
ಬೆಳಗಾವಿ (ಜೂ.21): ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ. ಆದರೆ ಹೈಕಮಾಂಡ್ ನಿರ್ಧಾರ ಮಾಡಬೇಕು ಎಂದು ಸಚಿವ ಸತೀಶ ಜಾರಕಹೊಳಿ ಹೇಳಿದರು.ಹುಕ್ಕೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವಾಗ ಬದಲಾವಣೆ ಆಗುತ್ತೆ ಯಾವಾಗ ಮಾಡ್ತಾರೆ ಎನ್ನುವುದು ಹೈಕಮಾಂಡ್‌ಗೆ ಬಿಟ್ಟಿರುವ ವಿಚಾರ. ನಾನಂತು ಆಕಾಂಕ್ಷಿ ಇದ್ದೇನೆ. ಹೈಕಮಾಂಡ್ ಯಾವಾಗ ಮಾಡುತ್ತಾರೆ ಕಾದು ನೋಡಬೇಕು. ನಾನು ಯಾವುದೆ ಒತ್ತಡ ಹಾಕಿಲ್ಲ ಎಂದು ತಿಳಿಸಿದರು.
ಮನೆ ಹಂಚಿಕೆ ವಿಚಾರದಲ್ಲಿ ಶಾಸಕ ಬಿ.ಆರ್.ಪಾಟೀಲ್ ಆಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕರ ಹೇಳಿಕೆಯನ್ನು ತನಿಖೆ ಮಾಡಿಸಬೇಕು. ಮೊದಲು ತನಿಖೆ ಆಗಬೇಕು ಆಮೇಲೆ ವಿಚಾರ ಮಾಡೋಣ. ತನಿಖೆಯಿಂದ ಸತ್ಯಾಸತ್ಯತೆ ಹೊರ ಬರುತ್ತದೆ. ನಾನಾಗಿಯೇ ಯಾವುದೇ ತನಿಖೆಗೆ ಒತ್ತಾಯಿಸುವುದಿಲ್ಲ. ಇಲಾಖೆ ತಾನಾಗಿಯೇ ತನಿಖೆ ನಡೆಸಲಿ. ಅದು ಅವರ ಕರ್ತವ್ಯ ಎಂದರು.
ಸಿಎಂ ಬದಲಾವಣೆಯಾಗ್ತಾರೆ ಅಂದ್ರೆ ನಾವೇನು ಹೇಳೋದು: ನಮ್ಮದೇ ಸಚಿವ ಸ್ಥಾನ ಉಳಿಸಿಕೊಳ್ಳೋದು ಕಷ್ಟ ಆಗಿದೆ. ಇನ್ನು ಸಿಎಂ ಬದಲಾವಣೆಯಾಗ್ತಾರೆ ಅಂದ್ರೆ ನಾವೇನು ಹೇಳೋದು, ನೀವು ಬೆಂಗಳೂರಿಗೆ ಬಂದ್ರೆ ನಾನೇ ಸಿಎಂ ಅವರನ್ನು ಭೇಟಿ ಮಾಡಿಸ್ತೀನಿ ಕೇಳಿ ಎಂದು ಮಾಧ್ಯಮದವರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಕುರಿತು ಬೆಂಗಳೂರಿಗೆ ಬಂದು ಕೇಳಿ, ಹೊಸಪೇಟೆಯಲ್ಲಿ ಕುಂತು ಹೇಳೋಕಾಗೋಲ್ಲ.
ದಲಿತ ಸಚಿವರು, ಶಾಸಕರ ಸಭೆಯನ್ನ ಮುಂದೇನೂ ಮಾಡ್ತೀವಿ. ಈ ಸಭೆಗೂ ಸಿಎಂ ಬದಲಾವಣೆ ವಿಚಾರಕ್ಕೂ ಏನೂ ಸಂಬಂಧವಿಲ್ಲ. ಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮುಗಿದ ಅಧ್ಯಾಯ ಎಂದರು. ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಿರ್ಣಯ ಕೈಗೊಳ್ಳುತ್ತದೆ. ಸಚಿವ ಸಂಪುಟದ ವಿಷಯದ ಬಗ್ಗೆ ದಿಲ್ಲಿಯಲ್ಲಿ ಕೇಳಬೇಕಾಗುತ್ತದೆ ಎಂದು ಸೂಚ್ಯವಾಗಿ ಹೇಳಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಕೆಲವೊಂದು ಸಲ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿರುತ್ತಾರೆ. ಕೈ ಮೀರಿ ಒಮ್ಮೊಮ್ಮೆ ಘಟನೆಗಳು ನಡೆಯುತ್ತವೆ.
ಕೂಡಲೇ ಪೊಲೀಸರು ಕೂಡ ಕ್ರಮ ಕೈಗೊಳ್ಳುತ್ತಾರೆ. ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ನಡಿಯುತ್ತಿದೆ. ವರದಿ ಬಂದ ಬಳಿಕ ಸರ್ಕಾರ ಕ್ರಮ ವಹಿಸುತ್ತದೆ. ಕಾಲ್ತುಳಿತ ಪ್ರಕರಣದ ಕುರಿತು ಬೆಂಗಳೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಇನ್ನೊಂದೆಡೆ ಸಿಐಡಿ ತನಿಖೆಯೂ ನಡಿಯುತ್ತಿದೆ. 15 ದಿನಗಳಲ್ಲಿ ವರದಿ ಬರಲಿದೆ. ಬಳಿಕ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು. ಐಪಿಎಸ್ ಅಧಿಕಾರಿ ದಯಾನಂದ ಅವರನ್ನ ಮರು ನೇಮಕ ಮಾಡುವುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.