ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿಯಲ್ಲ. ನಾನು ಆಕಾಂಕ್ಷಿ ಅಲ್ಲ ಎಂದ ಮೇಲೆ ವರಿಷ್ಠರು ಸೂಚಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ಮಂಡ್ಯ (ಸೆ.17): ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿಯಲ್ಲ. ನಾನು ಆಕಾಂಕ್ಷಿ ಅಲ್ಲ ಎಂದ ಮೇಲೆ ವರಿಷ್ಠರು ಸೂಚಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು. ಜೆಡಿಎಸ್ ಪಕ್ಷದಲ್ಲೇ ಅನೇಕ ಸಮರ್ಥ ಅಭ್ಯರ್ಥಿಗಳಿದ್ದಾರೆ. ಅವರಲ್ಲಿ ವರಿಷ್ಠರು ಯಾರನ್ನೇ ಕಣಕ್ಕಿಳಿಸಿದರೂ ಅವರ ಪರವಾಗಿ ಶ್ರಮಿಸಲು ಸಿದ್ಧರಿದ್ದೇವೆ. ನಾನಂತೂ ಸ್ಪರ್ಧೆಗೆ ಇಳಿಯುವುದಿಲ್ಲ ಎಂದು ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ವರಿಷ್ಠರ ನಿರ್ಧಾರ. ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಅವರ ತೀರ್ಮಾನದಂತೆ ನಡೆಯುತ್ತೇವೆ. ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗುವುದೋ, ಬಿಜೆಪಿ ಪಾಲಾಗುವುದೋ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಮೈತ್ರಿ ವಿಷಯವಾಗಿ ಮೊದಲ ಹೆಜ್ಜೆಯನ್ನಷ್ಟೇ ಇಟ್ಟಿದ್ದೇವೆ ಎಂದರು.
ಜೆಡಿಎಸ್- ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕಿಳಿದರೆ ಬೆಂಬಲಿಸುವಿರಾ ಎಂಬ ಪ್ರಶ್ನೆಗೆ, ಲೋಕಸಭಾ ಸ್ಥಾನಗಳು ಜೆಡಿಎಸ್- ಬಿಜೆಪಿಗೆ ಎಷ್ಟು ಸ್ಥಾನ ಎನ್ನುವುದೇ ಇನ್ನೂ ಹಂಚಿಕೆಯಾಗಿಲ್ಲ. ನಮಗೆ ಯಾವ ಯಾವ ಕ್ಷೇತ್ರ ಬಿಟ್ಟು ಕೊಡುತ್ತಾರೆ. ಅವರು ಯಾವ ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಾರೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಈಗಲೇ ಊಹಾಪೋಹಗಳಿಗೆ ಉತ್ತರ ನೀಡಲಾಗುವುದಿಲ್ಲ ಎಂದರು.
ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿರುವ ಶಿಕ್ಷಕ: ಅಲ್ಹಾಭಕ್ಷ ಕೈಯಲ್ಲಿ ಅರಳಿವೆ ನೂರಾರು ಗಣಪ ವಿಗ್ರಹ!
ಜೆಡಿಎಸ್‌ಗೆ ಮೈತ್ರಿ ಅನಿವಾರ್ಯವಾಗಿತ್ತೇ ಎಂಬ ಪ್ರಶ್ನೆಗೆ, ಅನಿವಾರ್ಯ ಎಂದೇನೂ ಇಲ್ಲ. ಆದರೆ, ವರಿಷ್ಠರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ನಿರ್ಧಾರ ಮಾಡಿದ್ದಾರೆ. ಅವರ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕಾಗುತ್ತದೆ ಎಂದರಲ್ಲದೇ, ಏನೇ ಮಾಡಿದರೂ ಟೀಕೆಗಳು ಸಹಜ. 2018ರ ಚುನಾವಣೆಯಲ್ಲಿ ನಾವು ಏಳರಲ್ಲಿ ಗೆದ್ದಿದ್ದಾಗ ಕಾಂಗ್ರೆಸ್‌ನವರು ಡೆಡ್‌ಹಾರ್ಸ್ ಆಗಿದ್ದರು. ಈಗ ನಾವು ಡೆಡ್‌ಹಾರ್ಸ್ ಆಗಿದ್ದೇವೆ. ಈಗ ಅವರಿಗೆ ಮಾತನಾಡುವ ಸಮಯ ಬಂದಿದೆ ಮಾತನಾಡುತ್ತಿದ್ದಾರೆ. ಜಿಲ್ಲೆಯ ಜನರು ಪ್ರಜ್ಞಾವಂತರಿದ್ದಾರೆ. 2024ರ ಚುನಾವಣೆಯಲ್ಲಿ ಅವರು ನಿರ್ಧಾರ ಮಾಡುತ್ತಾರೆ ಎಂದು ನುಡಿದರು.