ಜನರು ಪ್ರೀತಿಯಿಂದ ಮತ್ತೆ ಮತ್ತೆ ಸ್ಪರ್ಧೆ ಮಾಡಿ ಎಂದು ಕೇಳುತ್ತಿದ್ದಾರೆ. ಆದರೆ, ನಾನು ನಿವೃತ್ತಿಗೆ ತೀರ್ಮಾನ ಮಾಡಿದ್ದೇನೆ. ಮುಂದಿನ ನಾಲ್ಕು ವರ್ಷಕ್ಕೆ ನನಗೆ 83 ವರ್ಷ ಆಗಿ ಬಿಡುತ್ತದೆ. 83 ವರ್ಷ ಆದ ಮೇಲೆ ಇಷ್ಟೊಂದು ಉತ್ಸಾಹದಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂಬುದು ಗೊತ್ತಿದೆ. ನನ್ನ ದೇಹದ ಸ್ಥಿತಿ ನನಗೆ ಮಾತ್ರ ಗೊತ್ತಿರುತ್ತೆ. ಹೀಗಾಗಿ, ಚುನಾವಣಾ ರಾಜಕಾರಣ ಸಾಕು ಎಂದುಕೊಂಡಿದ್ದೇನೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು(ಏ.03): ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನರು ಪ್ರೀತಿಯಿಂದ ಮತ್ತೆ ಮತ್ತೆ ಸ್ಪರ್ಧೆ ಮಾಡಿ ಎಂದು ಕೇಳುತ್ತಿದ್ದಾರೆ. ಆದರೆ, ನಾನು ನಿವೃತ್ತಿಗೆ ತೀರ್ಮಾನ ಮಾಡಿದ್ದೇನೆ. ಮುಂದಿನ ನಾಲ್ಕು ವರ್ಷಕ್ಕೆ ನನಗೆ 83 ವರ್ಷ ಆಗಿ ಬಿಡುತ್ತದೆ. 83 ವರ್ಷ ಆದ ಮೇಲೆ ಇಷ್ಟೊಂದು ಉತ್ಸಾಹದಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂಬುದು ಗೊತ್ತಿದೆ. ನನ್ನ ದೇಹದ ಸ್ಥಿತಿ ನನಗೆ ಮಾತ್ರ ಗೊತ್ತಿರುತ್ತೆ. ಹೀಗಾಗಿ, ಚುನಾವಣಾ ರಾಜಕಾರಣ ಸಾಕು ಎಂದುಕೊಂಡಿದ್ದೇನೆ ಎಂದು ತಿಳಿಸಿದರು.
ನನಗೆ ಆತಂಕ ಇದ್ದರೆ ತಾನೇ ಟೆನ್ಷನ್?. ನನಗೆ ಯಾವ ಆತಂಕವೂ ಇಲ್ಲ. ಹೀಗಾಗಿ, ನಾನು ಕೂಲ್ ಆಗಿ ಇದ್ದೇನೆ. ಅದು ಕೂಡ ನನ್ನ ಆರೋಗ್ಯದ ಗುಟ್ಟು ಎಂದು ಅವರು ಹೇಳಿದರು.
undefined
ಈ ಬಾರಿ ಜೆಡಿಎಸ್ ನವರು ಮೂರೂ ಕ್ಷೇತ್ರದಲ್ಲಿ ಸೋಲುತ್ತಾರೆ:
ಮಂಡ್ಯದ ಸ್ಪರ್ಧೆ ದೇವರ ಇಚ್ಚೆ ಎಂದ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಹಿಂದೆ ಮಗನನ್ನು ನಿಲ್ಲಿಸುವಾಗ ಯಾರ ಇಚ್ಛೆ ಇತ್ತು?. ಈಗ ದೇವರು ಎಂದರೆ ಆಗ ಯಾರ ಇಚ್ಚೆ?. ಸಿಎಂ ಆಗಿದ್ದಾಗಲೇ ಅವರ ಮಗ ಅಲ್ಲಿ ಸೋತಿದ್ದಾನೆ. ಈ ಬಾರಿ ಜೆಡಿಎಸ್ ನವರು ಮೂರೂ ಲೋಕಸಭಾ ಕ್ಷೇತ್ರದಲ್ಲಿ ಸೋಲುತ್ತಾರೆ ಎಂದು ಭವಿಷ್ಯ ನುಡಿದರು.
