ಜಿಲ್ಲೆಯ ಶಿಗ್ಗಾಂವಿ ವಿಧಾನಸಭೆಗೆ ಕೆಲವೇ ದಿನಗಳಲ್ಲಿ ಉಪಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ನಾನೂ ಆಕಾಂಕ್ಷಿಯಾಗಿದ್ದು, ಕ್ಷೇತ್ರದ ಜನರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಆರ್.ಶಂಕರ್ ಹೇಳಿದರು.
ಹಾವೇರಿ (ಜು.04): ಜಿಲ್ಲೆಯ ಶಿಗ್ಗಾಂವಿ ವಿಧಾನಸಭೆಗೆ ಕೆಲವೇ ದಿನಗಳಲ್ಲಿ ಉಪಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ನಾನೂ ಆಕಾಂಕ್ಷಿಯಾಗಿದ್ದು, ಕ್ಷೇತ್ರದ ಜನರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಆರ್.ಶಂಕರ್ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಸ್ಥಳೀಯ ಜನರು, ಮುಖಂಡರು, ಕಾರ್ಯಕರ್ತರ ಜತೆಗೆ ವಿವಿಧ ಹಂತದಲ್ಲಿ ಚರ್ಚೆ ಮಾಡಿದ್ದೇನೆ. ಬಹುತೇಕ ಎಲ್ಲರೂ ನಾನು ಅಲ್ಲಿ ಸ್ಪರ್ಧಿಸಲು ಉತ್ತಮ ಬೆಂಬಲ ಮತ್ತು ಅಭಿಮಾನ ತೋರಿಸುತ್ತಿದ್ದಾರೆ. ನನ್ನ ಪರವಾಗಿ ನಿಲ್ಲುವ ಭರವಸೆ ಕೊಟ್ಟಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದೇನೆ. ಆಶೀರ್ವದಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನೂ ಸಹ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೇನೆ ಎಂದರು. ನಾನು ಕೆಲವರ ಷಡ್ಯಂತ್ರದಿಂದ ಸೇವೆಯಿಂದ ದೂರ ಉಳಿಯುವಂತಾಗಿದೆ. ಇನ್ನು ಕಾಂಗ್ರೆಸ್ ಸೇರ್ಪಡೆಗೊಂಡು ಲೋಕಸಭಾ ಚುನಾವಣೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 1.41 ಲಕ್ಷದ ಅಂತರ ಈ ಬಾರಿ ಕೇವಲ 43 ಸಾವಿರಕ್ಕೆ ತಗ್ಗಿದೆ. ಮುಂದಿನ ದಿನಗಳಲ್ಲಿ ಸಂಘಟಿತವಾಗಿ ಕೆಲಸ ಮಾಡಿ ಗೆಲ್ಲುವ ವಿಶ್ವಾಸವಿದೆ ಎಂದರು.
ಮಠಾಧೀಶರ ಗಟ್ಟಿ ನಿಲುವಿನಿಂದಾಗಿ ದೇಶದಲ್ಲಿ ಧರ್ಮ ಉಳಿದಿದೆ: ಶಾಸಕ ಎಚ್.ಡಿ.ತಮ್ಮಯ್ಯ
ಸ್ಥಳೀಯರಿಗೆ ಟಿಕೆಟ್ ಕೊಡಿ ಎಂಬ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನೂ ಕೂಡ ಈಗಾಗಲೇ ಸ್ಥಳೀಯನಾಗಿದ್ದೇನೆ. ಸುಮಾರು 60 ಕಿಮೀ ಅಂತರದಲ್ಲಿದ್ದೇನೆ ಎಂಬುದಷ್ಟೇ. ಯುಸೂಫ್‌ಖಾನ್ ಪಠಾಣ, ಬೊಮ್ಮಾಯಿ ಕೂಡ ಹೊರಗಿನವರೇ ಅಲ್ಲವೇ? ಎಂದರು. ಒಟ್ಟಿನಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ಕೊಡಿ, ಈ ಕುರಿತಂತೆ ಆಂತರಿಕ ಸರ್ವೆ ನಡೆಸಿ ಟಿಕೆಟ್ ಕೊಡಿ, ನಾನು ಗೆಲ್ಲುವ ವಿಶ್ವಾಸ ವ್ಯಕ್ತವಾದಲ್ಲಿ ನನಗೆ ಟಿಕೆಟ್ ಕೊಡಿ. ಒಂದು ವೇಳೆ ಬೇರೆಯವರಿಗೆ ಟಿಕೆಟ್ ನೀಡಿದರೂ ನಾವು ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದರು. ರಾಜು ಅಡಿವೆಪ್ಪನವರ, ಶರತ್ ಸುದ್ದಿಗೋಷ್ಠಿಯಲ್ಲಿದ್ದರು.