ್ದಾಗ ಆರಂಭಿಸಿದ್ದ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ, ತಾವು ಬಿಜೆಪಿಯಿಂದ ಅಮಾನತಾಗುವಂತೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕಿಡಿಕಾರಿದರು. ನಗರದ ಕಲ್ಸಂಕ ಟ್ರಾಫಿಕ್ ಜಂಕ್ಷನ್ ನಾನು ಶಾಸಕನಾಗಿದ್ದಾಗ ಆರಂಭಿಸಿದ ಯೋಜನೆ ಎನ್ನುವ ಕಾರಣಕ್ಕೆ ಶಾಸಕರು ಅದಕ್ಕೆ ಅಡ್ಡಗಾಲು ಹಾಕಿದ್ದಾರೆ. ಶಾಸಕರ ಕಚೇರಿಯಲ್ಲಿದ್ದ ನನ್ನ ಫೋಟೋಗಳನ್ನು ತೆಗೆಸಿದ್ದಾರೆ. ಪಕ್ಷದ ಕಾರ್ಯಕ್ರಮಗಳಿಂದ ನನ್ನನ್ನು ದೂರ ಇಡುವಂತೆ ಮಾಡಿದ್ದಾರೆ, ನನ್ನ ವೈಯಕ್ತಿಕ ವ್ಯವಹಾರಗಳಿಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಬೇಸರಿಸಿದರು.
ನಾನು ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸುವುದಕ್ಕೆ ಯಶ್‌ಪಾಲ್ ಅವರೇ ಕಾರಣ. ನಾನು ಮೂರು ಬಾರಿ ಶಾಸಕನಾಗಿದ್ದವನು, ಬಿಜೆಪಿ ನನ್ನನ್ನು ಯಾವ ರೀತಿ ನೋಡಿಕೊಳ್ಳುತ್ತಿದೆ ಎಂದು ಬೇಸರವಾಗುತ್ತಿದೆ. ಬಿಜೆಪಿ ಇತರ ನಾಯಕರು ಕೂಡ ಈ ಬಗ್ಗೆ ಯೋಚನೆ ಮಾಡಿಲ್ಲ, ಉಡುಪಿಯಲ್ಲಿ ಬಿಜೆಪಿ ಬೆಳವಣಿಗೆಯಲ್ಲಿ ನನ್ನ ಪಾತ್ರ ಇಲ್ವಾ? ಎಂದು ಅಳಲು ತೋಡಿಕೊಡರು. ನಾನು ಯಾವುದೇ ಯೋಜನೆಗಳಿಂದ ಕಿಕ್ ಬ್ಯಾಕ್ ಪಡೆದಿಲ್ಲ ಎಂದ ಭಟ್, ಇಂತಹ ಆರೋಪಗಳಿಗೆ ನಾನು ಹೆದರಿ ಕುಳಿತುಕೊಳ್ಳುವವನಲ್ಲ, ನಾನು ನನ್ನ ವ್ಯವಹಾರದಲ್ಲಿ ಬ್ಯುಸಿಯಾಗಿದ್ದೇನೆ, ಕಾಪು ಮಾರಿಗುಡಿಯ ಬ್ರಹ್ಮಕಲಶೋತ್ಸವದಲ್ಲಿ ಬ್ಯುಸಿಯಾಗಿದ್ದೇನೆ ಎಂದರು.
ಮುಂದಿನ ವಿಧಾನಸಭೆಗೆ ಸ್ಪರ್ಧೆ: ಬಿಜೆಪಿ ಕರೆದರೆ ಸೇರ್ಪಡೆಯಾಗಲು ತಯಾರಿದ್ದೇನೆ. ಆದರೆ ಬಿಜೆಪಿ ನಾಯಕರು ಕರೆದಿಲ್ಲ, ನನ್ನ ಹತ್ತಿರ ಮಾತು ಕೂಡ ಆಡಿಲ್ಲ. ಈಗ ನನ್ನ ಅವಶ್ಯಕತೆ ಅವರಿಗೆ ಇಲ್ಲ ಅನಿಸಿರಬೇಕು. ಹೀಗಾಗಿ ನನ್ನಷ್ಟಕ್ಕೆ ನಾನು ಇದ್ದೇನೆ. ರಾಜಕೀಯ ಉದ್ದೇಶದಿಂದ ಕಾಂಗ್ರೆಸ್ ಪಕ್ಷದವರನ್ನು ಭೇಟಿಯಾಗಿಲ್ಲ. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಕ್ಕೆ ನಿರ್ಧರಿಸಿದ್ದೇನೆ. ಆದರೆ ಯಾವ ಪಕ್ಷದಿಂದ ಎಂದು ನಿರ್ಧರಿಸಿಲ್ಲ, ಇನ್ನೂ ಮೂರುವರೆ ವರ್ಷ ಇದೆ. ಆ ಸಂದರ್ಭದಲ್ಲಿ ನಿರ್ಧಾರ ಮಾಡುತ್ತೇನೆ. ಉಡುಪಿ ವಿಧಾನಸಭಾ ಕ್ಷೇತ್ರದ ಜನತೆ ಇಲ್ಲಿಯವರೆಗೂ ನನ್ನನ್ನು ಸೋಲಿಸಿಲ್ಲ. ಮೂರು ಬಾರಿ ನನ್ನನ್ನು ಗೆಲ್ಲಿಸಿದ್ದಾರೆ ಎಂದರು.
ನನಗೆ ರಾಷ್ಟ್ರಭಕ್ತರ ಬಳಗ ಬೆಂಬಲ ನೀಡಿದೆ: ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸಬೇಕು. ಪಕ್ಷದ ನಾಯಕರ ವಿರುದ್ಧ ಮಾತನಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ವಿರುದ್ಧ ಶಿಸ್ತು ಕ್ರಮ ಕೈಗೊಳ‍್ಳಬೇಕೆಂದು ವಿಜಯೇಂದ್ರ ಬಣದ ಮಾಜಿ ಸಚಿವರು ಹಾಗೂ ಶಾಸಕರು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರನ್ನು ಒತ್ತಾಯಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಅಗರ್‌ವಾಲ್ ಅವರನ್ನು ಭೇಟಿ ಮಾಡಿದ ಮಾಜಿ ಸಚಿವರು ಹಾಗೂ ಶಾಸಕರು ಕೆಲಕಾಲ ಚರ್ಚೆ ನಡೆಸಿ ಈ ಮನವಿ ಸಲ್ಲಿಸಿದರು. ಇದಕ್ಕೂ ಮುನ್ನ ಬೆಳಗ್ಗೆ ಮಾಜಿ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು ಅವರ ನಿವಾಸದಲ್ಲಿ ಸಭೆ ನಡೆಸಿ ಚರ್ಚಿಸಿದರು. ಈ ಸಭೆಯಲ್ಲಿ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಬಿ.ಸಿ.ಪಾಟೀಲ್, ಹರತಾಳು ಹಾಲಪ್ಪ ಸೇರಿ 30ಕ್ಕೂ ಅಧಿಕ ಮಾಜಿ ಸಚಿವರು ಹಾಗೂ ಮಾಜಿ ಶಾಸಕರು ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.