ಹೈಕಮಾಂಡ್ ಪರವಾನಗಿ ಪಡೆದೇ ನಾವು ಪಾದಯಾತ್ರೆ ಮಾಡುತ್ತೇವೆ. ನಮ್ಮ ಪಾದಯಾತ್ರೆ ಪಕ್ಷದ ಬಲವರ್ಧನೆಗೆ. ಕೈ ಮುಗಿದು ಹೇಳುತ್ತಿದ್ದೇನೆ, ನಮ್ಮನ್ನು ಬಿಜೆಪಿ ನಿಷ್ಠಾವಂತರು ಎಂದು ಕರೆಯಿರಿ. ಇದು ಬಿಜೆಪಿಯಲ್ಲಿನ ಬಂಡಾಯವಲ್ಲ ಎಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ(ಆ.16): ಸಂಘದವರು, ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಮಾತುಕತೆಗೆ ಸಿದ್ಧ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಹೈಕಮಾಂಡ್ ಒಪ್ಪಿಗೆ ಪಡೆದೇ ಬಳ್ಳಾರಿಗೆ ಪಾದಯಾತ್ರೆ ನಡೆಸುತ್ತೇವೆ. ತಮ್ಮದು ಬಂಡಾಯ ಅಲ್ಲ, ತಾವು ಪಕ್ಷ ನಿಷ್ಠರು ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ವಿಜಯೇಂದ್ರ ಹಾಗೂ ನಿಮ್ಮ ಮಧ್ಯೆ ಒಪ್ಪಂದ ಮಾಡಿಸಲು ಯಾರಾದರೂ ಮುಂದಾಗಿದ್ದಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಇಬ್ಬರ ಮಧ್ಯೆ ಒಪ್ಪಂದದ ಬಗ್ಗೆ ನನ್ನ ಜೊತೆ ಯಾರೂ ಮಾತನಾಡಿಲ್ಲ. ನಾವೆಲ್ಲರೂ ನಿರ್ಧರಿಸಿದ್ದೇವೆ. ಒಬ್ಬೊಬ್ಬರೇ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ. ಏನೇ ಇದ್ದರೂ ಎಲ್ಲರೂ ಸೇರಿ ಮಾತುಕತೆ ಮಾಡುತ್ತೇವೆ’ ಎಂದು ಹೇಳಿದರು.
Watch: ಮುಸ್ಲಿಂ ಮೌಲ್ವಿಗೆ ಸರ್ಕಾರಿ ಕಾರು, ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ!
ಉತ್ತರ ಕರ್ನಾಟಕದಲ್ಲಿ ಬಿಜೆಪಿಯ ಭಿನ್ನಮತೀಯರಿಂದ ಮತ್ತೊಂದು ಪಾದಯಾತ್ರೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಇದು ಬಿಜೆಪಿಯ ಬಂಡಾಯ ಎಂದು ಯಾರೂ ಸುದ್ದಿ ಮಾಡಬೇಡಿ, ಕೈ ಮುಗಿದು ಹೇಳುತ್ತಿದ್ದೇನೆ, ನಮ್ಮನ್ನು ಬಿಜೆಪಿ ನಿಷ್ಠಾವಂತರು ಎಂದು ಕರೆಯಿರಿ. ಕಾಂಗ್ರೆಸ್‌ನ ಭ್ರಷ್ಟಾಚಾರ, ವಾಲ್ಮೀಕಿ ಹಗರಣದ ವಿರುದ್ಧ ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಅದಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಹ ಬರುವವರಿದ್ದರು. ಅವರಿಗೆ ಡೆಂಘೀ ಆದ ಕಾರಣ ಬರಲಿಲ್ಲ. ಇನ್ನೂ ಹಲವರು ಬರುವವರಿದ್ದಾರೆ. ಇದು ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತದೆ. ಇದಕ್ಕೆ ಯಾರು ಬೇಕಾದ್ರೂ ಬರಬಹುದು. ಹೈಕಮಾಂಡ್ ಪರವಾನಗಿ ಪಡೆದೇ ನಾವು ಪಾದಯಾತ್ರೆ ಮಾಡುತ್ತೇವೆ. ನಮ್ಮ ಪಾದಯಾತ್ರೆ ಪಕ್ಷದ ಬಲವರ್ಧನೆಗೆ’ ಎಂದು ತಿಳಿಸಿದರು.
ರಾಜಕಾರಣದಲ್ಲಿ ಧರ್ಮವಿರಲಿ, ಧರ್ಮದಲ್ಲಿ ರಾಜಕೀಯ ಬೇಡ: ಶಾಸಕ ಬಸನಗೌಡ ಯತ್ನಾಳ್
ವಿಜಯೇಂದ್ರ ಶಾಸಕರಾಗಿ ಆಯ್ಕೆ ಆಗಲು ಕಾಂಗ್ರೆಸ್ ಕಾರಣ. ಅವರು ಗೆದ್ದಿದ್ದು ಕಾಂಗ್ರೆಸ್ ಭಿಕ್ಷೆ ಎಂದು ಡಿಕೆಶಿಯೇ ಹೇಳಿದ್ದಾರೆ. ಈ ಹೊಂದಾಣಿಕೆ ಬಗ್ಗೆ ನಾನು ಮುಂಚೆಯೇ ಹೇಳಿದ್ದೆ. ಈಗ ಡಿಕೆಶಿ ಬಹಿರಂಗವಾಗಿ ಹೇಳಿದ್ದಾರೆ. ವಿಜಯೇಂದ್ರ ಗೆಲುವಿಗೆ ಕಾಂಗ್ರೆಸ್ ಕಾರಣ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಇಂತಹ ಹೊಂದಾಣಿಕೆಗಾರರ ಜೊತೆ ನನ್ನ ಹೊಂದಾಣಿಕೆ ಇಲ್ಲ. ಸಂಘದವರು, ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿದ್ರೆ ಅವರ ಜೊತೆ ಮಾತುಕತೆ ಮಾಡುತ್ತೇವೆ ಎಂದರು.
ಕೈಮುಗಿಯುತ್ತೇನೆ ನಿಷ್ಠಾವಂತರು ಎನ್ನಿ
ಹೈಕಮಾಂಡ್ ಪರವಾನಗಿ ಪಡೆದೇ ನಾವು ಪಾದಯಾತ್ರೆ ಮಾಡುತ್ತೇವೆ. ನಮ್ಮ ಪಾದಯಾತ್ರೆ ಪಕ್ಷದ ಬಲವರ್ಧನೆಗೆ. ಕೈ ಮುಗಿದು ಹೇಳುತ್ತಿದ್ದೇನೆ, ನಮ್ಮನ್ನು ಬಿಜೆಪಿ ನಿಷ್ಠಾವಂತರು ಎಂದು ಕರೆಯಿರಿ. ಇದು ಬಿಜೆಪಿಯಲ್ಲಿನ ಬಂಡಾಯವಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.