ಮೈತ್ರಿ ಧರ್ಮ ಪಾಲಿಸಿ ಕಳೆದ ಬಾರಿ ನಾನು ಹೋಗಿದ್ದಕ್ಕೆ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆದ್ದಿದ್ದರು. ಈ ಬಾರಿಯೂ ಹಾಸನಕ್ಕೆ ಹೋಗುತ್ತೇನೆ. ಪ್ರಜ್ವಲ್ ನನ್ನು ಸೋಲಿಸುತ್ತೇನೆ. ಪ್ರಜ್ವಲ್ ನನ್ನು ಸೋಲಿಸಲೇಬೇಕು ಎಂದು ನಮ್ಮವರು ಪಣ ತೊಟ್ಟಿದ್ದಾರೆ. ಪ್ರಜ್ವಲ್ ಈ ಬಾರಿ ಸೋಲುತ್ತಾನೆ ಎಂದರು.
ಸಿದ್ದರಾಮಯ್ಯ ದೇವೇಗೌಡರ ಬೆನ್ನಿಗೆ ಚೂರಿ ಹಾಕಿದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಕಳೆದ ಬಾರಿ ಮೈಸೂರಿನಲ್ಲಿ ಜೆಡಿಎಸ್ ನವರು ಕಾಂಗ್ರೆಸ್ ಗೆ ಹಾಕಿದ್ದು ಯಾವ ಚೂರಿ?. ಮೈತ್ರಿ ಧರ್ಮ ಎಂದರೆ ಎಲ್ಲಾ ಕ್ಷೇತ್ರಕ್ಕೂ ಒಂದೇ. ಮೈಸೂರಿನಲ್ಲಿ ಚೂರಿ ಹಾಕಿ, ಈಗ ಮಂಡ್ಯದಲ್ಲಿ ನಮಗೆ ಚೂರಿ ಹಾಕಿದರು ಎಂದರೇ ಅದರಲ್ಲಿ ಯಾವ ನ್ಯಾಯ ಇದೆ ಹೇಳಿ ಎಂದು ಪ್ರಶ್ನಿಸಿದರು.
ವೈಯಕ್ತಿಕವಾಗಿ ನನಗೆ ದೇವೇಗೌಡರ ಬಗ್ಗೆ ದ್ವೇಷವಿಲ್ಲ. ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡರನ್ನು ಬಳಸಿ ಬಿಸಾಡಿದ ಜೆಡಿಎಸ್ ನವರು, ನನ್ನನ್ನೂ ಪಕ್ಷದಿಂದ ಹೊರಗೆ ಹಾಕಿದರು. ಇದೇ ರೀತಿ ಹಲವು ನಾಯಕರನ್ನು ಬಳಸಿ ಬಿಸಾಕಿದ್ದಾರೆ. ಇವರ ಈ ರಾಜಕೀಯ ವರ್ತನೆಗೆ ಮಾತ್ರ ನಮ್ಮ ವಿರೋಧ ಎಂದರು.
ಚುನಾವಣೆ ಬಂತು,ರಾಜ್ಯಕ್ಕೆ ಮೋದಿ ಬಂದ್ರು ನೋಡಿ:
ನಮ್ಮ ನಾಡಿಗೆ ಪ್ರವಾಹ ಬಂದಾಗ ಮೋದಿ ಬರಲಿಲ್ಲ, ಬರಗಾಲ ಬಂದಾಗಲೂ ಮೋದಿ ಬರಲಿಲ್ಲ, ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗಲೂ ಮೋದಿ ಬರಲಿಲ್ಲ. ಚುನಾವಣೆ ಬಂತು ನೋಡಿ, ರಾಜ್ಯಕ್ಕೆ ಮೋದಿ ಬಂದ್ರು ನೋಡಿ ಎಂದು ವ್ಯಂಗ್ಯವಾಡಿದರು.
