ಕಾಂಗ್ರೆಸ್‌, ಜೆಡಿಎಸ್‌ನಿಂದ ಬಿಜೆಪಿಗೆ ಬಂದವರ ಬಗ್ಗೆ ಟೀಕಿಸಿಲ್ಲ: ಈಶ್ವರಪ್ಪ

By Kannadaprabha NewsFirst Published Jul 2, 2023, 9:34 AM IST
Highlights

ಲೋಕಸಭೆ ಚುನಾವಣೆ ಜತೆಗೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿಯೂ ಬಿಜೆಪಿಯನ್ನು ರಾಜ್ಯದ ಜನತೆ ಬೆಂಬಲಿಸಿದ್ದಾರೆ. ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೇವೆ. ಅಲ್ಲಿಯವರೆಗೆ ನಾವುಗಳು ವಿರಮಿಸುವುದಿಲ್ಲ: ಕೆ.ಎಸ್‌.ಈಶ್ವರಪ್ಪ 

ಬೆಂಗಳೂರು(ಜು.02):  ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನತೆಗೆ ಉತ್ತಮ ಯೋಜನೆಗಳನ್ನು ನೀಡುವ ಮೂಲಕ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೇಂದ್ರದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವವರೆಗೆ ವಿಶ್ರಮಿಸುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಘೋಷಿಸಿದ್ದಾರೆ.

ಶನಿವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಜತೆಗೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿಯೂ ಬಿಜೆಪಿಯನ್ನು ರಾಜ್ಯದ ಜನತೆ ಬೆಂಬಲಿಸಿದ್ದಾರೆ. ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುತ್ತೇವೆ. ಅಲ್ಲಿಯವರೆಗೆ ನಾವುಗಳು ವಿರಮಿಸುವುದಿಲ್ಲ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಸಂಬಂಧ ಕಾರ್ಯ ನಿರ್ವಹಿಸಲು ಏಳು ತಂಡಗಳಾಗಿ ರಾಜ್ಯ ಪ್ರವಾಸ ಮಾಡಲಾಗಿದ್ದು, ಸಮಾವೇಶಗಳು ಯಶಸ್ವಿಯಾಗಿವೆ ಎಂದು ಹೇಳಿದರು.

Latest Videos

ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಬಿಜೆಪಿ ಆಂತರಿಕ ಸಂಘರ್ಷ ತೀವ್ರ!

ಕಾಂಗ್ರೆಸ್ಸಿಂದ ಬಂದವರಿಂದ ಶಿಸ್ತು ಪಾಲನೆ- ಸ್ಪಷ್ಟನೆ:

ಪಕ್ಷದ ನಾಯಕರ ವಿರುದ್ಧ ಮಾತನಾಡುವುದು, ಆಪಾದನೆ ಮಾಡುವುದು ಸೂಕ್ತವಲ್ಲ ಎಂಬ ಸೂಚನೆ ಇದೆ. ಬಿಜೆಪಿಯಲ್ಲಿ ಬಹಿರಂಗ ಹೇಳಿಕೆ ಕೊಡುವ ಪ್ರಶ್ನೆ ಇಲ್ಲ. ನಮ್ಮ ಪಕ್ಷದಲ್ಲಿ ಇನ್ನು ಮುಂದೆ ಅಶಿಸ್ತು ಇರುವುದಿಲ್ಲ ಎಂದು ಹೇಳಿದ ಅವರು, ಕಾಂಗ್ರೆಸ್‌ನ ಅಶಿಸ್ತು ನಮ್ಮ ಪಕ್ಷದ ಮೇಲೂ ಬೀಸುತ್ತಿದೆ ಎಂದಿದ್ದೆ. ಅದನ್ನು ಕೆಲವರು ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ 17 ಮಂದಿಯ ಜತೆ ಸೇರಿಸುವ ಪ್ರಯತ್ನ ನಡೆಸಿದರು. ಕಾಂಗ್ರೆಸ್‌-ಜೆಡಿಎಸ್‌ನಿಂದ ಪಕ್ಷಕ್ಕೆ ಬಂದವರಿಂದ ಅಶಿಸ್ತು ಆಗಿಲ್ಲ. ಅವರ ಬಗ್ಗೆ ಒಂದೇ ಒಂದು ಆಪಾದನೆ ಮಾಡಿಲ್ಲ. ಅವರು ಶಿಸ್ತಿನಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಕಾಂಗ್ರೆಸ್‌ನವರು ಮೋಸಗಾರರು:

