ಮುಂದಿನ ಸಿಎಂ ಕುರ್ಚಿಗಾಗಿ ಕಾಂಗ್ರೆಸ್‌ನಲ್ಲಿ ಸಿದ್ದು-ಡಿಕೆಶಿ ನಡುವೆ ಪೈಪೋಟಿ ಶುರುವಾಗಿದೆ. ಇದರ ನಡುವೆ ನನಗೆ ಸಿಎಂ ಆಗುವ ಎಲ್ಲಾ ಅರ್ಹತೆಯಿದೆ ಎಂದು ಬಿಜೆಪಿ ಸರ್ಕಾರ ಮಂತ್ರಿಯೊಬ್ಬರು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಮೈಸೂರು, (ಜೂನ್.30): ಕಾಂಗ್ರೆಸ್ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಸೀಟಿಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ. ಇದಕ್ಕೆ ಬಿಜೆಪಿ ಸಹ ವ್ಯಂಗ್ಯವಾಡುತ್ತಿದೆ. ಇದರ ಮಧ್ಯೆ ಬಿಜೆಪಿಯಲ್ಲೂ ಸಹ ಮತ್ತೆ ಕತ್ತಿ ವರಸೆ ಶುರುವಾಗಿದೆ.
ಹೌದು...ನನಗೆ ಸಿಎಂ ಆಗುವ ಎಲ್ಲಾ ಅರ್ಹತೆಯಿದೆ. ಹಣೆ ಬರಹದಲ್ಲಿ ಬರೆದಿದ್ದರೆ ನಾನೂ ಸಿಎಂ ಆಗ್ತೇನೆ ಎಂದು ಸಚಿವ ಉಮೇಶ್ ಕತ್ತಿ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
undefined
ಈ ಬಗ್ಗೆ ಮೈಸೂರಿನಲ್ಲಿ ಇಂದು(ಗುರುವಾರ) ಪ್ರತ್ಯೇಕ ರಾಜ್ಯದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ದೃಷ್ಟಿಯಿಂದ ನಾನು ಪ್ರತ್ಯೇಕ ರಾಜ್ಯ ಕೇಳುತ್ತಿದ್ದೇನೆ ಹೊರತು ಬೇರೆ ಉದ್ದೇಶ ಇಲ್ಲ ಎಂದು ಸಮರ್ಥಿಸಿಕೊಂಡ ಕತ್ತಿ, ನನಗೆ ಸಿಎಂ ಆಗುವ ಎಲ್ಲಾ ಅರ್ಹತೆಯಿದೆ. ಹಣೆ ಬರಹದಲ್ಲಿ ಬರೆದಿದ್ದರೆ ನಾನೂ ಸಿಎಂ ಆಗ್ತೇನೆ ಎಂದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಮೋದಿ ಚಿಂತನೆ: ಕತ್ತಿ..!
ಇರುವ 224 ಶಾಸಕರಲ್ಲಿ ನಾನೇ ಹಿರಿಯ ಶಾಸಕ. ನನಗೆ ಸಿಎಂ ಆಗಿವ ಎಲ್ಲಾ ಅರ್ಹತೆ ಇದೆ. ನಾನು ಸಿಎಂ ಆಗಬೇಕಾದರೆ ಅಖಂಡ ಕರ್ನಾಟಕದ ಸಿಎಂ ಆಗುತ್ತೇನೆ. ಆದರೆ ಸಿಎಂ ಸ್ಥಾನಕ್ಕಾಗಿ ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ. ಪ್ರತ್ಯೇಕ ರಾಜ್ಯವಾದರೂ ನಾವು ಕನ್ನಡಿಗರೇ, ಆಂಧ್ರ, ತೆಲಂಗಾಣ ರೀತಿಯಲ್ಲೇ ನಮ್ಮದೂ ಪ್ರತ್ಯೇಕವಾಗಲಿ ಎಂದು ಬಯಸಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ನಮ್ಮ ಜನರ ದೃಷ್ಟಿಯಿಂದ ನಾನೇ ಹಿರಿಯನಾಗಿ ಧ್ವನಿ ಎತ್ತಿದ್ದೇನೆ. ಹೈಕಮಾಂಡ್ ಮಟ್ಟದಲ್ಲೂ ಹೊಸ ರಾಜ್ಯಗಳ ರಚನೆ ಬಗ್ಗೆ ಚಿಂತನೆ ನಡೆದಿದೆ ಎಂಬುದು ನನ್ನ ಅನಿಸಿಕೆ. ನಾನು ಮಾತನಾಡಿದರೆ ಆ ವಿಚಾರ ಕೇಂದ್ರದ ಮಟ್ಟಕ್ಕೂ ಹೋಗುತ್ತದೆ. ಆದ್ದರಿಂದಲೇ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಸ್ವಪಕ್ಷೀಯ ಸರ್ಕಾರದ ಆಡಳಿತವನ್ನೇ ಪ್ರಶ್ನಿಸಿದ ಉಮೇಶ್ ಕತ್ತಿ, ದೊಡ್ಡ ರಾಜ್ಯಗಳಾದಾಗ ಇಂತಹ ಸಮಸ್ಯೆಗಳು ಇದ್ದೇ ಇರುತ್ತವೆ. ಇದೇ ಕಾರಣಕ್ಕೆ ನಾವು ರಾಜ್ಯ ಇಬ್ಬಾಗ ಆಗಬೇಕೆಂದು ಕೇಳುತ್ತಿದ್ದೇನೆ. ಜಲಾಶಯಗಳ ನೀರಿನ ಬಳಕೆ, ಗಡಿ ಸಮಸ್ಯೆಗಳ ನಿವಾರಣೆ ಇದರ ದೃಷ್ಟಿಯಿಂದ ಚಿಕ್ಕ ರಾಜ್ಯಗಳು ಆಗಬೇಕು. ಅತಿ ಹೆಚ್ಚು ಜನಸಂಖ್ಯೆ ಇದ್ದಾಗ ಯಾವ ಸಮಸ್ಯೆಗಳೂ ಬಗೆಹರಿಯುವುದಿಲ್ಲ ಎಂದು ಕುಟುಕಿದರು.
ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲೂ ಮೃಗಾಲಯಗಳನ್ನು ಸ್ಥಾಪಿಸುವ ಚಿಂತನೆ ನಡೆಸಿದ್ದೇವೆ. ಇದಕ್ಕಾಗಿ ಎಲ್ಲ ಜಿಲ್ಲೆಗಳಲ್ಲೂ ಸೂಕ್ತ ಸ್ಥಳವನ್ನು ಗುರುತು ಮಾಡುತ್ತಿದ್ದೇವೆ. ರಾಜ್ಯದ ಈ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸುತ್ತೇವೆ. ಕೇಂದ್ರದ ಅನುಮತಿ ಬಂದ ಮೇಲೆಯೇ ಈ ಕಾರ್ಯ ಶುರುವಾಗಲಿದೆ ಎಂದು ಮಾಹಿತಿ ನೀಡಿದರ.