ನಾನು ಸೇಡಿನ ರಾಜಕಾರಣ ಮಾಡಲು ಹೋಗಲ್ಲ: ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

By Kannadaprabha News  |  First Published Jun 6, 2023, 1:30 AM IST

ಹಳ್ಳಿಗಳಲ್ಲಿ ಮನೆ ಮನೆ ಕಸ ಸಂಗ್ರಹ ಮಾಡಲು ವಾಹನ ಕೊಟ್ಟಿದ್ದಾರೆ, ಆದ್ರೆ ಚಾಲಕ ಇಲ್ಲ..., ಕುಡಿವ ನೀರಿನ ಮೋಟರ್‌ ಸುಟ್ರೆ ರಿಪೇರಿಗೆ ದುಡ್ಡಿಲ್ಲ..., ಬೀದಿ ಲೈಟ್‌ ಎಲ್ಲ ಕೊಡ್ತಾರೆ, ಎಲೆಕ್ಟ್ರಿಷಿಯನ್‌ ಇಲ್ಲ.


ಚಿತ್ರದುರ್ಗ (ಜೂ.06): ಹಳ್ಳಿಗಳಲ್ಲಿ ಮನೆ ಮನೆ ಕಸ ಸಂಗ್ರಹ ಮಾಡಲು ವಾಹನ ಕೊಟ್ಟಿದ್ದಾರೆ, ಆದ್ರೆ ಚಾಲಕ ಇಲ್ಲ..., ಕುಡಿವ ನೀರಿನ ಮೋಟರ್‌ ಸುಟ್ರೆ ರಿಪೇರಿಗೆ ದುಡ್ಡಿಲ್ಲ..., ಬೀದಿ ಲೈಟ್‌ ಎಲ್ಲ ಕೊಡ್ತಾರೆ, ಎಲೆಕ್ಟ್ರಿಷಿಯನ್‌ ಇಲ್ಲ.., ಶುದ್ಧ ಕುಡಿವ ನೀರಿನ ಘಟಕ ಕೆಟ್ಟು ಹೋದ್ರೆ ದುರಸ್ತಿಗೆ ಅನುದಾನ ಇಲ್ಲ.., ಇಷ್ಟೆಲ್ಲ ಸಮಸ್ಯೆ ಇಟ್ಕಂಡು ಹೆಂಗೆ ಕೆಲಸ ಮಾಡಬೇಕೋ ಗೊತ್ತಾಗುತ್ತಿಲ್ಲ.

ಚಿತ್ರದುರ್ಗ ವಿಧಾನಸಭೆ ಕ್ಷೇತ್ರದ ನೂತನ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಸೋಮವಾರ ನಡೆಸಿದ ತಾಪಂ ಅಧಿಕಾರಿಗಳ ಸಭೆಯಲ್ಲಿ ಪಿಡಿಓಗಳು ಇಲ್ಲಗಳ ಪಟ್ಟಿಮಾಡಿ ಮಂಡಿಸಿದ ಅಹವಾಲುಗಳಿವು. ಶಾಸಕರು ಹಳ್ಳಿ ಸಮಸ್ಯೆ ನಿವಾರಣೆಗೆ ಮಾರ್ಗೋಪಾಯಗಳ ಕೇಳಿದ್ರೆ ಪಿಡಿಓ ಗಳು ಮಾತ್ರ ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯ ಲೋಪಗಳ ಬಿಚ್ಚಿಟ್ಟರು. ನಾವು ಹಗಲು ರಾತ್ರಿ ಹಳ್ಳಿ ಅಭಿವೃದ್ಧಿಗೆ ರೆಡಿ ಇದ್ದೇವೆ, ಆದ್ರೆ ಸರ್ಕಾರನೇ ಸಪೋರ್ಚ್‌ ಮಾಡ್ತಿಲ್ಲ. ಯಾರಿಗೆ ಹೇಳೋಣ ನಮ್‌ ಪ್ರಾಬ್ಲಮ್‌ ಎನ್ನುವ ದಾಟಿ ಪಿಡಿಓಗಳದ್ದಾಗಿತ್ತು.