ಬಿಜೆಪಿಗೆ ಕಳೆದ ಬಾರಿ 25, ಕಾಂಗ್ರೆಸ್‌ಗೆ ಕೇವಲ ಒಂದು ಸ್ಥಾನ ಮಾತ್ರ ಸಿಕ್ಕಿತ್ತು. ಕಾಂಗ್ರೆಸ್‌ನವರು ಮೋಸಗಾರರು ಎಂಬುದು ರಾಜ್ಯದ ಜನತೆಗೆ ಗೊತ್ತಾಗಿದೆ. ಹೀಗಾಗಿ ಅವರನ್ನು ಬೆಂಬಲಿಸುವುದಿಲ್ಲ. ರಾಜ್ಯದಲ್ಲಿ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಮೋಸ ಮಾಡಿದೆ. ಅವರು ಇದೀಗ ವಿದ್ಯುತ್‌ ದರ ಏರಿಸಿ ಬರೆ ಎಳೆದಿದ್ದಾರೆ. 200 ಯೂನಿಟ್‌ ವಿದ್ಯುತ್‌ ಉಚಿತ ಎಂದಿದ್ದರು. ವಿದ್ಯುತ್‌ ದರ ಏರಿಕೆ, ದಿನಬಳಕೆ ವಸ್ತುಗಳ ದರ ಏರಿಕೆಯಿಂದ ಜನಜೀವನ ಕಷ್ಟವಾಗಿದೆ. ನಿರುದ್ಯೋಗ ಭತ್ಯೆ, ಗೃಹಿಣಿಗೆ ಎರಡು ಸಾವಿರ ರು. ನೀಡುವುದಾಗಿ ಹೇಳಿದ್ದು, ಅದು ಇನ್ನೂ ಜಾರಿಯಾಗಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಕಾಂಗ್ರೆಸ್‌ ಗಾಳಿ ನಮ್ಮ ಮೇಲೂ ಬಿದ್ದಿದೆ, ಹಾಗಾಗಿ ಬಿಜೆಪಿಯಲ್ಲಿ ಶಿಸ್ತು ಕಡಿಮೆಯಾಗಿದೆ: ಈಶ್ವರಪ್ಪ

ಅಕ್ಕಿ ವಿಚಾರದಲ್ಲಿ ಕೇಂದ್ರವನ್ನು ಎಳೆದು ತಂದದ್ದು ಸರಿಯಲ್ಲ. 10 ಕೆಜಿ ಅಕ್ಕಿ ನೀಡಲಾಗದಿದ್ದರೆ ಹಣ ನೀಡುವಂತೆ ಕೇಳಿದ್ದೆವು. ಈಗ ಐದು ಕೆಜಿಗೆ 170 ರು. ನೀಡುವುದಾಗಿ ಹೇಳಿದ್ದಾರೆ. ಕೇಂದ್ರದ ಐದು ಕೆಜಿಗೂ, ಕಾಂಗ್ರೆಸ್‌ ಸರ್ಕಾರಕ್ಕೂ ಸಂಬಂಧ ಇಲ್ಲ. ಮಾರುಕಟ್ಟೆದರದಂತೆ ಪ್ರತಿ ಮನೆಯ ಪ್ರತಿ ವ್ಯಕ್ತಿಗೂ 10 ಕೆಜಿ ಅಕ್ಕಿಗೆ ಹಣ ನೀಡಬೇಕು. ಉಚಿತ ಬಸ್‌ನಿಂದಾಗಿ ಆಟೋ ರಿಕ್ಷಾದವರು ಹೊಟ್ಟೆಮೇಲೆ ತಣ್ಣೀರಿನ ಬಟ್ಟೆಹಾಕುವಂತಾಗಿದೆ. ಖಾಸಗಿ ಬಸ್‌ ಸಿಬ್ಬಂದಿ ಪರಿಸ್ಥಿತಿ ಸುಧಾರಣೆ ಹೇಗೆ? ಎಂದು ಕಿಡಿಕಾರಿದರು.

ಸೋಮವಾರ ಸಂಜೆ ಸಭೆ:

ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ನೇತೃತ್ವದಲ್ಲಿ ಇದೇ ತಿಂಗಳು 3ರಂದು (ಸೋಮವಾರ) ಸಂಜೆ ರಾಜ್ಯದ ಪದಾಧಿಕಾರಿಗಳು, ಶಾಸಕರು ಸೇರಿದಂತೆ ಮುಖಂಡರ ಸಭೆ ಕರೆಯಲಾಗಿದೆ. 4ನೇ ತಾರೀಖಿನ ಹೋರಾಟದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಷರತ್ತು ಕೈ ಬಿಟ್ಟು ಗ್ಯಾರಂಟಿ ಅನುಷ್ಠಾನಕ್ಕೆ ತರಲು ಆಗ್ರಹಿಸಿ 4ರಂದು ಹೋರಾಟ ನಡೆಯಲಿದೆ. ಇನ್ನು, ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಒಂಭತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಮ್ಮ ಕಾರ್ಯವೈಖರಿ, ಬಿಬಿಎಂಪಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕಸಭೆ ಚುನಾವಣೆಯಲ್ಲಿ ಕಾರ್ಯತಂತ್ರದ ಕುರಿತು ಸೋಮವಾರ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.

click me!