ದೇವೇಗೌಡರ ಮೇಲಿನ ಗೌರವಕ್ಕೆ ಸುಮ್ಮನಿದ್ದೇನೆ: ಸಚಿವ ಚಲುವರಾಯಸ್ವಾಮಿ

By Govindaraj SFirst Published Feb 3, 2024, 1:06 PM IST
Highlights

ನಾನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ಲೀಡರ್‌ ಆಗಿಲ್ಲ. ದೇವೇಗೌಡರ ಮೇಲಿನ ಗೌರವಕ್ಕಾಗಿ ಮಾತ್ರ ಸುಮ್ಮನಿದ್ದೇನೆ. ದೇವೇಗೌಡರ ಹೆಸರು ಅವರ ಜೊತೆ ಇಲ್ಲದಿದ್ದರೆ ನಾನೂ ಕುಮಾರಸ್ವಾಮಿಗೆ ಸೂಕ್ತ ಉತ್ತರ ಕೊಡುತ್ತಿದ್ದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು. 
 

ಮಂಡ್ಯ (ಫೆ.03): ನಾನು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ಲೀಡರ್‌ ಆಗಿಲ್ಲ. ದೇವೇಗೌಡರ ಮೇಲಿನ ಗೌರವಕ್ಕಾಗಿ ಮಾತ್ರ ಸುಮ್ಮನಿದ್ದೇನೆ. ದೇವೇಗೌಡರ ಹೆಸರು ಅವರ ಜೊತೆ ಇಲ್ಲದಿದ್ದರೆ ನಾನೂ ಕುಮಾರಸ್ವಾಮಿಗೆ ಸೂಕ್ತ ಉತ್ತರ ಕೊಡುತ್ತಿದ್ದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು. ಮೈಸೂರು ಮತ್ತು ಮಂಡ್ಯದಲ್ಲಿ  ಸುದ್ದಿಗಾರರ ಜತೆಗೆ ಮಾತನಾಡಿ, ನಾನೇನು ಕುಮಾರಸ್ವಾಮಿ ಅವರ ಮನೆ ಋಣದಲ್ಲಿದ್ದೇನಾ? ನಾನೇನು ಅವರ ಆಸ್ತಿ ತಿಂದಿದ್ದೇನಾ? ಮಾಜಿ ಮುಖ್ಯಮಂತ್ರಿ ಅಂತ ಗೌರವ ಕೊಟ್ಟು ಮಾತನಾಡುತ್ತಿದ್ದೇನೆ. ಗೌರವ ಬೇಡ ಅನ್ನಲಿ. ಬೇರೆ ರೀತಿಯಲ್ಲೇ ನಾನೂ ಮಾತನಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಬೈರೇಗೌಡರಂಥವರನ್ನು ಜೆಡಿಎಸ್‌ನಿಂದ ಹೊರಕಳುಹಿಸಿದ್ದು ಯಾರು ಎಂಬುದನ್ನು ಕುಮಾರಸ್ವಾಮಿ ಹೇಳಲಿ ಎಂದು ಪ್ರಶ್ನಿಸಿದ ಚಲುವರಾಯಸ್ವಾಮಿ, ಕುಮಾರಸ್ವಾಮಿ ಅವರಿಗೆ ಯಾರೂ ಎದುರಾಳಿ‌ಯೇ ಇಲ್ಲ. ಅವರು 28 ಕ್ಷೇತ್ರಕ್ಕೂ ಒಂದೇ ಬಾರಿ ನಿಲ್ಲಬಹುದು. ಅವರು ನಿಂತುಕೊಂಡರೆ ಎದುರಾಳಿಯೇ ಇರುವುದಿಲ್ಲ. ನಾನು ಯಾವತ್ತೂ ಅವರ ಎದುರಾಳಿ ಎಂದು ಹೇಳಿಯೇ ಇಲ್ಲ ಎಂದರು. ನಾನು ಕುಮಾರಸ್ವಾಮಿ ಅವರಂತೆ ಲಘುವಾಗಿ ಮಾತನಾಡುವುದಿಲ್ಲ. ನಮಗೆ ಹಾಗೂ ನಮ್ಮ ಜಿಲ್ಲೆಗೆ ಒಂದು ಸಂಸ್ಕಾರವಿದೆ. ಅದಕ್ಕೆ ಧಕ್ಕೆ ತರುವ ರೀತಿ ಮಾತನಾಡುವುದಿಲ್ಲ ಎಂದರು.

