ಸಿದ್ದರಾಮಯ್ಯ ನನಗೆ ಹೆಚ್ಚು ಪರಿಚಯವಿಲ್ಲ, ವೈಮನಸ್ಸೂ ಇಲ್ಲ: ಬಿ.ಕೆ.ಹರಿಪ್ರಸಾದ್‌

By Govindaraj SFirst Published Dec 11, 2023, 4:23 AM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಅಷ್ಟೇನೂ ಪರಿಚಯವೂ ಇಲ್ಲ, ಅವರ ಮೇಲೆ ವೈಮನಸ್ಸೂ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್‌ ಬೇಸರದಿಂದ ಹೇಳಿದರು. 

ಹುಬ್ಬಳ್ಳಿ (ಡಿ.11): ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಅಷ್ಟೇನೂ ಪರಿಚಯವೂ ಇಲ್ಲ, ಅವರ ಮೇಲೆ ವೈಮನಸ್ಸೂ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್‌ ಬೇಸರದಿಂದ ಹೇಳಿದರು. ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾಗಿ ನನ್ನ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಸಂಬಂಧ ಅಷ್ಟೇನೂ ಚೆನ್ನಾಗಿ ಇರಲಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಆಗಾಗ ಮಾತನಾಡಿದ್ದೇವೆ ಅಷ್ಟೇ ಎಂದರು.

ಇಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರ ಹನಿಮೂನ್ ಪಿರಿಯಡ್​ನಲ್ಲಿತ್ತು. ಮುಂದೆ ನೈಜವಾಗಿ ಕೆಲಸ ಮಾಡಲು ಹೋದಾಗ ಎಲ್ಲವೂ ಗೊತ್ತಾಗುತ್ತದೆ. ಅಧಿಕಾರಕ್ಕೆ ಬಂದವರು ಜನತೆಯ ಆಶಯಗಳನ್ನು ಈಡೇರಿಸಬೇಕು. ಈಡೇರಿಸಲು ಆಗದಿದ್ದಾಗ ಪಕ್ಷದ ಚೌಕಟ್ಟಿನಲ್ಲಿ ನಾನು ಪ್ರಶ್ನೆ ಮಾಡಿದ್ದೇನೆ. ಮಾಡುತ್ತಾ ಇರುತ್ತೇನೆ ಎಂದರು.

Latest Videos

ಕಾಂಗ್ರೆಸ್‌ ಪಕ್ಷಕ್ಕೆ ಟಯರ್‌ ಪಂಚರ್‌ ಆಗಿದೆ: ಬಿ.ವೈ.ವಿಜಯೇಂದ್ರ ವ್ಯಂಗ್ಯ

ಒಗ್ಗಟ್ಟಾಗಿ ನಡೆಯಲಿ: ಎಲ್ಲರನ್ನೂ ಸೇರಿಕೊಂಡು‌ ಹೋಗುವುದು ಕಾಂಗ್ರೆಸ್ ಸಿದ್ಧಾಂತ. ಅವರೆಲ್ಲ ಏನೇನೋ ಉದ್ದೇಶ ಇಟ್ಟುಕೊಂಡಿದ್ದಾರೆಯೋ ಅವರಿಗೆ ಬಿಟ್ಟ ವಿಷಯ. ರಾಜಕಾರಣ ನಿಂತ ನೀರಲ್ಲ‌ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಲಿ. ಒಗ್ಗಟ್ಟಾಗಿ ಚುನಾವಣೆ ಮಾಡಿದ ಮೇಲೆ ಎಲ್ಲವೂ ಒಗ್ಗಟ್ಟಾಗಿ ನಡೆಯಬೇಕು ಎಂಬುದು ನನ್ನ ಉದ್ದೇಶ ಎಂದರು.