Latest Videos

undefined

ಜಿಲ್ಲೆಯ ಕೊನೆ ಭಾಗದ ಬೆಳೆಗಳಿಗೆ ನೀರು ಹರಿಸಲು ಕ್ರಮ ವಹಿಸಿ: ಸಚಿವ ಚಲುವರಾಯಸ್ವಾಮಿ

ಪ್ರಥಮ ಮೀಟಿಂಗ್‌ಗೆ ಸೊಗಸಾಗಿಯೇ ಹೋಂ ವರ್ಕ್ ಮಾಡಿಕೊಂಡು ಬಂದಿದ್ದ ಶಾಸಕ ವೀರೇಂದ್ರ ಪಪ್ಪಿ ಆರಂಭದಲ್ಲಿ ಅಧಿಕಾರಿಗಳು, ಪಿಡಿಓಗಳ ಹಾಜರಿ ಪಡೆದು ಪರಿಚಯ ಮಾಡಿಕೊಂಡ ಬಗೆ ವಿಶೇಷವಾಗಿತ್ತು. ಚಿತ್ರದುರ್ಗದ ಕಳೆದ ಮೂವತ್ತು ವರ್ಷದ ಆಡಳಿತ ಕೊನೆಗೊಂಡಿದೆ. ಹಿಂದಿನ ಚುನಾವಣೆಯಲ್ಲಿ ನೀವೆಲ್ಲ ಯಾರಿಗೆ ಬೆಂಬಲಿಸಿದಿರೋ, ಏನು ಮಾಡಿದಿರೋ ಅದೆಲ್ಲ ನನಗೆ ಬೇಡವಾದ ಸಂಗತಿ ಎಂದೇ ಪರೋಕ್ಷವಾಗಿ ಮೈಗಳ್ಳರಿಗೆ ಚಾಟಿ ಬೀಸಿದ ಪಪ್ಪಿ, ನಾನು ಸೇಡಿನ ರಾಜಕಾರಣ ಮಾಡಲು ಹೋಗಲ್ಲ. ಆದ್ರೆ ಜನರನ್ನು ಅನಗತ್ಯವಾಗಿ ಕಚೇರಿಗೆ ಅಲೆದಾಡಿಸಿದರೆ ಸುಮ್ಮನಿರೋಲ್ಲ ಎಂಬ ಎಚ್ಚರಿಕೆ ರವಾನಿಸಿದರು.

ತಕ್ಷಣ ಮನೆ ವಿತರಿಸಿ: ಮುಂದಿನ ಐದು ವರ್ಷ ಅಧಿಕಾರಿಗಳು, ಜನಪ್ರತಿನಿಧಿಗಳು ಟೀಂ ಆಗಿ ಕೆಲಸ ಮಾಡೋಣ. ಸರ್ಕಾರದಿಂದ ಜನರಿಗೆ ಸಿಗುವ ಸೌಲಭ್ಯಗಳ ಪ್ರಚುರಪಡಿಸಬೇಕು. ಈ ಬಗ್ಗೆ ಕರಪತ್ರ ಮಾಡಿಸಿ ವಿತರಿಸುವ ಕೆಲಸ ಆಗಬೇಕು. ಸರ್ಕಾರದಿಂದ ಮಂಜೂರಾದ ಮನೆಗಳನ್ನು ಆ ಕ್ಷಣಕ್ಕೆ ವಿತರಿಸಬೇಕು. ನಾಲ್ಕು ವರ್ಷ ಸುಮ್ಮನಿದ್ದು ಎಲೆಕ್ಷನ್‌ ಬಂದಾಗ ಹಂಚಲು ಮುಂದಾದರೆ ನಾನು ಸುಮ್ಮನಿರೋಲ್ಲವೆಂದು ಸೂಕ್ಷ್ಮವಾಗಿ ಹಿಂದಿನ ಆಡಳಿತದ ನಡೆಗಳ ಉಲ್ಲೇಖಿಸಿದರು.