Latest Videos

ಶೋಷಿತರ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯ ಮಜಾ: ಎಚ್.ಡಿ.ಕುಮಾರಸ್ವಾಮಿ

ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ: ಜನಸ್ಪಂದನದಲ್ಲಿ ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ಆಯಾ ಇಲಾಖೆ ಅಧಿಕಾರಿಗಳು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ಒಂದು ತಿಂಗಳೊಳಗೆ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ತಾಲೂಕಿನ ಭೀಮನಹಳ್ಳಿ, ದೇವಲಾಪುರ ಹಾಗೂ ಕರಡಹಳ್ಳಿ ಗ್ರಾಪಂ ಆವರಣದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನ ರೈತರು ಮತ್ತು ಸಾರ್ವಜನಿಕರು ಕಂದಾಯ ಇಲಾಖೆ ಅಥವಾ ಇನ್ನಿತರೆ ಯಾವುದೇ ಇಲಾಖೆಗಳಲ್ಲಿ ಆಗಬೇಕಿರುವ ಕೆಲಸ ಕಾರ್ಯಗಳಿಗೆ ಅಧಿಕಾರಿಗಳು ಅಥವಾ ಮಧ್ಯವರ್ತಿಗಳಿಗೆ ಲಂಚ ಕೊಡುವ ಅಗತ್ಯವಿಲ್ಲ ಎಂದರು.

ತಾಲೂಕಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಉಪವಿಭಾಗಾಧಿಕಾರಿಗಳ ವ್ಯಾಪ್ತಿಗೆ ಬರುವ 2 ಸಾವಿರಕ್ಕೂ ಹೆಚ್ಚು ಕಡತಗಳ ಪೈಕಿ ಬಹುತೇಕ ಕಡತಗಳು ವಿಲೇವಾರಿಯಾಗಿವೆ. ಅಂತೆಯೇ ತಹಸೀಲ್ದಾರ್ ವ್ಯಾಪ್ತಿಗೊಳಪಡುವ 500ಕ್ಕೂ ಹೆಚ್ಚು ಕಡತಗಳ ಪೈಕಿ ಕೇವಲ 30 ರಿಂದ 40 ಕಡತಗಳು ಮಾತ್ರ ಬಾಕಿ ಇವೆ. ಅವುಗಳನ್ನೂ ಸಹ ಕಾನೂನಾತ್ಮಕವಾಗಿ ವಿಲೇವಾರಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ನಿರ್ದೇಶನ ನೀಡಲಾಗಿದೆ ಎಂದರು. ನಾನು ಸಚಿವನಾಗಿ ರಾಜ್ಯದ ಜವಾಬ್ದಾರಿ ಇರುವುದರಿಂದ ತಾಲೂಕಿಗೆ ಹೆಚ್ಚು ಭೇಟಿ ಕೊಡಲು ಸಾಧ್ಯವಾಗುತ್ತಿಲ್ಲ. ಆದರೂ ಸಹ ಜನರ ಕೆಲಸ ಕಾರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಬೇಕೆಂದು ಎಲ್ಲ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿರುವುದಾಗಿ ತಿಳಿಸಿದರು.

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಜಾಗೃತಿ ಸಮಾವೇಶ: ಸಚಿವ ಸಂತೋಷ್‌ ಲಾಡ್‌

ಇದಕ್ಕೂ ಮುನ್ನ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸದಾಗಿ ತೆರೆದಿರುವ ಕೂಸಿನ ಮನೆಯನ್ನು ಸಚಿವರು ಉದ್ಘಾಟಿಸಿದರು. ಸಮಸ್ಯೆ ಹೊತ್ತು ಬಂದಿದ್ದ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು ಸಚಿವರಿಗೆ ಅಹವಾಲು ಸಲ್ಲಿಸಿದರು. ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ಆಯಾ ಇಲಾಖೆಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ವರ್ಗಾಯಿಸಿದ ಸಚಿವರು ತಿಂಗಳೊಳಗೆ ಸಮಸ್ಯೆ ಬಗೆಹರಿಸಬೇಕೆಂದು ತಾಕೀತು ಮಾಡಿದರು. ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಇಸ್ವತ್ತು ಸೇರಿದಂತೆ ವಿವಿಧ ಯೋಜನೆಗಳ ಮಾಶಾಸನ ಮಂಜೂರಾತಿ ಪತ್ರವನ್ನು ವಿತರಿಸಿದರು.

click me!