ಮೋದಿಯವರು ಈ ಹತ್ತು ವರ್ಷದಲ್ಲಿ ಸುಳ್ಳು ಹೇಳಿ ಭಾರತೀಯರನ್ನು ಮರಳು ಮಾಡಿದ್ದು ಬಿಟ್ಟರೆ, ಭಾರತೀಯರ ಬದುಕು ಸುಧಾರಿಸುವ ಒಂದೇ ಒಂದು ಕಾರ್ಯಕ್ರಮವನ್ನೂ ಮಾಡಲಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಗೊಬ್ಬರ, ಅಕ್ಕಿ, ಬೇಳೆ, ಎಣ್ಣೆ ಯಾವುದರ ಬೆಲೆಯೂ ಕಡಿಮೆ ಆಗಲಿಲ್ಲ. ಮೋದಿ ಪ್ರಕಾರ ಇದೇ ಅಚ್ಛೆ ದಿನ ಇರಬಹುದು. ಆದರೆ, ನಿಜವಾದ ಅಚ್ಛೆ ದಿನ್ ನಿಮಗೆ ಯಾರಿಗಾದರೂ, ಒಬ್ಬರಿಗಾದರೂ ಬಂದಿದೆಯಾ ಎಂದು ಅವರು ಪ್ರಶ್ನಿಸಿದರು.
ನೋಟಿಸ್ ಗೆ ಉತ್ತರ ಕೊಟ್ಟಿದ್ದೇವೆ:
ಅಮಿತ್ ಶಾಗೆ ಗೂಂಡಾ ಎಂಬ ಹೇಳಿಕೆ ಸಂಬಂಧ ನನ್ನ ಮಗನಿಗೆ (ಡಾ. ಯತೀಂದ್ರ) ಚುನಾವಣಾ ಆಯೋಗದಿಂದ ನೋಟಿಸ್ ಬಂದಿದೆ. ಅದಕ್ಕೆ ಉತ್ತರವನ್ನು ಕೊಟ್ಟಿದ್ದೇವೆ. ನಾನು ಆ ಬಗ್ಗೆ ಮತ್ತೇನು ಪ್ರತಿಕ್ರಿಯೆ ಕೊಡುವುದಿಲ್ಲ. ನೋಟೀಸ್ ನಲ್ಲಿ ಏನಿದೆ ಎಂಬ ಬಗ್ಗೆ ನನ್ನ ಮಗನಿಗೆ ಗೊತ್ತು ಎಂದರು.