ಪಿಡಿಓಗಳು ಕೇಂದ್ರ ಸ್ಥಾನದಲ್ಲಿರಿ: ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕಾದರೆ ಎಲ್ಲರೂ ಒಂದಾಗಿ ಹೋಗಬೇಕು. ಗ್ರಾಮ ಪಂಚಾಯಿತಿ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸವಾ ಗಬೇಕು. ಪಿಡಿಓಗಳು ಜನರ ಕೈಗೆ ಸಿಗೋಲ್ಲವೆಂಬ ಆರೋಪಗಳಿವೆ. ಈ ಬಗ್ಗೆ ಪಿಡಿಓಗಳು ಸ್ವಯಂ ವಿಮರ್ಶೆ ಮಾಡಿಕೊಂಡು ಹೆಡ್‌ಕ್ವಾರ್ಟರ್‌ನಲ್ಲಿ ಜನರ ಕೈಗೆ ಸಿಗಬೇಕು. ಯಾವುದೇ ಸಂದರ್ಭದಲ್ಲಾದರೂ ಗ್ರಾಪಂ ಕಚೇರಿಗೆ ಭೇಟಿ ನೀಡಿ, ಹಾಜರಾತಿ ಪರಿಶೀಲಿಸುತ್ತೇನೆ. ನಾನು ಅಧಿಕಾರಿಗಳ ಏಕವಚನದಲ್ಲಿ ಬೈಯುವುದಿಲ್ಲ. ಹಾಗಂತ ಇದು ನನ್ನ ದೌರ್ಬಲ್ಯವೆಂದು ಭಾ ವಿಸದಿರಿ. ಮನುಷ್ಯತ್ವಕ್ಕೆ ಬೆಲೆಕೊಡುವವ ನಾನಾಗಿದ್ದು, ಗ್ರಾಮೀಣರ ಸಮಸ್ಯೆ ನಿವಾರಣೆಗೆ ಪಿಡಿಓಗಳು ಮನುಷ್ಯತ್ವದ ದೃಷ್ಟಿಯಲ್ಲಿ ನೋಡಬೇಕೆಂದರು.

ಈ-ಸ್ವತ್ತು ಕೊಡುವಲ್ಲಿ ಸಿಕ್ಕಾಪಟ್ಟೆ ವಿಳಂಬ ಮಾಡಲಾಗುತ್ತಿದೆ ಎಂಬ ಸಾಮಾನ್ಯ ದೂರುಗಳಿವೆ. ಇದಕ್ಕೆ ಕಾಲಮಿತಿ ಅಳವಡಿಸಿಕೊಳ್ಳುವುದು ಅಗತ್ಯ. ಹಳ್ಳಿಗಳ ಜನರಿಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡಬೇಕು. ಶೇ.90 ರಷ್ಟುಘಟಕಗಳು ಕೆಟ್ಟು ಹೋಗಿವೆ. ಅವುಗಳ ದುರಸ್ತಿ ಮಾಡಿಸಿಕೊಳ್ಳಿ. ಸಮಸ್ಯೆಗಳಿಗೆ ಸಬೂಬುಗಳು ಉತ್ತರವಾಗದು. ನಿಮ್ಮ ಸಮಜಾಯಿಷಿಗಳ ಕೇಳಿಕೊಂಡು ಇರಲಾಗದು. ಚರ್ಚೆ ಚರ್ಚೆಯಲ್ಲಿ ಉಳಿಯಬಾರದು. ಮಳೆಗಾಲ ಆರಂಭವಾಗಲಿದ್ದು, ಹಳ್ಳಿಗಳ ಚರಂಡಿಗಳ ಸ್ವಚ್ಛವಾಗಿಟ್ಟುಕೊಳ್ಳಿ. ಸ್ಮಶಾನದ ಒತ್ತುವರಿ ತೆರವುಗೊಳಿಸಿ ಎಂದು ಸೂಚನೆ ನೀಡಿದರು. ತಪ್ಪು ಮಾಡುವುದು ಸಹಜ. ಆದರೆ ಅದೇ ಪುನರಾವರ್ತನೆ ಆಗಬಾರದು. ಎಲ್ಲರ ಮೇಲೆ ಕ್ರಮ ಕೈಗೊಳ್ಳುತ್ತಾ ಹೋದರೆ ಕೆಲಸ ಮಾಡಲು ಜನ ಇಲ್ಲದ ಹಾಗಾಗುತ್ತದೆ. ಪಿಡಿಓಗಳು ಹಳ್ಳಿ ಸಮಸ್ಯೆ ನಿವಾರಣೆ ಸಂಬಂಧ ಏನೇ ಹೇಳುವುದಿದ್ದರೂ ಅದನ್ನು ಬರವಣಿಗೆಯಲ್ಲಿ ಕೊಡಬೇಕು. ಬಾಯಿ ಮಾತಿನಲ್ಲಿ ಹೇಳಿ ಜಾರಿಕೊಳ್ಳುವಂತಿಲ್ಲವೆಂದು ವೀರೇಂದ್ರ ಪಪ್ಪಿ ಹೇಳಿದರು. ತಾಪಂ ಇಓ ಹನುಮಂತಪ್ಪ ಉಪಸ್ಥಿತರಿದ್ದರು.