ಪಕ್ಷಕ್ಕಾಗಿ ದುಡಿದವನು: ಭ್ರಷ್ಟಾಚಾರದ ಬಗ್ಗೆ ಪಕ್ಷದ ಶಾಸಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಾನು ನನ್ನ ಅಭಿಪ್ರಾಯವನ್ನು ಮಾಧ್ಯಮದ ಮುಂದೆ ಹೇಳುವುದಿಲ್ಲ, ಎಲ್ಲಿ ಹೇಳಬೇಕು ಅಲ್ಲಿ ಹೇಳುತ್ತೇನೆ. ನಾನು ಅಧಿಕಾರದ ಹಿಂದೆ ಹೋದವನಲ್ಲ. ಪಕ್ಷಕ್ಕಾಗಿ ಕೆಲಸ ಮಾಡಿದವನು. ರಾಜಕೀಯವಾಗಿ ಸಾಮಾಜಿಕ ನ್ಯಾಯ ಕೊಡಿಸಲು ಏನು ಮಾಡಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದರು. ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ವಿವಿಧ ಯೋಜನೆಗಳಿಗೆ ಅನುದಾನವಿಲ್ಲ. ಗ್ಯಾರಂಟಿ ಯೋಜನೆಗಳ ಜಾರಿಗೆ ಹಣ ಬೇಕಾಗಿದೆ. ಮುಂದಿನ ಬಜೆಟ್ ವೇಳೆಗೆ ಎಲ್ಲವೂ ಸರಿ ಹೋಗಬಹುದು ಅಂದುಕೊಂಡಿದ್ದೇನೆ. ರಾಜಸ್ವವನ್ನು ಹೇಗೆ ಸಂಗ್ರಹಿಸುತ್ತಾರೆ ಎಂಬುದರ ಮೇಲೆ ಎಲ್ಲವೂ ಅವಲಂಬಿಸಿರುತ್ತದೆ ಎಂದರು.

ಜೋಡೆತ್ತುಗಳೆಂದು ಹೇಳಿಕೊಳ್ಳುವ ಬಿಎಸ್‌ವೈ-ಅಶೋಕ್ ನಡುವೆ ಹೊಂದಾಣಿಕೆ ಇಲ್ಲ: ಶಾಸಕ ಯತ್ನಾಳ್

ದುರ್ಬಳಕೆ ಸಲ್ಲದು: ಬೆಂಗಳೂರಿನಲ್ಲಿ ಆರ್ಯ-ಈಡಿಗ ಸಮಾವೇಶ ಆಯೋಜಿಸಲಾಗಿತ್ತು. ಮದುವೆಯಲ್ಲಿ ಪಾಲ್ಗೊಳ್ಳಲು ನಾನು ಹುಬ್ಬಳ್ಳಿಗೆ ಬಂದಿದ್ದೇನೆ. ಸಮಾವೇಶ ನಡೆಸುವುದು ತಪ್ಪಲ್ಲ. ಸರ್ಕಾರದ ಗಮನ ಸೆಳೆಯಲು ಸಮಾವೇಶ ನಡೆಸಲಾಗುತ್ತದೆ. ಆದರೆ, ರಾಜಕೀಯವಾಗಿ ದುರುಪಯೋಗ ಮಾಡಿಕೊಳ್ಳಬಾರದು. ಈಡಿಗ ಸಮಾಜದಲ್ಲಿ ಒಡಕು ಉಂಟು ಮಾಡಲಾಗಿದೆ. ಅವರು ಯಾರು ಎಂಬುದು ನನಗೆ ಗೊತ್ತಿದೆ. ಸಮಾಜದ ಪ್ರಣಾವಾನಂದ ಶ್ರೀಗಳನ್ನು ಬಿಟ್ಟು ಏಕೆ ಸಮಾವೇಶ ಮಾಡಲಾಗಿದೆ? ಒಗ್ಗಟ್ಟು ಮೂಡಿಸಬೇಕಾದರೆ ಸಮಾಜದ ಸ್ವಾಮೀಜಿಗಳನ್ನು ಸೇರಿ ಸಮಾವೇಶ ಮಾಡಬೇಕಿತ್ತಲ್ಲ ಎಂದು ಹರಿಪ್ರಸಾದ ಪ್ರಶ್ನಿಸಿದರು.

click me!