ಶಂಕರಮಠಕ್ಕೆ ಸಿಎಂ ಭೇಟಿ:
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಜೊತೆ ಅವರು ಮೈಸೂರಿನ ಅಗ್ರಹಾರದಲ್ಲಿರುವ ಶಂಕರ ಮಠಕ್ಕೆ ಭೇಟಿ ನೀಡಿ, ಶೃಂಗೇರಿ ಶ್ರೀ ವಿಧುಶೇಖರಭಾರತೀ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಮಠಕ್ಕೆ ಆಗಮಿಸಿದ ಮುಖ್ಯಮಂತ್ರಿಗೆ ಮಠದ ವತಿಯಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಬಳಿಕ, ಶ್ರೀಗಳ ಆಶೀರ್ವಾದ ಪಡೆದು, ಮಠದ ಆವರಣದಲ್ಲಿರುವ ಶಾರದಾಂಬೆ ಮಾತೆಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ನಾನು ಇರಬೇಕೋ, ಬೇಡ್ವೋ? ವರುಣದಲ್ಲಿ 60,000 ಲೀಡ್ ಕೊಟ್ರೆ ನನ್ನ ಯಾರೂ ಮುಟ್ಟೋಕಾಗಲ್ಲ: ಸಿದ್ದು
60 ಸಾವಿರ ಲೀಡ್ ಕೊಡಿ ಎಂದಿದ್ದು ಭಾವನಾತ್ಮಕವಲ್ಲ:
ಲೋಕಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕೇಳಿದ್ದು ಭಾವನಾತ್ಮಕವಲ್ಲ. ಅದು ನನ್ನ ಸಹಜವಾದ ಮಾತುಗಳು ಅಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ನನ್ನ ಕ್ಷೇತ್ರದ ಮತದಾರರಲ್ಲಿ ಲೀಡ್ ಕೇಳಿದ್ದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ವರುಣಾ ಕ್ಷೇತ್ರದ ಬಿಳಿಗೆರೆಯಲ್ಲಿ ಸೋಮವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿದ್ದ ಸಿದ್ದರಾಮಯ್ಯ, ‘ವರುಣಾ, ನನ್ನ ಪಾಲಿಗೆ ಅದೃಷ್ಟದ ಕ್ಷೇತ್ರ. ನಿಮ್ಮಿಂದ ಎರಡು ಬಾರಿ ಸಿಎಂ ಆದೆ. ನಾನು ಸಿಎಂ ಸ್ಥಾನದಲ್ಲಿ ಇರಬೇಕೋ, ಬೇಡವೋ?. ನಾನು ಸಿಎಂ ಸ್ಥಾನದಲ್ಲಿರಬೇಕು ಅಂದರೇ 60 ಸಾವಿರ ಲೀಡ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ. ಆಗ ನನ್ನನ್ನು ಯಾರೂ ಮುಟ್ಟಲ್ಲ’ ಎಂದಿದ್ದರು. ಇದಕ್ಕೆ ಪ್ರತಿಪಕ್ಷಗಳಿಂದ ಟೀಕೆ ವ್ಯಕ್ತವಾಗಿತ್ತು.
ಟೀಕೆ ಹಿನ್ನೆಲೆಯಲ್ಲಿ ಮಂಗಳವಾರ ಸ್ಪಷ್ಟನೆ ನೀಡಿದ ಸಿಎಂ, ಕಳೆದ ಲೋಕಸಭಾ ಚುನಾವಣೆಯಲ್ಲಿ ವರುಣಾದಲ್ಲಿ ನಮಗೆ ಬರಿ 9 ಸಾವಿರ ಲೀಡ್ ಬಂದಿತ್ತು. ಈ ಬಾರಿ ಅದನ್ನು 60 ಸಾವಿರಕ್ಕೆ ಮುಟ್ಟಿಸಿ ಎಂದು ಕೇಳಿದ್ದೇನೆ. ಸ್ವಕ್ಷೇತ್ರದ ಮತದಾರರಲ್ಲಿ ಲೀಡ್ ಕೊಡಿ ಎಂದು ಕೇಳಿದ್ದೇನೆ. ಇದರಲ್ಲಿ ಭಾವನಾತ್ಮಕತೆ ಏನು ಬಂತು?. ಈ ಮಾತುಗಳಿಗೆ ಬೇರೆ ರೀತಿಯ ವಿಶ್ಲೇಷಣೆ ಮಾಡಬೇಕಾದ ಅಗತ್ಯವಿಲ್ಲ. ಅದು ನನ್ನ ಸಹಜವಾದ ಮಾತುಗಳು ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರು ಬಂದರೆ ಬಡವರ ಕಾರ್ಯಕ್ರಮಗಳು ನಿಂತು ಹೋಗುತ್ತವೆ. ಹೀಗಾಗಿ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಹೆಚ್ಚು ಲೀಡ್ ಕೊಡಿ ಎಂದು ಕೇಳಿಕೊಂಡಿದ್ದೇನೆ ಎಂದು ಹೇಳಿದರು.