ಸಂವಿಧಾನದ ಪ್ರಕಾರ ಕೆಲಸ ಮಾಡದಿದ್ದರೆ ಬಾರುಕೋಲಿನಿಂದ ಬಾರಿಸುತ್ತೇನೆ: ಸಚಿವ ಮಹದೇವಪ್ಪ

ನಂದೂ ಬ್ಯಾಕ್‌ ಅಪ್‌ ಆಫೀಸ್‌ ಕೆಲಸ ಮಾಡ್ತದೆ: ಶಾಸಕರಾಗಿ ಬರೀ ಸಲಹೆ ಕೊಡೋದಿಲ್ಲ. ನನ್ನದೂ ಒಂದು ಬ್ಯಾಕ್‌ ಆಪ್‌ ಆಫೀಸ್‌ ಕಾರ್ಯನಿರ್ವಹಿಸುತ್ತದೆ. ಇಲ್ಲಿ 60 ಮಂದಿ ಸಿಬ್ಬಂದಿ ಇದ್ದಾರೆ. ನಾನು ಏನೇ ಮಾತನಾಡಿದರೂ, ಯಾವುದೇ ಸಭೆ ನಡೆಸಿದರೂ ಅದೆಲ್ಲ ದಾಖಲಾಗುತ್ತದೆ. ಸಭಾ ನಡವಳಿಕೆಗಳ ಪಾಲನೆ ಮಾಡಲು ನನ್ನ ಬಳಿ ಸಿಬ್ಬಂದಿ ಇದ್ದಾರೆ ಎಂದು ಶಾಸಕ ವೀರೇಂದ್ರ ಪಪ್ಪಿ ಹೇಳಿದರು. ಯಾವ ಇಲಾಖೆಗಳಿಗೆ ಏನು ಜವಾಬ್ದಾರಿ ವಹಿಸಲಾಗಿದೆ ಎಂಬ ಬಗ್ಗೆ ನನ್ನಲ್ಲಿರುವ ಸಿಬ್ಬಂದಿ ಫಾಲೋ ಮಾಡುತ್ತದೆ. ಕಾಲ ಕಾಲಕ್ಕೆ ವರದಿ ನೀಡುತ್ತದೆ. ಪ್ರತಿ ಹಂತದಲ್ಲಿಯೂ ಹೋಂವರ್ಕ್ ಮಾಡಿಕೊಂಡು ಬರುವೆ. ಅಭಿವೃದ್ಧಿವಿಚಾರದ ಯಾವು ಮಾತುಗಳು ಜಾರಿ ಹೋಗುವುದಿಲ್ಲವೆಂದರು.

click me!